ಜಾತಿ ಸಂವಾದ - ಅಭಿಪ್ರಾಯ 5

ಕೊಳಕಿನಿಂದ ಶುದ್ಧತೆಯೆಡೆಗೆ
ಪ್ರೊ. ಎಂ. ಯು. ಕೃಷ್ಣಯ್ಯ

ನಮ್ಮ ಸುತ್ತಮುತ್ತ ಗಾಳಿ ಇದೆಯೋ ಇಲ್ಲವೋ ಎಂಬುದನ್ನ ಹಿಡಿದು ತೋರಿಸಲು ಆಗುವುದಿಲ್ಲ ಆದರೆ ಉಸಿರಾಡುತ್ತಾ ಅನುಭವಿಸುತ್ತೇವೆ. ಈ ಉಸಿರಾಟವು ಒಮ್ಮಮ್ಮೆ ಶುದ್ಧ ಗಾಳಿಯ ಕೊರತೆಯಿಂದ ನಮಗೆ ತೊಂದರೆ ತರಬಹುದು, ರೋಗ ಬರಬಹುದು, ಗಾಳಿ ಸಿಗದೇ ನಾವು ಸತ್ತೆ ಹೋಗಬಹುದು.
ಈ ಮಾತು ಜಾತಿಗೂ ಅನ್ವಯಿಸುತ್ತದೆ. ಜಾತಿಯಿಂದಲೇ ಉತ್ತಮ ಆಹಾರ, ಉತ್ತಮ ಉದ್ಯೋಗ, ಅಂತಸ್ತು ಪಡೆದವರಿದ್ದಾರೆ. ಹಾಗೆಯೇ ಜಾತಿಯಿಂದಲೇ ಅನ್ನ, ನೀರು, ದುಡಿಮೆ ಸಿಗದೇ ಸತ್ತವರೂ ಇದ್ದಾರೆ. ಜಾತಿಯ ಕಾರಣಕ್ಕೆ ಕೊಲೆಯೂ ಆಗಿ ಹೋಗಿದ್ದಾರೆ.
ಸಮಾಜಶಾಸ್ತ್ರಜ್ಞ ಎಂ. ಎನ್. ಶ್ರೀನಿವಾಸ್, ಕೆಳಜಾತಿಗಳು ಮೇಲು ಜಾತಿಗಳ ಜೀವನ ಶೈಲಿಯನ್ನ ಅನುಕರಿಸುವುದನ್ನು ಸಂಸ್ಕೃತೀಕರಣ ಎಂದರು. ನನ್ನ ದೃಷ್ಟಿಯಲ್ಲಿ ಈ ಪ್ರಕ್ರಿಯೆಯಲ್ಲಿ ನಡೆಯುವುದು ಕೊಳಕಿನಿಂದ ಶುದ್ಧತೆಯೆಡೆಗಿನ ಪ್ರಯಾಣ. ಅಸ್ಪೃಶ್ಯತೆ ಹುಟ್ಟಿದ್ದೇ ಕೊಳಕಿನಿಂದ.
ಜನ್ಮದತ್ತವಾದ ಜಾತಿಯಿಂದ ಉದ್ಯೋಗ ಅನಿವಾರ್ಯವಾದಾಗ ಮತ್ತು ಅದು ಕನಿಷ್ಠವಾದಾಗ ಅಸ್ಪೃಶ್ಯತೆ ಹುಟ್ಟುತ್ತದೆ. ಚಪ್ಪಲಿ ಹೊಲೆಯುವವರ, ಕಮ್ಮೋರಿಕೆ ಮಾಡುವವರ ವೃತ್ತಿ ಕೊಳಕಾದುದು. ಕೊಳಕು ಮೆತ್ತಿಕೊಂಡ ಜನ ಕೊಳಕರಾದರು. ಜನ ಅವರನ್ನು ಊರಿನಿಂದಾಚೆ ನಿಲ್ಲಿಸಿದರು. ಹಾಗಾಗಿ ಅಸ್ಪೃಶ್ಯತೆ ಅವರಿಗೆ  ಅಂಟಿತು. 
ಜಾತಿಯ ಅಸಮಾನತೆಯನ್ನು ಅಳಿಸಲು ಮಾಡಿದ ಎಲ್ಲ ಪ್ರಯತ್ನಗಳೂ ವಿಫಲವಾಗಿವೆ. ಮಹಾ ಮಾನವತಾವಾದಿ  ಬಸವಣ್ಣ ಅಸಮಾನತೆಯನ್ನು ತೊಡೆದು ಸಮಾನತೆಯನ್ನು ನೀಡಿದ ಸಮಾಜ ಸುಧಾರಕ. ಆದರೆ ಅವರ ಅಂತ್ಯ ಹೇಗಾಯಿತು? ಅಂದರೆ ಸಂಸ್ಕೃತೀಕರಣ ಪ್ರಕ್ರಿಯೆಯನ್ನು ಕೆಳವರ್ಗದವರು ಕೈಗೊಂಡರೂ ಮೇಲ್ವರ್ಗದವರು ಅದನ್ನ ಒಪ್ಪುವುದಿಲ್ಲ.
ಬಿಹಾರದ ಯಾದವರು ತಾವು ಶ್ರೀಕೃಷ್ಣನ ವಂಶಜರೆಂದೂ ಬ್ರಾಹ್ಮಣರು ಶ್ರೀಕೃಷ್ಣನನ್ನು ಪೂಜಿಸುವುದರಿಂದ ನಾವು ಅವರಿಗಿಂತ ಶ್ರೇಷ್ಠರೆಂದು ಜನಿವಾರ ಧರಿಸಲು ಆರಂಭಿಸಿ ನಗೆಪಾಟಲೀಗೀಡಾದುದು ಎಲ್ಲರಿಗೂ ತಿಳಿದೇ ಇದೆ. ವೀರಶೈವರು ಶೂದ್ರರಾದರೂ ಶಿವದಾರ ಧರಿಸಿ ಬ್ರಾಹ್ಮಣರ ಸರಿಸಮಾನ ಸ್ಥಾನ ಪಡೆಯಲು ಸಫಲರಾದರು.
ಆದರೆ ಇತರ ಜಾತಿಯವರು ಸಂಸ್ಕೃತೀಕರಣ ಪ್ರಕ್ರಿಯೆಯಲ್ಲಿ ವಿಫಲರಾದರು. ಚಿತ್ರದುರ್ಗದ ಮುರುಘಾಶರಣರು ಜಾತಿಗೊಂದು ಸ್ವಾಮಿಗಳನ್ನು ಸೃಷ್ಟಿಸಿದರು. ಆದರೆ ಈ ಎಲ್ಲಾ ಜಾತಿಯ ಸ್ವಾಮಿಗಳಿಂದ ಮಠ ಮಂದಿರ ಬೆಳೆಯುತ್ತಿವೆಯೇ ಹೊರತು ಸಂಕ್ಕೃತೀಕರಣ ಪ್ರಕ್ರಿಯೆ ಶೂನ್ಯ.

 

comments powered by Disqus
Top