ಜಾತಿ ಸಂವಾದ - ಅಭಿಪ್ರಾಯ 3

ಕರ್ಮದಿಂದ ಜಾತಿ
ಪ. ರಾಮಕೃಷ್ಣ ಶಾಸ್ತ್ರಿ. ಬೆಳ್ತಂಗಡಿ

ಬ್ರಾಹ್ಮಣ ಎನಿಸಿಕೊಂಡವ ತನ್ನ ಮಗನಿಗೆ ಉಪನಯನ ಮಾಡುವ ಸಂದರ್ಭದಲ್ಲಿ ಒಂದು ಕಿವಿಮಾತು ಹೇಳುತ್ತಾನೆ. `ಜನ್ಮನಾ ಜಾಯತೇ ಜಂತುಃ ಕರ್ಮಣಾ ಜಾಯತೇ ದ್ವಿಜಃ' ನೀನು ಹುಟ್ಟಿನಿಂದ ಕೇವಲ ಜಂತುವಾಗಿದ್ದೀ.
ಬ್ರಾಹ್ಮಣ ಅನಿಸಿಕೊಳ್ಳಬೇಕಾದರೆ `ವೇದಾಧ್ಯಯನತೋ ವಿಪ್ರೋ  ಬ್ರಹ್ಮವಿದ್ ಬ್ರಾಹ್ಮಣಸ್ಪೃತಃ' ವೇದಗಳನ್ನು ಕಲಿತು ಬ್ರಹ್ಮವಿದ್ಯೆಯನ್ನು ತಿಳಿದುಕೊಂಡರೆ ಬ್ರಾಹ್ಮಣನಾಗುತ್ತಿ ಎಂದು ಈ ಕಿವಿಮಾತು ಸಾರುತ್ತದೆ. ಇಂದಿನ ಕಾಲದಲ್ಲಿ ತಾವು ಮೇಲುಜಾತಿಯವರು ಎಂದು ಬ್ರಾಹ್ಮಣರು ಬೀಗುವ ಅಗತ್ಯವೇ ಇಲ್ಲ.
ಕಾರಣವೆಂದರೆ ರಾಜಾಶ್ರಯವಿದ್ದ ಕಾಲದಲ್ಲಿ ಅವರು ವೇದಪಾರಂಗತರಾದರೆ ಉತ್ತಮ ಜೀವನಕ್ಕೆ ಅವಕಾಶವಿತ್ತು,ಉಳಿದವರಿಗೂ ಜಾತಿಸೂಚಕವಾದ ವೃತ್ತಿಗಳಿಂದ ಬದುಕಲು ಸೂಕ್ತ ವಾತಾವರಣವಿತ್ತು. ಈಗ ಬ್ರಹ್ಮವಿದ್ಯೆ ಕಲಿತು ನಿಜವಾದ ಬ್ರಾಹ್ಮಣರಾಗುವವರು ವಿರಳಾತಿವಿರಳ.
ಸಾಮಾಜಿಕ ಕಟ್ಟುಪಾಡುಗಳ ಅನಿವಾರ್ಯತೆಗಾಗಿ ಮಕ್ಕಳಿಗೆ ಜನಿವಾರ ಹಾಕುವ ಸಮಾರಂಭ ಮಾಡುತ್ತಾರೆ. ನಿಜವಾದ ಬ್ರಾಹ್ಮಣ ಅನ್ನ ಮಾರಬಾರದು,ಉಡುಪಿ ಹೋಟೆಲು ಅನ್ನುವುದು ಬ್ರಾಹ್ಮಣರಿಂದಲೇ ಆರಂಭವಾಯಿತು.
ಹುಟ್ಟಿನಿಂದ ಬ್ರಾಹ್ಮಣನಲ್ಲದವ ಬ್ರಹ್ಮಕರ್ಮಗಳ ಮೂಲಕ ಬ್ರಹ್ಮತ್ವವನ್ನು ಪಡೆದಾಗ ಬ್ರಾಹ್ಮಣರು ಅವರನ್ನು ಸ್ವೀಕರಿಸಿದ್ದಾರೆ. ಐತರೇಯ ಉಪನಿಷತ್ ರಚಿಸಿದ ಐತರೇಯ ಬ್ರಾಹ್ಮಣನಲ್ಲ.
ಆದರೆ ಸಾಧನೆಯಿಂದ ವಿದ್ಯೆಗಳನ್ನು ಕಲಿತು ಉಪನಿಷತ್ ರಚಿಸಿದಾಗ ನಾವು ಅದನ್ನು ಪಠಿಸಲಾರೆವು ಎಂದು ಬ್ರಾಹ್ಮಣರು ಹೇಳಲಿಲ್ಲ. ಕೇರಳದಲ್ಲಿ ರಾಮಾನುಜ ಜಾತಿಯಲ್ಲಿ ಗಾಣಿಗನಾದರೂ ಅವನು ಬರೆದ ಸಂಸ್ಕೃತ ಗ್ರಂಥಗಳು ಅಮಾನ್ಯವಾಗಲಿಲ್ಲ.
ವಿದ್ಯೆ ಮತ್ತು ಸಾಧನೆಯಿಂದ ಮೇಲೇರಿದವನು ಉತ್ತಮ ಜಾತಿಯವನೆಂದು ಸಮಾಜ ಸ್ವೀಕರಿಸಿದೆ. ಆದರೆ ಇಂದು ಬ್ರಾಹ್ಮಣರೊಂದಿಗೆ ಸಹಭೋಜನಕ್ಕೆ ಅವಕಾಶ ಲಭಿಸುವುದೇ ಜಾತಿಭೇದ ತೊಡೆಯಲು ಇರುವ ದಾರಿ ಎಂದು ಪ್ರತಿಪಾದಿಸುತ್ತ ಬಂದವರನ್ನು ಮಂದಮತಿಗಳು ಎನ್ನಬೇಕು.
ಏಕೆಂದರೆ ಇತ್ತೀಚಿನ ದಿನಗಳಲ್ಲಿ ಬಹುತೇಕ ಬ್ರಾಹ್ಮಣರು ಎಲ್ಲರೊಂದಿಗೆ ಕುಳಿತು ಊಟ ಮಾಡುತ್ತಿದ್ದಾರೆ. ಬೇರೆ ಜಾತಿಯ ಹುಡುಗಿಯರಿಗೆ ಬದುಕು ಕೊಡುತ್ತಿದ್ದಾರೆ. ಇಂಥ ಔದಾರ್ಯಪರ ನಡತೆ ಬೇರೆ ಯಾವ ಜಾತಿಯಲ್ಲೂ ಕಾಣಸಿಗದು.
ಜಾತಿಯಲ್ಲಿ ಗುರುತಿಸಿಕೊಳ್ಳುವ ಅನಿವಾರ್ಯತೆಯನ್ನು ಸೃಷ್ಟಿಸಿರುವುದು ಇಂದಿನ ರಾಜಕೀಯ ವ್ಯವಸ್ಥೆ. ಶಾಲೆಗೆ ಸೇರುವಾಗಲೇ ಮಗುವನ್ನು ಭಾರತೀಯ ಎಂದು ನಮೂದಿಸಿದರೆ ಸಾಲದು,ಜಾತಿ ಪಂಗಡಗಳನ್ನೂ ಉಲ್ಲೆೀಖಿಸಬೇಕು.
ಪ್ರತಿವರ್ಷ ಜಾತಿಪಂಗಡಗಳಿಗೆ ಮೀಸಲಾತಿಯ ಆಮಿಷವೊಡ್ಡಿ ಜಾತಿ ವ್ಯವಸ್ಥೆಯನ್ನು ಜೀವಂತವಾಗಿಡುವ ರಾಜಕಾರಣಿಗಳಿಂದಾಗಿ ದೇಶ ಜಾತಿಯ ಮುಸುಕಿನಿಂದ ಹೊರಬರಲಾಗದೆ ಒದ್ದಾಡುತ್ತಿದೆ. ಶಿಕ್ಷಣಕ್ಕೆ; ಉದ್ಯೋಗಕ್ಕೆ ಜಾತಿ ಪರಿಗಣನೆ ಮುಖ್ಯವಾಗುತ್ತಿರುವಾಗ ಮಗನು ತಂದೆ ತಾಯಿಗಳ ಜಾತಿಯನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಗಿದೆ.
ಇನ್ನು ಆಹಾರ ಪದ್ಧತಿ ಕೂಡ ಜಾತಿ ಪರಿಗಣನೆಯ ಅಳತೆಗೋಲಲ್ಲ. ರಾಮಾಯಣ ಕಾಲದಲ್ಲಿ ಬ್ರಾಹ್ಮಣರು ಶ್ರಾದ್ಧಕ್ಕೆ ಆಡಿನ ಮಾಂಸ ಬಳಸುತ್ತಿದ್ದರೆಂಬುದಕ್ಕೆ ರಾಮಾಯಣದಲ್ಲಿರುವ ವಾತಾಪಿ ಇಲ್ವಲರ ಕಥೆಯ ಉದಾಹರಣೆಯಿದೆ.
ಆರಂಭದಲ್ಲಿ ಹೇಳಿದಂತೆ ಪೂರ್ವಜರು ಕರ್ಮದಿಂದ ಜಾತಿ ಪಡೆದರು. ತಮ್ಮ ಮಕ್ಕಳಿಗೂ ಅದೇ ಕರ್ಮದಲ್ಲಿ ತೊಡಗಿಸಿ ತಮ್ಮ ಜಾತಿ ವ್ಯವಸ್ಥೆಯನ್ನು ಮುಂದುವರೆಸಿದರು. ಇಂದು ಮಗ ತಂದೆಯ ಕರ್ಮವನ್ನು ಮಾಡುತ್ತಿಲ್ಲ. ಹೀಗಾಗಿ ಪೂರ್ವಜರ ಜಾತಿ ತನ್ನದೆಂದು ಆತ ಹೇಳುವ ಅಗತ್ಯವೇ ಇಲ್ಲ.
ಸರಕಾರದ ಕಾನೂನು ಪೂರ್ತಿ ಜಾತ್ಯತೀತವಾದರೆ ಯಾವುದಕ್ಕೂ ಜಾತಿ ವಿಂಗಡಣೆ ಬೇಡವಾದರೆ ನಿರ್ದಿಷ್ಟ ಜಾತಿಯ ಹಣೆಪಟ್ಟಿ ಬೇಕಾಗಿಯೇ ಇಲ್ಲ.
ಬಹುತೇಕ ಪಿತೃಪ್ರಧಾನ ಕುಟುಂಬ ವ್ಯವಸ್ಥೆಯಿರುವಲ್ಲಿ ತಂದೆಯಿಂದ ಜಾತಿ ಗುರುತಿಸುತ್ತಿರುವುದು ನಿಜವಾದರೂ ತುಳು ಸಂಸ್ಕೃತಿಯ ಜನರ (ಜೈನ, ಬಂಟ ಇತ್ಯಾದಿ)ಅಳಿಯಸಂತಾನ ಪದ್ಧತಿಯಲ್ಲಿ ಮಕ್ಕಳಿಗೆ ತಾಯಿಯ ಜಾತಿಯನ್ನೂ ಪರಿಗಣಿಸಿದ ಸಂದರ್ಭಗಳಿವೆ.
ಏನೇ ಇದ್ದರೂ ಉತ್ತಮ ಸಂಸ್ಕಾರದಿಂದ ಮೇಲು ಜಾತಿಗೇರಬಹುದೆಂಬ ಹಿಂದಿನವರ ಸಂದೇಶವನ್ನು ಗಮನಿಸಿ ತಾವು ಕೂಡ ಕರ್ಮದಿಂದ ಬ್ರಾಹ್ಮಣರಾಗಲು ಮುಂದಾಗದಿದ್ದುದೇ ಜಾತಿ ಸಂಘರ್ಷದ ಮೂಲವಾಗಲು ಕಾರಣವಾಗಿದೆ.

 

comments powered by Disqus
Top