ಜಾತಿ ಸಂವಾದ - ಅಭಿಪ್ರಾಯ 4

ಅಂತರ್ಜಾತಿ ವಿವಾಹ ಮತ್ತು ಜಾತಿ ಕ್ರೌರ್ಯ
ಸುಧಾ ಬಿ.ಎಸ್ ಶಿಕಾರಿಪುರ

ಜಾತಿಯ ಬಗೆಗೆ ನಿಖರ, ಸ್ಪಷ್ಟ ತಿಳುವಳಿಕೆಯೇ ಇಲ್ಲದೆ ಬೆಳೆದ ನನಗೆ (ಅಥವಾ ಅಪ್ರಜ್ಞಾಪೂವಾಕವಾಗಿ ಅದನ್ನು ನಿರಾಕರಿಸಿದ ಪರಿಣಾಮವೋ) ಜಾತಿಯ ಕರಾಳ ಹಿಡಿತದ ಅನುಭವವಾದದ್ದು ನಾನು ಪ್ರೀತಿಸಿದ ವ್ಯಕ್ತಿ ಬೇರೆ ಜಾತಿಯವರೆಂಬ ವಿಷಯ ಉಂಟುಮಾಡಿದ ಆತಂಕ, ತಲ್ಲಣಗಳಿಂದ.
ತೀರಾ ಸಂಪ್ರದಾಯಸ್ಥ ಲಿಂಗಾಯಿತ ಕುಟುಂಬದಲ್ಲಿ ಬೆಳೆದರೂ,  ಹೊರಗಿನವರಿಗೆ  ಪ್ರತ್ಯೇಕ ತಟ್ಟೆ ಲೋಟಗಳನ್ನು ಕೊಡುವ, ಅವರು ಬಳಸಿದ ನಂತರ  ಹುಳಿ ಇಡುವ ಕಾರ್ಯಗಳು ನಮ್ಮ  ಸಂಬಂಧಿಕರಲ್ಲದವರನ್ನು ನಡೆಸಿಕೊಳ್ಳಬೇಕಾದ ರೀತಿ ಇದು ಎಂಬ ಭಾವನೆಗಿಂತ ಹೆಚ್ಚಿನ ತಿಳುವಳಿಕೆಗೆ ಅವಕಾಶವಿಲ್ಲದಂತೆ ಸಾಗುತ್ತಿತ್ತು.
ಯಾವಾಗಲೋ ರಜೆಯಲ್ಲಿ ಹಳ್ಳಿಯಲ್ಲಿ ಕಳೆದ ದಿನಗಳು ಜಾತಿ ವ್ಯವಸ್ಥೆಯ ಪಾರ್ಶ್ವ ಮುಖವನ್ನು ಅರಿಯಲು ಸಹಾಯಕವಾಯಿತು. ಪ್ರತ್ಯೇಕ ನೀರಿನ ಮೂಲಗಳು, ಮಾರು ದೂರ ನಿಂತು ಮಾತನಾಡುವ ವೈಖರಿ,  ಮುಟ್ಟಿಸಿಕೊಳ್ಳದಂತೆ  ಎಚ್ಚರ ವಹಿಸುವ ಮನೋಭಾವ, ಒಂದು ಸಮಾಜದಲ್ಲಿ ಬದುಕುತ್ತಿರುವ ಜನರೆಲ್ಲರೂ ಒಂದೇ ಅಲ್ಲ ಎಂಬುದನ್ನು ತೋರಿಸಿಕೊಟ್ಟಿತು.
ಈ ಅಸಮಾನತೆಗೆ ಕಾರಣಗಳನ್ನು ಹುಡುಕಿದಾಗ ಸಿಕ್ಕ ಉತ್ತರಗಳಿಂದ ಅರಿತ ವಿಷಯ  ಅವರು  ಮಾಂಸಾಹಾರಿಗಳು ನಾವು ಸಸ್ಯಾಹಾರಿಗಳು ಎಂಬ ಆಹಾರ ಭಿನ್ನತೆಯನ್ನು ಆಧರಿಸಿದ  ಗೋಚರ ಅಂಶವೇ ಪ್ರಧಾನವಾಗಿತ್ತು. ಆದರೆ ನಂತರದ ದಿನಗಳಲ್ಲಿ ಜಾತಿ ವ್ಯವಸ್ಥೆ ಕೇವಲ ಆಹಾರ ಪದ್ಧತಿಗಷ್ಟೇ ಸಂಬಂಧಿಸಿರದ, ಸಾಮಾಜಿಕ ಶ್ರೇಣೀಕರಣದ ಪ್ರಮುಖ ಸಾಧನ. ಮನುಷ್ಯನನ್ನು ಮನುಷ್ಯನಿಂದ, ಮಾನವೀಯ ಸೆಳೆತಗಳಿಂದ ಬೇರ್ಪಡಿಸುವಲ್ಲಿ ಜಾತಿಯ ಪಾತ್ರ ಪ್ರಧಾನವಾದದ್ದು ಎಂಬ ಅಂಶ ಹೆಚ್ಚು ಸ್ಪಷ್ಟವಾದವು.
ಜಾತಿ ವ್ಯವಸ್ಥೆ ರೇಜಿಗೆ ಹಿಡಿಸುವಷ್ಟು ತಲೆ ಕೆಡಿಸಿದ್ದು ಕೆಲಸ ಸಿಕ್ಕ ಆರಂಭದಲ್ಲಿ, ಹೊಸ ಪರಿಸರ, ಹೊಸ ಜನರ ಭಾಷೆಯಲ್ಲಿ ಜಾತಿ ಯಾವುದು  ಎಂಬ ಪ್ರಶ್ನೆ ನಿರ್ಭಿಡೆಯಿಂದ ಹರಿದಾಡುತ್ತಿತ್ತು. ಆರಂಭದಲ್ಲಿ ಜಾತಿಯ ಹೆಸರೇಳಲು ಮುಜುಗರವೆನಿಸಿದರೂ ಅದರಿಂದ ಸಿಗುವ ಗೌರವಕ್ಕೆ ಯಾವುದೇ ತೊಂದರೆ ಇಲ್ಲದಿದ್ದುದರಿಂದ ದೊಡ್ಡ ಸಮಸ್ಯೆ ಎನಿಸಲಿಲ್ಲ.
ಆದರೆ ಜೊತೆಯಲ್ಲಿ ಕೆಲಸ ಮಾಡುವ ಸಹೋದ್ಯೋಗಿಯೊಬ್ಬರು  ಉನ್ನತ ಜಾತಿಯವರೆಂದು ಗುರುತಿಸಿಕೊಳಲು ನಡೆಸಿದ ಪ್ರಯತ್ನ, ಅದನ್ನು ಹೊರಗೆಡಹಲು ಬೇರೆಯವರು ಹುಡುಕುವ ಹುನ್ನಾರಗಳು ಜಾತಿ ವ್ಯವಸ್ಥೆಯ ಸುಪ್ತ ಶಕ್ತಿಯನ್ನು ಅರಿಯುವಂತೆ ಮಾಡಿತು.
ಅಂತರ್ಜಾತಿ ವಿವಾಹವಂತೂ ಜಾತಿಯ ಹೆಸರಿನಲ್ಲಿ ನಡೆಯಬಹುದಾದ ಅವಮಾನ, ಹಿಂಸೆ, ಕೀಳರಿಮೆಯನ್ನು ಅನುಭವಿಸಿ ಅರಿತುಕೊಳ್ಳುವ ಅವಕಾಶವನ್ನು ಒದಗಿಸಿತು. ಜಾತಿಯ ನಿಜ ಸ್ವರೂಪ ಅರಿವಾದದ್ದೇ ಈ ಸಂದರ್ಭದಲ್ಲಿ. ಮಾನವ ಪ್ರೀತಿ, ಸಂಬಂಧಗಳು ಅರ್ಥ ಕಳೆದುಕೊಂಡದ್ದು, ಜನರ ಮನಸ್ಥಿತಿಯ ವಿಕೃತ ರೂಪಗಳು ಗರಿಗೆದರಿ ನಿಂತದ್ದು ಜಾತಿ ವ್ಯವಸ್ಥೆಯ ಹಿಡಿತದ ಕರಾಳತೆಯನ್ನು ಪರಿಚಯಿಸಿದವು. ಜಾತಿಯ ಮೂಲವಿರುವುದು ಹುಟ್ಟಿನೊಂದಿಗೆ ಗುರುತಿಸುವ ಜಾತಿಯಿಂದಲ್ಲ, ನಾವು ಒಳಗೊಂಡಿರುವ ಸ್ವಪ್ರತಿಷ್ಠೆಯ, ಸಾಂಪ್ರದಾಯಿಕ ಮನಸ್ಥಿತಿಯ ಕಾರಣದಿಂದ.

 

comments powered by Disqus
Top