ಜಾತಿ ಸಂವಾದ - ಅಭಿಪ್ರಾಯ 1

ನ್ಯಾಯ ಪ್ರಜ್ಞೆಯ ಪ್ರತೀಕ
ಶಿವಸುಂದರ್

ಮೀಸಲಾತಿಯ ಚರ್ಚೆ ಬಂದಾಗಲೆಲ್ಲಾ ಅದರ ವಿರುದ್ಧ ಬಳಕೆಯಾಗುವ ಪ್ರತಿಭೆ, ಅರ್ಹತೆ, ದಕ್ಷತೆ, ವಂಚನೆ ಇನ್ನಿತರ ಮೌಲಿಕ ಪ್ರಬೇಧಗಳು ಮೇಲ್ನೋಟಕ್ಕೆ ತಾರ್ಕಿಕವಾಗಿ, ಮುಗ್ಧವಾಗಿ ಕಂಡರೂ ಅದರ ಆಳದಲ್ಲಿ ಒಂದು ಆಷಾಢಭೂತಿತನ ಮತ್ತು ನ್ಯಾಯ ಪ್ರಜ್ಞೆಯನ್ನು ನಿರಾಕರಿಸುವ ಧೋರಣೆ ಇರುತ್ತದೆ. ಇದಕ್ಕೆ ಮುಖ್ಯ ಕಾರಣ ಮೀಸಲಾತಿಯನ್ನು ಪರಿಭಾವಿಸುವುದರಲ್ಲಿ ಇರುವ ದೋಷ.
ಈ ದೋಷವನ್ನು ಮೀಸಲಾತಿ ಪರವಾಗಿರುವವರೂ ಅಂತರ್ಗತ ಮಾಡಿಕೊಂಡಿರುವುದು ಮತ್ತೊಂದು ವಿರೋಧಾಭಾಸ. ಮೀಸಲಾತಿ ಎಂದರೆ ಚಾರಿತ್ರಿಕವಾಗಿ ತಾರತಮ್ಯಕ್ಕೆ ಗುರಿಯಾಗಿದ್ದರು ಎಂಬ ಅನುಕಂಪದಿಂದ ಅರ್ಹತೆಯಿಲ್ಲದಿದ್ದರೂ ಕೊಡುತ್ತಿರುವ ಅವಕಾಶ ಎಂಬ ತಪ್ಪು ತಿಳಿವಳಿಕೆ ಇದೆ. ಮೀಸಲಾತಿಯನ್ನು ಬೆಂಬಲಿಸುವ ಬಹಳಷ್ಟು ಜನ ಪ್ರಗತಿಪರರ ತಿಳಿವಳಿಕೆಯೂ ಇದಕ್ಕಿಂತ ಭಿನ್ನವಾಗಿಲ್ಲ.
ಅನುಕಂಪವು ಔದಾರ್ಯವನ್ನು ಬಯಸುತ್ತದೆ. ಔದಾರ್ಯ ಫಲಾನುಭವಿಗಳಿಂದ ಶಾಶ್ವತ ಋಣೀ ಭಾವವನ್ನು ನಿರೀಕ್ಷಿಸುತ್ತದೆ. ಫಲಾನುಭವಿಗಳು ಋಣದ ಮಾತನ್ನು ಬಿಟ್ಟು ಹಕ್ಕಿನ, ಮತ್ತು ನ್ಯಾಯದ ಮಾತನಾಡಲು ಪ್ರಾರಂಭಿಸುತ್ತಾರೋ ಆಗ ಅನುಕಂಪದ ಸಹನೆಯೂ ತೀರುತ್ತದೆ. ಮೀಸಲಾತಿಯನ್ನು ಹೀಗೆ ಅನುಕಂಪ, ಅನರ್ಹರಿಗೆ  ಬಿಟ್ಟುಕೊಡುತ್ತಿರುವ  ಅವಕಾಶ ಎಂಬ ನೆಲೆಯಲ್ಲಿ ನಿರ್ವಚಿಸಿದಷ್ಟೂ ಅದು ಮೀಸಲಾತಿಯ ಫಲಾನುಭವಿಗಳನ್ನು ಕೀಳರಿಮೆಗೆ ದೂಡುತ್ತಿರುತ್ತದೆ.
ಮೊದಲನೆಯದಾಗಿ ಮೀಸಲಾತಿ ಎಂಬುದು ಅನರ್ಹರಿಗೆ ಅರ್ಹತೆಯುಳ್ಳವರು ಬಿಟ್ಟುಕೊಡುತ್ತಿರುವ ಅವಕಾಶವಲ್ಲ. ಮೀಸಲಾತಿಯೆಂಬುದು ಹುಟ್ಟಿನ ಕಾರಣಕ್ಕೆ, ವೃತ್ತಿಯ ಕಾರಣಕ್ಕೆ ಇರುವ ಅರ್ಹತೆ ಮತ್ತು ಪ್ರತಿಭೆಯನ್ನು ಪರಿಗಣಿಸದ, ಅಲಕ್ಷಿಸುವ ಸಮಾಜದಿಂದ,  ನಡೆದ ಮತ್ತು ನಡೆಯುತ್ತಿರುವ ವಂಚನೆಗೆ ನೀಡುತ್ತಿರುವ ಸಾಂವಿಧಾನಿಕ ಚಿಕಿತ್ಸೆ. ಹೀಗಾಗಿ ಇದು ಈವರೆಗೆ ಅರ್ಹರಿಂದ, ಪ್ರತಿಭಾವಂತರಿಂದ ಕಿತ್ತುಕೊಂಡ ಅವಕಾಶಗಳನ್ನು, ಅಂದರೆ ಅವರವರ ಹಕ್ಕಿನ ಪಾಲನ್ನು ಅವರವರಿಗೆ ದಕ್ಕುವಂತೆ ಮಾಡುತ್ತಿರುವ ಒಂದು ಸಣ್ಣ ಉಪಕ್ರಮ ಮಾತ್ರ.
ನ್ಯಾಯಪ್ರಜ್ಞೆ ಇರುವ ಸಮಾಜ ಯಾವುದೇ ಕಾನೂನಿನ ಅಗತ್ಯವಿಲ್ಲದೆಯೇ ಈ ನೀತಿಯನ್ನು ಅಳವಡಿಸಿಕೊಳ್ಳಬೇಕಾಗಿತ್ತು. ಆದರೆ ಅದು ಪ್ರಾಯೋಗಿಕವಾಗಿ ಸಾಧ್ಯವಾಗದೇ ಇರುವುದರಿಂದ ಶಾಸನಾತ್ಮಕ ಕ್ರಮಗಳ ಅಗತ್ಯ ಇದೆ. ಅಮೆರಿಕದ ಎಲ್ಲವನ್ನೂ ಅನುಕರಣೀಯ ಎಂದು ಭಾವಿಸುವ ನಮ್ಮ ದೇಶದಲ್ಲಿ ಅಲ್ಲಿನ ಖಾಸಗೀ ವಲಯ ಸ್ವಯಂಪ್ರೇರಿತವಾಗಿ ಎಲ್ಲಾ ವರ್ಣ ಮತ್ತು ವರ್ಗಗಳನ್ನೂ ಒಳಗೊಳ್ಳುವ ನೀತಿಯನ್ನೇಕೆ  ಅನುಕರಿಸಲು ಬಯಸುವುದಿಲ್ಲ.
ಅಮೆರಿಕವನ್ನು ಆದರ್ಶವಾಗಿ ಕಾಣುವ ಉದ್ಯಮಪತಿಗಳು ಮತ್ತು ಮಧ್ಯಮ ವರ್ಗದ ಮಂದಿ ಈ ವಿಷಯದಲ್ಲೇಕೆ ಜಾಣ ಕುರುಡನ್ನು ತೋರುವುದರ ಜೊತೆಗೆ ಪ್ರತಿಭೆಯಿಲ್ಲದವರನ್ನು ಸೇರಿಸಿಕೊಂಡರೆ ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸಲಾಗುವುದಿಲ್ಲ ಎಂಬ ದುಷ್ಟ ನೆಪವನ್ನೇಕೆ ಮುಂದು ಮಾಡುತ್ತಿದ್ದಾರೆ.
ಹಾಗೆ ನೋಡಿದರೆ ಸರ್ಕಾರದಿಂದ ಅತಿ ಹೆಚ್ಚು ಮೀಸಲಾತಿಯನ್ನು ಪಡೆಯುತ್ತಿರುವುದು ಕಾರ್ಪೊರೇಟ್ ವಲಯ ಹಾಗೂ ಅದರ ಫಲಾನುಭವಿಗಳಾಗಿರುವ ಮೇಲ್ಮಧ್ಯಮ ವರ್ಗ. ಇತ್ತೀಚೆಗೆ ಚಿಲ್ಲರೆ ವ್ಯಾಪಾರದಲ್ಲಿ ನೇರ ವಿದೇಶಿ ಬಂಡವಾಳದ ಪ್ರಶ್ನೆ ಬಂದಾಗ ಅದನ್ನು ವಿರೋಧಿಸಿದ ಉದ್ಯಮಪತಿಗಳ ಮಾತುಗಳನ್ನೊಮ್ಮೆ ನೆನಪಿಸಿಕೊಳ್ಳಿ. ಆಗ ಗ್ರಾಹಕನಿಗೆ ಸ್ಪರ್ಧೆಯ ಲಾಭ ದೊರೆಯಬೇಕೆಂದು ಇವರಾರಿಗೂ ಏಕೆ ಅನ್ನಿಸಲಿಲ್ಲ? ಬ್ಯಾಂಕಿಂಗ್ ಕ್ಷೇತ್ರವೂ ಸೇರಿದಂತೆ ಕೆಲವು ನಿರ್ದಿಷ್ಟ ಆರ್ಥಿಕ ವಲಯಗಳು ಹಾಗೂ ಸೇವೆಗಳನ್ನು ದೇಶೀ ಬಂಡವಾಳಕ್ಕಷ್ಟೇ ಮೀಸಲಾಗಿಡಬೇಕೆಂಬ ವಾದ ಕೂಡಾ ಒಂದು ಬಗೆಯ ಮೀಸಲಾತಿಯೇ ಅಲ್ಲವೇ.
ವಿಶೇಷ ಆರ್ಥಿಕ ವಲಯಗಳೂ ಕೂಡಾ ಉದ್ಯಮಪತಿಗಳಿಗೆ ಒದಗಿಸಿಕೊಡುತ್ತಿರುವ ಮೀಸಲಾತಿಯಲ್ಲವೇ? ಪ್ರತೀ ವರ್ಷ ಬ್ಯಾಂಕುಗಳು ಸುದ್ದಿ ಮಾಡದೆ ಮನ್ನಾ ಮಾಡುವ ಔದ್ಯಮಿಕ ಸಾಲಗಳೂ ಒಂದು ಬಗೆಯಲ್ಲಿ ಮಿಸಲಾತಿ ಸೌಲಭ್ಯವೇ ತಾನೇ? ಹೀಗೆ ಸಾಲವನ್ನು ಮರುಪಾವತಿಸದೇ ಇದ್ದದ್ದು ಅದಕ್ಷತೆಯ ಪರಿಣಾಮ ಎಂದು ದಕ್ಷತೆಯನ್ನು ಪ್ರತಿಪಾದಿಸುವ ಯಾವ ಉದ್ಯಮಪತಿಯೂ ಈತನಕ ಹೇಳಿಲ್ಲವೇಕೆ? ವಿಪರ್ಯಾಸವೆಂದರೆ ಮೇಲೆ ಪಟ್ಟಿ ಮಾಡಲಾದ ಅನೇಕ ವಿಧಗಳಲ್ಲಿ  ಮೀಸಲಾತಿಯನ್ನು ಅನುಭವಿಸುತ್ತಾ ಬಂದವರೇ ಈಗ ನ್ಯಾಯದ ಆಧಾರದ ಮೀಸಲಾತಿಯನ್ನು ಅಥವಾ ವಂಚಿತರಾದವರ ಹಕ್ಕನ್ನು ವಿರೋಧಿಸುತ್ತಿದ್ದಾರೆ.
ಹಾಗಾದರೆ ಮೀಸಲಾತಿಯಿಂದ ಮೇಲ್ಜಾತಿ ಬಡವರಿಗೆ ಅನ್ಯಾಯವಾಗಿಲ್ಲವೇ? ಒಂದು ಸಣ್ಣ ಲೆಕ್ಕಾಚಾರ ಈ ಪ್ರಶ್ನೆಗೆ ಸ್ಪಷ್ಟ ಉತ್ತರವನ್ನು ಒದಗಿಸುತ್ತದೆ. ಇಂದು ಉದ್ಯೋಗ ಸೃಷ್ಟಿಯಾಗುತ್ತಿರುವುದು ಖಾಸಗಿ ಕ್ಷೇತ್ರದಲ್ಲಿ, ಅಲ್ಲಿ ಮೀಸಲಾತಿಯಿಲ್ಲ. ಸರ್ಕಾರಿ ಕ್ಷೇತ್ರದಲ್ಲಿ ಗುತ್ತಿಗೆ ಆಧಾರದ 100 ಹುದ್ದೆಗಳಿದ್ದರೂ ಅದಕ್ಕೆ 10,000 ಅರ್ಜಿಗಳು ಬರುತ್ತವೆ. ಅದರಲ್ಲಿ 50 ಹುದ್ದೆಗಳಿಗೆ ಮೀಸಲಾತಿ ಅಂದಿಟ್ಟುಕೊಂಡರೂ 9950 ಸಾಮಾನ್ಯ ವರ್ಗದವರಿಗೆ ಕೆಲಸ ಸಿಗುವುದಿಲ್ಲ. ಹಾಗೆಯೇ ಅಷ್ಟು ಮೀಸಲಾತಿ ತೆಗೆದು ಹಾಕಿಬಿಟ್ಟರೂ 9900 ಜನಕ್ಕೆ ಕೆಲಸ ಸಿಗುವುದಿಲ್ಲ. ಈ 9900 ಜನಕ್ಕೆ ಕೆಲಸ ಸಿಗದಂತಾಗಲು ಕಾರಣ ಮೀಸಲಾತಿಯಲ್ಲ. ಬದಲಿಗೆ ಉದ್ಯೋಗವನ್ನು ಸೃಷ್ಟಿಸದ ಆರ್ಥಿಕ ವ್ಯವಸ್ಥೆ.
ಕೆಲಸ ಕೊಟ್ಟರೂ ಅರೆ ಉದ್ಯೋಗ ಮತ್ತು ಅರೆ ಸಂಬಳ ಕೊಟ್ಟು ಸುಲಿಗೆ ಮಾಡುವ ಆರ್ಥಿಕ ನೀತಿಗಳು. ಹಾಗೆಯೇ ಇಂದು ಜಾತಿ ಮೀರಿ ಎಲ್ಲ ಬಡವರಿಗೆ ಹೊಟ್ಟೆ ತುಂಬಾ ಊಟ ಕೊಡುವಂತೆ ಸಾರ್ವತ್ರಿಕ ಪಡಿತರ ವ್ಯವಸ್ಥೆ ಜಾರಿಗೆ ತರಲು ಬೇಕಿರುವುದು ಕೇವಲ ಎರಡು ಲಕ್ಷ ಕೋಟಿ ರೂಪಾಯಿಗಳು.  40 ಲಕ್ಷ ಕೋಟಿ ವಾರ್ಷಿಕ ಉತ್ಪನ್ನವಿರುವ, 55 ಜನ ಶತ ಕೋಟ್ಯಧೀಶರಿರುವ ಈ ದೇಶದಲ್ಲಿ ಅದು ಕಷ್ಟದ ಕೆಲಸವೇ ಅಲ್ಲ. ಆದರೆ ಬಡವರನ್ನೇ ಒಡೆದು ಆಳಲು ಬಡವರ ನಡುವೆ ರೇಖೆಗಳನ್ನು ಸೃಷ್ಟಿಸಿ ಅಸಲಿ ಕಾರಣವನ್ನು ಮರೆಮಾಚಲಾಗುತ್ತಿದೆ. 2009ರಲ್ಲಿ ಕೇವಲ 20 ಕಂಪನಿಗಳಿಗೆ 5.5 ಲಕ್ಷ ಕೋಟಿ ರೂಪಾಯಿಗಳ ಸಾಲ ಮನ್ನಾ ಮಾಡಿದ ಸರ್ಕಾರಕ್ಕೆ ಎಲ್ಲಾ ಬಡವರಿಗೆ ಪಡಿತರ ಹಂಚಲು ಮಾತ್ರ ದುಡ್ಡಿರಲಿಲ್ಲ.
ಮೇಲ್ಜಾತಿಗಳಲ್ಲೂ ಬಡವರಿದ್ದಾರೆ ಎಂಬುದು ಎಷ್ಟು ಸತ್ಯವೋ ಆ ಬಡವರು ದಮನಿತ ಜಾತಿಗಳಿಗೆ ಸೇರಿದ್ದರೆ ಬಡತನದ ಭೀಕರತೆ ಇನ್ನೂ ತೀವ್ರವಾಗಿರುತ್ತದೆ ಎಂಬುದೂ ಅಷ್ಟೇ ದೊಡ್ಡ ಸತ್ಯ. ಮೇಲ್ಜಾತಿ ಬಡವರ ಸ್ಥಿತಿ ಒಂದು ಸ್ಥಿರ ಉದ್ಯೋಗ ಮತ್ತಿತರ ಕ್ರಮಗಳಿಂದ ಸುಧಾರಿಸಬಹುದು. ಆದರೆ ದಮನಿತ ಜಾತಿಗಳಲ್ಲಿನ ಬಡವರಿಗೆ ಇನ್ನೂ ಹೆಚ್ಚಿನ ಬೆಂಬಲ ಬೇಕಾಗುತ್ತದೆ. ಏಕೆಂದರೆ ಭಾರತದಲ್ಲಿ ಜಾತಿ ಅನನ್ಯತೆಯೇ ಕೆಲವು ಅವಕಾಶಗಳನ್ನು ನಿರಾಕರಿಸುತ್ತಿರುತ್ತದೆ. ಒಂದು ಸಣ್ಣ ಉದಾಹರಣೆ ನೋಡಿ. ಭಾರತದಲ್ಲಿ ಬ್ರಾಹ್ಮಣರ ಹೊಟೇಲ್, ಲಿಂಗಾಯತರ ಖಾನಾವಳಿ, ಗೌಡರ ಮಟನ್ ಹೊಟೇಲ್, ಎಲ್ಲವೂ ಸಾಧ್ಯ. ಆದರೆ ಮಾದಿಗರ ಟೀ ಸ್ಟಾಲ್ ಸಾಧ್ಯವೇ?
ಆದ್ದರಿಂದಲೇ ಬಡತನ ನಿರ್ಮೂಲನೆಗಾಗಿ ತೆಗೆದುಕೊಳ್ಳುವ ಸಾರ್ವತ್ರಿಕ ಕ್ರಮಗಳಷ್ಟೇ ಈ ಸಾಮಾಜಿಕ ಪದರುಗಳನ್ನು ಮುರಿಯಲು ಸಾದ್ಯವಿಲ್ಲ. ಆದ್ದರಿಂದಲೇ ಸಂವಿಧಾನದಲ್ಲಿ ಕೇವಲ ಬಡತನ ನಿರ್ಮೂಲನೆಯ ಬಗ್ಗೆ ಮಾತ್ರವಲ್ಲದೆ ಸಾಮಾಜಿಕ ಹಿಂದುಳಿಸಿರುವಿಕೆಯನ್ನು ನಿರ್ಮೂಲನೆ ಮಾಡಲು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಬೇಕೆಂಬ ನಿರ್ದೇಶನವಿದೆ.
ಅಂಬೇಡ್ಕರ್ ಸಂವಿಧಾನ ಸಭೆಯಲ್ಲಿ ಮತ್ತು ಹೊರಗಡೆ ಈ ಬಗ್ಗೆ ಸತತವಾಗಿ ಮತ್ತು ಹೆಚ್ಚೂ  ಕಡಿಮೆ ಏಕಾಂಗಿಯಾಗಿ ನಡೆಸಿದ ಬೌದ್ಧಿಕ ಮತ್ತು ರಾಜಕೀಯ ಸಂಘರ್ಷದ ಪರಿಣಾಮವಾಗಿ ಜಾತಿ ಆಧಾರಿತ ಶೋಷಣೆಯ ವಿರುದ್ಧದ ಕ್ರಮಗಳು ಮತ್ತು ಜಾತಿ ಆಧಾರಿತ ಮೀಸಲಾತಿ ಸಂವಿಧಾನಬದ್ಧವಾಯಿತು. ಅದು ಈ ದೇಶದ ಜಾತಿ ವ್ಯವಸ್ಥೆಯ ಅತ್ಯಂತ ದೊಡ್ಡ ಬಲಿಪಶುಗಳಾದ ದಲಿತರ ಹಕ್ಕುಗಳನ್ನು ಗುರುತಿಸುವುದಕ್ಕಷ್ಟೇ ಸೀಮಿತವಾಗಲಿಲ್ಲ.
ಇತರ ಸವರ್ಣೀಯ ಹಿಂದುಳಿದ ವರ್ಗಗಳ ಹಕ್ಕುಗಳನ್ನು ಗುರುತಿಸಲು ಬೇಕಾದ ಭೂಮಿಕೆಯನ್ನೂ ಒದಗಿಸಿತು. ಆದ್ದರಿಂದಲೇ ಕೇಂದ್ರದ ಕಾಕಾ ಕಾಲೇಲ್ಕರ್ ಸಮಿತಿಯಿಂದ ಆರಂಭಗೊಂಡು ವಿವಿಧ ರಾಜ್ಯಗಳು ನೇಮಿಸಿದ ಹಿಂದುಳಿದ ವರ್ಗಗಳ ಆಯೋಗಗಳೂ ಹಿಂದುಳಿದಿರುವಿಕೆಯನ್ನು ಗುರುತಿಸಲು ಜಾತಿಯನ್ನೂ ಒಂದು ಮಾನದಂಡವಾಗಿ ಬಳಸಿಕೊಂಡಿವೆ. ನ್ಯಾಯಾಲಯಗಳೂ ಜಾತಿಯನ್ನು ಹಿಂದುಳಿದಿರುವಿಕೆಗೆ ಮಾನದಂಡವೆಂದು ಪರಿಗಣಿಸುತ್ತಿವೆ.
1963ರಲ್ಲಿ ಮೈಸೂರು ಸರ್ಕಾರದ ವಿರುದ್ಧ ಬಾಲಾಜಿ ಎಂಬುವರು ಸರ್ಕಾರ ಜಾತಿ ಆಧಾರಿತ ಮೀಸಲಾತಿ ನೀಡಿರುವುದರಿಂದ ತನಗೆ ಅನ್ಯಾಯವಾಗಿದೆಯೆಂದು ನ್ಯಾಯಾಲಯಕ್ಕೆ ಹೋಗಿದ್ದರು. ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ 1963ರಲ್ಲಿ ಒಂದು ಆದೇಶ ನೀಡಿ ಹಿಂದುಳಿದಿರುವಿಕೆಗೆ ಜಾತಿಯನ್ನು ಮಾನದಂಡವಾಗಿ ಬಳಸುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತು. ಆದರೆ ಕ್ರಮೇಣ ಭಾರತದಲ್ಲಿ ಬದಲಾಗುತ್ತಾ ಬಂದ ಸಾಮಾಜಿಕ ತಿಳಿವಳಿಕೆಯ ಭಾಗವಾಗಿ 1992ರಲ್ಲಿ ಸುಪ್ರೀಂ ಕೋರ್ಟಿನ ಸಾಂವಿಧಾನಿಕ ಪೀಠ ಭಾರತದಲ್ಲಿ ಜಾತಿಯೆಂಬುದು ಒಂದು ಸಾಮಾಜಿಕ ವರ್ಗವಾಗಿದೆ ಎಂದು ನಿಶ್ಚಿತ ತೀರ್ಮಾನ ನೀಡಿದೆ.
ಬಂಡವಾಳಶಾಹಿಯಂತೆ ಜಾತಿ ವ್ಯವಸ್ಥೆ ಕೂಡಾ ಅಧಿಕಾರ ಮತ್ತು ಸಂಪತ್ತನ್ನು ಕೆಲವರಿಗೇ ಮೀಸಲಿಡಲೆಂದು ಹುಟ್ಟಿಕೊಂಡ ಸಾಮಾಜಿಕ ರಾಜಕೀಯ ವ್ಯವಸ್ಥೆ. ಹೀಗಾಗಿ ಸಮಾನತೆಯನ್ನು ಆಶಯವಾಗಿಟ್ಟುಕೊಂಡ ರಾಜಕಾರಣವೊಂದು ಈ ಜಾತಿ ವ್ಯವಸ್ಥೆಯ ವಿರುದ್ಧ  ತಕ್ಷಣದ ಮತ್ತು ದೀರ್ಘಕಾಲೀನ ಪರಿಣಾಮವುಳ್ಳ ಸಾಮಾಜಿಕ-ರಾಜಕೀಯ ಕ್ರಮಗಳನ್ನು ಕೈಗೊಳ್ಳಲೇಬೇಕು. ಅಂಬೇಡ್ಕರ್ ತಮ್ಮ ಜಾತಿ ವಿನಾಶ ಕಾರ್ಯಕ್ರಮದಲ್ಲಿ ಈ ವಿಚಾರವನ್ನು ಸ್ಪಷ್ಟವಾಗಿ ಪ್ರತಿಪಾದಿಸಿದ್ದರು.
ಈಗಲೂ ನಡೆಯುತ್ತಿರುವ ಜಾತಿ ತಾರತಮ್ಯವನ್ನು ತಡೆಗಟ್ಟಲು ರಾಜಕೀಯ, ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿಯನ್ನು ಒಂದು ಪ್ರಮುಖ ಉಪಕ್ರಮವಾಗಿ ಮುಂದಿಟ್ಟಿದ್ದರು. ಹಾಗೆಯೇ ಈ ದೇಶದಲ್ಲಿರುವ `ರಾಚನಿಕ ಅಸಮಾನತೆ'ಯನ್ನು  ನಿವಾರಿಸಲು ಭೂಮಿ, ವಿಮೆ, ಬ್ಯಾಂಕ್ ಇನ್ನಿತರ ದೇಶದ ಸಂಪತ್ತೆಲ್ಲವನ್ನೂ ರಾಷ್ಟ್ರೀಕರಿಸಿ ಅದರ ಸಮಾನ ವಿತರಣೆಯನ್ನು ಖಾತರಿಗೊಳಿಸುವ ಮತ್ತು ಸ್ವಾತಂತ್ರ್ಯದಂತೆ ಸಮಾನತೆಯನ್ನೂ ಮೂಲಭೂತ ಹಕ್ಕಾಗಿ ಪರಿಗಣಿಸುವ `ಪ್ರಭುತ್ವ ಸಮಾಜವಾದ' ಅಗತ್ಯವೆಂದಿದ್ದರು.
ಆದರೆ ಭಾರತ ಮೊದಲಿನಿಂದಲೂ ಮಿಶ್ರ ಆರ್ಥಿಕ ನೀತಿಯ ಹೆಸರಿನಲ್ಲಿ  ಹೈಬ್ರಿಡ್ ಬಂಡವಾಳಶಾಹಿ ವ್ಯವಸ್ಥೆಯನ್ನು ಪೋಷಿಸುತ್ತಾ ಬಂತು. ಜಾಗತೀಕರಣದ ಈ ಕಾಲಘಟ್ಟದಲ್ಲಂತೂ ಸರ್ಕಾರಿ ಕ್ಷೇತ್ರವೇ ಕಿರಿದಾಗಿ ಯಾವ ಸಾಮಾಜಿಕ ಹೊಣೆಗಾರಿಕೆಯನ್ನೂ ಒಪ್ಪಿಕೊಳ್ಳದ ಮಾರುಕಟ್ಟೆ ಶಕ್ತಿಗಳದ್ದೇ ರಾಜ್ಯಭಾರವಾಗಿದೆ. ಪರಿಣಾಮವಾಗಿ ಬಹುದೊಡ್ಡ ಕ್ಷೇತ್ರದಲ್ಲಿ ಶಾಸನಬದ್ಧವಾಗಿಯೇ ಮೀಸಲಾತಿಯನ್ನು  ನಿರಾಕರಿಸಲಾಗುತ್ತಿದೆ. ಸರ್ಕಾರಿ ಕ್ಷೇತ್ರ ಕಿರಿದಾಗುತ್ತಾ ಬಂದ ಅವಧಿಯಲ್ಲಿ ಭಾರತೀಯರ ಮತ್ತೊಂದು ಸಣ್ಣ ವರ್ಗ ವೇಗವಾಗಿ ಬೆಳೆದಿದೆ.
ಉದಾಹರಣೆಗೆ 1991ಕ್ಕೆ ಮುನ್ನ ನಮ್ಮಲ್ಲಿ ಶತಕೋಟ್ಯಧೀಶರು ಇರಲೇ ಇಲ್ಲ. ಈಗ ನಮ್ಮಲ್ಲಿ 56 ಮಂದಿ ಶತಕೋಟ್ಯಧೀಶರಿದ್ದಾರೆ. ಅಂಬಾನಿ ಸೋದರರ ಬಳಿ ಇರುವ ಸಂಪತ್ತಿನ ಪ್ರಮಾಣ ್ಙ 2.5 ಲಕ್ಷ ಕೋಟಿ ಮೌಲ್ಯದ್ದು. ಈ ದೇಶದ 40 ಉದ್ಯಮಪತಿಗಳ ಒಟ್ಟು ಸಂಪತ್ತಿನ ಮೊತ್ತ  ರೂ. 17 ಲಕ್ಷ ಕೋಟಿ . ನಮ್ಮ ದೇಶದ ಒಟ್ಟಾರೆ ವಾರ್ಷಿಕ ಉತ್ಪನ್ನದ ಹೆಚ್ಚೂ ಕಡಿಮೆ ಅರ್ಧದಷ್ಟು ಸಂಪತ್ತು 40 ಜನರಲ್ಲಿ ಸಂಗ್ರಹವಾಗಿದೆ. ಮತ್ತು ಈ ಪಟ್ಟಿಯಲ್ಲಿ ಒಬ್ಬ ದಲಿತನಾಗಲೀ, ಹಿಂದುಳಿದ ವರ್ಗದವರಾಗಲೀ (ಪ್ರೇಂಜಿ ಯಂಥ ಮುಸ್ಲಿಮನನ್ನು ಬಿಟ್ಟರೆ) ಇಲ್ಲವೆಂಬುದನ್ನು ವಿಶೇಷವಾಗಿ ಹೇಳಬೇಕಿಲ್ಲ.
ಈ ದೇಶದ ಒಟ್ಟು ಸಂಖ್ಯೆಯ ಶೇಕಡಾ ಹತ್ತರಷ್ಟಿರುವ  ಮಧ್ಯಮ ವರ್ಗದ ಜನರೂ ಜಾಗತಿಕರಣದ ಫಲಾನುಭವಿಗಳೇ. ಅವರಲ್ಲಿ ದಲಿತ ಮತ್ತು ಹಿಂದುಳಿದ ವರ್ಗಗಳ ಮೇಲ್‌ಸ್ತರದವರೂ ಸೇರಿಕೊಂಡಿದ್ದಾರೆ ಎಂಬುದನ್ನು ಮರೆಯುವಂತಿಲ್ಲ. ಇವರೆಲ್ಲಾ ಮೀಸಲಾತಿಯೆಂಬ ಸಾಮಾಜಿಕ ನ್ಯಾಯದ ನೀತಿಯ ಫಲಾನುಭವಿಗಳೇ. ಆದರೆ ಅದೇ ಸಮುದಾಯಗಳ ಮೀಸಲಾತಿಯ ಯಾವ ಸೌಲಭ್ಯವನ್ನೂ ಪಡೆಯದ ಬಹುಸಂಖ್ಯಾತರಾದ ಗ್ರಾಮೀಣ ರೈತರ ದೈನಂದಿನ ಆದಾಯ ದಿನಕ್ಕೆ ಇಪ್ಪತ್ತು ರೂಪಾಯಿ. ಅಸಾಧಾರಣವಾದ ಸಂಪತ್ತು ಒಂದು ಕಡೆ. ಅಸಹನೀಯ ದಾರಿದ್ರ್ಯ ಒಂದು ಕಡೆ. ಈ ದೇಶ ಎಷ್ಟು ದಿನ ಹೀಗೆ ವೈರುಧ್ಯದಲ್ಲಿ ನಡೆದೀತು?
ಮೀಸಲಾತಿಯನ್ನು ಒಳಗೊಳ್ಳುತ್ತಲೇ, ಅಸ್ಮಿತೆಗಳನ್ನು ಪಡೆದುಕೊಳ್ಳುತ್ತಲೇ ಅದರ ಮಿತಿಗಳ ಬಗ್ಗೆ, ಇಡೀ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಎದುರಾಗಿರುವ ಆಪತ್ತಿನ ಬಗ್ಗೆ ಗಮನವನ್ನು ವಿಸ್ತರಿಸಬೇಕಿದೆ. ಮೀಸಲಾತಿಯನ್ನು ಪಡೆಯುತ್ತಿರುವವರ ಗುರಿಯೂ ಮೀಸಲಾತಿಯ ಅಗತ್ಯವೇ ಇಲ್ಲದಂತ ಸಮಾಜದ ಕಡೆ ನಡೆಯುವುದೇ ಆಗಬೇಕು.
ಹಾಗೆಯೇ ಮೀಸಲಾತಿ ವಿರೋಧಿಗಳು ಸಹ ಮೀಸಲಾತಿ ಯನ್ನು ಅಗತ್ಯ ಮಾಡುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯ ವಿರುದ್ಧ ಹೋರಾಟಕ್ಕೆ ಮುಂದಾಗಬೇಕು. ಇಬ್ಬರೂ ಒಂದಾಗುವುದಕ್ಕೆ ಸಮಾನತೆಯ ಆಶಯ ಭೂಮಿಕೆಯಾಗಬೇಕು. ಆಗಲೇ ಅಂಬೇಡ್ಕರ್ ಈ ಜಾತಿಗ್ರಸ್ಥ ದೇಶಕ್ಕೆ ಅತ್ಯಗತ್ಯ ಬೇಕು ಎಂದು ಪ್ರತಿಪಾದಿಸುತ್ತಿದ್ದ ನಿಜವಾದ ಭ್ರಾತೃತ್ವವೂ ರೂಪುಗೊಳ್ಳುತ್ತದೆ.

 

comments powered by Disqus
Top