ಜಾತಿ ಸಂವಾದ - ಅಭಿಪ್ರಾಯ 4

ಬುರ್ಕಾ ಹಾಕುವುದು ತಪ್ಪೇ...
ದೀಪಾ ಮತ್ತೂರು, ದಾವಣಗೆರೆ ವಿಶ್ವವಿದ್ಯಾನಿಲಯ.

ನಾನು ಸರ್ಕಾರಿ ಕಾಲೇಜೊಂದರಲ್ಲಿ ಪದವಿ ಓದುತ್ತಿದ್ದ ಸಂದರ್ಭ. ಆಗ ನನ್ನ ನೆಚ್ಚಿನ ಗೆಳತಿ ಬೇರೆ ಧರ್ಮದವಳಾಗಿದ್ದಳು. ನನ್ನ ಅವಳ ಒಡನಾಟ ಹೆಚ್ಚಾಗಿತು. ಒಟ್ಟಿಗೆ ಕೂಡುವುದು ಆಡುವುದು ಓದುವುದು ಊಟ ಮಾಡುವುದು ಹೀಗೆ. ಆಗ ಆಕೆ ಬುರ್ಕಾ ತೊಟ್ಟೆ ನಮ್ಮೊಡನೆ ಕೂತು ಪಾಠ ಕೇಳುತ್ತಿದ್ದಳು.

ಆದರೂ ನಮ್ಮೆಲ್ಲ ಸ್ನೇಹಿತರಿಗೆ ಆಕೆ ಪರಕೀಯಳೆನಿಸಿರಲಿಲ್ಲ. ಪದವಿ ಪೂರೈಸಿದ ನಂತರ ನಾವಿಬ್ಬರೂ ಒಂದೇ ಕಾಲೇಜಿನಲ್ಲಿ ಬಿ.ಇಡಿ ಸೀಟನ್ನು ಕೌನ್ಸಿಲಿಂಗ್ ಮೂಲಕ ಪಡೆದೆವು. ಅದೊಂದು ಖಾಸಗೀ ಸಂಸ್ಥೆಯಾಗಿತ್ತು. ಸ್ವಲ್ಪ ದಿನದ ನಂತರ ಅಧ್ಯಾಪಕರೊಬ್ಬರು ನನ್ನ ಸ್ನೇಹಿತೆಗೆ ಬುರ್ಕಾ ಧರಿಸಿ ಎಲ್ಲರೊಡನೆ ಕೂತು ಪಾಠ ಕೇಳಲು ನಿರ್ಬಂಧ ಹೇರಿದರು. ಅದಕ್ಕೆ ಅವಳು ಸಮ್ಮತಿಸಿ ದಿನಾಲು ಮಹಿಳಾ ಕೊಠಡಿಯಲ್ಲಿ ಬುರ್ಕಾ ಬದಲಾಯಿಸಿ ರುತ್ತಿದ್ದಳು.

ಮತ್ತೆ ಸ್ವಲ್ಪ ದಿನದ ನಂತರ ಮ್ಯಾನೇಜಮೆಂಟಿನವರು ಆಕೆಗೆ ಕಾಲೇಜಿನ ಪರಿಮಿತಿಯಲ್ಲೆಲ್ಲೂ ಬುರ್ಕಾ ತೊಡುವ ಹಾಗಿಲ. ಅದನ್ನು ನೊಡಿದರೆ ಅಶುಭ. ನಮಗೆ ಒಳ್ಳೆಯದಾಗುವುದಿಲ್ಲ ಎಂದರು. ಇದರಿಂದ ಮನನೊಂದ ಗೆಳತಿ ಕಾಲೇಜಿನ ಗೇಟಿನ ಮುಂದಿನ ರಸ್ತೆಯಲ್ಲಿ ದಾರಿಹೊಕರೆಲ್ಲರೆದುರು ಬುರ್ಕಾ ಬದಲಾಯಿಸಿ ಬರುತ್ತಿದ್ದ ದೃಶ್ಯ ನನಗೂ ಹಾಗೂ ನನ್ನೆಲ್ಲ ಸ್ನೇಹಿತರಿಗೂ ಪ್ರತಿದಿನವೂ ಹೃದಯ ಕಲಕುತ್ತಿತ್ತು. ಈ ಹಿಂಸೆಯನ್ನು ಆಕೆ ಪೋಷಕರಿಗೆ ಹೇಳಿ ಮುಂದಾಗುವ ಪರಿಣಾಮ ಎದುರಿಸುವ ಧೈರ್ಯವಿಲ್ಲದೆ ಸಹಿಸಿಕೊಂಡಳು. 

 ಮೂರು ವರ್ಷ ನಾನವಳ ಸ್ನೇಹಿತೆಯಾಗಿದ್ದೆ.  ಆಗ ಅವಳಿಂದ ನನಗೆ ಯಾವ ತೊಂದರೆಯೂ ಆಗಿರಲಿಲ್ಲ. ಕೇವಲ ಮೂರು ವಾರಗಳಲ್ಲೆ ಮುಂದೆಂದೊ ಕೆಟ್ಟದಾಗಬಹುದೆಂದು ಊಹಿಸಿ ಈ ರೀತಿ ಶಿಕ್ಷೆ ನಿಡಿದ್ದು ಯಾವ ನ್ಯಾಯ? ಶುಭ ಅಶುಭಗಳೆರಡೂ ನಮ್ಮ ಜಿವನದಲ್ಲಿನ ಅನಿರೀಕ್ಷಿತ ಘಟನೆಗಳೇ ಹೊರತು ಇನ್ನಾರೊ ಉಡುವ ಬಟ್ಟೆಯಲ್ಲ. ಕಷ್ಟಗಳನ್ನು ಎದಿರಿಸುವ ಗಟ್ಟಿತನ ಅಥವಾ  ಮಾನಸಿಕ ಪ್ರಬುದ್ದತೆಯನ್ನು ನಾವು ಬೆಳೆಸಿಕೊಳ್ಳದೆ, ಇನ್ನೊಬ್ಬರ ಆಚರಣೆಯನ್ನು ದೂರುವುದು, ವಿವಿಧತೆಯಲ್ಲಿ ಏಕತೆಯನ್ನು ಕಾಣುವ ನಮ್ಮ ರಾಷ್ಟ್ರದಲ್ಲಿ ನಿಜಕ್ಕೂ ಸರಿಯೆನಿಸುವುದೆ?

ಉತ್ತಮ ಪ್ರಜೆಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವಂತ ಮಹತ್ತರ ಜವಬ್ದಾರಿಯಿರುವ ಶಿಕ್ಷಣ ಸಂಸ್ಡೆಗಳಿಗೆ ಈ ರೀತಿಯ ಮನೊಧರ್ಮವಿದ್ದರೆ, ನಾವು ಇವುಗಳಿಂದ ಯಾವ ಗುಣಮಟ್ಟದ ಶಿಕ್ಷಣ ನಿರೀಕ್ಷೆ ಮಾಡಬಹುದು? ಸುಶಿಕ್ಷಿತರು  ಎನ್ನಿಸಿಕೊಂಡವರ ಈ ಯೋಚನಾ ಲಹರಿ ನಮ್ಮ ಸಮಾಜದ ದುರಂತವೇ ಸರಿ.                                                         
comments powered by Disqus
Top