ಜಾತಿ ಸಂವಾದ - ಅಭಿಪ್ರಾಯ 3

ಬ್ರಾಹ್ಮಣರನ್ನು ದೂರುವ ಮುನ್ನ...
ಎಂ.ಟಿ. ಶಾಂತಿಮೂಲೆ ಪೈಲಾರು

ಜಾತಿ ಜಾತಿ ಎನ್ನುತ್ತಾ ಕೇವಲ ಬ್ರಾಹ್ಮಣ ಜಾತಿಯನ್ನು ಗುರಿಯಾಗಿಟ್ಟುಕೊಂಡು ಎಲ್ಲಾ ಅಸ್ತ್ರಗಳನ್ನೂ ಪ್ರಯೋಗಿಸುತ್ತಿರುವುದು ಎಷ್ಟು ಸಮಂಜಸ. ಇಂದು ಬ್ರಾಹ್ಮಣರೆನ್ನುವ ಮಂದಿ ಅಲ್ಪಸಂಖ್ಯಾತರು ಎಂಬುದು ಎಲ್ಲರ ಗಮನದಲ್ಲಿರಲಿ. ಮುಂದಿನ ದಿನಗಳಲ್ಲಿ ಅವರು ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಡುವ ಪ್ರಮೇಯ ಎದುರಾಗಬಹುದು.
ಪ್ರಪಂಚದಲ್ಲಿ ಎರಡೇ ಜಾತಿಗಳನ್ನು ಉಳಿಸಿ ಮಿಕ್ಕ ಎಲ್ಲಾ ಜಾತಿ ಹೆಸರುಗಳ ಪಟ್ಟಿಯನ್ನೇ ನಿರ್ನಾಮಗೊಳಿಸಿದರೆ ಹೇಗೆ? ಈ ವ್ಯವಸ್ಥೆ ಆಗಿ ಹೋದರೆ ನಾವು ಸಹಸ್ರಾರು ವರ್ಷಗಳ ಹಿಂದೆ ಇದ್ದಲ್ಲಿಗೆ ಸರಿಯುವಂತಾಗುವುದು ನಿಶ್ಚಯ. ಆಗ ಕ್ಷಾಮ ಡಾಮರಗಳಿಂದ ಹುಟ್ಟಿಕೊಂಡದ್ದೇ ಮಾಂಸಾಹಾರಿ-ಸಸ್ಯಾಹಾರಿ ಜಾತಿ ವ್ಯವಸ್ಥೆ. ಉಳಿದವೆಲ್ಲಾ ಕುಲ ಕಸುಬಿನಿಂದ ಹುಟ್ಟಿಕೊಂಡಂಥವು. ಈ ವ್ಯವಸ್ಥೆ ಪುನರಾವರ್ತನೆಯಾದಲ್ಲಿ ಇಲ್ಲಿ ದಲಿತರೂ ಇರಲಾರರು, ಅಲ್ಪ ಸಂಖ್ಯಾತರೂ ಇರಲಾರರು.
ನಮ್ಮಲ್ಲಿಯ ಜಾತಿ ವ್ಯವಸ್ಥೆಯ ಬಗ್ಗೆ ಮೇಲ್ಜಾತಿ ಎಂದು ಗುರುತಿಸಿಕೊಂಡಿರುವ ಜನಿವಾರ ಹಾಕಿಕೊಂಡಿರುವ ವ್ಯಕ್ತಿಗಳನ್ನು ಬಲಿಪಶುಗಳನ್ನಾಗಿ ಮಾಡುವ ಮಂದಿ ಒಮ್ಮೆ ಕೆಳಜಾತಿ ಎಂದು ಕರೆಯುವ ಜನಾಂಗದವರನ್ನು ರಾಜಕೀಯ ಬದಿಗಿಟ್ಟು ನೋಡಲಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಜವಾದ ದಲಿತ ಜನಾಂಗ ಕೊರಗರು, ಮಾಯಿಲ, ಮನ್ಸ, ಮಾದಿಗ ಎಂದು ಕರೆಯಿಸಿಕೊಳ್ಳುವ ಮಾನವರು. ಇವರೂ ಮನುಷ್ಯರೇ ಎನ್ನುವ ವಿಚಾರ `ದಲಿತ ರಾಜಕಾರಣ' ಮಾಡುವ ಮಂದಿಗೆ ನೆನಪಿದೆಯೇ?
ಇವರ ಜೊತೆ ಊಟ, ಉಪಚಾರ, ಸಂಬಂಧ ಸಾಧ್ಯವೇ ಇಲ್ಲ ಎನ್ನುವ ಸತ್ಯವನ್ನು ಜಾತಿ ಸಂವಾದದಲ್ಲಿ ಬರೆಯುತ್ತಿರುವ ಒಬ್ಬ ಲೇಖಕನೂ ಬಹಿರಂಗಪಡಿಸಿಲ್ಲ. ಮೊತ್ತ ಮೊದಲನೆಯದಾಗಿ ಈ ತಳಮಟ್ಟದವರೆಂದು ಗುರುತಿಸಿಕೊಂಡ ಬಡಪಾಯಿ ಜನಾಂಗದ ಕಡೆಗೆ ಜಾತಿವಾದಿಗಳು ಗಮನಹರಿಸಬೇಕಾಗಿದೆ. ಇವರ ಉದ್ಧಾರಕ್ಕಾಗಿ ಮೊದಲು ಶ್ರಮಿಸಬೇಕು. ಬ್ರಾಹ್ಮಣರನ್ನು ಸಹಭೋಜನದ ವಿಷಯದಲ್ಲಿ ದೂಷಿಸುವವರು ಮೊದಲು ಕೊರಗ ಜನಾಂಗದ ಜೊತೆ ಸಹಭೋಜನ, ಅವರ ಜೊತೆ ಸಂಬಂಧ ಬೆಳೆಸುವ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಮುಂದಾಗಿ ಆಮೇಲೆ ಬ್ರಾಹ್ಮಣರನ್ನು ದೂಷಿಸಲಿ.

 

comments powered by Disqus
Top