ಜಾತಿ ಸಂವಾದ - ಅಭಿಪ್ರಾಯ 2

ಚಲನಶೀಲ ಕಲೆಗೆ ಜಾತಿಯ ಹಂಗಿಲ್ಲ
ವಸಂತ್ ಭಟ್ ಹಾಸಣಗಿ

ಸಮಾಜವನ್ನು ವ್ಯವಸ್ಥೆಗೊಳಿಸುವುದಕ್ಕಾಗಿ ರಾಜಕೀಯ ವ್ಯವಸ್ಥೆ ಬೆಳೆದು ಬಂತು. ಅದು ಕಾಲಾಂತರದಲ್ಲಿ ಏನೆಲ್ಲ ಅವಸ್ಥಾಂತರಗಳಿಗೆ ಪಕ್ಕಾಯಿತು ಎಂಬುದರ ನಿದರ್ಶನ ನಮ್ಮೆದುರಿಗೇ ಇದೆ. ರಾಜಕೀಯ ವ್ಯವಸ್ಥೆಯ ಅವಸ್ಥಾಂತರಗಳ ಪ್ರಕ್ರಿಯೆಯಲ್ಲಿ, ಎಲ್ಲವನ್ನೂ ತನ್ನ ಪರಮಾಧಿಕಾರದ ತೆಕ್ಕೆಗೆ ತೆಗೆದುಕೊಳ್ಳುವ ಅಧಿಕಾರಶಾಹಿ ಅವಸರದಲ್ಲಿ ಸರಳವಾಗಿದ್ದ ಅನೇಕ ಸಂಗತಿಗಳು ಕೂಡ ಸಂಕೀರ್ಣವಾಗುತ್ತ ಹೋಗಲಾರಂಭಿಸಿದವು. ಆಗ ಉಂಟಾದ ಜಟಿಲತೆಯನ್ನು ಹೋಗಲಾಡಿಸಲು ಸಿದ್ಧಾಂತಗಳು ರೂಪುಗೊಳ್ಳಲಾರಂಭಿಸಿದವು. ಈ  ಸಿದ್ಧಾಂತಗಳು ಕಾಲಾಂತರದಲ್ಲಿ ಚೌಕಟ್ಟುಗಳಾಗಿ ಪರಿಣಮಿಸಿ ವ್ಯವಸ್ಥೆಯನ್ನು ಮಿತಿಗೆ ಒಳಪಡಿಸಿದವು. ಆ ಮಿತಿಗಳಿಂದ ನಾವು ಮತ್ತೊಮ್ಮೆ ಪಾರಾಗಬೇಕಾದ ಅನಿವಾರ್ಯತೆ ಈಗ ನಮ್ಮೆದುರಿಗಿದೆ. ನಾವೇ ರಚಿಸಿಕೊಂಡ ಕೃತಕ ಸೀಮೆಗಳನ್ನು ಮೀರಬೇಕಾದರೆ ಅದು ಮತ್ತೊಂದು ಚೌಕಟ್ಟಾಗಬಾರದು ಎಂಬ ಎಚ್ಚರಿಕೆಯೂ ನಮ್ಮಲ್ಲಿರಬೇಕಾದದ್ದು ಅವಶ್ಯಕವಾಗಿದೆ!
ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಸಂಬಂಧಿಸಿದಂತೆ ಹಿಂದೂಸ್ತಾನೀ ಹಾಗೂ ಕರ್ನಾಟಕ ಸಂಗೀತ ಎಂಬ ಎರಡು ಕವಲುಗಳು ಇತ್ತೀಚಿನವಲ್ಲ. ಅವೆರಡೂ ಬೇರೆ ಬೇರೆಯೇ ಆದಂತವುಗಳೂ ಅಲ್ಲ. ಮೂಲದಲ್ಲಿ ಒಂದೇ ಆಗಿರುವ, ಒಂದೇ ಗುರಿಯನ್ನು ಹೊಂದಿರುವ ಆದರೆ ಪ್ರಸ್ತುತಪಡಿಸುವ ರೀತಿಯಲ್ಲಿ ವ್ಯತ್ಯಾಸವಿರುವ ಕಲಾಪ್ರಕಾರಗಳು. ಇದು ಸಂಗೀತದ ಕುರಿತಾಗಿ ಅಧ್ಯಯನ ಮಾಡುವ ಎಲ್ಲರಿಗೂ ತಿಳಿದಿರುವ ಸಂಗತಿ. ಇಸ್ಲಾಮಿನ ಕೈಯಲ್ಲಿ ಬಿದ್ದು ನರಳಿದ ಕಲಾಪ್ರಕಾರ ಎಂಬ ಮನೋಭಾವ ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತಾಭಿರುಚಿಯುಳ್ಳ ಯಾರಲ್ಲಿಯೂ ಇರುವುದು ಸಾಧ್ಯವಿಲ್ಲ. ಹಾಗೆಯೇ ಕರ್ನಾಟಕ ಶಾಸ್ತ್ರೀಯ ಸಂಗೀತವು ದಕ್ಷಿಣಕ್ಕಷ್ಟೇ ಸೀಮಿತವಾಗಿ ಪರಿಶುದ್ಧವಾಗಿಯೇ ಉಳಿದುಕೊಂಡಿರುವ ಕಲಾಪ್ರಕಾರ ಎಂಬ ಮಾತಿನಲ್ಲಿಯೂ ಯಾವ ಹುರುಳಿಲ್ಲ. ಯಾಕೆಂದರೆ, ಕಲಾಪ್ರಕಾರಗಳು ನದಿ-ತೊರೆಗಳಿದ್ದಂತೆ. ಅವು ನಿಂತ ನೀರಾಗಿರುವುದು ಸಾಧ್ಯವಿಲ್ಲ. ಅಂತೆಯೇ ಆರಂಭದಿಂದಲೂ ಅನೇಕ ಆವಿಷ್ಕಾರಗಳು, ನಾವೀನ್ಯತೆಗಳು ಕಲೆಯನ್ನು ಇನ್ನಷ್ಟು ಅರಳಿಸುವಲ್ಲಿ ಪೂರಕವಾಗಿ ಸಹಕರಿಸಿದ್ದೇನೂ ಸುಳ್ಳಲ್ಲ. ಮೊದಲೇ ಹೇಳಿದಂತೆ ಅವರವರ ಅಭಿರುಚಿಗೆ ತಕ್ಕಂತೆ ಅನೇಕರು ತಮ್ಮಿಷ್ಟದ ಕಲಾಪ್ರಕಾರಗಳನ್ನು ಆಯ್ದುಕೊಂಡು ಅದರಲ್ಲಿ ಕೃಷಿಮಾಡಿದ್ದಾರೆ. ಅವರವರ ಅನುಭವಗಳಿಗೆ ಸಾಕ್ಷಿಗಳಾಗಿದ್ದಾರೆ. ಇಲ್ಲಿ ಪ್ರತಿಯೊಬ್ಬ ಕಲಾಕಾರನ-ಸಹೃದಯಿ ಅಥವಾ ಕೇಳುಗನ ಅನುಭವವೇ ಪ್ರಮಾಣ. ಯಾವ ಸಿದ್ಧಾಂತಗಳೂ ಆ ಅನುಭವವನ್ನು ವಿಶ್ಲೇಷಿಸುವ, ತರ್ಕಿಸುವ, ದಾಖಲಿಸುವ ಪ್ರಕ್ರಿಯೆಗೆ ಸಹಾಯಕವಾಗಿ ಬರುವುದಿಲ್ಲ!
ಐಹಿಕವಾದ ಸಂಗೀತ, ಆಧ್ಯಾತ್ಮಿಕವಾದ ಸಂಗೀತ ಎಂಬ ಯಾವುದೇ ಪ್ರಕಾರಗಳಿಲ್ಲ. ಮನರಂಜನೆಯನ್ನು ನೀಡುತ್ತಲೇ ಅದಕ್ಕೂ ಮುಂದಿನ ಎತ್ತರದ ಸ್ತರಕ್ಕೆ ನಮ್ಮನ್ನು ಎಳೆದೊಯ್ಯುವ ಶಕ್ತಿ ಸಂಗೀತಕ್ಕಿದೆ. ಆದರೆ ಅದರೊಂದಿಗೆ ಏರುವ, ಮಿಲನಗೊಳ್ಳುವ ಸಾಮರ್ಥ್ಯವನ್ನು ನಾವು ಗಳಿಸಿಕೊಳ್ಳಬೇಕಷ್ಟೇ! ಅದಕ್ಕೆ ನಾದದ ಸತತ ಸಾಂಗತ್ಯ, ಪರಿಶ್ರಮದ ಅಗತ್ಯವಿದೆ. ಹಾಗಾಗಿ ಶಾಸ್ತ್ರೀಯ ಸಂಗೀತವನ್ನೊಳಗೊಂಡಂತೆ ಎಲ್ಲ ಕಲಾಪ್ರಕಾರಗಳ ಮೂಲ ಉದ್ದೇಶವಾದ  ಆನಂದದ ಸ್ಥಿತಿಯನ್ನು ಅನುಭವಿಸಲು ಕೇವಲ ತೊಡಗುವಿಕೆಯೊಂದೇ ಕಾರಣವಾಗಬಲ್ಲುದೇ ಹೊರತು ಬೇರೆ ಯಾವ ಮಾನಕಗಳೂ ಪ್ರಯೋಜನಕ್ಕೆ ಬರಲಾರವು.
ಜಾತಿ, ಮಡಿವಂತಿಕೆ, ಶುದ್ಧೀಕರಣ ಇತ್ಯಾದಿ ಭಾರತೀಯ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಹಾಸುಹೊಕ್ಕಾಗಿವೆ...  ಎಂಬ ಮಾತು ಜಾತಿಸಂವಾದಡಿಯಲ್ಲಿ ಪ್ರಕಟವಾದ  `ಸಂಗೀತ ಕ್ಷೇತ್ರದ ಜಾತಿ ಪ್ರಶ್ನೆ'  ಎಂಬ ಲೇಖನದಲ್ಲಿ ಪ್ರಸ್ತಾಪವಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಕಳೆದ ಶತಮಾನದಲ್ಲಿ ಕರ್ನಾಟಕದ ನೆಲದಲ್ಲಿ ನಡೆದ ಘಟನೆಯೊಂದನ್ನು ನಾನು ಇಲ್ಲಿ ಉದಾಹರಿಸಲು ಬಯಸುತ್ತೇನೆ. ಹಾನಗಲ್ ಕುಮಾರಸ್ವಾಮಿಗಳು ಕಳೆದ ಶತಮಾನ ಕಂಡ ಮೇರು ವ್ಯಕ್ತಿತ್ವದ ಸಾಧಕರು. ಗದಿಗೆಯ್ಯ ಎಂಬ ಅಂಧ ಮಗು ಪಂಚಾಕ್ಷರಿಯಾಗಿ ರೂಪಾಂತರ ಹೊಂದಿ, ಜಾತಿಭೇದವ ಮೀರಿ ಸಂಗೀತಲೋಕಕ್ಕೆ ಸಾವಿರಾರು ತೊರೆಗಳನ್ನು ನೀಡಿದ ವೀರೇಶ್ವರ ಪುಣ್ಯಾಶ್ರಮವನ್ನು ಸ್ಥಾಪಿಸಿ ಹಲವರ ಒಳಗಣ್ಣನ್ನು ತೆರೆಸಿ, ಬೆಳಕುಕೊಟ್ಟು ನಾದಯೋಗಿ ಪಂಚಾಕ್ಷರ ಗವಾಯಿಗಳಾಗಿ ಕರ್ನಾಟಕದ ಜನಮಾನಸದಲ್ಲಿ ಸದಾ ನೆಲೆಸುವಂತಾಗಿದ್ದರ ಹಿಂದಿನ ಪ್ರೇರಕಶಕ್ತಿ ಹಾನಗಲ್ ಕುಮಾರಸ್ವಾಮಿಗಳು. ಗದಿಗೆಯ್ಯನವರು ಪಂಚಾಕ್ಷರಿ ಗವಾಯಿಗಳಾಗುವ ಹಾದಿಯಲ್ಲಿ ಸದಾ ನೆರಳಿನಂತಿದ್ದು ಸಕಲವನ್ನೂ ಒದಗಿಸಿಕೊಟ್ಟವರು ಅವರು.
1917ರಿಂದ 1921ರ ವರೆಗೆ ಈಗಿನ ಪಾಕಿಸ್ತಾನದ ಲಾಹೋರಿನ ಪ್ರಸಿದ್ಧ ಗಾಯಕ ಉಸ್ತಾದ್ ವಹೀದ್ ಖಾನ್ ಸಾಹೇಬರನ್ನು ತಿಂಗಳೊಂದಕ್ಕೆ 150 ರೂಪಾಯಿಗಳ ಗೌರವಧನ ನೀಡಿ, ಶಿವಯೋಗ ಮಂದಿರದಲ್ಲಿಯೇ ಅವರ ಊಟ-ವಸತಿಗೆ ಏರ್ಪಾಟು ಮಾಡಿ ಪಂಚಾಕ್ಷರಿ ಗವಾಯಿಗಳ ಗಾಯನ ಕಲಿಕೆಗೆ ನೆಲೆಯೊದಗಿಸಿಕೊಟ್ಟಿದ್ದರು ಹಾನಗಲ್ ಕುಮಾರಸ್ವಾಮಿಗಳು. ಮುಂದೆ 1937-38ರಲ್ಲಿ ಸುಮಾರು ಒಂದು ವರ್ಷಗಳ ಕಾಲ ಉಸ್ತಾದ್ ವಿಲಾಯತ್ ಖಾನ್ ಜೈಪುರವಾಲೆ ಅವರು ಹಾನಗಲ್ಲಿನ ಶಿವಯೋಗ ಮಂದಿರದಲ್ಲಿ ಉಳಿದು ಪಂಚಾಕ್ಷರ ಗವಾಯಿಗಳಿಗೆ ಸಂಗೀತ ಶಿಕ್ಷಣ ನೀಡಿದ್ದರು. ಅವರು ಮುಸ್ಲಿಂ ಆಗಿದ್ದುದು ಹಾಗೂ ಮಾಂಸಾಹಾರಿಗಳಾಗಿದ್ದುದೂ ಕುಮಾರಸ್ವಾಮಿಗಳಿಗೆ ಬಾಧಿಸಿರಲಿಲ್ಲ. ವಾರದಲ್ಲೆರಡು ಬಾರಿ ಗದಗಿಗೆ ಹೋಗಿ ಮಾಂಸಾಹಾರವನ್ನುಂಡು ಬರಲು ಅವರಿಗೆ ಅವಕಾಶ ನೀಡಲಾಗಿತ್ತು. ಆದರೆ ತಿರುಗಿ ಶಿವಯೋಗ ಮಂದಿರಕ್ಕೆ ಬರುವಾಗ ಮಲಪ್ರಭಾ ನದಿಯಲ್ಲಿ ಸ್ನಾನಮಾಡಿ ಬರಬೇಕೆಂಬ ವಿಧಿಯನ್ನು ಕುಮಾರಸ್ವಾಮಿಗಳು ವಿಧಿಸಿದ್ದರು. (ಸದಾನಂದ ಕನವಳ್ಳಿ ಅವರು ಪಂಚಾಕ್ಷರ ಗವಾಯಿಗಳ ಕುರಿತು ಬರೆದ ಲೇಖನ)ಕರ್ನಾಟಕದ ಸಂಗೀತರತ್ನಗಳಲ್ಲಿ ಒಬ್ಬರಾದ ಪಂ. ಬಸವರಾಜ ರಾಜಗುರು ಅವರು ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಲಾಹೋರಿನ ಖಾನಸಾಹೇಬರ ಬಳಿಯಲ್ಲಿ ಸಂಗೀತ ಶಿಕ್ಷಣ ಪಡೆಯುತ್ತಿದ್ದರು. ಆಗ ನಡೆದ ಹಿಂಸಾಕಾಂಡದಲ್ಲಿ ಅವರು ಬದುಕಿ ಪಾರಾಗಿ ಬಂದಿದ್ದೇ ಒಂದು ರೋಚಕ ಕತೆ! ಯಾವ ಜಾತಿ ಭೇದವನ್ನೂ ಎಣಿಸದೇ ವಿದ್ಯಾದಾನ ಮಾಡಿದ ಪಂ.ಬಸವರಾಜ ರಾಜಗುರುಗಳು ಇಂದಿಗೂ ಅವರ ಅಸಂಖ್ಯಾತ ಶಿಷ್ಯಂದಿರ ಮೂಲಕ ಜೀವಂತವಾಗಿದ್ದಾರೆ. ಇಂತಹ ಅಸಂಖ್ಯಾತ ಜೀವಂತ ಉದಾಹರಣೆಗಳನ್ನು ನಮ್ಮ ಕಾಲಬುಡದಲ್ಲಿಂದಲೇ ಹೆಕ್ಕಿ ತೆಗೆಯಬಹುದು.
ಸಂಗೀತ ಒಂದು ಸಾಧನಾ ಮಾರ್ಗ. ಈ ದಾರಿಯಲ್ಲಿ ಸಾಗಲು ಗುರುವಿನ ಅವಶ್ಯಕತೆ ಇದ್ದೇ ಇದೆ. ಯೋಗ್ಯ ಗುರುವಿನ ಅಂಶಗಳನ್ನು ಹೊಂದಿದ ಪಕ್ವ ಕಲಾವಿದ ಯೋಗ್ಯನೆನಿಸಿದ ಶಿಷ್ಯನು ದೊರೆತಲ್ಲಿ ತನ್ನಲ್ಲಿನ ವಿದ್ಯೆಯನ್ನು ಧಾರೆಯೆರೆಯಲು ಹಿಂದುಮುಂದು ನೋಡಲಾರ. ಗುರುಪರಂಪರೆಯಲ್ಲಿಯೇ ಬೆಳೆದು ಬಂದು ಇವತ್ತಿನವರೆಗೂ ಜೀವಂತವಾಗಿರುವ ಭಾರತೀಯ ಕಲಾಪ್ರಕಾರಗಳು ಎಂದಿಗೂ ಯಾವ ಜಾತಿ, ಪಂಥ, ಧರ್ಮ, ಲಿಂಗಗಳ ಹಂಗಿಗೆ ಒಳಗಾಗಿಲ್ಲ. ವೈಯಕ್ತಿಕ ಸಾಧನಾ ನೆಲೆಯೊಂದೇ ಈ ವಿದ್ಯೆಗಿರುವ ಪ್ರಮಾಣ. ಸಾಧನೆಗೆ ಯಾವುದೇ ಕಟ್ಟುಪಾಡುಗಳ ತಡೆಯಿಲ್ಲದ, ಕೇವಲ ವೈಯಕ್ತಿಕ ಪರಿಶ್ರಮದ ಮೇಲೆಯೇ ಅವಲಂಬಿತವಾಗಿರುವ, ಅಭಿರುಚಿಯುಳ್ಳ ಎಲ್ಲರಿಗೂ ಮುಕ್ತ ಅವಕಾಶವಿರುವ ಸಂಗೀತದಂತಹ ವಿಸ್ತಾರ ಕ್ಷೇತ್ರವನ್ನು ಪ್ರಸ್ತುತದಲ್ಲಿ ಜಾತಿ, ಧರ್ಮ, ಲಿಂಗ ಕಾರಣಗಳನ್ನಿಟ್ಟುಕೊಂಡು ಚೌಕಟ್ಟು  ಹಾಕಿ ನೋಡುವುದು ನಮ್ಮ ಮಿತಿಯಾಗಿ ಕಂಡುಬರುತ್ತದೆ.

 

comments powered by Disqus
Top