ಜಾತಿ ಸಂವಾದ - ಅಭಿಪ್ರಾಯ 3

ಮನೆಯ ಗೋಡೆಯಂತೆ
-ಮಹಿಮಾ ಮಂಜುನಾಥ್ ನಾಡಿಗ್ ಬೆಳ್ಳೂರು

ಜಾತಿ ಭೇದವೆಂಬುದು ಕೆಲವೊಂದು ವೈಶಿಷ್ಟ್ಯಗಳ ಆಧಾರದ ಮೇಲೆ ಹುಟ್ಟಿಕೊಂಡಿದೆ. ನಾವು ಹೊಸ ಮನೆ ಕಟ್ಟಿದಾಗ ಮೊದಲು ಹಸುವನ್ನು ಏಕೆ ಮನೆಯೊಳಗೆ ನುಗ್ಗಿಸಬೇಕು? ಎಮ್ಮೆಯನ್ನೇಕೆ ನುಗ್ಗಿಸಬಾರದು? ಎಮ್ಮೆಯೂ ಸಸ್ಯಹಾರಿಯಲ್ಲವೇ? ಎಮ್ಮೆಯ ಹಾಲನ್ನೂ ನಾವು ನಿತ್ಯ ಜೀವನದಲ್ಲಿ ಉಪಯೋಗಿಸುತ್ತೇವಲ್ಲವೇ? ಹಸು ಮಾತ್ರ ಏಕೆ ಶ್ರೇಷ್ಠವಾಯಿತು? ನಾವೇ ಸಾಕಿದ ನಾಯಿಯು ಮರಿ ಹಾಕಿದಾಗ ನಾವು ನಾಯಿಯ ಹಾಲನ್ನೇಕೆ ಕಾಫಿಗೆ ಉಪಯೋಗಿಸುವುದಿಲ್ಲ? ಹಸು ಎಮ್ಮೆಗಳ ಹಾಲನ್ನೇ ಏಕೆ ಬಳಸಬೇಕು? ಕೋತಿಗಳು ಹಾಗೂ ಗುಬ್ಬಚ್ಚಿಗಳು ತಮ್ಮ ಮರಿಗಳನ್ನು ಮನುಷ್ಯರು ಮುಟ್ಟಿದರೆ ಅವನ್ನು ಅಲ್ಲಿಯೇ ಬಿಟ್ಟು ಹೋಗುತ್ತವೆ. ಇದಕ್ಕೆ ಕಾರಣವೇನು? ದೇವರನ್ನೇ ಏಕೆ ಪೂಜಿಸಬೇಕು? ದಾನವರನ್ನೇಕೆ ಪೂಜಿಸಬಾರದು? ದೇವರು ಲೋಕಕ್ಕೆ ಕಲ್ಯಾಣವನ್ನು ಮಾಡುತ್ತಾರೆ ಹಾಗೆಯೇ ದಾನವರು ಲೋಕಕ್ಕೆ ಕಂಟಕವನ್ನುಂಟು ಮಾಡುತ್ತಾರೆ. ಆದರೆ ಇಬ್ಬರೂ ಬಲಾಢ್ಯರು. ಹೀಗೆ ಕೆಲವೊಂದು ಗುಣಗಳ ವೈಶಿಷ್ಟ್ಯಗಳ ಆಧಾರದ ಮೇಲೆ ಈ ವ್ಯವಸ್ಥೆಯು ನಿರ್ಮಾಣಗೊಂಡಿದೆ.
ಬ್ರಾಹ್ಮಣ ಜಾತಿಯನ್ನು ದೂಷಿಸುವ ಎಲ್ಲರೂ ಮೊದಲು ಶ್ರಾದ್ಧ, ಮದುವೆ, ನಾಮಕರಣ, ಹೋಮ-ಹವನಗಳನ್ನು ಬ್ರಾಹ್ಮಣರ ಕೈಯಿಂದಲೇ ಮಾಡಿಸಿಕೊಳ್ಳುವುದನ್ನು ನಿಲ್ಲಿಸಲಿ. ಇತರೇ ಜಾತಿಯವರಿಗೆ ಸಾಮರ್ಥ್ಯವಿಲ್ಲವೇ? ಎಲ್ಲದರಲ್ಲೂ ಮೂಗು ತೂರಿಸುವ ಇತರ ಜಾತಿಯವರಿಗೆ ಇಂತಹ ವಿಷಯಗಳಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಲು ಸಾಧ್ಯವಿಲ್ಲವೇ? ಯಾವುದೇ ಜಾತಿಯವರಾಗಲಿ ತಮ್ಮ ಆಚಾರ ವಿಚಾರಗಳನ್ನು ಅನುಸರಿಸಿಕೊಂಡು ಎಲ್ಲರನ್ನೂ ಗೌರವಿಸುತ್ತಾ ಉತ್ತಮ ಜೀವನವನ್ನು ನಡೆಸಿದಾಗ ಆತ್ಮತೃಪ್ತಿ ಉಂಟಾಗುತ್ತದೆ. ನವಗ್ರಹಗಳಲ್ಲೇ ಕೀಳೆನಿಸಿಕೊಂಡ ರಾಹು ಕೇತುಗಳು ಅವರವರ ಕಕ್ಷೆಯಲ್ಲೇ ಇದ್ದು ಇವತ್ತು ಭೂಮಿಯಲ್ಲಿ ಪೂಜಾರ್ಹರಾಗಿಲ್ಲವೇ?
ಜಾತಿ ವ್ಯವಸ್ಥೆ ಇಲ್ಲದ ಬದುಕು ಗೋಡೆ ಇಲ್ಲದ ಮನೆಯಷ್ಟೇ ವಿಚಿತ್ರವಾಗಿ ಬಿಡುವುದು. ಪಕ್ಷಿ, ಪ್ರಾಣಿ, ಮರಗಿಡಗಳಿಂದಲೂ ಅನುಸರಿಸಿಕೊಂಡು ಬಂದ ಈ ಜಾತಿಯನ್ನು ಯಾರು ಎಲ್ಲಿ ಹೇಗೆ ಹುಟ್ಟಿಹಾಕಿದರೆಂದು ಹೇಳುವುದು ಕಷ್ಟ ಸಾಧ್ಯ. ಆದರೆ ಅದನ್ನು ಅನುಸರಿಸಿಕೊಂಡು ಬರುವುದು ನಮ್ಮೆಲ್ಲರ ಕರ್ತವ್ಯ, ಅದರ ಹೊರತಾಗಿ ಕಿತ್ತಾಡುವುದರಿಂದ ನಮ್ಮ ದೌರ್ಬಲ್ಯಗಳನ್ನು ಉಪಯೋಗಿಸಿಕೊಳ್ಳುವ ಜಾಣರು ಸೃಷ್ಟಿಯಾಗಬಹುದು.

comments powered by Disqus
Top