ಜಾತಿ ಸಂವಾದ - ಅಭಿಪ್ರಾಯ 6

ಅಸ್ಪೃಶ್ಯತೆ ಹುಟ್ಟಿದ್ದು ಕೊಳಕಿನಿಂದಲ್ಲ
ಶಿವಕುಮಾರ ಮೈಸೂರು

ಪ್ರೊ. ಎಂ. ಯು. ಕೃಷ್ಣಯ್ಯ  `ಅಸ್ಪೃಶ್ಯತೆ ಹುಟ್ಟಿದ್ದೇ ಕೊಳಕಿನಿಂದ' ಎಂಬ ವಾದವೊಂದನ್ನು ಮಂಡಿಸಿದ್ದಾರೆ (ಜಾತಿ ಸಂವಾದ, ಮಾರ್ಚ್ 4).  ಚಪ್ಪಲಿ ಹೊಲೆಯುವವರ, ಕಮ್ಮೋರಿಕೆ ಮಾಡುವವರ ವೃತ್ತಿ ಕೊಳಕಾದುದು. ಕೊಳಕು ಮೆತ್ತಿಕೊಂಡ ಜನ ಕೊಳಕರಾದರು. ಜನ ಅವರನ್ನು ಊರಿನಿಂದಾಚೆ ನಿಲ್ಲಿಸಿದರು. ಹಾಗಾಗಿ ಅವರಿಗೆ ಅಸ್ಪೃಶ್ಯತೆ ಅಂಟಿತು ಎಂದು ಬರೆದಿದ್ದಾರೆ. ಇದನ್ನು ಅವರು ಎಲ್ಲಿ ಓದಿದರೋ ಅಥವ ತಮ್ಮ ಅನುಭವದಿಂದ ಇದನ್ನು ಸುಮ್ಮನೆ ಹೇಳಿದರೋ ನಾನು ಅರಿಯೆ. ಆದರೆ ಭಾರತದ ಕಾಲುಭಾಗವಿರುವ ಬೃಹತ್ತಾದ ಜನ ಸಮುದಾಯವೊಂದರ ಇತಿಹಾಸದ ಬಗ್ಗೆ ಹೀಗೆ ಬೇಜವಾಬ್ದಾರಿಯಿಂದ ಹೇಳುವುದು ಸರಿಯಲ್ಲ.
ವೃತ್ತಿಯೊಂದರಲ್ಲಿ ಶುದ್ಧ ಅಥವಾ ಕೊಳಕು ಎಂಬ ವಿಭಾಗೀಕರಣ ಹೇಗೆ ಸಾಧ್ಯ ಎಂಬುದು ಇಲ್ಲಿರುವ ಮೂಲಭೂತವಾದ ಪ್ರಶ್ನೆ. ಮೈಮುರಿದು ದುಡಿಯಬೇಕಾದ ಎಲ್ಲಾ ವೃತ್ತಿಗಳೂ ಕೃಷ್ಣಯ್ಯ ಅವರು ಹೇಳುವ `ಕೊಳಕ'ನ್ನು ತಮ್ಮಂದಿಗೆ ಇಟ್ಟುಕೊಂಡಿರುತ್ತವೆ. ಬೆವರು ಹರಿಸದೆ ದುಡಿಯುವವರಷ್ಟೇ `ಶುದ್ಧ'ರಾಗಿರಲು ಸಾಧ್ಯ. ಈ ತರ್ಕವನ್ನೇ ಮುಂದಿಟ್ಟುಕೊಂಡರೆ `ಅಧ್ಯಯನ ಮತ್ತು ಪೂಜೆ'ಗೆ ಸೀಮಿತವಾಗಿದ್ದ ವರ್ಗವೊಂದನ್ನು ಹೊರತು ಪಡಿಸಿದರೆ ಉಳಿದವರೆಲ್ಲರೂ ಕೊಳಕರೇ ಎಂದಂತಾಯಿತು. ಅಂದರೆ ಇಡೀ ಜಾತಿ ವ್ಯವಸ್ಥೆಯನ್ನು ಕಟ್ಟಿ ಬೆಳೆಸಿದ್ದೂ ಅದೇ ವರ್ಗವೇ?
ಐತಿಹಾಸಿಕತೆಗಳನ್ನು ಬದಿಗಿಟ್ಟು ವರ್ತಮಾನವನ್ನು ನೋಡೋಣ. ಕೊಳಕುತನದಿಂದ ಅಸ್ಪೃಶ್ಯತೆ ಬಂತು ಎನ್ನುವುದಾದರೆ, ಇಂದು ಕೊಳಕನ್ನು ಮೈಗೆ ಅಂಟಿಸಿಕೊಳ್ಳದ ಕೆಲಸ ಮಾಡುವ ಪರಿಶಿಷ್ಟ ಜಾತಿ ಮತ್ತು ವರ್ಗಗಳ ವಿದ್ಯಾವಂತರೂ ಏಕೆ ಅಸ್ಪೃಶ್ಯತೆಯನ್ನು ಅನುಭವಿಸುತ್ತಿದ್ದಾರೆ.
ಕೊಳಕಿನಿಂದ ಬಂದ ಅಸ್ಪೃಶ್ಯತೆ ಅದರ ನಿವಾರಣೆಯೊಂದಿಗೆ ಹೋಗಬೇಕಿತ್ತಲ್ಲವೇ? ಕೊಳಕಾಗಿದ್ದ ನನ್ನ ಅಪ್ಪ ಅನುಭವಿಸಿದ್ದಕ್ಕಿಂತಲೂ ಹೆಚ್ಚು ಅಸ್ಪೃಶ್ಯತೆಯನ್ನು ಶುದ್ಧವಾಗಿರುವ ವಿದ್ಯಾವಂತನಾದ ನಾನು ಅನುಭವಿಸುತ್ತಿದ್ದೇನೆ ಯಾಕೆ ಹೀಗೆಂದು ಕೃಷ್ಣಯ್ಯನವರು ಉತ್ತರಿಸುತ್ತಾರೆಯೇ?
ಡಾ. ಬಿ.ಆರ್.ಅಂಬೇಡ್ಕರ್‌ರವರು ಅಸ್ಪೃಶ್ಯ ವರ್ಗ ಹೇಗೆ ಸೃಷ್ಟಿಯಾಯಿತು ಎಂಬುದರ ಕುರಿತಂತೆ ಆಳವಾದ ಸಂಶೋಧನೆಗಳನ್ನು ನಡೆಸಿದ್ದಾರೆ. ಅವರು ಹೇಳುವಂತೆ  ಬ್ರಾಹ್ಮಣ, ಕ್ಷತ್ರಿಯ, ವೈಶ್ಯರ ಸೇವೆಗೆ ಒಪ್ಪದ ಮೂಲನಿವಾಸಿ ಜನರನ್ನು ಊರಿನಿಂದ ಹೊರಗಟ್ಟಲಾಯಿತು.
ಅವರ ಮೇಲೆ ಸಾಮಾಜಿಕ-ಆರ್ಥಿಕ ಬಹಿಷ್ಕಾರಗಳನ್ನು, ದಿಗ್ಭಂಧನಗಳನ್ನು ಹೇರಿ ಅವರನ್ನು ಹೀನಾಯ ಸ್ಥಿತಿಗೆ ದೂಡಲಾಯಿತು  ಎನ್ನುತ್ತಾರೆ. ಅಷ್ಟೇ ಅಲ್ಲದೆ ಅಸ್ಪೃಶ್ಯರನ್ನು ಹಿಂದೂಗಳು ಇಷ್ಟು ನಿಕೃಷ್ಟವಾಗಿ ನಡೆಸಿಕೊಳ್ಳಲು ಅವರು ಮೂಲತಃ ಬೌದ್ಧರಾಗಿದ್ದುದೇ ಕಾರಣವೆಂದು ಸೋದಾಹರಣವಾಗಿ ಅವರು ವಿವರಿಸಿದ್ದಾರೆ.
ಡಾ. ಅಂಬೇಡ್ಕರ್ ಅವರ ಇಂತಹ ಮಹತ್ತರ ಸಂಶೋಧನೆಗಳನ್ನು ಮುಚ್ಚಿಟ್ಟಿರುವ ಮನುವಾದಿ ಇತಿಹಾಸಕಾರರು, ವಿದ್ವಾಂಸರು ಅಸ್ಪೃಶ್ಯತೆಯ ಬಗ್ಗೆ ಸುಳ್ಳು ಸಿದ್ಧಾಂತಗಳನ್ನು  ಮಂಡಿಸುತ್ತಾ ಬಂದಿದ್ದಾರೆ. ಭಾರತದ ಶೋಷಿತರ ವಿಮೋಚಕರೂ, ಮಹಾನ್ ವಿದ್ವಾಂಸರೂ ಆಗಿದ್ದ ಡಾ. ಅಂಬೇಡ್ಕರರ ಬರಹಗಳನ್ನು ಓದದೆ ಅಸ್ಪೃಶ್ಯರ ಇತಿಹಾಸದ ಬಗ್ಗೆ ಯಾರೇ ಮಾತನಾಡಿದರೂ ಅದು ಅಪೂರ್ಣ.

 

comments powered by Disqus
Top