ಜಾತಿ ಸಂವಾದ - ಅಭಿಪ್ರಾಯ 7

ಜಾತಿ-ಕಲೆ: ಇನ್ನಷ್ಟು ಸಂಗತಿ
_ಡಾ|ಟಿ.ಗೋವಿಂದರಾಜು

ಆಧುನಿಕ ಸಂದರ್ಭದ ಜನಪದ ಕಲೆಗಳು ಒಂದೆಡೆ ಜಾತಿಯನ್ನು ಮೀರುತ್ತಾ,ಮತ್ತೊಂದು ಕಡೆ ಪ್ರಭಾವೀಜಾತಿ/ವರ್ಗದ ತೆಕ್ಕೆಗೆ ಬೀಳುತ್ತಿರುವುದು ವಿಪರ್ಯಾಸದ ಬೆಳವಣಿಗೆ ಎನಿಸಿದೆ. ಜನಪದ ಕಲಾಪ್ರದರ್ಶನಗಳಿಗೆ ಸಿಗುತ್ತಿರುವಭಾರೀ ಅವಕಾಶಗಳಿಂದಾಗಿ ನಗರದವರೂ,ಮಡಿವಂತರೂ, ಉನ್ನತಾಧಿಕಾರಿಗಳ ಪ್ರತಿಷ್ಠಿತ ಮಹಿಳೆಯರೂ ನಾನು-ನಾನುಎಂದು ಮುನ್ನುಗ್ಗಿ ಗ್ರಾಮೀಣ ಕಲೆಗಳನ್ನು ಬಾಚಿಕೊಳ್ಳುತ್ತಿದ್ದಾರೆ!

ಅಲ್ಲಿ ಈಗ ಜಾತಿ ಸೂತಕವಿಲ್ಲ.ಆದರೆ, ಈ ಕಲಿತವರ-ವಶೀಲಿ ಗುಣ, ಜಾಣತನಗಳಿಂದಾಗಿ ಹಳ್ಳಿಗಾಡಿನ ಸಹಜ ಕಲಾವಿದರು ನಗರ ವೇದಿಕೆಗಳಲ್ಲಿ ಅವಕಾಶವಂಚಿತರಾಗಿದ್ದಾರೆ;ಅಸ್ಪೃಶ್ಯರಾಗುತ್ತಿದ್ದಾರೆ! ಕೆಳವರ್ಗದವರಿಂದ ಬೆಳೆದ ಬಯಲಾಟ, ಮೇಲ್ವರ್ಗದವರ ಕುಶಲತೆಯಲ್ಲಿ ಬೆಳಗಿ "ಯಕ್ಷಗಾನ"ಆಗಿ,ಜಾತಿ ಬದ್ಧವಾಗಿರುವುದನ್ನು ಕಲಾವಿದ ಸಂಜೀವ ಸುವರ್ಣ, ಹಾಗೂ ವಿದ್ವಾಂಸ ಡಾ|ಪಾಲ್ತಾಡಿ ಅವರು ತಮ್ಮ ಅನುಭವದ ಹಿನ್ನೆಲೆಯಲ್ಲಿ ವಿವರಿಸಿದ್ದಾರೆ.

ಈ ಯಕ್ಷಗಾನದ ವರ್ಗ ಮೇಲ್ಮೆ ಇನ್ನೂ ಯಾವ ಮಟ್ಟಕ್ಕೆ ಹೋಗಿದೆ ಎಂದರೆ,ಅದು ಇತರ ಯಕ್ಷಗಾನ ರೂಪಗಳನ್ನೂ ಜಾತಿಸೂತಕವಾಗಿಯೇ ನೋಡುತ್ತಿದೆ. ಜಾನಪದದಿಂದ ತಾನು ಬಹಳ ಮೇಲೆ- ಎಂಬುದನ್ನು ಸಾಧಿಸಲು ಯಕ್ಷಗಾನಕ್ಕೇ ಪ್ರತ್ಯೇಕ ಅಕಾಡಮಿ ಮಾಡಿಸಿದ್ದು, ಅದೂ ಹೋಗಲಿ,ಎಂದರೆ, ಯಕ್ಷಗಾನದ ಇತರ ಕಲಾ ಪ್ರಕಾರಗಳಾದ ಮೂಡಲಪಾಯ,ಸಣ್ಣಾಟಾದಿಗಳನ್ನು ಒತ್ತಾಯಕ್ಕಾಗಿ ಒಲ್ಲದ ಮನಸ್ಸಿನಿಂದಲೇ ಇದೀಗ ಒಳ ಬಿಟ್ಟುಕೊಂಡಿರುವುದು,ಅದ್ಭುತ ರಂಗರೂಪಗಳಾದ ಗೊಂಬೆಯಾಟ, ಹಗಲುವೇಷಾದಿ ಕಲೆಗಳನ್ನು ಬಾಗಿಲಿಗೂ
ಸೇರಿಸದಿರುವುದು...

ಇವೆಲ್ಲಾ ಜೀವಂತ ನಿದರ್ಶನಗಳು(ಯಕ್ಷಗಾನ-ಎಂಬುದು ಒಂದು ದೇಶೀ ಸಂಗೀತ-ನೃತ್ಯ ಪದ್ಧತಿ.ಮೂಡಲಪಾಯ,ದೊಡ್ಡಾಟದಂತಹ ಬಯಲಾಟಗಳಲ್ಲದೆ, ಶನಿಮಹಾತ್ಮೆ ಕಥಾಕಾಲಕ್ಷೇಪವೂ ಯಕ್ಷಗಾನ ಪ್ರಕಾರಕ್ಕೇ ಸೇರಿದ್ದೆಂಬುದು ಒಳಹೊಕ್ಕು ಅಧ್ಯಯನ ಮಾಡಿದವರಿಗೆ ಸುಲಭವಾಗಿ ಅರಿವಾಗುತ್ತದೆ. ಬಯಲಲ್ಲಿ ನಡೆಯುತ್ತಿದ್ದುದರಿಂದ ಬಯಲಾಟ ಎಂಬ ಇನ್ನೊಂದು ಹೆಸರು ಯಕ್ಷಗಾನಕ್ಕೆ ಬಂದಿದೆ,ಅಷ್ಟೆ.
ಡಾ| ಶಿವರಾಮಕಾರಂತರು ಬರೆದ ಪುಸ್ತಕದ ಹೆಸರು "ಯಕ್ಷಗಾನಬಯಲಾಟ"ಎಂದೇ ಇರುವುದನ್ನು ಬಹಳ ಜನ ಅದೇಕೋ ಮರೆತಿದ್ದಾರೆ!)

೨.ಬೆಂಗಳೂರು ಸುತ್ತಿನ ಕೆಲವು ಹಳ್ಳಿಗಳಲ್ಲಿ ಸಾಮಾನ್ಯವಾಗಿ ತಲೆಮಾರಿನಿಂದ ಬಂದಂತೆ ತಮಟೆ ವಾದನ
ಎಡಗೈಯ್ಯವರದಾದರೆ(ಮಾದಿಗರು), ಹರೆವಾದನ,ಕೊಂಬು ಊದುವುದು ಬಲಗೈಯ್ಯವ(ಹೊಲೆಯರು)ರದು.ಸಂಭಾವನೆ
ವಿಚಾರಕ್ಕೆ ಜಾತ್ರೆ,ಉತ್ಸವಗಳಲ್ಲಿ ವಿವಾದಗಳಾದುದುಂಟು.ಚನ್ನರಾಯಪಟ್ಟಣ ತಾ.ಕಿನ ಹಿರೀಸಾವೆ ಚೌಡಮ್ಮನ ಜಾತ್ರೇಲಿ
ಹೊಲೆಯರ ಹರೆ ದೇವರನ್ನು ಚೌಡಮ್ಮನ ಉಯ್ಯಾಲೆಯಲ್ಲಿ ಕೂರಿಸಿ ತೂಗುವ ಆಚರಣೆಯೂ ಇದೆ.

ಕಾರಣಾಂತರದಿಂದ ದಲಿತರು ತಾವು ತಮಟೆ ಬಡಿಯುವುದಿಲ್ಲ- ಎಂದು ಹಠ ಮಾಡಿದಾಗಿನಿಂದ ಆ ಊರ ಒಕ್ಕಲಿಗ ತರುಣರೇ ತಮಟೆ ವಾದನ ಕಲಿತಿದ್ದಾರೆ(ತಮಟೆ ವಾದನ ಕಲೆಗೆ ಪ್ರತಿಷ್ಠಿತ ವೇದಿಕೆ,ಭಾರೀ ಸಂಭಾವನೆ ಅಥವಾ ಉದ್ಯೋಗಾವಕಾಶ ಸಿಗುವುದಾದರೆ ಆಗ
ಇನ್ನೂ ಮೇಲಿನ ಜಾತಿಯವರೂ ತಮಟೆಗೆ ಕೈ ಹಾಕಿ ಅದನ್ನೂ ಅಭಿಜಾತ ಕಲಾ ವರ್ಗಕ್ಕೆ ಸೇರಿಸಿಕೊಂಡು ಮೂಲ
ದಲಿತರನ್ನೇ ಹೊರಗಿಡುವುದು ಅಚ್ಚರಿಯದೇನಲ್ಲ.

ವೀರಗಾಸೆ ಕಲೆ ಅಪ್ಪಟ ವೀರಶೈವರದೇ ಎಂಬಂತೆ ಪ್ರಸಿದ್ಧವಾಗಿದೆ.ಇದೇ ರೀತಿ ಹಾಡಿ-ಕುಣಿವ ಕುಣಿಯೋ
ಕುರುಬರನ್ನೂ ನೋಡಿದ್ದೇನೆ.ಇತರ ಕೆಲವು ಕೆಳವರ್ಗದವರಲ್ಲೂ ಇದನ್ನು ಹೋಲುವ ಕುಣಿತಗಳಿವೆ.ಈ ಸಂಬಂಧ ಹೆಚ್ಚಿನ
ಶೋಧನೆ ಆಗಬೇಕಾಗಿದೆ. ಅಂತೂ ಈಗ ಸಾರ್ವಜನಿಕವಾಗಿ ಕಾಣುತ್ತಿರುವಂತೆ ವೀರಶೈವರ ವೀರಗಾಸೆ ಅತಿ
ಮುಂಚೂಣಿಯಲ್ಲಿದೆ.ಸರ್ಕಾರದ ಪ್ರಶಸ್ತಿ ಪುರಸ್ಕಾರಗಳೂ ಅವರಿಗೇ ಹೆಚ್ಚು ದೊರೆತಿವೆ. ಈಚೆಗೆ ಶಾಲಾಕಾಲೇಜುಗಳಲ್ಲಿ
ಜಾತಿ,ಲಿಂಗ ಭೇದವಿರದೆ ಕಲಿತು ಪ್ರದರ್ಶಿಸುತ್ತಿರುವವರು ಹೆಚ್ಚಿರುವುದರಿಂದ ಕೆಲವೇ ದಿನಗಳಲ್ಲಿ ವೀರಗಾಸೆ,ಕಂಸಾಳೆ,ಡೊಳ್ಳು
ಕುಣಿತಗಳು ಜಾತಿಮೀರಿದ ಕಲೆಗಳಾಗುವುದರಲ್ಲಿ ಅನುಮಾನವಿಲ್ಲ.
comments powered by Disqus
Top