ಜಾತಿ ಸಂವಾದ - ಅಭಿಪ್ರಾಯ 6

ನೀವು ಯಾವ ಜನ?
ಸಿ ಪಿ ನಾಗರಾಜ ಬೆಂಗಳೂರು

ನೂರೆಂಟು ಜಾತಿಗಳಿಂದ ಕೂಡಿರುವ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ, ಜಾತಿಯ ಬಗೆಗಿನ ಭ್ರಮೆಗಳು ಬಹು ವಿಲಕ್ಷಣವಾಗಿವೆ. ಸಾಮಾಜಿಕ ಒಡನಾಟದಲ್ಲಿ ನಮ್ಮಡನೆ ಸಂಪರ್ಕ ಬೆಳೆಸುವ ಅಥವಾ ಸಮಾಜದಲ್ಲಿ ಉನ್ನತವಾದ ಸ್ಥಾನಮಾನಕ್ಕೆ ಏರಿರುವ ಯಾವುದೇ ವ್ಯಕ್ತಿಯ ಹೆಸರನ್ನು ತಿಳಿದ ನಂತರ ಆ ವ್ಯಕ್ತಿಯು ಯಾವ ಜಾತಿಗೆ ಸೇರಿದವನೆಂಬುದೇ ನಮಗೆ ಬಹು ಮುಖ್ಯವಾದ ವಿಚಾರವಾಗುತ್ತದೆ.
ನಮ್ಮೆಲ್ಲರಲ್ಲೂ ಒಂದಲ್ಲ ಒಂದು ಪ್ರಮಾಣದಲ್ಲಿ ಜಾತಿ ಭ್ರಮೆಯು ನೆಲೆಗೊಂಡಿದೆ. ನನ್ನ ಅನುಭವದ ಎರಡು ಪ್ರಸಂಗಗಳನ್ನು ಇಲ್ಲಿ ನಿರೂಪಿಸಬಯಸುತ್ತೇನೆ.
ಪ್ರಸಂಗ -1: ಸುಮಾರು  ನಲವತ್ತು  ವರ್ಷಗಳ ಹಿಂದೆ ನಡೆದ ಘಟನೆ. ಅಂದು ಮೈಸೂರಿನಿಂದ ಮಂಗಳೂರಿಗೆ ಸರ್ಕಾರಿ ಬಸ್ಸಿನಲ್ಲಿ ಗೆಳೆಯರೊಡನೆ ಪ್ರಯಾಣಿಸುತ್ತಿದ್ದೆ. ಬಿಳಿಕೆರೆಯನ್ನು ದಾಟುತ್ತಿದ್ದಂತೆಯೇ ಬಸ್ಸು ಕೆಟ್ಟು ನಿಂತಿತು.
ಆಗ ಈಗಿನಂತೆ ಮಂಗಳೂರಿಗೆ ಬಸ್ಸುಗಳ ಓಡಾಟ ಹೆಚ್ಚಾಗಿರಲಿಲ್ಲ. ಮೈಸೂರಿನಿಂದ ಮತ್ತೆ ಬದಲಿ ಬಸ್ಸು ಬರಬೇಕಿತ್ತು. ರಸ್ತೆಯ ಬದಿಯಲ್ಲಿ ಮಾತನಾಡುತ್ತ ಕುಳಿತಿದ್ದ ನಮಗೆ ಬಾಯಾರಿಕೆಯಾಗತೊಡಗಿತು.
ಅಲ್ಲೆೀ ಹತ್ತಿರದಲ್ಲಿ ಕೆ.ಇ.ಬಿ. ಇಲಾಖೆಯ ವಸತಿ ಗೃಹಗಳು ಕಣ್ಣಿಗೆ ಬಿದ್ದವು. ಅಲ್ಲಿಗೆ ಹೋಗಿ, ಒಂದು ಮನೆಯ ಮುಂದೆ ನಿಂತು, ಮನೆಯವರನ್ನು ಕೂಗಿದೆವು. ಒಳಗಿನಿಂದ ಸುಮಾರು ನಲವತ್ತು ವರ್ಷದ ಹೆಂಗಸು ಹೊರ ಬಂದರು.
“ಕುಡಿಯೋದಕ್ಕೆ ಸ್ವಲ್ಪ ನೀರ್ ಕೊಡ್ರಮ್ಮ” ಎಂದು ಕೇಳಿದ ನಮ್ಮನ್ನು ಅವರು ದಿಟ್ಟಿಸಿ ನೋಡತೊಡಗಿದರು. ನಾವು ಹೇಳಿದ್ದು ಅವರಿಗೆ ಕೇಳಿಸಲಿಲ್ಲವೆಂದು ಭಾವಿಸಿ, ಮತ್ತೊಮ್ಮೆ ಸ್ವಲ್ಪ ಎತ್ತರದ ದ್ವನಿಯಲ್ಲಿ  “ಕುಡಿಯೋದಕ್ಕೆ ನೀರು ಬೇಕಾಗಿತ್ತು ಕಣ್ರಮ್ಮ” ಎಂದೆ.            
ನೀವು ಯಾವೂರೋರಪ್ಪ?”
“ನಾವು ಮಂಡ್ಯದೋರು. ಹಿಂಗೆ ಮಂಗಳೂರ‌್ಗೆ ಹೊಯ್ತಿದ್ದೊ. ಇಲ್ಲೆ ಬಸ್ಸು ಕೆಟ್ಟೋಗಿ ನಿಂತಿದೆ” ಎನ್ನುತಿದ್ದಂತೆಯೇ, ಆಕೆ ಒಳಕ್ಕೆ ಹೋದರು. ಕೆಲವು ನಿಮಿಷಗಳ ನಂತರ ಸುಮಾರು ಐವತ್ತು ವರ್ಷದ ಒಬ್ಬ ಗಂಡಸು ಹೊರಕ್ಕೆ ಬಂದರು.
ನೀರನ್ನು ತರದೇ ಹಾಗೆ ಬರಿ ಕೈಯಲ್ಲಿ ಬಂದವರು  ನಮ್ಮನ್ನು   ಪರೀಕ್ಷಿಸುವಂತೆ , ಮೇಲಿನಿಂದ ಕೆಳಗಿನವರೆಗೆ ನಮ್ಮ ಮುಖಚರ್ಯೆ ಮತ್ತು ಬಟ್ಟೆಬರೆಗಳನ್ನು ನೋಡತೊಡಗಿದರು. ನನಗಂತೂ ತುಂಬಾ ಬೇಸರವಾಯಿತು.
“ಯಾಕಾದರೂ ಇವರ ಮನೆಗೆ ಬಂದು ನೀರನ್ನು ಕೇಳಿದೆವೋ” ಎಂದು ಅನ್ನಿಸತೊಡಗಿತು. ಸ್ವಲ್ಪ ತಾಳ್ಮೆಯನ್ನು ಕಳೆದುಕೊಂಡ ಧ್ವನಿಯಲ್ಲಿ “ರ‌್ರೀ , ಸ್ವಾಮಿ, ಕುಡಿಯೋಕೆ ಸ್ವಲ್ಪ ನೀರು ಕೊಡ್ರಿ” ಎಂದೆ. ಇದುವರೆಗೂ ನಮ್ಮನ್ನು ಕುತೂಹಲ ಬೆರೆತ ದೃಷ್ಟಿಯಿಂದ ನೋಡುತ್ತಿದ್ದ ಆ ವ್ಯಕ್ತಿಯು ಮಾತನಾಡತೊಡಗಿದರು.
“ನೀವು ಯಾವ ಜನ?”ಯಾಕೆ?”ಮೊದಲು ಹೇಳಿ ಸ್ವಾಮಿ , ನೀವು ಯಾವ ಜನ ಅಂತ?”ಯಾಕ್ರಿ? , ನಮ್ ಜಾತಿ ಕಟ್ಕೊಂಡು ಏನ್ ಮಾಡ್ತೀರಿ?”ಸ್ವಾಮಿ , ನಾವು ಏ.ಕೆ.*ಗಳು , ನಮ್ಮ ಮನೆ ನೀರನ್ನು ನೀವು ಕುಡೀತಿರಾ?”
“ರ‌್ರೀ , ಏನ್ರೀ ಹಿಂಗೆ ಕೇಳ್ತಾ ನಿಂತ್ಕೊಂಡ್ರಿ? ನಮಗೆ ತುಂಬಾ ಬಾಯಾರಿಕೆಯಾಗಿದೆ. ಮೊದಲು ಸ್ವಲ್ಪ ನೀರು ಕೊಡಿ.”
ಆ ಗಂಡಸು ಒಳಹೋಗಿ ಕ್ಷಣ ಮಾತ್ರದಲ್ಲಿ ಚೆಂಬುಗಳಲ್ಲಿ ತುಂಬಿಕೊಂಡು ತಂದು ತಣ್ಣನೆಯ ನೀರನ್ನು ನೀಡಿದರು.
ಅಲ್ಲಿಂದ ಹಿಂತಿರುವಾಗ “ಜಾತಿ ಕೇಳಿ ನೀರು ಕೊಡ್ತೀರಲ್ಲ ಯಾಕೆ?“ ಎಂದು ಪ್ರಶ್ನಿಸಿದೆ.
“ನೋಡಿ ಸ್ವಾಮಿ , ಮೊನ್ನೆ ಯಾರೋ ಒಬ್ಬರು ನಿಮ್ಮಂಗೆ ಬಂದು , ನೀರ್ ಈಸ್ಕೊಂಡು ಕುಡುದ್ರು , ಆಮೇಲೆ ನಮ್ಮ ಜಾತಿ ಯಾವುದು ಅಂತ ಕೇಳುದ್ರು... ನಾವು ಹೇಳ್ದೊ... ಆಗ ಅವರು ಬಹಳ ಸಂಕಟಪಟ್ಕೊಂಡು ಹೋದರು... ಅದಕ್ಕೆ ... ಹಿಂಗೆ ಕೇಳ್ದೊ ಸ್ವಾಮಿ.“
ಪ್ರಸಂಗ -2: ಕಾಳಮುದ್ದನ ದೊಡ್ಡಿಯ ನಮ್ಮ ಮನೆಯ ಮುಂಭಾಗದಲ್ಲಿ ಒಂದು ಸಂಜೆ ಸ್ನೇಹಿತರೊಬ್ಬರ ಜೊತೆ ಮಾತನಾಡುತ್ತ ಕುಳಿತಿದ್ದೆ. ಬೆಳೆಗ್ಗೆಯಿಂದಲೂ  ಅಲ್ಲೆ  ಅತ್ತಿತ್ತ ತಿರುಗಾಡುತ್ತಿದ್ದ ಒಬ್ಬ ರೈತನು ಬಳಿಗೆ ಬಂದು ಪಕ್ಕದ ಮನೆಯತ್ತ ಕೈ ತೋರಿಸುತ್ತಾ “ಈ ವಿಲೇಜ್ ಅಕೌಂಟೆಂಟ್‌ರು ಎಷ್ಟೊತ್ತಿಗೆ ಬತ್ತರೆ ಸ್ವಾಮಿ” ಎಂದ.ಗೊತ್ತಿಲ್ಲ”. ಪಕ್ಕದ ಮನೆಯಲ್ಲಿ ಇದ್ದೀರಿ , ಅವರು ಎಷ್ಟೊತ್ತಿಗೆ ಬತ್ತರೆ-ಹೊಯ್ತರೆ ಅನ್ನೋದು ಕಾಣ್ರ !”
ಆತನ ಮಾತಿನ ಧೋರಣೆಯಿಂದ ನನಗೆ ಸ್ವಲ್ಪ ಕೋಪ ಬಂತು , ಆದರೂ ತಾಳ್ಮೆಯಿಂದಲೇ ಉತ್ತರಿಸಿದೆ. “ಈಗ ಸ್ಕೂಲುಗಳಿಗೆ ರಜ ನೋಡಪ್ಪ....ಅವರ ಹೆಂಗಸರು ಮಕ್ಳು  ಊರಲ್ಲಿಲ್ಲ. ಅದಕ್ಕೆ ಯಾವಾಗ ನೋಡುದ್ರು  ಅವರ ಮನೆ ಬಾಗಿಲು ಹಾಕ್ದಂಗೆ ಇರ‌್ತದೆ . ನಾನು ಹೆಂಗಪ್ಪ ಹೇಳಲಿ , ಇಷ್ಟೊತ್ತಿಗೆ ಬತ್ತರೆ ಅಂತ!”
“ಅದು ಸರಿಯೆ ಅನ್ನಿ , ಹೆಂಗಸ್ರು -ಮಕ್ಳು ಇಲ್ದೆ ಹೋದ್ಮೇಲೆ  ಗಂಡಸಿಗೆ ಮನೇಲಿ ತಾನೆ  ಏನ್ ಕೆಲ್ಸ?” ಎಂದು ಪ್ರತಿಕ್ರಿಯಿಸಿದ. ಅವನ ಮಾತಿನ ಶೈಲಿಯಿಂದ ಅಚ್ಚರಿಗೊಂಡ ನಾನು, ಈಗ ಆತನನ್ನು ಸೂಕ್ಷ್ಮವಾಗಿ ಗಮನಿಸಿದೆ . ಆತ ಸುಮಾರು ನಲವತ್ತೈದು ವರ್ಷದವನು.
ಬೆಳಿಗ್ಗೆಯಿಂದ ಸಂಜೆಯವರೆಗೆ ಕಾದು ಕಾದು ಅವನ ಮುಖ ಬಾಡಿತ್ತು . ತೊಟ್ಟಿದ್ದ ಅಂಗಿಯು ಅಲ್ಲಲ್ಲಿ ಹರಿದಿತ್ತು . ಉದ್ದನೆಯ ಚಡ್ಡಿಯನ್ನು ಧರಿಸಿದ್ದ ಅವನು ಬಡತನದ ಬೇಗೆಯಲ್ಲಿ ಬೇಯುತ್ತಿದ್ದುದು ಎದ್ದು ಕಾಣುತ್ತಿತ್ತು. ಅವನೊಡನೆ ಇನ್ನಷ್ಟು ಮಾತನಾಡಬೇಕೆಂಬ ಉದ್ದೇಶದಿಂದ - ಎಷ್ಟು ಎಕರೆ ಜಮೀನು ಇದೆ?”
“ಓ, ಎಷ್ಟು ಎಕರೆ ಇದ್ದುದು?  ಒಂದೂವರೆ ಎಕರೆ ಹೊಲ ಅದೆ. ಅದರೆ ಮೇಲೆ ಒಸಿ ಸಾಲ ತಕೋಬೇಕು ಅಂತ ಓಡಾಡ್ತ ಇವ್ನಿ. ಈ ಪುಣ್ಯಾತ್ಮ  ಕೈಗೂ ಸಿಗೊಲ್ಲ   ಬಾಯ್ಗೂ ಸಿಗೊಲ್ಲ” ಎನ್ನುತ್ತಾ ನಮ್ಮ ಮನೆಯ ಮೆಟ್ಟಿಲುಗಳ ಬಳಿ ಬಂದು “ಸ್ವಾಮಿ, ಕುಡಿಯೋಕೆ ನೀರ್ ಕೂಡ್ತೀರಾ?” ಎಂದು ಕೇಳಿದ.
ನೀರನ್ನು ತಂದು ಕೊಡಲೆಂದು ನಾನು ಮೇಲಕ್ಕೆ ಏಳುತ್ತಿದ್ದಂತೆಯೇ- “ಸ್ವಾಮಿ....ನೀವು ಯಾವ ಜನ?” ಎಂದು ಪ್ರಶ್ನಿಸಿದ .
“ಯಾಕಯ್ಯ?”
“ನೀವು ಯಾವ ಜನ ಅಂತ ....ಮೊದ್ಲು ಹೇಳಿ ಸ್ವಾಮಿ?” “ನಾನು ಯಾವ ಜಾತಿ ಆದ್ರೆ ನಿಂಗೇನಯ್ಯ? ನಿಂಗೆ ಕುಡಿಯೋಕೆ ನೀರು ತಾನೇ ಬೇಕಾಗಿರೋದು?”
ಈಗ ಆತ ಎರಡು ಹೆಜ್ಜೆ ಹಿಂದೆ ಸರಿಯುತ್ತಾ ಹಂಗಾದ್ರೆ ಬ್ಯಾಡಿ ಬುಡಿ ನೀರು” ಎಂದ.ಯಾಕಯ್ಯ, ನಿನಗಿಂತ ಕೆಳ ಜಾತಿಯವರ ಮನೆಯಲ್ಲಿ ನೀರು ಕುಡುದ್ರೆ ನಿನ್ನ ಜಾತಿ ಕೆಟ್ಟೋದದೆ?” ಎಂದು ಸ್ವಲ್ಪ ಖಾರವಾಗಿ ನುಡಿದೆ.
ನನ್ನ ನುಡಿಗಳಿಗೆ ಆತ ತೀವ್ರವಾಗಿ ಪ್ರತಿಕ್ರಿಯಿಸುತ್ತಾ-ನೀರು ಕುಡೀದೆ ಹೋದ್ರೆ ಜೀವ ಹೊಂಟೋದದೆ? ನೀರೇನು,  ಇಲ್ಲಿ ಇಲ್ದೇದ್ರೆ ಇನ್ನೊಂದು ಮನೇಲಿ ಸಿಗ್ತದೆ. ಹಂಗಂತ ಎಲ್ಲೆಲ್ಲೊ ಕುಡುದ್ಬುಟ್ಟು  ಜಾತಿ ಕೆಡಿಸ್ಕೊಂಡಿರಾ?” ಎನ್ನುತ್ತಾ ಪಕ್ಕದ ಮನೆಗಳತ್ತ ನಡೆದ.

comments powered by Disqus
Top