ಜಾತಿ ಸಂವಾದ - ಅಭಿಪ್ರಾಯ 9

ಜಾತಿ ಒಂದು ಅಭಿಪ್ರಾಯ
-ಹೆಚ್.ಎಂ.ಗುರುಶಿದ್ದಯ್ಯ, ಕಡ್ಲಬಾಳು. ಬಳ್ಳಾರಿ

ಜಾತಿ ಎಂಬುವ ಶಬ್ಧ ಹುಟ್ಟಿದ್ದೆ ಆರ್ಯರು ಭಾರತಕ್ಕೆ ಬಂದಾಗಿನಿಂದವೆಂದು ಹೇಳಬಹುದು. ಜಾತಿ ಮೂಲವನ್ನು ಕೆದಕುತ್ತ ಹೋದಂತೆ ಪ್ರಬಲರು, ಚಾಣಾಕ್ಷರು, ಆರ್ಥಿಕವಾಗಿ ಸಬಲರು ಬಹುಸಂಖ್ಯಾತರಾದವರು ಆಡಳಿತದ ಯಂತ್ರವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ದುರ್ಬಲರನ್ನು ತಮ್ಮ ಚಾಕರಿಗೆ ಒಳಪಡಿಸಿಕೊಂಡಿರುವುದು ಇತಿಹಾಸಗಳಿಂದ ತಿಳಿಯುತ್ತದೆ. ಆದರೆ ಕ್ರಿ.ಶ ಪೂರ್ವದಿಂದಲೂ ನಮ್ಮ ಭಾರತದಲ್ಲಿ ದುರ್ಬಲರ ರಕ್ಷಣೆಗಾಗಿ ಜಾತಿ ನಿರ್ಮೂಲನೆಗಾಗಿ ಸಮಾಜವಾದಿಗಳು, ಸಂತರು, ಮಹಾತ್ಮರು ಹೋರಾಡಿದ್ದಾರೆ. ಉದಾ : ಬೌದ್ಧ, ಜೈನ, ಚಾರ್ವಾಕ್, ಬಸವ ಮುಂತಾದ ಮಹಾತ್ಮರು ಸಂಘರ್ಷಕ್ಕಾಗಿ ತಮ್ಮದೇ ಸಂಘ, ಸಮುದಾಯಗಳನ್ನು ಕಟ್ಟಿ ಹೋರಾಟ ಮಾಡಿರುವರು. 

ನಂತರ ಬಂದ ವಿದೇಶಿಯರು ಇದರ ಲಾಭ ಪಡೆದು ಮತಾಂತರ ಹೆಸರಿನಲ್ಲಿ ದುರ್ಬಲರನ್ನು ಬಳಸಿಕೊಂಡರು. ಆದರೆ ಜಾತೀಯತೆ ಮಾತ್ರ ನಮ್ಮ ಭಾರತದಲ್ಲಿ ಹಾಗೇ ಉಳಿಯಿತು. ಸ್ವತಂತ್ರ್ಯ ಹೋರಾಟದ ಜೊತೆಗೆ ದಲಿತರ ಏಳ್ಗೆಗಾಗಿ ಮಹಾತ್ಮಗಾಂಧೀಜಿಯವರು ತಮ್ಮ ಸಂಘರ್ಷಕ ಬಲದೊಡನೆ ಶ್ರಮಿಸಿದರು. ದಲಿತ ಸಮುದಾಯಗಳ ಏಳ್ಗೆಗಾಗಿ ಡಾ|| ಅಂಬೇಡ್ಕರ್‌ರವರು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಸ್ವಾತಂತ್ರ್ಯ ಬಂದ ನಂತರ ಸರಕಾರ ಯಂತ್ರ ಹಿಡಿದವರು ಅಲ್ಪಸಂಖ್ಯಾತರು.

ಮತ್ತು ದಲಿತ ಸಮುದಾಯದ ಏಳ್ಗೆಗಾಗಿ ಕಾನೂನಿನ ಬೆಂಬಲದೊಂದಿಗೆ ಹಿಂದುಳಿದ ಸಮುದಾಯಗಳವರಿಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಮತ್ತು ಉದ್ಯೋಗದಲ್ಲಿ ಸರಕಾರ ಹೆಚ್ಚಿನ ಪ್ರಮಾಣದಲ್ಲಿ ಮೀಸಲಾತಿಯನ್ನು ಕಲ್ಪಿಸಿರುತ್ತದೆ ಮತ್ತು ತದನಂತರ ಬಂದ ಸರ್ಕಾರಗಳು ಕೂಡ ದುರ್ಬಲವರ್ಗದವರಿಗೆ ವಿಶೇಷ ಪ್ಯಾಕೇಜ್‌ಗಳನ್ನು ನೀಡುತ್ತಾ ಅವರನ್ನು ಮುಖ್ಯ ವಾಹಿನಿಗೆ ತಂದಿರುತ್ತವೆ. ಆದರೆ ಮುಂದುವರಿದ ಜಾತಿಯವರೆಂಬ ಸಮುದಾಯಗಳಲ್ಲಿ ಕೂಡ ಹಲವಾರು ಉಪ ಪಂಗಡಗಳಿದ್ದು ಆ ಸಮುದಾಯದಲ್ಲಿಯೇ ಅಲ್ಪಸಂಖ್ಯಾತರಾಗಿ ದುರ್ಬಲರಾಗಿ ಮುಂದುವರಿದವರೆಂಬ ಹಣೆ ಪಟ್ಟಿಯೊಂದಿಗೆ ಬೀದಿಗೆ ಬಿದ್ದಿದ್ದಾರೆ. ಮುಂದುವರಿದ ಸಮುದಾಯದವರು ಬಹುಸಂಖ್ಯಾತರಾದವರು ಇತ್ತೀಚಿಗೆ ತಮ್ಮ ತಮ್ಮ ಸಮುದಾಯದಲ್ಲಿಯೇ ಒಬ್ಬ ಒಬ್ಬರು ಗುರುಮಠಗಳನ್ನು ನಿರ್ಮಿಸಿಗೊಂಡು ತಮ್ಮವರಿಗೇನೆ ವಿಶೇಷ ಸ್ಥಾನಮಾನ ಕಲ್ಪಿಸುತ್ತಾ ದೊಡ್ಡ ಸಮುದಾಯಗಳ ಉಪಜಾತಿಯವರಿಂದ ಓಟು ಪಡೆದು ನಂತರ ತಮ್ಮ ದೊಡ್ಡ ಸಂಘ ಸೇನೆಯ ಜನರಿಗೆ ಸೌಲಭ್ಯ ಕಲ್ಪಿಸುತ್ತಾ ಒಳ ದುರ್ಬಲರನ್ನು ಶೋಧಿಸಲು ಅವಕಾಶ ಕಲ್ಪಿಸಿರುವರೇನೋ ಎನ್ನಿಸುತ್ತದೆ.

ಇಂದಿನ ಜಾತಿಯ ರಾಜಕಾರಣದಲ್ಲಿ ತಮ್ಮ ತಮ್ಮ ಸಮುದಾಯದ ಓಟುಗಳ ಮತ ಬ್ಯಾಂಕಿನ ಆಧಾರದಲ್ಲಿ ಅಧಿಕಾರ ಪ್ರಾಪ್ತವಾಗುವ ರಾಜಕೀಯ ನೀತಿಯಿಂದಾಗಿ ಓಟಿನ ಬಲವುಳ್ಳ ಸಮುದಾಯಗಳವರೆಗೆ ಪ್ರಾತಿನಿದ್ಯ ಲಭಿಸುತ್ತದೆ. ಅಂಥ ಸಮುದಾಯದವರು ಸಾಮಾನ್ಯವಾಗಿ ತಮ್ಮ ಜಾತಿ ಮುಖಂಡರ ಆಶ್ರಯದಲ್ಲಿ ಸರಕಾರಿ ಸವಲತ್ತುಗಳನ್ನು ಪಡೆದು ತಾವೇ ಅದರ ಲಾಭ ಹೊಂದುವರು. ಇನ್ನುಳಿದ ಒಳ ಪಂಗಡಗಳ ಅಲ್ಪ ಸಂಖ್ಯಾತರಾದ ಜನರಿಗೆ ಯಾವ ಸೌಲಭ್ಯವೂ ದಕ್ಕುವುದಿಲ್ಲ ಮತ್ತು ಇವರ ಅಳಲನ್ನು ಯಾರೂ ಪರಿಗಣಿಸುವುದಿಲ್ಲ. ಏಕೆಂದರೆ ಓಟಿನ ಬಲವಿಲ್ಲದೆ ಒಳ ಪಂಡಗಳ ಆರ್ಥಿಕ ಸ್ಥಿತಿಗತಿ, ಸಾಮಾಜಿಕ ಸ್ಥಿತಿಗತಿ ದೊಡ್ಡ ಸಮುದಾಯದವರಿಗೆ ಬೇಕಾಗಿರುವುದಿಲ್ಲ.

ಅವರದೇ ಸಮಾಜದ ಜನರ ಒತ್ತಡಗಳು, ಅವರನ್ನೆ ಕಟ್ಟಿ ಹಾಕಿ ಬಿಟ್ಟಿರುತ್ತವೆ. ಹೀಗಾಗಿ ಮುಂದುವರಿದ ಜಾತಿಯವರೆಂಬ ಸಮುದಯಗಳ ಒಳಪಂಗಡಗಳ ಸ್ಥಿತಿ ಅಧೋಗತಿ. ಇವರ ಮತಗಳು ಬೇರೆ ಬೇರೆ ಪ್ರದೇಶದಲ್ಲಿ ಹರಿದು ಹಂಚಿ ಹೋಗಿರುತ್ತವೆ. ಹೀಗಾಗಿ ಮತ ಯಾಚಕರಿಗೆ ಇವರ ಅವಲಂಬನೆ ಕೇವಲ ಮತಕ್ಕೆ ಮಾತ್ರ ಸೀಮಿತವೆನ್ನಿಸುತ್ತದೆ. ಅದು ಅಲ್ಲದೆ ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಬಂದಾಗ ರೂಪಿಸಿದ ಕಾನೂನು ನೀತಿ ನಿಯಮಾವಳಿಗಳು ಇಂದಿನ ಸಾಮಾಜಿಕ ಉನ್ನತಿಯ ಕಾಲದಲ್ಲಿ ಕೂಡ ಅದೇ ಮಾನದಂಡದಿಂದ ಪರಿಗಣಿಸುತ್ತಿದ್ದು ಆರ್ಥಿಕವಾಗಿ ಹಿಂದುಳಿದವರಿಗೆ ಬಹಳ ಸಂಕಟಕ್ಕೆ ತಂದಿದೆ. ೬೫ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದರು. ನಮ್ಮ ದೇಶದಲ್ಲಿ ಆರ್ಥಿಕವಾಗಿ ಮಾನದಂಡದ ಪರಿಮಾಣವನ್ನು ಯಾರೂ ಯೋಚಿಸುವುದಿಲ್ಲ. ದುರ್ಬಲ ವರ್ಗಗಳಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಬಲರು ಇರುವರು. ಮುಂದುವರಿದ ವರ್ಗಗಳೆನಿಸಿಕೊಂಡ ವರ್ಗಗಳಲ್ಲಿ ಅಲ್ಪ ಸಮುದಾಯದವರೂ, ಆರ್ಥಿಕ ದುರ್ಬಲರು, ಶೈಕ್ಷಣಿಕ ದುರ್ಬಲರು, ಸಾಮಾಜಿಕ ದುರ್ಬಲರು ಇರುವರು. ಭಾರತ ಹಲವಾರು ಸಮುದಾಯಗಳ ಹಲವಾರು ಉಪ ಜಾತಿಗಳ ಅಂತರಿಕ ವರ್ಷಗಲ ಕಲಸುಮೇಲೋಗರವಾಗಿದೆ. ಆದ್ದರಿಂದ ಸಾಮಾಜಿಕ, ತಜ್ಞರು, ಪ್ರತಿಯೊಂದು ದುರ್ಬಲರಿಗೂ ಸಾಮಾಜಿಕ ನ್ಯಾಯ ಸಿಗಬೇಕೆಂದು ಯೋಚಿಸಬೇಕೆನಿಸುತ್ತದೆ. 
comments powered by Disqus
Top