ಜಾತಿ ಸಂವಾದ - ಅಭಿಪ್ರಾಯ 10

ಸಂಸ್ಕೃತಾನುಕರಣದಿಂದ ಮೇಲ್ಜಾತಿ ಮಟ್ಟಕ್ಕೇರುವ ಯತ್ನ...
ಹಾರೋಹಳ್ಳಿ ರವೀಂದ್ರ, ಮೈಸೂರು

ಸಾಂಪ್ರದಾಯಿಕ ಸಾಮಾಜಿಕ ವ್ಯವಸ್ಥೆಯ, ಜಾತಿಪದ್ಧತಿಯ ಏಣಿ ಶ್ರೇಣಿಯಲ್ಲಿ ಕೆಳಜಾತಿಯ ಜನರು, ಇತರ ಕೀಳು ಪಂಗಡಗಳು, ಆದಿವಾಸಿ ಪಂಗಡಗಳಿಗೆ ಸೇರಿದ ಜನರು ತಮ್ಮ ಸಂಪ್ರದಾಯಗಳು, ಸಂಸ್ಕಾರಗಳು, ರೀತಿ ನೀತಿಗಳು, ವಿಧಿ ವಿಧಾನಗಳು ಮೊದಲಾದವುಗಳನ್ನು ಮೇಲ್ಜಾತಿಯವರು ರೂಪಿಸಿರುವ ಆಚರಣೆಗಳನ್ನು ಅನುಸರಿಸುತ್ತಿರುವುದು ಬಹಳ ಹಿಂದಿನಿಂದಲೂ ವ್ಯಾಪಕವಾಗಿ ಗುರುತಿಸಬಹುದಾಗಿದೆ. ಕೆಳಸ್ಥರಗಳಲ್ಲಿನ ಜನರು ಉಚ್ಚಜಾತಿಯವರೆಂದು ಪರಿಗಣಿಸಲ್ಪಟ್ಟಿದ್ದ ಜನರನ್ನು ಅನುಸರಿಸಲು ಯತ್ನಿಸಿರುವುದನ್ನು, ಅನುಸರಿಸುತ್ತಿರುವುದನ್ನು ಕಾಣಬಹುದಾಗಿದೆ.

ಹಿಂದೂ ಸಮಾಜದ ರಚನಾ ಆಧಾರವೇ ಜಾತಿಯಾಗಿದ್ದು ಅದನ್ನು ಅರ್ಥಮಾಡಿಕೊಳ್ಳದೆ ಸಂಸ್ಕೃತಾನುಕರಣವನ್ನು ಅರಿಯುವುದು ಸಾಧ್ಯವಿಲ್ಲ. ಸಾಮಾನ್ಯವಾಗಿ ಜಾತಿ ವ್ಯವಸ್ಥೆಯ ಏಣಿ ಶ್ರೇಣಿಯಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸುವ ಜಾತಿಗಳು, ಮಧ್ಯದ ಮತ್ತು ಕೆಳಗಿನ ಜಾತಿಗಳಿಗಿಂತಲೂ ಹೆಚ್ಚು ಪ್ರಮಾಣದಲ್ಲಿ ಸಂಸ್ಕೃತಾನುಕರಣಗೊಳ್ಳುತ್ತವೆ. ಇದು ಕೆಳಜಾತಿ ಹಾಗೂ ಆದಿವಾಸಿ ಬುಡಕಟ್ಟುಗಳು ಸಂಸ್ಕೃತಾನುಕರಣಗೊಳ್ಳಲು ಕಾರಣವಾಗುತ್ತಿದೆ. ಕೆಳಜಾತಿಗಳು ಮೇಲ್ಜಾತಿಗಳ ಸಂಪ್ರದಾಯ, ಆಚಾರ-ವಿಚಾರ, ರೀತಿ-ನೀತಿ, ವಿಧಿ ವಿಧಾನಗಳನ್ನು ಅನುಸರಿಸಲು ಉತ್ಸುಕವಾಗಿದ್ದು ಸತತವಾಗಿ ಪ್ರಯತ್ನಿಸುತ್ತಿವೆ.

ಕೆಳಜಾತಿಗಳು ಮೇಲು ಜಾತಿಗಳ ಸಂಪ್ರದಾಯ, ಆಚಾರ, ವಿಚಾರ, ಜೀವನ ಕ್ರಮ ಮೊದಲಾದವುಗಳನ್ನು ಅನುಸರಿಸುವುದರ ಬಗ್ಗೆ ಅನೇಕ ಅಡೆತಡೆಗಳು, ಅಡ್ಡಿ ಆತಂಕಗಳು ಇರುವುದಾದರೂ ಮೇಲು ಜಾತಿಗಳ ಜನರ ಸಂಪ್ರದಾಯ, ಆಚಾರ ವಿಚಾರ, ಜೀವನ ಕ್ರಮ ಮೊದಲಾದವು ಇಡೀ ಹಿಂದೂ ಸಮಾಜದಾದ್ಯಂತ ಹರಡಿರುವುದರ ಜೊತೆಗೆ ಅದರ ಹೊರ ಅಂಚಿನ ಆದಿವಾಸಿ ಪಂಗಡಗಳಿಗೂ ವ್ಯಾಪಿಸಿರುವುದು ಒಂದು ವಿಶೇಷ ಸಂಗತಿಯಾಗಿರುವುದು. ಯಾವುದೇ ಜಾತಿ ಉನ್ನತ ಸ್ಥಾನ ಬಯಸುವುದಾದರೆ, ಉನ್ನತ ಜಾತಿಗಳ ಸಂಪ್ರದಾಯ, ಆಚಾರ ವಿಚಾರ, ರೀತಿ ನೀತಿ, ಜೀವನ ಕ್ರಮವನ್ನು ತಮ್ಮದಾಗಿಸಿಕೊಳ್ಳುವುದಕ್ಕಿಂತ, ಸುಲಭ ವಿಧಾನವಿರಲಾರದು. ಇದರಿಂದಾಗಿ ಪ್ರತಿಯೊಂದು ಜಾತಿಯು ಅದರ ಮುಂದಿನ ಉನ್ನತ ಜಾತಿಗಳು ಬಹಳ ಮಟ್ಟಿಗೆ ಬ್ರಾಹ್ಮಣ ಜಾತಿ ಸಂಪ್ರದಾಯ, ಆಚಾರ, ವಿಚಾರ, ರೀತಿ ನೀತಿಗಳನ್ನು ತನ್ನಲ್ಲಿ ಅಳವಡಿಸಿಕೊಳ್ಳಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಪ್ರಯತ್ನಿಸುತ್ತಾ ಹೋಗುತ್ತವೆ. 

ಜಾತಿ ವ್ಯವಸ್ಥೆಯಲ್ಲಿರುವ ಏಣಿ ಶ್ರೇಣಿಯ ಜೊತೆಗೆ ವಿವಿಧ ಜಾತಿ ಜನರು ಅನುಸರಿಸುವ ವೃತ್ತಿ, ಅವರು ಸೇವಿಸುವ ಆಹಾರ, ಅವರು ಅನುಸರಿಸುವ ಜೀವನಕ್ರಮ ಮೊದಲಾದವುಗಳು ಸಹ ಪ್ರತ್ಯೇಕ ಏಣಿಶ್ರೇಣಿಗಳ ರೂಪಧರಿಸುತ್ತವೆ. ಚರ್ಮ ಹದಮಾಡುವುದು, ಚಪ್ಪಲಿ ಹೊಲಿಯುವುದು, ಕಟುವಾಗಿ ಕೆಲಸ ಮಾಡುವುದು, ಹೆಂಡ ಇಳಿಸುವುದು ಮೊದಲಾದವು ಜಾತಿಯನ್ನು ಕೆಳಗಿನ ಸ್ಥಾನಕ್ಕೆ ಇಳಿಸುತ್ತವೆ. ಹಂದಿಯ ಮಾಂಸ, ದನದ ಮಾಂಸ, ಎಮ್ಮೆಯ ಮಾಂಸವನ್ನು ತಿನ್ನುವವರ ಸ್ಥಾನವು, ಮೀನು, ಕುರಿ ಮತ್ತು ಮೇಕೆಯ ಮಾಂಸ ತಿನ್ನುವವರ ಸ್ಥಾನಕ್ಕಿಂತ ಕಳಪೆಯಾದುದು. ದೇವತೆಗಳಿಗೆ ಪಶುಬಲಿ ಕೊಡುವ ಜಾತಿಗಳ ಸ್ಥಾನವು ಕೇವಲ ಹೂವು ಮತ್ತು ಹಣ್ಣುಗಳನ್ನು ಅರ್ಪಿಸುವವರ ಸ್ಥಾನಕ್ಕಿಂತ ಕೀಳಾದುದ್ದು. ಈ ಬಗೆಯ ವಿವಿಧ ವೃತ್ತಿಗಳು ಜನರ ಸ್ಥಾನಮಾನ ಕೀಳಾಗಲು ಕಾರಣವಾಗಿದ್ದು, ಕಾಲಾಂತರದಲ್ಲಿ ಜನರು ಉನ್ನತ ಸ್ಥಾನಮಾನವನ್ನಲಂಕರಿಸಿದ ಬ್ರಾಹ್ಮಣರ ನಡೆನುಡಿ, ಊಟ ಉಪಚಾರ, ವೇಷಭೂಷಣ ಮತ್ತು ಇತರ ಜೀವನ ಕ್ರಮವನ್ನು ಅನುಕರಿಸುವುದು ಸಮಾಜದಾದ್ಯಂತ ವ್ಯಾಪಕವಾಗಿ ಹರಡುತ್ತಿದೆ.

ಕೆಳಜಾತಿಗಳ ಜನರು ಉನ್ನತ ಸ್ಥಾನಮಾನವುಳ್ಳ ಮೇಲುಜಾತಿಯ ಜನರನ್ನು ಅನುಕರಿಸುವುದು ತನ್ಮೂಲಕ ತಾವು ಮೇಲು ಅಂತಸ್ಥನ್ನು ಪಡೆಯಲು ಶ್ರಮಿಸುವುದು ಒಂದು ಸಾಮಾನ್ಯ ಅಂಶವಾಗಿರುವುದು. ಈ ಪ್ರಕ್ರಿಯೆಯಲ್ಲಿ ಕೆಳಜಾತಿಯ ಜನರು, ಮೇಲು ಜಾತಿಯ ಜನರು ಅನುಸರಿಸುವ ಅನೇಕ ಕ್ರಿಯಾವಿಧಿಗಳು ಅಥವಾ ವಿಧಿಕರ್ಮಗಳನ್ನು ಅನುಸರಿಸಲು ಆರಂಭಿಸಿದರು. ಇದರಿಂದಾಗಿ ಕೆಳಜಾತಿಯವರ ಪರಂಪರಾಗತ ಕ್ರಿಯಾವಿಧಿಗಳಲ್ಲಿ ಮಾರ್ಪಾಡು ಕಂಡುಬಂದಿತು. ಬ್ರಾಹ್ಮಣರ ಕ್ರಿಯಾವಿಧಿಗಳನ್ನು ಮಾಡುವುದು, ಅವರು ಆಚರಿಸುವ ಹಬ್ಬ ಹರಿದಿನಗಳನ್ನು ಆಚರಿಸುವುದು, ಕನ್ಯಾದಾನವನ್ನು ಶಾಸ್ತ್ರೋಪ್ತವಾಗಿ ಮಾಡುವುದು, ಪುರೋಹಿತರನ್ನು ಕರೆಸಿ ಮಂತ್ರ ಪಠಿಸಲು ಏರ್ಪಾಟು ಮಾಡುವುದು ಕೆಳಜಾತಿಗಳಲ್ಲಿಯೂ ಕೂಡ ವ್ಯಾಪಕವಾಗಿ ಕಂಡುಬರುತ್ತಿವೆ. 

ವಿವಾಹದ ವಿಷಯದಲ್ಲಿಯೂ ಕೂಡ ಇಂಥಹುದೇ ಅನುಕರಣೆಗಳು ನಡೆಯುತ್ತಿವೆ. ಬ್ರಾಹ್ಮಣರಲ್ಲಿ ವಿವಾಹವು ಒಂದು ಪವಿತ್ರ ಬಂಧನವಾಗಿದ್ದು ವಿವಾಹ ವಿಚ್ಛೇಧನಕ್ಕೆ ಅವಕಾಶವಿರಲಿಲ್ಲ. ವಿವಾಹವು ಒಂದು ಧಾರ್ಮಿಕ ಕರ್ತವ್ಯವೆನಿಸಿತ್ತು. ವಿವಾಹಿತನಿಗೆ ಅವಿವಾಹಿತನಿಗಿಂತ ಹೆಚ್ಚಿನ ಮನ್ನಣೆ ಸಿಗುತ್ತಿತ್ತು. ಏಕಪತ್ನಿ ವ್ರತಸ್ಥನಾಗಿರುವುದು ಹೆಚ್ಚು ಅಪೇಕ್ಷಣೀಯವಾಗಿತ್ತು. ಈ ಬಗೆಯ ವೈವಾಹಿಕ ವಿಧಿ ವಿಧಾನಗಳಿಗೂ, ಕೆಳಜಾತಿಯವರು ಮೂಲತಃ ಅನುಸರಿಸುತ್ತಿದ್ದ ವಿಧಿ ವಿಧಾನಗಳಿಗೂ, ಸಾಕಷ್ಟು ವ್ಯತ್ಯಾಸಗಳಿದ್ದು ಕೆಳಜಾತಿಯ ಜನರು ಜಾತಿಯ ಏಣಿ ಶ್ರೇಣಿಯಲ್ಲಿ ಮೇಲಿನ ಅಂತಸ್ಥನ್ನು ಪಡೆಯುವ ಹಂಬಲದಲ್ಲಿ ಮೇಲುಜಾತಿಯವರ ವೈವಾಹಿಕ ಕಟ್ಟುಪಾಡುಗಳನ್ನು ತಾವು ಅನುಸರಿಸಲು ಉಪಕ್ರಮಿಸುತ್ತಿದ್ದಾರೆ. 

ಮೇಲುಜಾತಿ ಜನರು ತಮ್ಮ ಪೂರ್ವಜರ ಶ್ರಾದ್ಧ ಕರ್ಮಗಳನ್ನು ಮಾಡುತ್ತಿದ್ದರು. ವಂಶದ ಉದ್ಧಾರದ ಬಗ್ಗೆ ಹೆಚ್ಚಿನ ಮಹತ್ವವಿರುವುದು. ವಂಶದ ಪಾವಿತ್ರ್ಯತೆಯನ್ನು ಕಾಪಾಡುವುದರ ಬಗ್ಗೆ ಹೆಚ್ಚಿನ ಆಸೆ ಇದೆ. ತನಗಿಂತ ಹತ್ತಿ ಮಂದಿ ಹಿರಿಯರು, ನಂತರದ ಹತ್ತು ಮಂದಿ ಕಿರಿಯರು ಮತ್ತು ತನ್ನನ್ನು ಕೂಡಿ ಇಪ್ಪತ್ತೊಂದು ಮಂದಿಯನ್ನು ಶ್ರೇಷ್ಠ ವಿವಾಹ ಜನ್ಯ ಜೇಷ್ಠ ಪುತ್ರನು ಉದ್ಧಾರ ಮಾಡುವನು. ಧರ್ಮನಿಷ್ಠರಾದ ಪಿತೃಗಳು ಇಂತಹ ವಿವಾಹದ ಸತ್ಸಂತತಿಯನ್ನು ಅದರಲ್ಲಿಯೂ ಪುರುಷ ಸಂತತಿಯನ್ನು ಅಪೇಕ್ಷಿಸುವವರು. ಪುತ್ ಎಂಬ ನರಕದಿಂದ ರಕ್ಷಿಸುವವನೇ ಪುತ್ರನು. ಪುತ್ರ, ಪೌತ್ರ, ಪ್ರಪೌತ್ರ ಇದರಿಂದಲೇ ಕುಲವು ಸ್ಥಿರವಾಗಿ ಶ್ರೇಯಸ್ಸು ಪಡೆಯುವುದು. ಪುತ್ರನನ್ನು ಪಡೆಯುವುದು ಧಾರ್ಮಿಕ ಸಂಸ್ಕೃತಿಯ ಅಗತ್ಯ ಎಂಬ ಭಾವನೆ ಬೆಳೆಯಿತು. ಇದರಿಂದಾಗಿ ಹೆಣ್ಣು ಮಕ್ಕಳನ್ನು ಗಂಡು ಮಕ್ಕಳಿಗಿಂತ ಕೀಳಾಗಿ ಕಾಣುವ ಪರಿಪಾಟ ಉಂಟಾಯಿತು.

ಮಕ್ಕಳಿಗೆ ತಮ್ಮ ಉಪಜಾತಿಯಲ್ಲಿಯೇ ಯೋಗ್ಯ ವರವನ್ನು ಹುಡುಕಿ ವಿವಾಹ ಮಾಡುವ ಕಾರ್ಯವು ದಿನ ದಿನಕ್ಕೆ ಕಠಿಣವಾಗುತ್ತಿರಲಾಗಿ ಈ ಭಾವನೆ ದಿನವೂ ಬದಲಾಯಿತು. ಇವೇ ಮೊದಲಾದ ಭಾವನೆಗಳು, ಕಲ್ಪನೆಗಳು, ನಂಬಿಕೆಗಳು ಮೇಲ್ಜಾತಿಯವರಲ್ಲಿ ಬಹಳವಾಗಿದ್ದವು. ಆದರೆ ಕೆಳಜಾತಿಯವರಲ್ಲಿ ಗಂಡು, ಹೆಣ್ಣು, ಸಂತತಿಯ ಬಗ್ಗೆ ಹೆಚ್ಚಿನ ತಾರತಮ್ಯ ಭಾವನೆ ಅಷ್ಟಾಗಿ ಇರಲಿಲ್ಲ. ಮಗನನ್ನು ಪಡೆಯುವುದು ಅಪೇಕ್ಷಣೀಯವಾಗಿದ್ದರೂ ಮಗಳನ್ನು ಪಡೆಯುವುದು ಅನಪೇಕ್ಷಣೀಯವೇನೂ ಆಗಿರಲಿಲ್ಲ. ಕೆಲವು ವಿಷಯಗಳಲ್ಲಿ ಅವರಿಗೆ ಹೆಣ್ಣು ಮಕ್ಕಳ ಬಗ್ಗೆ ವಿಶೇಷ ಆಸಕ್ತಿಯೂ ಇತ್ತು. ಮಗಳನ್ನು ಋತುಮತಿಯಾಗುವುದಕ್ಕೆ ಮುನ್ನವೇ ವಿವಾಹ ಮಾಡಬೇಕೆಂಬ ವಿಧಿಯೂ ಇರಲಿಲ್ಲ. ಪಿತೃಗಳ ಶ್ರಾದ್ಧ ಕಾರ್ಯ ಬಹಳಮಟ್ಟಿಗೆ ಕುಟುಂಬದ ಎಲ್ಲ ಹಿರಿಯರಿಗೆ ಸೇರಿದಂತೆ ವರ್ಷದಲ್ಲಿ ಒಂದು ದಿನ ಆಚರಿಸಲ್ಪಡುತ್ತಿತ್ತು. ಕೆಳಜಾತಿಯವರು ಮೇಲ್ಜಾತಿಯವರನ್ನು ಅನುಕರಣೆ ಮಾಡುವ ಪ್ರಯತ್ನದಲ್ಲಿ ಮೇಲುಜಾತಿಯವರನ್ನೆ ಅನುಸರಿಸಲು ಆರಂಭಿಸಿದ ಫಲವಾಗಿ ಪುತ್ರನನ್ನೆ ಹಡೆಯುವ ಪರಿಪಾಠ ಉಂಟಾಯಿತು ಹಾಗೂ ಮಾತಾಪಿತೃಗಳು ಸತ್ತಾಗ ಹಾಲು ತುಪ್ಪ ಎರೆಯುತ್ತಿದ್ದ ಕೆಳಜಾತಿಯವರು ಶ್ರಾದ್ಧ ಕಾರ್ಯವನ್ನು ಮಾಡಲು ಪ್ರಾರಂಭಿಸಿದ್ದಾರೆ. ಇಷ್ಟೆಲ್ಲಾ ಬದಲಾವಣೆ ಗೋಚರಿಸಿದ್ದೆ ಮೇಲ್ಜಾತಿಯ ಅನುಕರಣ ಸಂಸ್ಕೃತಿಯ ಫಲವಾಗಿ.

ಮೇಲ್ಜಾತಿಯವರ ಸಂಸ್ಕೃತಿಯನ್ನು ಕೆಳಜಾತಿಯವರು ಅನುಸರಿಸುತ್ತಾರೆ ಎಂಬುದಕ್ಕೆ ಪ್ರಮುಖವಾದ ಉದಾಹರಣೆಯೆಂದರೆ, ರಮಾನುಜಚಾರ್ಯರು ಮೇಲುಕೋಟೆಗೆ ಬಂದಾಗ ಪ್ರತಿಯೊಂದು ಜಾತಿಗೂ ವೈಷ್ಣವ ದೀಕ್ಷೆ ಕೊಡಲು ಪ್ರಾರಂಭಿಸಿದರು. ಇದನ್ನು ತಿಳಿದ ಕೆಳಜಾತಿಗಳಾದ, ಒಕ್ಕಲಿಗರು ಮತ್ತು ಹೊಲೆಯರು ಕೆಲವೊಂದಷ್ಟು ಜನ ನಾವು ಮೇಲ್ಜಾತಿಯವರಾಗಬೇಕೆಂಬ ಉದ್ದೇಶದಿಂದ, ರಮಾನುಜಚಾರ್ಯರ ಬಳಿ ಹೋಗಿ ವೈಷ್ಣವ ದೀಕ್ಷೆ ಪಡೆದು, ವೈಷ್ಣವ ಸಂಸ್ಕೃತಿಯನ್ನು ಅನುಸರಿಸಲು ಪ್ರಾರಂಭಿಸಿದರು. ಕೊನೆಗೆ ವೈಷ್ಣವದವರೇ ಇವರನ್ನು ಅಸ್ಪೃಶ್ಯರನ್ನಾಗಿ ಕಾಣಲು ಪ್ರಾರಂಭಿಸಿದ ಮೇಲೆ ಪುನಃ ವೈಷ್ಣವ ಸಂಸ್ಕೃತಿಯನ್ನು ಬಿಟ್ಟು ಮೂಲ ಸಂಸ್ಕೃತಿಗೆ ಬಂದರು. ಆದರೆ ಮೂಲ ಸಂಸ್ಕೃತಿಯ ಜನರು ಇವರನ್ನು ಸಮುದಾಯದಿಂದ ದೂರವಿಟ್ಟಾಗ ತ್ರಿಶಂಕು ಸ್ಥಿತಿಯಲ್ಲಿ ನಿಂತರು. ಅವರೇ ದಾಸೊಕ್ಕಲಿಗ ಹಾಗೂ ದಾಸೊಲಯರಾಗಿದ್ದಾರೆ. ಇಂದಿಗೂ ಕೂಡ ಅವರು ವೈಷ್ಣವರಂತೆ ಮೂರು ನಾಮ ಬಳಿದುಕೊಂಡು ಅದೇ ಸಂಸ್ಕೃತಿಯನ್ನು ಆಚರಿಸುತ್ತಾರೆ ಎಂಬುದನ್ನು ನಾವು ಹಳೇ ಮೈಸೂರು ಪ್ರಾಂತ್ಯದಲ್ಲಿ ಕಾಣಬಹುದು. 

ಸಂಸ್ಕೃತಿ ಎಂಬುದು ಯಾರ ಸ್ವತ್ತಲ್ಲ ಅದು ಯಾವ ಜಾತಿಗೂ ಸೀಮಿತವಾದುದಲ್ಲ. ಆದರೆ ಮೇಲ್ಜಾತಿಯವರು ಹುಟ್ಟುಹಾಕುವ ಸಂಸ್ಕೃತಿಯನ್ನು ಕೆಳಜಾತಿಯವರು ಬೇಗ ಅನುಕರಿಸಿಬಿಡುತ್ತಾರೆ. ಯಾಕೆಂದರೆ ಅದಕ್ಕೆ ಬಲವಾದ ಕಾರಣವಿದೆ. ಕೆಳಜಾತಿಯವರು ತಮ್ಮ ಮೂಲ ಸಂಸ್ಕೃತಿಯನ್ನು ಆಚರಿಸುವುದರಿಂದ ಮೇಲ್ಜಾತಿಯವರು ಗೌರವಿಸದ ಕಾರಣವಾಗಿ, ಅವರು ಮೇಲ್ಜಾತಿಯ ಸಂಸ್ಕೃತಿಯ ಕಡೆ ವಾಲುತ್ತಿದ್ದಾರೆ ಎಂಬುದಕ್ಕೆ ಯಾವುದೇ ಸಂದೇಹವಿಲ್ಲ. ಕೆಳಜಾತಿಯವರಲ್ಲಿ ಸತ್ಯನಾರಾಯಣ ಪೂಜೆ, ವರಮಹಾಲಕ್ಷ್ಮಿ ಪೂಜೆ, ಹೋಮ, ಹವನ, ಯಜ್ಞ ಇನ್ನಾವುದೇ ಸಂಸ್ಕೃತಿಗಳು ಇರಲಿಲ್ಲ. ಇವೇನಿದ್ದರು ಬ್ರಾಹ್ಮಣರ ಸಂಸ್ಕೃತಿ. ಬ್ರಾಹ್ಮಣರಲ್ಲಿ ಪ್ರಮುಖವಾದದ್ದು ಅಗ್ನಿ ಸಂಸ್ಕೃತಿ, ಆದರೆ ಕೆಳಜಾತಿಯವರಲ್ಲಿ ಈ ಸಂಸ್ಕೃತಿಗಳಿರಲಿಲ್ಲ. ಕೆಳಜಾತಿಯವರಲ್ಲಿ ಹೆಚ್ಚಾಗಿ ಜಲಸಂಸ್ಕೃತಿಯನ್ನು ಕಾಣಬಹುದು.

ಆದರೆ ಕೆಳಜಾತಿಯವರು ಕೂಡ ಅಗ್ನಿ ಸಂಸ್ಕೃತಿಯನ್ನು ಅನುಸರಿಸುತ್ತಿದ್ದಾರೆ. ಅದು ಹೆಚ್ಚಾಗಿ ಶಿಕ್ಷಣವಂತರು ಹಾಗೂ ಉದ್ಯೋಗವಂತ ಕೆಳಜಾತಿಯವರು ಅನುಸರಿಸುತ್ತಿದ್ದಾರೆ. ಯಾಕೆ ನೀವು ಮೂಲ ಸಂಸ್ಕೃತಿಯನ್ನು ಬಿಟ್ಟು ಅಗ್ನಿ ಸಂಸ್ಕೃತಿಯನ್ನು ಆಚರಿಸುತ್ತಿದ್ದೀರಿ? ಎಂದು ಕೇಳಿದರೆ ಎಲ್ಲರೂ ಮಾಡುತ್ತಾರಲ್ಲ ಅದಕ್ಕೆ ನಾವು ಮಾಡುತ್ತೇವೆ ಎಂದು ಹೇಳುತ್ತಾರೆ. ನನಗೆ ಬೇಕಾದ ಆಪ್ತರೊಬ್ಬರನ್ನು ಕೇಳಿದಾಗ ಅವರು ಹೇಳಿದ್ದು ಇಷ್ಟೆ, ನಾವು ಬ್ರಾಹ್ಮಣರ ಸಂಸ್ಕೃತಿಗಳಾದ ಸತ್ಯನಾರಾಯಣ ಪೂಜೆ, ವರಮಹಾಲಕ್ಷ್ಮಿ ಪೂಜೆ, ಹೋಮ, ಹವನ, ಯಜ್ಞ ಮುಂತಾದವುಗಳನ್ನು ಮಾಡುವುದರಿಂದ ನಮಗೆ ಂಡಿeಚಿದಲ್ಲಿ ವಿಶೇಷ ಗೌರವ ಸಿಗುತ್ತದೆ. ನಮ್ಮನ್ನು ಸರಿಸಮಾನವಾಗಿ ಕಾಣುತ್ತಾರೆ ಎಂದು ಹೇಳಿದರು.

ಅಂದರೆ ಮೂಲ ಸಂಸ್ಕೃತಿಯನ್ನು ಆಚರಿಸುವವರನ್ನು ಅಸ್ಪೃಶ್ಯರನ್ನಾಗಿ ಕಾಣುತ್ತಿರುವುದರಿಂದ ಹಾಗೂ ತಮ್ಮ ಸಂಸ್ಕೃತಿಯ ಬಗೆ ತಮಗೆ ಕೀಳರಿಮೆ ಇರುವುದರಿಂದ ಮೇಲ್ಜಾತಿಯವರ ಸಂಸ್ಕೃತಿಯನ್ನು ಅಪ್ಪಿಕೊಳ್ಳುತ್ತಿದ್ದಾರೆ. ಮೇಲ್ಜಾತಿಯವರ ಸಂಸ್ಕೃತಾನುಕರಣದಿಂದ ನಾವು ಮೇಲ್ಜಾತಿಯವರ ಮಟ್ಟಕ್ಕೆ ಹೋಗುತ್ತೇವೆ ಎಂಬ ಮನೋಭಾವನೆಯಿಂದ ಕೆಳಜಾತಿಯವರು ಮೇಲ್ಜಾತಿಯವರ ಸಂಸ್ಕೃತಿಯನ್ನು ಅನುಸರಿಸುತ್ತಿದ್ದಾರೆ ಎಂಬುದರಲ್ಲಿ ಯಾವುದೇ ಉರುಳಿಲ್ಲ. 
comments powered by Disqus
Top