ಜಾತಿ ಸಂವಾದ - ಅಭಿಪ್ರಾಯ 5

ಜನಕ್ಕೊಗ್ಗಿದ್ದು ಜಾತಿಯಲ್ಲ:ಜಾತಿಗೊಗ್ಗಿದವರು ಜನರಲ್ಲವೇ?..
ಗಾಣಿಗರ್ ಎನ್ ಎಸ್- ಗುಲಬರ್ಗಾ

ನಮ್ಮದು ಈ ಜಾತಿ ಎನ್ನುವುದಕ್ಕಿಂತ ನಾವು ಆ ಜಾತಿಯವರು ಎನ್ನುವ ಸಂಖ್ಯೆಯೇ ಅಧಿಕ. ಸ್ವಜಾತಿ ಉತ್ಕರ್ಷೆಗಳು ಪರಜಾತಿ ನಿಷ್ಕರ್ಶೆಗಳು ಹಳ್ಳಿ ನಗರಗಳೆನ್ನದೇ ಅಸ್ಥಿತ್ವದಲ್ಲಿದೆ. ಜನ್ಮ ಕುಂಡಲಿ ಬರೆಸುವಾಗ ಜಾತಿಯನ್ನು ದಾಖಲಿಸುವ ಜರೂರು ಜನರನ್ನು ಒಗ್ಗಿಸಿದಂತಿದೆ. ಗೊತ್ತಿದ್ದೊ, ಇಲ್ಲದೆನೋ ಕುಂಡಲಿ ಬರೆಯುವ ಸಮೂಹ ಅದನ್ನು ನಿಷ್ಠೆಯಿಂದ ಪಾಲಿಸುತ್ತಾಬಂದಿದೆ. ಸಮಾಜದ ಸಹಜ ಸ್ಥಿತಿಯಲಿ ಜಾತಿಯ ಪ್ರಸ್ತಾಪ; ಅದರ ಆಚರಣೆಗಿಂತ, ಅಸಹಜ ಸ್ಥಿತಿಯಲ್ಲಿಯೇ ಅಧಿಕವಾಗಿ ಒಳಗಾಗುತ್ತದೆ.

ವ್ಯಕ್ತಿ ಅವಮಾನಕ್ಕಿಂತ ಜಾತಿ ಅವಮಾನವೇ ಹೆಚ್ಚೆನ್ನುವ ನಂಬಿಕೆ ಜನರ ಜಾಯಮಾನವಿಡೀ ಬೆಳೆದುಬಂದ ಇತಿಹಾಸವೇ ಇದೆ. ಸಂಸ್ಕೃತೀಕರಣ ಜಾತಿಗಳ ಮಧ್ಯ ನೆಡೆಯಬಹುದು ಎಂಬುದು ಎಷ್ಟು ಸತ್ಯವೋ, ಅಲ್ಲಿ ಜಾತೀಕರಣ ನೆಡೆಯಲಾರದು ಎನ್ನುವುದೂ ಅಷ್ಟೇ ಸತ್ಯ. ಜಾತಿಗಳಲ್ಲಿ ಉನ್ನತವಾದವರ ಆಚಾರ_ವಿಚಾರ, ಉಡುಗೆ_ತೊಡುಗೆ, ನಡೆ_ನುಡಿ, ಜೀವನಕ್ರಮ (ಒಟ್ಟಾರೆ ಸಂಸ್ಕೃತಿ) ವನ್ನು ಅನುಕರಿಸುತ್ತಾರೆ. _ಇದನ್ನು ಎಂ ಎನ್ ಶ್ರೀನಿವಾಸರೂ ಸಹ ನಿರೂಪಿಸುತ್ತಾರೆ.

ಇದು ಕೇವಲ ಸಂಸ್ಕೃತೀ ಅನುಕರಣೆಯೇ ಹೊರತು, ಜಾತಿ ಅನುಕರಣೆಯಲ್ಲ. ಆದ್ದರಿಂದ ನಮ್ಮ ಪೂರ್ವಜರು ಮೇಲಿನವರ ಸಂಸ್ಕೃತಿಯನ್ನು ಅಳವಡಿಸಿಕೊಂಡು ಬದಲಾದರೇ ಹೊರತು ಜಾತಿಯಿಂದಲ್ಲ. ನಮ್ಮಲ್ಲಿ ಧರ್ಮೀಕರಣ ನಡೆದರೂ ಜಾತೀಕರಣ ನಡೆಯಲಾಗಿಲ್ಲ. ಏಕೆಂದರೆ ಅದು ಜಾತಿ ಜನರನ್ನು ಸೃಷ್ಟಿಸುತ್ತದೆ ಹೊರತು ಜನರ ಜಾತಿಯನ್ನಲ್ಲ. ಉನ್ನತ ಜೀವನ ಮಟ್ಟಕ್ಕಾಗಿ ಸಂಸ್ಕೃತೀಕರಣಕ್ಕೆ ಒಳಗಾಗುವುದು ಹಳೆಯದಾಯಿತು. ಈಗ, ಸೌಲಭ್ಯಕ್ಕಾಗಿ ಜಾತೀಕರಣ ವಿರುದ್ಧ ದಿಕ್ಕಿನಲ್ಲಿ ಚಲಿಸುವ ಅಪಾಯವಿದೆ.

ಅಂದರೆ ಕೆಳವರ್ಗಗಳಲ್ಲಿ ಸಿಗುವ ಸರ್ಕಾರೀ ಮನ್ನಣೆ ಮತ್ತು ಸೌಲಭ್ಯಗಳನ್ನು ಪಡೆಯುವ ಸಲುವಾಗಿ, ಮೇಲುಜಾತಿಯವರು ಕೆಳವರ್ಗಸೇರಲು ಆಸಕ್ತರಾದಂತಿದೆ. ಇದು ಕೇವಲ ಬಾಯಿಮಾತಿನಿಂದ ಹೇಳಿದ್ದಲ್ಲ ರಾಜಕೀಯ ಮುಖಂಡರೂ ಸೇರಿದಂತೆ ಜನಸಾಮಾನ್ಯರೂ ಸಹ ಹೀಗೆ ಮಾಡಿ ಸಿಕ್ಕಿಹಾಕಿಕೊಂಡ ಒಂದು ದೊಡ್ಡ ಪಟ್ಟಯೇ ಇದೆ. ಒಂದು ಮಗು ಭೂಮಿಯ ಮೇಲೆ ಕಣ್ತೆರೆದಿದೆ ಎಂದರೆ, ಅದು ಯಾವುದಾದರೂ ಒಂದು ಜಾತಿಯನ್ನು ಅಂಟಿಸಿಕೊಂಡೇ ಇರುವಂತೆ ಕಾಣುತ್ತಿದೆ.

ಇದರಿಂದ ಹೊರಗುಳಿದು ಆ ಮಗು ಸಹಜವಾಗಿ ಬೆಳೆಯಲಾರದು. ಆದ್ದರಿಂದ ಇಡೀ ವಿಶ್ವ ಬೆದಕಾಡಿದರೂ ಜಾತಿಯಿಂದ ಹೊರಗುಳಿದ ಒಬ್ಬ ಸಹಜ ವ್ಯಕ್ತಯೂ ಸಿಗಲಾರ ಎಂಬಂತಾಗಿದೆ. ಅನಾಥರು ಎನ್ನುವವರೂ ಇದಕ್ಕೆ ಹೊರತಾದವರಲ್ಲ. ನಾವು ಇಂಥದ್ದೇ ಜಾತಿಯವರು ಎಂದು ಹೇಳುವ ಮುನ್ನವೇ, ಅವನು ಈ ಜಾತಿಯವನು ಎಂದು ಮುಂಚಿತವಾಗಿಯೇ ಬರೆಯಲಾಗಿರುತ್ತದೆ ಅಥವಾ ನಿರ್ಧರಿಸಲಾಗಿರುವಂತಾಗಿದೆ ಎನ್ನುವುದನ್ನು ಮರೆಯಬಾರದು.    
comments powered by Disqus
Top