ಜಾತಿ ಸಂವಾದ - ಅಭಿಪ್ರಾಯ 4

ಗತವೆಲ್ಲ ಶವದ ಮಲ್ಲಿಗೆಯಂತಿದ್ದರೆ
ರಮೇಶ ಅರೋಲಿ ಅಸ್ಕಿಹಾಳ

ನಾನು ಹುಟ್ಟಿ ಬೆಳೆದದ್ದು ರಾಯಚೂರಿನ ಅಸ್ಕಿಹಾಳ, ಎರಡನೆಯ ತರಗತಿಯಿಂದ ಸಂಶೋಧನೆಯ ತನಕವೂ ಇದ್ದದ್ದು ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಲ್ಲಿ.
ಮನೆಯಲ್ಲಿ ಊಟಕ್ಕೆ ತೊಂದರೆ ಇದ್ದು, ಅಪ್ಪ-ಅಮ್ಮ ಇಲ್ಲದ ಮಕ್ಕಳನ್ನು ಬಿಡುವ ಸ್ಥಳವೇ ಇದಾಗಿದ್ದರಿಂದ ಅಲ್ಲಿದ್ದ ಬಹುಪಾಲು ಮಕ್ಕಳ ಕಥೆಯೂ ಒಂದೇ ಆಗಿರುತ್ತಿತ್ತು. ಅಸ್ಕಿಹಾಳ ರಾಯಚೂರು ನಗರಕ್ಕೆ ಹೊಂದಿಕೊಂಡ ಊರು ಆದ್ದರಿಂದ ಜಾತಿ ತಾರತಮ್ಯದ ಅನುಭವ ನನಗಾಗಿರಲಿಲ್ಲ.
ಆದರೆ ಯಾವಾಗ ಓದಲು ಹಳ್ಳಿಗಳಲ್ಲಿ (ಉಡಮಗಲ್-ಖಾನಾಪೂರ, ಜೇಗರಕಲ್-ಮಲ್ಲಾಪೂರ) ಉಳಿಯಬೇಕಾಯಿತೊ ಆಗ ನನಗೆ ಅದರ ವಿವಿಧ ಸ್ವರೂಪ ತಿಳಿಯಿತು.
ಉಡಮಗಲ್‌ನ ಆಶ್ರಮ ಹಾಸ್ಟೆಲ್‌ನಲ್ಲಿ ಹಿಟ್ಟು ಬೀಸಿಕೊಂಡು ಬರಲು ಮಕ್ಕಳನ್ನು ಸರದಿ ಪ್ರಕಾರ ಊರ ಒಳಗಿನ ಗೌಡರ ಗಿರಣಿಗೆ ಕಳುಹಿಸುತ್ತಿದ್ದರು. ಮೂರನೆಯ ತರಗತಿಯಲ್ಲಿ ಓದಬೇಕಾದರೆ ಒಮ್ಮೆ ನನ್ನ ಪಾಳಿ ಬಂತು.
ನಾನು ಇನ್ನೊಬ್ಬ ಸೇರಿ ಕಬ್ಬಿಣದ ಡಬ್ಬಿ ಹಿಡಿದು ಖಾನಾಪೂರದ ಗಿರಣಿಗೆ ಹೋದೆವು. ಅದಾಗಲೇ ಗಿರಣಿಯಲ್ಲಿ ಡಬ್ಬಿಯ ಸಾಲು ಬೆಳೆದಿತ್ತು. ನಾವು ಹೋಗಿ ಸರತಿಯ ಕೊನೆಯಲ್ಲಿಟ್ಟೆವು. ಇಕ್ಕಟ್ಟಾದ ಸ್ಥಳ ಆದ್ದರಿಂದ ಡಬ್ಬಿಗೆ ಡಬ್ಬಿ ಅಂಟಿಸಿ ಇಟ್ಟಿದ್ದೆವು. ಅದೆಲ್ಲಿದ್ದನೊ ನಮ್ಮ ಮುಂದಿನ ಡಬ್ಬಿಯವನು ಬಂದವನೆ ಕಾಲಿನಿಂದ ನಮ್ಮ ಡಬ್ಬಿಯನ್ನು ಜಾಡಿಸಿ ಒದ್ದು ಬಿಟ್ಟ.
ಡಬ್ಬಿಯಲ್ಲಿದ್ದ ಅರ್ಧ ಗೋಧಿ ಚೆಲ್ಲಿಬಿಟ್ಟಿತು. ಒದ್ದವನು ನಮಗಿಂತ ದೊಡ್ಡವನಾಗಿದ್ದ ಅಲ್ಲದೆ ಹಣೆ ತುಂಬ ವಿಭೂತಿಯನ್ನು ಧರಿಸಿದ್ದ. ಅದು ಯಾಕಾಯ್ತು, ನಮ್ಮಿಂದಾದ ತಪ್ಪೇನು ಅಂತ ತಿಳಿದುಕೊಳ್ಳಲು ಸಮಯ ನೀಡದ ಆ ಹುಡುಗ ತನ್ನ ಡಬ್ಬಿಯನ್ನೆತ್ತಿ ಬೀಸುವವನ ಮುಂದಿಟ್ಟು ಬೀಸಲು ಹೇಳಿದ.
ನಾವು ಗೋಧಿಯನ್ನ ಮತ್ತೆ ನಮ್ಮ ಡಬ್ಬಿಗೆ ತುಂಬಿ ಅಳು ಮೋರೆ ಹಾಕಿ ನಿಂತಿದ್ದೆವು. ಅವನ ಆವತ್ತಿನ ಆ ನಡತೆಗೆ ನನಗೆ ನಾನೇ ಪ್ರಶ್ನೆ ಕೇಳಿಕೊಂಡು ಸುಮ್ಮನಾಗಿದ್ದೆ. ಆಮೇಲೆ ತಿಳಿದದ್ದು ಏನೆಂದರೆ ಸರಕಾರಿ ಹಾಸ್ಟೆಲ್‌ಗಳಲ್ಲಿ ಓದಲು ಬರುವವರೆಲ್ಲ ಕೆಳ ಜಾತಿಯವರಾಗಿದ್ದು, ಅವರನ್ನು ಮುಟ್ಟಿಸಿಕೊಳ್ಳುವಂತಿರಲಿಲ್ಲ.
ಮತ್ತೊಮ್ಮೆ ಹೀಗಾಯ್ತು. ನಾನಾಗ ಹತ್ತನೇ ತರಗತಿಯಲ್ಲಿದ್ದೆ. ಆಗ ರಾಯಚೂರಿನ ಸುತ್ತಲ (ಯಾಪಲದಿನ್ನಿ ಕೇಂದ್ರಿತ) ಹಳ್ಳಿಗಳಲ್ಲಿರುವ ಸಮಸ್ಯೆಗಳನ್ನು ಎತ್ತಿಕೊಂಡು ಚಳವಳಿ ಮಾಡುತ್ತಿದ್ದ ಪ್ರಗತಿಪರ ಸಂಘಟನೆಗಳು ರಜಾ ದಿನಗಳಲ್ಲಿ  ವಿಲೇಜ್ ಕ್ಯಾಂಪೇನ್‌ಗಳನ್ನು ಹಮ್ಮಿಕೊಳ್ಳುತ್ತಿದ್ದರು.
ನಾನು ಜಾತಿ ಬಗ್ಗೆ ಓದಿಕೊಂಡಿದ್ದನ್ನು, ತಾರತಮ್ಯದ ಬದುಕನ್ನು ಕಣ್ಣಾರೆ ನೋಡಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಭಾಷಣ, ಹಾಡು ಇರುತ್ತಿದ್ದವು. ಬೂಡದಿಪಾಡು ಹಳ್ಳಿಯಲ್ಲಿ ಕಾರ್ಯಕ್ರಮವಿತ್ತು. ಭಾಷಣದಲ್ಲಿ ಸುಮಾರು ಹೊತ್ತು ಚುನಾವಣೆಗಳ ಬೂಟಾಟಿಕೆ ಕುರಿತು, ಕನಿಷ್ಠ ಹಕ್ಕುಗಳ ಬಗ್ಗೆ, ಮಹಿಳೆಯರ ಸಮಸ್ಯೆಗಳನ್ನ ಹಾಡಾಗಿಸಿ ಹಾಡಲಾಯಿತು.
ಹಾಡು ಹೇಳಿ ದಣಿದಿದ್ದ ನಾನು ಪಕ್ಕಕ್ಕೆ ಕೂತೆ. ಗಂಟಲು ಒಣಗಿತ್ತು. ದಣಿವಾರಿಸಿಕೊಳ್ಳಲು ನೀರು ಬೇಕಿತ್ತು. ಕಾರ್ಯಕ್ರಮ ನೋಡಲು ಬಂದ ಮಕ್ಕಳ ಗುಂಪೇ ಅಲ್ಲಿ ಸೇರಿತ್ತು. ತಮಟೆ ಪಕ್ಕಕ್ಕಿಡಲು ಮಕ್ಕಳ ಗುಂಪೊಂದು ಬಂದು ತಮಟೆ ಸವರುವ, ಒಮ್ಮೆ ಬಾರಿಸುವ ಪ್ರಯತ್ನ ಮಾಡುತಿತ್ತು.
ನನಗೊ ಸ್ವಲ್ಪ ನೀರು ಬೇಕಿತ್ತು. ಗುಂಪಲ್ಲಿದ್ದ ಒಬ್ಬ ಪುಟಾಣಿಯನ್ನ ಕರೆದು ತೆಲುಗಿನಲ್ಲಿ ಮನೆಯಿಂದ ಕುಡಿಯಲು ಸ್ವಲ್ಪ ನೀರು ತರಲು ಕೇಳಿದೆ.  `ಮೇಮು ಮಾದಿಗೊಳ್ಳು' ಎಂದು ಉತ್ತರಿಸಿ ಅಲ್ಲಿಂದ ಆ ಗುಂಪೇ ಓಡಿಬಿಟ್ಟಿತು.
ಒಮ್ಮೆ ತಲೆ ಗಿರ‌್ರನೆ ತಿರುಗಿಬಿಟ್ಟಿತು. ಯಾವ ಕಾರಣಕ್ಕಾಗಿ ನಾವು ಅಷ್ಟೊತ್ತಿನವರೆಗೂ ಕೂಗಿಕೊಂಡಿದ್ದೆವೊ ಅದೆಲ್ಲವೂ ಕೃಷ್ಣಾ ನದಿಯಲ್ಲಿ ಕೊಚ್ಚಿ ಹೋದ ಅನುಭವವಾಯಿತು.
ಜಾತಿ ಒಂದು ಸಾಂಸ್ಕೃತಿಕ ನೆನಪಾಗಿ, ಅಸ್ಮಿತೆಯಾಗಿ ಬೇಕು; ಆದರೆ ಅದರಿಂದಲೇ ನನ್ನ ಸ್ಥಾನಮಾನವನ್ನು ಅಳೆಯುವಂತಿದ್ದರೆ, ಗತವೆಲ್ಲ ಶವದ ಮಲ್ಲಿಗೆಯಂತಿದ್ದರೆ ಎಂದಿಗೂ ಬೇಡ.

 

comments powered by Disqus
Top