ಜಾತಿ ಸಂವಾದ - ಅಭಿಪ್ರಾಯ 2

ಚಲನಶೀಲತೆಗೆ ಅಡ್ಡಿಯಾದ `ಪರಂಪರೆ'
ರವಿ ರಾ. ಅಂಚನ್ ಮುಂಬೈ

ಈ ಜಗತ್ತೇ ಒಂದು ಬಹುರೂಪಿ ಶಿಕ್ಷಣ ಕೇಂದ್ರ. ಇದೊಂದು ಅದ್ಭುತ ಕಲಾ ಶಾಲೆ ಕೂಡಾ ಹೌದು. ಹಾಗಾಗಿ ಇಲ್ಲಿ ನೋಡುವುದಕ್ಕೆ, ಕೇಳುವುದಕ್ಕೆ ಮತ್ತು ಕಲಿಯುವುದಕ್ಕೆಲ್ಲಾ ಸಾಕಷ್ಟು ಆಕರಗಳಿವೆ. ಅದರಲ್ಲಿ ವೈವಿಧ್ಯತೆಗಳೂ ಇವೆ.
ಇದು ನಿಸರ್ಗದತ್ತ ಸಂಪತ್ತು. ಈ ಸಂಪತ್ತಿನ ಕುರಿತು ಅರಿಯುವ ಮತ್ತು ಅರಿತು ಅಭಿವ್ಯಕ್ತಿಸುವ ಅಧಿಕಾರ ಎಲ್ಲರಿಗೂ ಇರಬೇಕು. ಹೀಗೆ ಬದುಕಿನಲ್ಲಿ ನಮ್ಮ ಅರಿವಿನೊಂದಿಗೆ ಬರುವ ಅಭಿವ್ಯಕ್ತಿಯ ಕಲಾತ್ಮಕತೆಯೇ ಕಲೆ. ಈ ಹಿನ್ನೆಲೆಯಲ್ಲಿ 'ಬದುಕಿಗಾಗಿ ಕಲೆ' ಎನ್ನುವ ಮಾತು ಮಹತ್ತನ್ನು ಪಡೆಯುತ್ತದೆ.
ಹಾಗೆ ಮಹತ್ತನ್ನು ಪಡೆದು; ಅಭಿವ್ಯಕ್ತಗೊಳ್ಳುವ ಕಲೆ ಲೋಕಮುಖಿಯಾಗಿರುತ್ತದೆ. ಅದು ಕಾಲ ಕಾಲಕ್ಕೆ ತನ್ನ ಮಿತಿಯನ್ನು ಮೀರಲು; ಪರಿಷ್ಕಾರಗೊಳ್ಳುತ್ತಲೇ ಮುನ್ನಡೆಯುತ್ತದೆ.  ಜೊತೆಗೆ ಅದು ಲೋಕಶಿಕ್ಷಣಕ್ಕೆ ಮಾದರಿಯೂ ಆಗುತ್ತದೆ.
ಇಲ್ಲಿ ಮಾತ್ರ ಕಲಾ ಸಂಪ್ರದಾಯ ಎನ್ನುವುದು `ಅಜ್ಜ ನೆಟ್ಟ ಆಲದ ಮರಕ್ಕೆ ಸುತ್ತು ಬರುವ' ಜಡ ಕ್ರಿಯೆಯಾಗದೆ; ಅದು ಪರಿಷ್ಕಾರಕ್ಕೆ ಒಳಗಾಗುವ `ಜಂಗಮ' ತತ್ವಕ್ಕೆ ಒಳಗಾಗುತ್ತಲೇ ಇರುತ್ತದೆ. ಇಂತಹ ಕಲೆಗಳು `ಜನಮುಖಿ' ನೆಲೆಯಲ್ಲಿ ಅರಳುತ್ತವೆ. ವಿವೇಕಮುಖಿ ನೆಲೆಯಲ್ಲಿ ಕಂಪು ನೀಡುತ್ತದೆ.
ಇಂತಹ ಜನಮುಖಿ-ವಿವೇಕಮುಖಿ ನೆಲೆಯಲ್ಲಿ ವಿನ್ಯಾಸಗೊಳ್ಳುವ ಕಲೆಗಳಿಗೆ ಭಿನ್ನವಾಗಿ `ಅಧಿಕಾರಮುಖಿ' ನೆಲೆಯಲ್ಲಿ ಅರಳುವ ಕಲೆಗಳೂ ಇವೆ. ಅವು ಪರಂಪರೆಯ ಹೆಸರಿನಲ್ಲೆೀ ಕಲೆಯ ಜಂಗಮತ್ವವನ್ನೇ ಮೊದಲು ಕೊಂದು ಕಲೆಯನ್ನೇ ಜಡವಾಗಿಸುತ್ತದೆ.
ಜೊತೆಗೆ ಅದನ್ನು ಸರಕಾಗಿಸುತ್ತದೆ. ಆದರೆ ಈ ಸರಕು ಸಂಸ್ಕೃತಿ ಕಲೆಯನ್ನು ಕೊಲ್ಲುವ ಕ್ರಿಯೆಯಲ್ಲಿ ಬಹು ಎಚ್ಚರಿಕೆಯಿಂದ ಹೆಜ್ಜೆ ಇರಿಸುತ್ತದೆ. ಅದು ಮಾತ್ರ ತನ್ನ ಪ್ರತಿಗಾಮಿತನವನ್ನು ಮರೆಮಾಚಲು `ಭಕ್ತಿಪಾರಮ್ಯ' ಎನ್ನುವ ಮದ್ದನ್ನು; ಪ್ರಸಾದ ರೂಪವಾಗಿ ಮೊದಲು ಬಹು ಎಚ್ಚರಿಕೆಯಿಂದ ತನ್ನ ಭಕ್ತವೃಂದಕ್ಕೆ ಹಂಚುತ್ತದೆ.
ಆ ಮುಖೇನ ಜನಮಾನಸದಲ್ಲಿ ಮೌಢ್ಯವನ್ನು ಬಿತ್ತಿ ಬೆಳೆಸುತ್ತದೆ. ಅದಕ್ಕೆಂದೇ ಹುಟ್ಟಿದ್ದು `ಕಲೆಗಾಗಿ ಕಲೆ' ಎನ್ನುವ ಅವರ ಘೋಷ ಮಂತ್ರ! ಇದು ಕಲಾಮಾತೆಯನ್ನು ಅಧಿಕಾರದ ಗೂಟಕ್ಕೆ ಕಟ್ಟಿ; ಅದರೊಳಗಿನ ಸೃಜನಶೀಲತೆಯನ್ನೇ ಕೊಲ್ಲುವ ವಿಧ್ವಂಸಕ ಕ್ರಿಯೆ! ಇಂದು ಇದಕ್ಕೊಂದು ಜ್ವಲಂತ ಸಾಕ್ಷಿಯಾಗಿರುವ ಕಲೆ ಎಂದರೆ `ಯಕ್ಷಗಾನ'. ಇದಿಂದು `ಆರಾಧನಾ' ಕಲೆ ಎಂಬ ಹಣೆಪಟ್ಟಿ ಹಚ್ಚಿ ಮೆರೆದಾಡುತ್ತಿದೆ.
ಈ ಯಕ್ಷಗಾನ ಕಲೆಯು ಒಂದು ಕಾಲಕ್ಕೆ ಲೋಕಶಿಕ್ಷಣದ ನೆಲೆಯಲ್ಲಿ `ಬಯಲು ಶಾಲೆ' ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಬಲ್ಲ ಕಸುವನ್ನು ಪಡೆದಿದ್ದಿರಬಹುದು. ಆದರೆ ಅಕ್ಕ-ಅಲ್ಲಮ-ಬಸವರ ವಚನಸಿರಿಯ ಅನುಭವ ಮಂಟಪದ ವಿದ್ವಂಸದೊಡನೆ ಇದು `ಲೋಕಶಿಕ್ಷಣದ' ಕಸುವನ್ನು ಕಳೆದುಕೊಂಡು ಪ್ರತಿಗಾಮಿ ಕಲೆಯಾಗಿ ದಾಂಗುಡಿ ಇಟ್ಟಿದೆ.
ಇದರ ಈ ಪ್ರತಿಗಾಮಿ ತಿರುವಿಗೆ ವಚನಯುಗದ ಅನಂತರ ಸಚೇತನಗೊಂಡ ದಾಸಯುಗದ ಭಕ್ತಿ ಪಾರಮ್ಯದ ಮಮಕಾರವೂ ಮಹತ್ವದ ಭೂಮಿಕೆಯನ್ನು ನಿರ್ವಹಿಸಿದೆ. ಇದು `ದೇವರ ಎದುರಿಗೆ ಎಲ್ಲರೂ ಸಮಾನರು' ಎನ್ನುತ್ತಲೆ; ಏಣಿ ಶ್ರೇಣಿಯ ಹುಟ್ಟು ಆಧಾರಿತ ಸಾಮಾಜಿಕ ವ್ಯವಸ್ಥೆಯಲ್ಲಿ ತುತ್ತ ತುದಿಯಲ್ಲಿದ್ದವರಿಗೆ `ವ್ಯಾಸಕೂಟ' ಕಟ್ಟಿದರು. ಅವರಿಗಿಂತ ಕೆಳಸ್ತರದವರಿಗೆ `ದಾಸಕೂಟ' ಎನ್ನುವ ದಿನ್ನೆಯನ್ನು ಕಟ್ಟಿಕೊಟ್ಟರು.
ಇಲ್ಲೆೀ ಕನಕ-ಪುರಂದರರ ಜಾತಿ ನೀತಿಯ ಸಂಕಟದ ನೆಲೆಗಳಿವೆ. ಅವರುಗಳ ಗೊಂದಲದ ಗೂಡಿನಲ್ಲೆೀ ಉಡುಪಿಯ ವ್ಯಾಸರಾಯರ ಕಾಲಕ್ಕೆ ಅತ್ತ ವ್ಯಾಸಕೂಟಕ್ಕೂ ಸೇರಲಾರದೆ; ಇತ್ತ ದಾಸಕೂಟಕ್ಕೂ ಒಗ್ಗಿಕೊಳ್ಳದೆ ಸಿಡಿದು ಮುದುಡಿ `ಯಕ್ಷಗಾನ' ಎನ್ನುವ ದಿನ್ನೆ ಏರಿದ ಸಾರಸ್ವತ ನರಹರಿ ತೀರ್ಥರ ಸೌಜನ್ಯ ಮತ್ತು ಅನುಸಂಧಾನಗಳ ಅಸಹಾಯಕ ನೆಲೆಗಳಿವೆ.
ಇಲ್ಲಿ ಒಬ್ಬರು ಇನ್ನೊಬ್ಬರಿಗಿಂತ ಅಧಿಕ ಸಮಾನರು ಎನ್ನುವ ಪೈಪೋಟಿಯಲ್ಲಿ ನೆಲಮೂಲದ ಜಂಗಮ ಕಲೆ `ಯಕ್ಷಗಾನ' ಶ್ರಮಜೀವಿಗಳ ಮಡಿಲಿನಿಂದ `ಹೈಜಾಕ್' ಆದದ್ದಂತೂ ನಿಜ. ಇಲ್ಲಿಂದ ಮುಂದೆ ಅಧಿಕಾರ ರಾಜಕಾರಣಕ್ಕೆ ಯಕ್ಷಗಾನ ಕಲೆ ಬಲಿಯಾಯಿತು. `ಆರಾಧನಾಕಲೆ' ಎಂಬ ಹಣೆ ಪಟ್ಟಿ ಕಟ್ಟಿ ಕುಣಿಯತೊಡಗಿತು!
ಕರಾವಳಿಯ ಮಂದರ್ತಿ ಮೇಳದಲ್ಲಿ; ಯಕ್ಷಗಾನ ಕಲಾವಿದರ ಆಯ್ಕೆಯಲ್ಲಿ ಜಾತಿ ಆಧಾರಿತ ವಿಧಿ ನಿಷೇಧಗಳನ್ನು ಪಾಲಿಸಿಕೊಂಡು ಬಂದದ್ದು; ಅದಕ್ಕೆ ಎದುರಾದ ಪ್ರತಿಭಟನೆಗೆ ಮಣಿದು ಕರ್ನಾಟಕ ಸರಕಾರದ ಮುಜರಾಯಿ ಇಲಾಖೆ ತನ್ನ ಸುದೀರ್ಘ ನಿದ್ರೆಯಿಂದ ಎಚ್ಚರಗೊಂಡು ಕಾರ್ಯಪ್ರವೃತ್ತವಾದದ್ದನ್ನು ಮರೆಯುವುದೆಂತು!
ಯಾವುದೇ ಕಲೆ ತನ್ನ ನೆಲಮೂಲದ ಆಲೋಚನೆಗಳನ್ನು ಧಿಕ್ಕರಿಸಿ ಅಧಿಕಾರ ದೇಗುಲದ ಆರಾಧನೆಯಲ್ಲಿ ಮೈಮರೆಯುತ್ತದೋ ಅಲ್ಲಿ; ಅರ್ಜುನನನ್ನು ಪ್ರತಿಭಟಿಸಿದ ಪ್ರಮೀಳೆ, ಮಾರ್ತಾಂಡ ತೇಜನನ್ನು ಪ್ರತಿಭಟಿಸಿದ ಶಶಿಪ್ರಭೆ ಎಲ್ಲರೂ ಕೊನೆಗೆ ಪುರುಷಪಾರಮ್ಯಕ್ಕೆ ಶರಣಾಗಲೇ ಬೇಕಲ್ಲವೇ? ಅದಕ್ಕೆ ಭಿನ್ನವಾಗಿ ಸಮಾನತೆಯನ್ನು ಸಾರುವ ಕಥಾನಕಗಳಿಗೆ ಇಂದಿಗೂ ಅಲ್ಲಿ ಬರಗಾಲವೇ ಇದೆ.
ಇದು ಕಲೆಗಾಗಿ ಕಲೆ ಎನ್ನುವ ತತ್ವಜ್ಞಾನದ ಪ್ರತಿಗಾಮಿ ಪರಂಪರೆ. ಇಲ್ಲಿ ಯಕ್ಷಗಾನ ಕಲೆಯ ಕುಣಿತ, ವೇಷಗಾರಿಕೆ, ಹಿಮ್ಮೇಳ, ಮುಮ್ಮೇಳದ ಬಗ್ಗೆ ಚರ್ಚೆ ಅಜೀರ್ಣವಾಗುವಷ್ಟು ನಡೆಯುತ್ತಲೇ ಇದೆ. ಆದರೆ ಕಲೆಯ ಆಶಯದ ಬಗ್ಗೆ ಎಲ್ಲರೂ ಸಾಧ್ಯವಾದಷ್ಟು ಮೌನ ವಹಿಸುತ್ತಾರೆ. ಹಾಗಾಗಿ `ಬದುಕಿಗಾಗಿ ಕಲೆ' ಎನ್ನುವ ಅಲೋಚನೆಯೇ ಇಲ್ಲಿ ಅಪ್ರಸ್ತುತವಾಗುತ್ತದೆ.
ಎಲ್ಲೆಲ್ಲಿ ಬದುಕಿಗಾಗಿ ಕಲೆ ತನ್ನ ಸ್ವರೂಪಧಾರಣೆಯನ್ನು ಮಾಡುವ ಕಸುವನ್ನು ಕಳಕೊಳ್ಳುತ್ತದೋ ಅಲ್ಲೆಲ್ಲಾ `ದಾಸ್ಯತೆ' ವಿಜೃಂಭಿಸುತ್ತದೆ. ಹಾಗಾಗಿ ಇಂತೆಡೆ ಜನಪರ ಬಂಡಾಯ ಗಗನಕುಸುಮವಾಗುತ್ತದೆ.
ಆದರೆ ಶ್ರೀಕೃಷ್ಣನ ಪ್ರೀತಿಯ ಕಪಟನಾಟಕಕ್ಕೆ ಆಸ್ಪದವೀಯದೆ ಆತನನ್ನೇ ಒದೆಯುವ `ಕಲ್ಲುರ್ಟಿ' ಎನ್ನುವ ಸಾಹಸಿ ಸ್ತ್ರೀ ಜನಪದೀಯ ಹಾಡುಗಳಲ್ಲಿ ಗೋಚರಿಸುತ್ತಾಳೆ. ಆದರೆ ಈ ಲೋಕಶಿಕ್ಷಕಿಯ ಆಶಯ ಯಕ್ಷಗಾನಕ್ಕೆ ದಕ್ಕದಂತೆ ಕಟ್ಟೆಚ್ಚರದ ಕಾವಲು ಪಡೆ ಮಠಮಾನ್ಯರ ಶ್ರೀರಕ್ಷೆಯಲ್ಲಿ ಎಲ್ಲೆಲ್ಲೂ ಜಾಗೃತವಾಗಿದೆ.
`ದೇವರು' ಮತ್ತು `ಶಿಕ್ಷಣ' ಎರಡರ ಮಾರಾಟದ ಕಟ್ಟೆಗಳಿಂದ ಬಿತ್ತರಿಸುವ ಯಕ್ಷಗಾನ ಎನ್ನುವುದು ಇಂದು ಗದ್ದುಗೆಯ ಧ್ವನಿ ಹೌದು. ಆದರೆ ಅದು ಗದ್ದೆಯ ಧ್ವನಿಯೂ ಆಗಬೇಕೆನ್ನುವ ನಿರೀಕ್ಷೆ ಕೆಲವರಿಗಿದ್ದರೂ; ಹಾಗಾಗಿಸಬಲ್ಲ ನಿಶಿತಮತಿಗಳೆಲ್ಲಿ?

 

comments powered by Disqus
Top