ಜಾತಿ ಸಂವಾದ - ಅಭಿಪ್ರಾಯ 5

ಅಪಶಕುನದ ಕಥೆ
ಎ.ಪಿ.ಸಿ. ಮಂಜು ನೆಲಮಂಗಲ

ನಮ್ಮದು ಹಳ್ಳಿಯ ಶಾಲೆ. ಕ್ಷೌರಿಕ ಜನಾಂಗಕ್ಕೆ ಸೇರಿದ ನನ್ನ ಸಹಪಾಠಿ ಇದ್ದ. ಆತನ ತಂದೆ ನಮ್ಮ ಊರಿನಲ್ಲೆ ಚಿಕ್ಕದಾದ ಕ್ಷೌರದಂಗಡಿ ಇಟ್ಟುಕೊಂಡಿದ್ದರು. ಅವರು ತಿಂಗಳಿಗೆ ಒಂದು ಬಾರಿ ಬಂದು ನಮ್ಮ ವಠಾರದಲ್ಲಿ ಗಂಡಸರಿಗೆಲ್ಲ ಕ್ಷೌರ ಮಾಡಿ ಅಕ್ಕಿ, ರಾಗಿ ಪಡೆದು ಹೋಗುತ್ತಿದ್ದರು. ಅವರ ಮಗ ನನ್ನ ನೆಚ್ಚಿನ ಗೆಳೆಯನಾಗಿದ್ದ. ನಾವಿಬ್ಬರೂ ಶಾಲೆಯಲ್ಲಿ ಜೊತೆಯಲ್ಲೆ ಇದ್ದರೂ ಹೊರಗಡೆ ಮಾತನಾಡುವಂತಿರಲಿಲ್ಲ.
ಒಂದು ದಿನ ಶಾಲೆಯ ಮೈದಾನದಲ್ಲಿ ಆಟ ಆಡುವಾಗ ನನ್ನ ಕಾಲಿಗೆ ಪೆಟ್ಟಾಗಿ ರಕ್ತ ಬಂದಿತು. ಪಕ್ಕದಲ್ಲೆ ಇದ್ದ ಗೆಳೆಯ ಹಸನಾದ ಮಣ್ಣಿಗೆ ತನ್ನ ಎಂಜಿಲು ಹಾಕಿ ಆ ಮಣ್ಣನ್ನು ನನ್ನ ಕಾಲಿನ ಗಾಯಕ್ಕೆ ಒತ್ತಿದ. ರಕ್ತ ನಿಂತು ತಣ್ಣಗಾಯಿತು. ಮನೆಗೆ ಬಂದ ಮೇಲೆ ಗಾಯವನ್ನು ನೋಡಿದ ಅಮ್ಮ ತೊಳೆದು ಔಷಧಿ ಹಚ್ಚಿದರು, ಆಗ ನಾನು ಗೆಳೆಯ ಮಾಡಿದ ಶುಶ್ರೂಷೆಯನ್ನು ಅವರಿಗೆ ಹೇಳಿದ್ದಕ್ಕೆ ಅವರು `ಆ ನೆನಿಬಾರದವನ ಎಂಜಲು ಹಾಕಿಸಿಕೊಂಡು ಬಂದಿದ್ದೀಯಾ' ಎಂದು ಬೈದು ಮತ್ತೆ ತೊಳೆದು ಔಷಧಿ ಹಾಕಿದರು.
ವಿದ್ಯಾವಂತರಾದ ಮೇಲೆ ಜಾತಿಯ ಕ್ರೌರ್ಯ ತಿಳಿಯಿತಾದರೂ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿ ಮಾಡುವ ಮತ್ತು ಅವರ ಜೊತೆ ಬೆರೆತು ಮನೆಯವರನ್ನು ಎದುರು ಹಾಕಿಕೊಳ್ಳುವ ಗೋಜಿಗೆ ಹೋಗಲಿಲ್ಲ. ಬೆಂಗಳೂರಿನಲ್ಲಿ ಒಂದೇ ರೂಮಿನಲ್ಲಿ ಇದ್ದರೂ ಹಳ್ಳಿಗೆ ಹೋದರೆ ಇಂದಿಗೂ ನಾವು ಒಟ್ಟಿಗೆ ಓಡಾಡುವುದಿಲ್ಲ.

comments powered by Disqus
Top