ಜಾತಿ ಸಂವಾದ - ಅಭಿಪ್ರಾಯ 3

ಜಾತಿ ಮೀರಲಾರದ ಕಲಾಲೋಕ
.ಶೈಲಜಾ ನಂಜನಗೂಡು.

ಸಂಗೀತ ಕ್ಷೇತ್ರದ ಜಾತಿ ಪ್ರಶ್ನೆಗೆ ಸಂಬಂಧಿಸಿದಂತೆ ಈವರೆಗೆ ಪ್ರಕಟವಾದ ಎರಡು ಅಭಿಪ್ರಾಯಗಳಿಗೆ ಈ ಪ್ರತಿಕ್ರಿಯೆ. ಚಲನಶೀಲ ಕಲೆಗೆ ಜಾತಿಯ ಹಂಗಿಲ್ಲ, ಸೃಜನಶೀಲ ಕಲೆಯ ಸಂದರ್ಭದಲ್ಲಿ ಜಾತಿ ಮರೆಯಾಗುತ್ತದೆ ಎನ್ನುವ ಮಾತು ಕೇಳಲು ನಿಜವಾಗಿಯೂ ತುಂಬಾ ಸೊಗಸು.
 ಆದರೆ ಕಲಾ ಪ್ರಪಂಚದ ವಾಸ್ತವ ಇಷ್ಟೆಲ್ಲಾ ರಮ್ಯವಾಗಿಲ್ಲ ಎನ್ನುವುದನ್ನು ಇತಿಹಾಸ ದಾಖಲಿಸುತ್ತದೆ.  ಕಲಾಪ್ರಪಂಚದಲ್ಲಿ ಅದರಲ್ಲೂ ನಿರ್ದಿಷ್ಟವಾಗಿ ಸಂಗೀತ ಪ್ರಪಂಚದಲ್ಲಿ ಜಾತಿ ಮತ್ತು ಲಿಂಗ ಹಿಂದಿನಿಂದಲೂ ಅಪಮಾನಕರ ಪಾತ್ರವನ್ನು ವಹಿಸುತ್ತಲೇ ಬಂದಿದೆ.  ಕಾಲ ಬದಲಾದಂತೆ ಒಂದಿಷ್ಟು ಬದಲಾವಣೆಗಳಾಗಿವೆ ಎನ್ನುವುದನ್ನು ಯಾರೂ ತಳ್ಳಿಹಾಕುವುದಕ್ಕಾಗುವುದಿಲ್ಲ.  ಆದರೆ ಆ ಬದಲಾವಣೆ ಖಂಡಿತವಾಗಿಯೂ ಮೂಲಭೂತವಾದುದಲ್ಲ ಮತ್ತು ನಮ್ಮ ಆಲೋಚನಾ ಕ್ರಮ ಮತ್ತು ಮನಸ್ಥಿತಿಗಳಲ್ಲಿ ಆಗಿರುವ ಬದಲಾವಣೆಯೂ ಅಲ್ಲ. ಮೇಲ್ನೋಟಕ್ಕೆ ಕಾಣುವ ಬದಲಾವಣೆಯೊಳಗೆ ನಿರಂತರವಾಗಿ ಹರಿಯುತ್ತಿದೆ ಜಾತಿಯ ನದಿ.
ಹಿಂದೆಲ್ಲಾ ಕೆಳಜಾತಿಗೆ ಸೇರಿದ ದೇವದಾಸಿಯರು ಹಾಡುವಾಗ ಮತ್ತು ವಾದ್ಯಗಳನ್ನು ನುಡಿಸುವಾಗ ಅವರಿಗೆ ಮೇಲ್ಜಾತಿಯ ಗಂಡಸರ‌್ಯಾರೂ ಪಕ್ಕವಾದ್ಯವನ್ನು ನುಡಿಸುತ್ತಿರಲಿಲ್ಲ. ಅದಕ್ಕೆ ಜಾತಿಯ ಜೊತೆಗೆ ಲಿಂಗವೂ  ಕಾರಣ. ಕರ್ನಾಟಕ ಸಂಗೀತದಲ್ಲಿ ಬಹುಕಾಲದವರೆಗೂ ತುಂಬಾ ಪ್ರಶಸ್ತವಾದ  ಹಾಡುಗಾರಿಕೆಯನ್ನು  ಅಭ್ಯಾಸ ಮಾಡುವುದು ಮೇಲ್ಜಾತಿಯ ಗಂಡಸರ ಹಕ್ಕಾಗಿತ್ತು. ದೇವದಾಸಿ ಕುಲದ ಗಂಡಸರು ಹಾಡುಗಾರಿಕೆಯಲ್ಲಿ ತೊಡಗಿಕೊಳ್ಳುವಂತಿರಲಿಲ್ಲ. ಅವರು ಏನಿದ್ದರೂ ಓಲಗವನ್ನು ನುಡಿಸಬಹುದಿತ್ತು ಅಥವಾ ನಾಟ್ಯವನ್ನು ಕಲಿಸುವ ಗುರುವಾಗಬಹುದಿತ್ತು.
 ಹಾಡುವ ಹಕ್ಕು ಏನಿದ್ದರೂ ಮೇಲ್ಜಾತಿಯ ಪುರುಷರದ್ದು ಮಾತ್ರ. ಆ ಕಾಲದಲ್ಲಿ ಇದಕ್ಕೆ ಸೆಡ್ಡು ಹೊಡೆದು ನಿಂತ ಏಕೈಕ ಸಂಗೀತಗಾರ ತಂಜಾವೂರಿನ ನೈನಾ ಪಿಳ್ಳೆ.  ಕರ್ನಾಟಕ ಸಂಗೀತದ ಒಳ್ಳೆಯ ಗಾಯಕರಾದ ಆದರೆ ದಲಿತ ವರ್ಗಕ್ಕೆ ಸೇರಿದ ನೈಯ್ಯಾಟಿಂಕರ ವಾಸುದೇವ ಅವರು ಜಾತಿಯ ಕಾರಣಕ್ಕೆ ಬಹಳಷ್ಟು ಅವಮಾನವನ್ನು ಅನುಭವಿಸಬೇಕಾಯಿತು. ಎಲ್ಲೋ ಚಂಬೈ ವೈದ್ಯನಾಥ ಭಾಗವತರಂತಹ ಹೃದಯವಂತಿಕೆ ಉಳ್ಳವರ ಉದಾಹರಣೆಗಳು ಅಪವಾದವೆನ್ನುವಂತೆ ಅಲ್ಲಿ ಇಲ್ಲಿ ಸಿಗಬಹುದು ಅಷ್ಟೆ. 
ತಿರುವೈಯ್ಯೊರಿನಲ್ಲಿ ನಡೆಯುವ ಸಂತ ತ್ಯಾಗರಾಜರ ಆರಾಧನೆಯ ಇಡೀ ಇತಿಹಾಸ ಹೆಚ್ಚುಕಡಿಮೆ ಜಾತಿ ಮತ್ತು ಲಿಂಗ ತಾರತಮ್ಯದ ಇತಿಹಾಸ.  ಇಲ್ಲಿದ್ದ ಮೇಲ್ಜಾತಿಯ ಎರಡು ಗುಂಪುಗಳಿಗೆ ಬೇರೆ ಬೇರೆ ವಿಚಾರಗಳಿಗೆ ಸಂಬಂಧಪಟ್ಟಂತೆ ಬೇಕಾದಷ್ಟು ವೈಷಮ್ಯಗಳು ಮತ್ತು ಭಿನ್ನಾಭಿಪ್ರಾಯಗಳು ಇದ್ದರೂ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಮಾತ್ರ ಐಕ್ಯ ಮತವಿತ್ತು.
ಈ ಎರಡೂ ಗುಂಪುಗಳೂ ಹೆಂಗಸರು ಮತ್ತು ನಾದಸ್ವರ ವಿದ್ವಾಂಸರು ಆರಾಧನೆಗೆ ಬಂದು ಹಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದ್ದರು. ಹಾಗಾಗಿಯೇ 1920ರಲ್ಲಿ ಟಿ. ಎನ್. ರಾಜರತ್ನಂ ಪಿಳ್ಳೈ ಅವರ ನೇತೃತ್ವದಲ್ಲಿ ನಾದಸ್ವರ ವಿದ್ವಾಂಸರಿಗೆ ತೋರುತ್ತಿದ್ದ ತಾರತಮ್ಯದ ಬಗ್ಗೆ ತೀವ್ರವಾದ ಪ್ರತಿಭಟನೆ ವ್ಯಕ್ತವಾಯಿತು ಮತ್ತು ಪುಷ್ಯ ಮಂಟಪದಲ್ಲಿ ಮತ್ತೊಂದು ಪರ್ಯಾಯ ಆರಾಧನೆ ಪ್ರಾರಂಭವಾಯಿತು. ಉತ್ಸವಮೂರ್ತಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುವಾಗ ಮಾತ್ರ ನುಡಿಸಲು ನಾದಸ್ವರ ವಿದ್ವಾಂಸರಿಗೆ ಅವಕಾಶವಿತ್ತು
ಮದ್ರಾಸಿನಲ್ಲಿ ಆಕಾಶವಾಣಿ ಪ್ರಾರಂಭವಾಗಿ ಹಲವಾರು ವರುಷಗಳು ಕಳೆದರೂ ಸ್ಟುಡಿಯೋದಲ್ಲಿ ದೇವದಾಸಿ ಕುಲಕ್ಕೆ ಸೇರಿದ ಒಬ್ಬಳೇ ಒಬ್ಬ ಸಂಗೀತಗಾರ್ತಿಯ ಸಂಗೀತದ ಧ್ವನಿಮುದ್ರಣ ನಡೆದಿರಲಿಲ್ಲ. ಅವರನ್ನು ಕರೆದರೆ ಆಕಾಶವಾಣಿ ಧ್ವನಿಮುದ್ರಣ ಸ್ಟುಡಿಯೋದ ಪಾವಿತ್ರ್ಯ ಹಾಳಾಗುತ್ತದೆ ಎಂದು ಭಾವಿಸಿದ್ದರು. “ನಮ್ಮ ಕರ್ನಾಟಕ ಸಂಗೀತ ಯಾವತ್ತಪ್ಪಾ ಸೆಕ್ಯುಲರ್ ಆಗಿತ್ತು?” ಎನ್ನುವ ಖ್ಯಾತ, ಹೃದಯವಂತ ಕವಿ ಪುತಿನ ಅವರ ಮಾತು ನಮ್ಮನ್ನು ಚಿಂತನೆಗೆ ಹಚ್ಚಬೇಡವೇ? 
  
ಇನ್ನು ಹಿಂದುಸ್ತಾನಿ ಸಂಗೀತದ ಪರಿಸ್ಥಿತಿ ತುಂಬಾ ರಮ್ಯವಾಗಿತ್ತು ಎಂದು ವರ್ಣಿಸುವುದಕ್ಕಾಗುತ್ತದೆಯೇ ಎನ್ನುವುದು ಗೊತ್ತಿಲ್ಲ.  ಈ ಸಂದರ್ಭದಲ್ಲಿ ಖ್ಯಾತ ಹಿಂದುಸ್ತಾನಿ ವಾದಕರೊಬ್ಬರು ಕೇಳಿದ ಪ್ರಶ್ನೆ ತುಂಬಾ ಪ್ರಸ್ತುತವೆನಿಸುತ್ತದೆ. ಉತ್ಕೃಷ್ಟ ಮುಸಲ್ಮಾನ ಸಂಗೀತಗಾರರು ತಮ್ಮ ವಿದ್ಯೆಯನ್ನು ಹಿಂದುಗಳಿಗೆ ಮನಬಿಚ್ಚಿ ಧಾರೆ ಎರೆದರು.  ಅವರನ್ನು ತಮ್ಮ ಮಕ್ಕಳಂತೆ ಕಂಡರು, ತಮ್ಮ ಬಾನಿಯ ವಾರಸುದಾರರನ್ನಾಗಿ ಮಾಡಿಕೊಂಡರು.
ಇದೇ ಕೆಲಸವನ್ನು ಎಷ್ಟು ಜನ ಹಿಂದೂ ಸಂಗೀತಗಾರರು ಮಾಡಿದ್ದಾರೆ ಒಂದಿಷ್ಟು ಉದಾಹರಣೆಗಳನ್ನು ಕೊಡಿ? ಇಲ್ಲೂ ಒಂದಿಷ್ಟು ಅಪವಾದಗಳು ಇರಬಹುದು.  ಆದರೆ ನಮ್ಮೆಲ್ಲರಿಗೂ ಒಂದಿಷ್ಟು ಆತ್ಮಾವಲೋಕನದ ಅವಶ್ಯಕತೆ ಇಲ್ಲವೇ?

comments powered by Disqus
Top