ಜಾತಿ ಸಂವಾದ - ಅಭಿಪ್ರಾಯ 2

ಜಾತಿ ಪ್ರಕೃತಿ ಸಹಜ
ಕೆ.ಆರ್.ಶ್ರೀನಿವಾಸಮೂರ್ತಿ ಹಟ್ಟಿಯಂಗಡಿ

ವೇದ ಕಾಲದಲ್ಲಿದ್ದ ಜಾತಿ ವ್ಯವಸ್ಥೆಯನ್ನು ಯಾರೂ ಸೃಷ್ಟಿಸಲಿಲ್ಲ. ಅದು ಸಮಾಜದ ಅನುಕೂಲಕ್ಕಾಗಿ ಹುಟ್ಟಿಕೊಂಡಿತು. ಯಾವುದೇ ಸಮಾಜ ವ್ಯವಸ್ಥಿತವಾಗಿ ನಡೆಯಬೇಕಿದ್ದರೆ ಎಲ್ಲಾ ವೃತ್ತಿಗಳನ್ನು ಮಾಡುವ ಜನರು ಇರಬೇಕಾಗುತ್ತದೆ. ಈ ವೃತ್ತಿಗಳ ಆಧಾರದಲ್ಲಿ ಜಾತಿಗಳು ಹುಟ್ಟಿದವು. ಮೊದಲು ನಾಲ್ಕು ಜಾತಿಗಳಿದ್ದರೆ ಈಗ ಸಾವಿರಾರು ಉಪಜಾತಿಗಳಿವೆ, ಇದು ಸಹಜ ಮತ್ತು ಅನಿವಾರ್ಯ.
ಜಾತಿಯೇ ಇರಬಾರದೆಂಬ ವಾದ ನಿರರ್ಥಕ. ಇದು ನಿಸರ್ಗದ ನಿಯಮ. ಪ್ರಕೃತಿಯಲ್ಲಿ ನಾವು ಅದೆಷ್ಟು ವೈವಿಧ್ಯಗಳನ್ನು ಕಾಣುತ್ತೇವೆ. ಅದೆಷ್ಟು ವಿಧದ ಹಣ್ಣುಗಳು, ಅದೆಷ್ಟು ವಿಧದ ಹೂವುಗಳು. ಅವುಗಳ ಆಕಾರ, ಸೌಂದರ್ಯ, ರುಚಿ ಎಲ್ಲವೂ ಭಿನ್ನ. ಪ್ರಾಣಿ, ಪಕ್ಷಿಗಳ ಪ್ರಭೇದಗಳಲ್ಲೂ ಈ ಭಿನ್ನತೆ ಇದೆ. ಈ
ವಿಷಯದಲ್ಲಿ ವಾದಕ್ಕೆ ಇಳಿಯದ ನಾವು ಮನುಷ್ಯ ಸಮಾಜದ ಜಾತಿಗಳ ಬಗ್ಗೆ ಮಾತ್ರ ವಾದಕ್ಕೆ ಇಳಿಯುತ್ತೇವೆ. ಜಗತ್ತಿನಲ್ಲಿ ಒಬ್ಬನಿದ್ದಂತೆ ಮತ್ತೊಬ್ಬನಿಲ್ಲ. ಹೀಗಿರುವಾಗ ಎಲ್ಲವೂ ಒಂದೇ ಸಮನಾಗಿರಬೇಕೆಂದು ಬಯಸುವುದು ಎಷ್ಟರ ಮಟ್ಟಿಗೆ ಉಚಿತ. ಪ್ರಬಲರೂ ಮೇಧಾವಿಗಳೂ ವಿಶೇಷವಾಗಿ ಏನನ್ನಾದರೂ ಸಾಧಿಸಿದವರು ಉನ್ನತ ಸ್ಥಾನದಲ್ಲಿರುತ್ತಾರೆ. ಹಾಗೇನೂ ಮಾಡದವರು ಕೆಳಸ್ತರದಲ್ಲಿರುತ್ತಾರೆ. ಇದು ಪ್ರಕೃತಿಯ ನಿಯಮ.
ಸ್ವಚ್ಛತೆ, ಜೀವನದ ಆಚಾರ ವಿಚಾರಗಳು ಮತ್ತು ಮನೋಧರ್ಮದಲ್ಲಿರುವ ವ್ಯತ್ಯಾಸ, ಆಹಾರ ಪದ್ಧತಿ ಮತ್ತು ನಡೆನುಡಿಗಳಿಗೆ ಅನುಗುಣವಾಗಿ ಮಾನವ ಸಮಾಜ ಬೇರೆ ಬೇರೆ ಪಂಗಡಗಳಾಗಿ ಗುರುತಿಸಿಕೊಳ್ಳುವುದು ಅತ್ಯಂತ ಸಹಜ. ಗುಣಗಳಲ್ಲಿ ಭಿನ್ನತೆ ಇರುವ ತನಕವೂ ಭೇದವೂ ಇದ್ದೇ ಇರುವುದು.
ಸಾರ್ವಜನಿಕ ಜೀವನದಲ್ಲಿ ಜಾತಿಯನ್ನು ಪರಿಗಣಿಸಬಾರದು ಎಂಬುದು ವಾದಕ್ಕೆ ಮಾತ್ರ ಸೀಮಿತವಾದ ವಿಚಾರ. ಸರ್ಕಾರಿ ನೌಕರಿ ಕೊಡುವಾಗ ಜಾತಿಯನ್ನು ಪರಿಗಣಿಸಲಾಗುತ್ತದೆ. ಜಾತಿಯ ಕಾಲಂ ಇಲ್ಲದ ಅರ್ಜಿಗಳಿಲ್ಲ. ಹಾಗಿರುವಾಗ ಜಾತಿ ಬೇಡವೆಂದರೆ ಹೇಗೆ?

 

comments powered by Disqus
Top