ಜಾತಿ ಸಂವಾದ - ಅಭಿಪ್ರಾಯ 1

ಇದು ನಾಗರಿಕ ಸಮಾಜ ಎಂದು ಹೇಳುವುದಾದರು ಹೇಗೆ?
ಅನಿಲ್‌ಕುಮಾರ್.ಎಂ.ಶಾಕ್ಯಪುತ್ರ/ ಮೈಸೂರು

ಜಾತಿ ನಿರ್ಮೂಲನೆಗೆ ಅಂತರಜಾತಿ ವಿವಾಹಗಳು ಖಂಡಿತವಾಗಿಯೂ ಪರಿಹಾರವಾಗಬಲ್ಲದು. ಅಂತರಧರ್ಮಿಯ ವಿವಾಹಗಳಿಗಿಂತ ಅಂತರಜಾತಿ ವಿವಾಹಗಳು ಸಮಾಜದ ಮೇಲೆ ಹೆಚ್ಚು ದುಷ್ಟಪರಿಣಾಮ (ಮರ್ಯಾದೆ ಹತ್ಯೆ) ಬೀರುತ್ತಿರುವುದು ಶೋಚನೀಯ ಸಂಗತಿ.

ಇದರ ಪರಿಣಾಮ ಕೊನೆಗೆ ಪ್ರೇಮಿಗಳು ಆಯ್ಕೆ ಮಾಡಿಕೊಳ್ಳುತ್ತಿರುವ ದಾರಿ ಮಾತ್ರ ಆತ್ಮಹತ್ಯೆ. ಇದು ಎಲ್ಲಿಯವರೆಗೆ ಎಂಬುದು ಮಾತ್ರ ಇನ್ನೂ ಕೂಡ ಪ್ರಶ್ನೇಯಾಗೇ ಉಳಿದಿದೆ ?

ಸಂಸ್ಕೃತಿ, ಸಂಪ್ರದಾಯ ಮತ್ತು ವಂಶಪರಂಪರೆಯ ಹೆಸರಿನಲ್ಲಿ ತಮ್ಮನ್ನು ತಾವು ಶ್ರೇಷ್ಠ ಇತರರು ಕನಿಷ್ಠ ಎಂದು ಬೀಗುತ್ತಿರುವ ಜನರಿಗೆ ಅಂತರಜಾತಿ ವಿವಾಹಗಳಿಂದ ಪಾಠ ಕಲಿಸಬಹುದಾಗಿದೆ. ಅಂತರಜಾತಿ ವಿವಾಹಗಳಿಂದ ಸಮಾಜದಲ್ಲಿ ಸಮಾನತೆ ಮತ್ತು ಸಾಮರಸ್ಯ ಎಂಬುದು ಮೂಡುತ್ತದೆ. ನಾವೆಲ್ಲ ಒಂದೇ ಎಂಬ ಏಕತೆ ಭಾವನೆ ಇರುತ್ತದೆ. ಒಬ್ಬ ಉತ್ತಮ ಸಾಧನೆ ಮಾಡಿದಂತ ವ್ಯಕ್ತಿಯನ್ನು ಭಾರತದವನು (ದೇಶಾಭಿಮಾನಿ) ಎಂಬ ಭಾವನೆಯಿಂದ ನೋಡುವ ಸಮಾಜ. ಅದೇ ವ್ಯಕ್ತಿ ತಪ್ಪು ಮಾಡಿದಾಗ ಅವನ ಜಾತಿಯನ್ನು ನೋಡಿ ಅಲ್ಲಗೆಳೆಯುವುದು ಸಮಾಜಕ್ಕೆ ಶೋಭೆಯಲ್ಲ.
 
ಹಾಗೇ ನೋಡಿದರೆ ನಮ್ಮ ಪೂರ್ವಿಕರೇ ಈ ಒಂದು ಜಾತೀಯತೆ ವಿನಾಶಕ್ಕೆ ಹಲವಾರು ಹೋರಾಟಗಳನ್ನು ಮಾಡಿದ್ದಾರೆ. "ಬಸವಣ್ಣನವರ ಕ್ರಾಂತಿಕಾರಿ ಹೋರಾಟಗಳಲ್ಲಿ ಅಂತರಜಾತಿ ವಿವಾಹಕ್ಕೆ ಪ್ರೋತ್ಸಾಹವು ಕೂಡ ಒಂದು. ಮಹಾತ್ಮ ಜ್ಯೋತಿರಾವ್ ಬಾಪುಲೆ ಸತ್ಯ ಶೋಧಕ ಸಮಾಜದ ಮೂಲಕ ಅಸ್ಪೃಶ್ಯತೆ ಆಚರಣೆಯ ವಿರುದ್ಧ ಮತ್ತು ಅಂತರಜಾತಿ ವಿವಾಹಗಳ ಪರವಾಗಿ ಹೋರಾಟಗಳನ್ನು ಮಾಡಿದ್ದಾರೆ. ತಂದೆ ಪೆರಿಯಾರ್ ರಾಮಸ್ವಾಮಿ ನಾಯಕರ್ ತಮಿಳುನಾಡಿನಲ್ಲಿ ಅಂತರಜಾತಿ ವಿವಾಹಗಳ ಪರವಾಗಿ ಹೋರಾಟಗಳನ್ನು ಮಾಡಿದ್ದಾರೆ.

ಹಾಗೆಯೇ ಭಾರತದ ಸಂವಿಧಾನದಲ್ಲಿ ಡಾ.ಬಿ.ಆರ್ ಅಂಬೇಡ್ಕರ್‌ರವರು ಅಂತರಜಾತಿ ಮತ್ತು ಅಂತರ್‌ಧರ್ಮಿಯ ವಿವಾಹಗಳಿಗೆ ಅವಕಾಶ ಕಲ್ಪಿಸಿದ್ದಾರೆ. ಹೀಗೆ ಹಿರಿಯರು ಹಾಕಿಕೊಟ್ಟ ಹಲವಾರು ಬುನಾದಿಗಳು ಕೂಡ ಇವೆ. ಆದರೂ ಕೂಡ ಹಿಂದೂ ಧರ್ಮದಲ್ಲಿ ಅಂತರಜಾತಿ ವಿವಾಹಕ್ಕೆ ಅಡ್ಡಿಗಳು ಇದ್ದೇ ಇದೆ. ಇದಕ್ಕೆಲ್ಲಾ ಮೂಲ ಕಾರಣಗಳೇನು? ಎಂದು ಹುಡುಕುತ್ತಾ ಹೋದರೆ ನನಗೆ ಅರಿವಾಗುವುದು ಸಿಂಧೂ ಬಯಲಿನ ನಾಗರಿಕತೆ. 

ಸಿಂಧೂ ಬಯಲಿನ ನಾಗರೀಕತೆಯಲ್ಲಿ ನಾವು ಕಾಣುವುದು ದ್ರಾವಿಡರು(ಭಾರತದ ಮೂಲ ನಿವಾಸಿಗಳು) ಮಾತ್ರ ಕಾಣುತ್ತೇವೆ. ಈ ಒಂದು ನಾಗರೀಕತೆಯಲ್ಲಿ ಯಾವುದೇ ಒಂದು ಜಾತಿ -ಭೇದ, ಮೇಲು-ಕೀಳು, ಬಡವ-ಶ್ರೀಮಂತ, ಅಸ್ಪೃಶ್ಯತೆ, ಅಸಮಾನತೆ, ಅಸಮಾನ ನಾಗರೀಕತೆ ಹೀಗೆ ಇನ್ನೂ ಮುಂತಾದ ಮಾನವೀಯತೆಗೆ ವಿರುದ್ಧವಾಗಿ ಯಾವುದೇ ಒಂದು ಆಚರಣೆಗಳು ಸಿಂಧೂ ಬಯಲಿನ ನಾಗರೀಕತೆಯಲ್ಲಿ ಕಾಣಲಾಗದು. ಇದಾದ ನಂತರ ಆರ‍್ಯರ ಆಗಮನದಿಂದಾಗಿ ಸಿಂಧು ಬಯಲಿನ ನಾಗರಿಕತೆ ನಾಶವಾಯಿತು. ನಾವು ಎಲ್ಲೋ ಒಂದು ಕಡೆ ನಾವೇ ಈ ಒಂದು ಸಿಂಧು ಬಯಲಿನ ನಾಗರೀಕತೆಯನ್ನು ಮರೆತ್ತಿದ್ದೇವೆ. ಆ ಕಾರಣಕ್ಕಾಗಿ ಈ ಭಾರತ ದೇಶದಲ್ಲಿ ಜಾತೀಯತೆ ಇನ್ನೂ ಕೂಡ ಜೀವಂತವಾಗಿದೆ. ಪ್ರಸ್ತುತ ಸಮಾಜದಲ್ಲಿ ಪ್ರತಿಯೊಬ್ಬರು ಜಾತೀಯತೆ ಗ್ಗೆ ಮಾತ್ರ ಮಾತನಾಡುತ್ತಾರೆ ಆದರೆ ಯಾವೊಬ್ಬ ಪ್ರಜೆಯು ಕೂಡ ಜಾತೀಯತೆ ನಿರ್ಮೂಲನೆಗೆ ಯಾವುದೇ ಕಾರ್ಯಕ್ರಮಗಳನ್ನು ಹಾಕಿಕೊಂಡ ಇತಿಹಾಸಗಳಿಲ್ಲ.

ಭವ್ಯ ಭಾರತದಲ್ಲಿ ಜಾತಿಯ ಉಗಮಕ್ಕೆ ಕಾರಣ ಮನುಸ್ಪೃತಿ ? ಮನುಸ್ಪೃತಿ ಪ್ರಕಾರ ಸಮಾಜವನ್ನು ನಾಲ್ಕು ವರ್ಣಗಳಾಗಿ ವಿಂಗಡಿಸಲಾಗಿದೆ. ಬ್ರಾಹ್ಮಣ, ಕ್ಷತ್ರಿಯಾ, ವೈಶ್ಯ ಮತ್ತು ಶೂದ್ರ ಹೀಗೆ ವಿಂಗಡಿಸಿ ಸಮಾಜವನ್ನು ಮೇಲು-ಕೀಳು ಎಂಬ ಭಾವನೆಗಳ ಮೂಲಕ ಅಸಮಾನ ಸಮಾಜವನ್ನು ಮನುಸ್ಪೃತಿ ಸೃಷ್ಟಿ ಮಾಡಿತು. ಅದರ ಫಲವಾಗಿ ಪ್ರಸ್ತುತ ಭಾರತ ದೇಶದಲ್ಲಿ ೬೫೦೦ ಹೆಚ್ಚು ಜಾತಿಗಳನ್ನು ಕಾಣಬಹುದಾಗಿದೆ. ಭಾರತ ದೇಶವನ್ನು ಒಂದು ಉಪಖಂಡ ಎಂದು ಕರೆಯುತ್ತೇವೆ ಇದಕ್ಕೆ ಕಾರಣ ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್, ಬೌಧ್ಧ, ಜೈನ, ಪಾರ್ಸಿಗಳು ಎಂಬ ಹಲವಾರು ಧರ್ಮಗಳು ನಮ್ಮ ದೇಶದಲ್ಲಿದೆ.

ಅದರಲ್ಲಿ ಹಿಂದೂ ಧರ್ಮವು ಕೂಡ ಒಂದು ಮುಖ್ಯ ಧರ್ಮವಾಗಿದೆ. ಇದರಲ್ಲಿ ಅತಿ ಹೆಚ್ಚು ಜಾತಿಗಳು ಮತ್ತು ಉಪಜಾತಿಗಳು ಕಂಡುಬರುತ್ತದೆ. ಬೇರೆ ಧರ್ಮಗಳಲ್ಲಿ ಯಾವುದೇ ಒಂದು ಜಾತಿಯ ಆಚರಣೆಗಳು ಕಂಡುಬರುವುದಿಲ್ಲ. ಆದರೆ ಹಿಂದೂ ಧರ್ಮದಲ್ಲಿ ಮನುಷ್ಯ ಮನುಷ್ಯರಲ್ಲಿ ಭೇದ ಭಾವಗಳ ಅಸಮಾನ ಸಮಾಜವನ್ನು ಕಾಣಬಹುದು. ಈ ರೀತಿಯಾಗಿ ಭಾರತದಲ್ಲಿ ಸೃಷ್ಟಿಯಾಗಿರುವ ಜಾತಿ ವ್ಯವಸ್ಥೆಯಲ್ಲಿ ಅಂತರಜಾತಿ ವಿವಾಹವಾಗಲು ಸಾಧ್ಯವಾಗದು. ಹಾಗೇನಾದರು ವಿವಾಹವಾಗಿದ್ದಲ್ಲಿ ವಿವಾಹವಾದ ಪ್ರೇಮಿಗಳಿಗೆ ಅಥವಾ ಅವರ ಮನೆಯವರಿಗೆ ಸಾಮಾಜಿಕ ಬಹಿಷ್ಕಾರ, ದೈಹಿಕ ಹಿಂಸೆ, ಮಾನಸಿಕ ಕಿರುಕುಳ, ಅತ್ಯಾಚಾರ ಮತ್ತು ಕ್ರೂರವಾಗಿ ಕೊಲೆಗಳನ್ನು ಮಾಡುತ್ತಿದ್ದಾರೆ ಇನ್ನೂ ಮುಂತಾದ ಅವಮಾನವೀಯ ಹಿಂಸೆಗಳನ್ನು ಪಟ್ಟಭದ್ರ ಹಿತಾಸಕ್ತಿಗಳು ನೀಡುತ್ತಿದ್ದಾರೆ.

ಹೀಗಿರುವಾಗ ಅಂತರಜಾತಿ ವಿವಾಹವಾಗಲು ಯಾರು ಕೂಡ ಧೈರ್ಯ ಮನಸ್ಸು ಮಾಡುತ್ತಿಲ್ಲ ಬದಲಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಶೋಚನೀಯ ಸಂಗತಿ. ಮೊದಲು ನಾಗರೀಕತೆಯನ್ನು ಮನುಷ್ಯ ಕಲಿತುಕೊಳ್ಳಬೇಕು. ಆ ನಂತರ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಸಾಧ್ಯ. ಕೇವಲ ಪದವಿ ಪಡೆದ ವ್ಯಕ್ತಿ ಪದವಿ ಮತ್ತು ಪದಕಗಳಿಗೆ ಆಸೆ ಪಟ್ಟರೆ ಸಾಲದು ಸಮಾಜದ ಹಿತಾದೃಷ್ಟಿಯಿಂದ ತಿಳುವಳಿಕೆ ಪಡೆದುಕೊಳ್ಳುವುದು ಉತ್ತಮ. ಇಂತಹ ಕೆಟ್ಟ ಸಮಾಜದಲ್ಲಿ ನತದೃಷ್ಟವಾಗಿ ಸಾಯುತ್ತಿರುವ ಉಳಿಸುವುದಾದರು ಹೇಗೆ? ಮತ್ತು  ಇಷ್ಟಪಟ್ಟ ಹುಡುಗ ತಾನು ಇಷ್ಟಪಟ್ಟ ಹುಡುಗಿಯನ್ನು ವಿವಾಹ ಮಾಡಿಕೊಳ್ಳಲಾಗದ ಈ ಒಂದು ಸಮಾಜವನ್ನು ನಾವು ನಾಗರಿಕ ಸಮಾಜ ಎಂದು ಹೇಳುವುದಾದರು ಹೇಗೆ? 
comments powered by Disqus
Top