ಜಾತಿ ಸಂವಾದ - ಅಭಿಪ್ರಾಯ 12

ಜಾತಿ ಮತ್ತು ಕಲೆ
ನಿರೂಪಣೆ: ನಾಗರಾಜ್ ಹೆತ್ತೂರು, ಹಾಸನ

ಜಾತಿಯಲ್ಲಿ ಮೇಲ್ವರ್ಗದವರಾಗಿದ್ದರೂ ದಲಿತ ಸಂಘರ್ಷ ಸಮಿತಿಯ ಸಕ್ರೀಯ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿರುವ ಕೆ.ಟಿ. ಶಿವಪ್ರಸಾದ್ ಅಂತರಾಷ್ಟ್ರೀಯ ಚಿತ್ರ ಕಲಾವಿದರು. ಜಾತಿ ವ್ಯವಸ್ಥೆ ಬಗ್ಗೆ ಅಪಾರ ಅಸಹನೆ, ಆಕ್ರೋಶ ಇಟ್ಟುಕೊಂಡಿರುವ ಕೆ.ಟಿ., ಯಾರಾದರೂ ಅವರ ಮನೆಗೆ ಹೋದರೆ ಮನೆ ಹೊರೆಗೆ  ಚಪ್ಪಲಿ ಬಿಟ್ಟು ಬಂದರೂ ಸಹಿಸುವರಲ್ಲ. ‘ಮಾದಿಗರನ್ನು ಆಚೆ ಬಿಟ್ಟು ಅವಮಾನ ಮಾಡಬೇಡಿ ಎನ್ನುತ್ತಾರೆ.

ಜಾತಿ ವ್ಯವಸ್ಥೆಯನ್ನು ನೋಡುವ ಬಗ್ಗೆ ಅವರ ಆಲೋಚನಾ ಕ್ರಮ ಹೀಗಿದೆ. ‘ನಾವೆಲ್ಲಾ ಲೋಕದೃಷ್ಠಿ ಅಥವಾ ಲೋಕ ಮೀಮಾಂಸೆ ಬಗ್ಗೆ ಯೋಚಿಸಬೇಕಿದೆ, ಚರ್ಚಿಸಬೇಕಿದೆ. ನಾವು ಹೊರ ಪ್ರಪಂಚದ ಬಗ್ಗೆ ಯೋಚಿಸಬೇಕಿದೆ. ಹೊರಪ್ರಪಂಚ ಎಂದರೆ ಏನು..? ಎಂಬುದನ್ನು ಮೊದಲು ತಿಳಿದುಕೊಳ್ಳಬೇಕಿದೆ. ಉದಾ: ಬಹುತೇಕರು  ಹೊರಪ್ರಪಂಚವನ್ನು ದೇವರು ಸೃಷ್ಠಿಸಿದ್ದಾನೆ ಎಂದು ನಂಬುತ್ತಾರೆ. ಇನ್ನು ಕೆಲ ವಿಜ್ಞಾನಿಗಳು ಹೊರಪ್ರಪಂಚ ಎನ್ನುವುದು ದೇವರಿಂದ ಆಗಿರುವುದಲ್ಲ ಅದು ವೈಜ್ಞಾನಿಕ (ಸೈಂಟಿಫಿಕ್) ಆಗಿ ರೂಪುಗೊಂಡಿರುವುದು ಎನ್ನುತ್ತಾರೆ.

ಎಲ್ಲಕ್ಕೂ ಮಿಗಿಲಾಗಿ ಆಧುನಿಕ ವಿಜ್ಞಾನ (ಮಾಡ್ರನ್ ಸೈನ್ಸ್)  ಹೊರಲೋಕದ ಬಗ್ಗೆ ಏನು ಹೇಳುತ್ತಿದೆ..? ವಿಜ್ಞಾನಕ್ಕೆ ಹೊಂದಿಕೊಳ್ಳುವಂತೆ ಲೋಕದೃಷ್ಠಿ ಇದೆಯೇ..? ಇದ್ದರೆ ಅದು ಯಾವುದು ಎಂದು.. ಎಂದು ಗುರುತಿಸಿ ಈ ನಿಟ್ಟಿನಲ್ಲಿ ಚರ್ಚೆ ನಡೆಯುತ್ತಿದೆ. ಈ ಸತ್ಯಾಂಶ ತಿಳಿದುಕೊಂಡಲ್ಲಿ ಜಾತಿ ವ್ಯವಸ್ಥೆಯ ಅಮೂಲಾಗ್ರ ಚಿತ್ರಣ ಸಿಗಲಿದೆ. ಈ ನಿಟ್ಟಿನಲ್ಲಿ ಚರ್ಚೆ ನಡೆದಲ್ಲಿ ಜಾತಿ ಸಂವಾದ ನಡೆಯಲಿ ಎಂಬುದು ನನ್ನ ಅನಿಸಿಕೆ ಎನ್ನುತ್ತಾರೆ.
‘ನಮ್ಮಲ್ಲಿ ಜಾತಿ ವ್ಯವಸ್ಥೆ ೪೦ ಶತಮಾನಗಳಿಂದಲೂ ಇದೆ. ಇದನ್ನು ಹಿಂದೂ ಲೋಕದೃಷ್ಠಿ (ಫಿಲಾಸಫಿ) ಹೇಳುತ್ತಿದೆ. 

ಜಾತಿಯನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದೇವೆ. ಇದನ್ನು ತೊಡೆದು ಹಾಕಲು ಸಾಧ್ಯವಿಲ್ಲ. ಹಿಂದೂ ಧರ್ಮದಲ್ಲಿ ಇದು ದೊಡ್ಡ ಮಟ್ಟದಲ್ಲಿದೆ. ಯಾಕೆ ಎಂದರೆ..? ಜನಸಂಖ್ಯೆಯಲ್ಲಿ ದೊಡ್ಡ ಧರ್ಮ. ದಲಿತರು ಹಿಂದೂ ಧರ್ಮದಲ್ಲಿದ್ದಾರೆ. ಇದನ್ನು ಅಲ್ಲಗೆಳೆಯಲು ಸಾಧ್ಯವೇ ಇಲ್ಲ. ಜಾತಿ ಪದ್ಧತಿಯಿಂದಾಗಿಯೇ ಸೃಜನಶೀಲತೆ, ಚಲನಶೀಲತೆ, ಸಮಾನತೆ ಕಾಣೆಯಾಗಿದೆ. ಎಲ್ಲವನ್ನೂ ಜಾತಿಯಿಂದ ನೋಡಲಾಗುತ್ತಿದೆ. ಎಂ.ಎಫ್ ಹುಸೇನ್ ಏನಾದರು, ಹಿಂದೂ ಧರ್ಮ ದೇವತೆಗಳ ಬೆತ್ತಲೆ ಚಿತ್ರ ಬಿಡಿಸಿದ ಎಂದು ದೇಶ ಬಿಟ್ಟು ಓಡಿಸಿದರು. ಆದರೆ ನಮ್ಮ ಹಿಂದೂ ದೇವಾಲಯಗಳಲ್ಲಿ ಗಂಡಸು-ಹೆಂಗಸು, ರಾಜಾಧಿರಾಜರು ಸಂಭೋಗ ನಡೆಸುತ್ತಿರುವ ಚಿತ್ರಗಳಿವೆ. ಸಾರ್ವಜನಿಕರಿಗೆ ನೋಡಲು ಸಿಕ್ಕುತ್ತವೆ.  ಆದರೆ ಅದು ವಿಷಯ ಆಗುವುದಿಲ್ಲ. ಧಾರ್ಮಿಕ ಕಾರಣಕ್ಕಾಗಿ ಹುಸೇನ್ ಅವರನ್ನು ಓಡಿಸುತ್ತಾರೆ.
 
ಒಬ್ಬ ಶೂದ್ರ ಕುವೆಂಪು ಹೊರತಾಗಿ ಜ್ಞಾನಪೀಠ ಪ್ರಶಸ್ತಿ ಎಷ್ಟು ಜನಕ್ಕೆ ಸಿಕ್ಕಿದೆಉಳಿದವರ‍್ಯಾರು..? ಕಂಬಾರರು ಬ್ರಾಹ್ಣಣ ಅಲ್ಲದಿದ್ದರೂ ಬ್ರಾಹಣರ ಜತೆ ಇರುತ್ತಿದ್ದರು. ಹಾಗಾಗಿ ಪ್ರಶಸ್ತಿ ಸಿಕ್ಕಿತು. ಹೀಗೆ ಜಾತಿ ವ್ಯವಸ್ಥೆ ಸಾಹಿತ್ಯ, ಕಲೆ, ಸಿನಿಮಾ, ಯಾವುದರಲ್ಲಿ ಇಲ್ಲ..? ಎಲ್ಲೆಲ್ಲೂ ಇದೆ. ನಮ್ಮ ವ್ಯವಸ್ಥೆಯಲ್ಲಿ ಜಾತಿ ಹೊರತಾಗಿ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ವಿಜ್ಞಾನಿಕ ಮನೋಭಾವ, ಚಲನೆ ಈ ಲೋಕದೃಷ್ಠಿಕೋನದಿಂದ ಮಾತ್ರ ಜಾತಿಯ ದೃಷ್ಠಿಕೋನ ಬದಲಾಗಲು ಸಾಧ್ಯ 

ನನ್ನ ಪ್ರಕಾರ ಚಲನೆಯನ್ನೇ ಕಳೆದುಕೊಂಡಿರುವ ಹಿಂದೂ ಧರ್ಮ ಸೇರಿದಂತೆ ವಿಜ್ಞಾನವನ್ನು ಒಪ್ಪಿಕೊಳ್ಳದ ಧರ್ಮಗಳೆಲ್ಲವೂ ಕೊಳೆತು ನಾರುತ್ತಿರುವ ಧರ್ಮಗಳು. ವಿಜ್ಞಾನವನ್ನು ಎಲ್ಲಿಯವರೆಗೆ ಯಾವುದೇ ಧರ್ಮ ಒಪ್ಪಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಜಡವಾಗಿರುತ್ತವೆ. ವ್ಯವಸ್ಥೆಯೂ ನಿಂತಲ್ಲಿಯೇ ನಿಂತಿರುತ್ತದೆ.
 
(ಜಾತಿ ಸಂವಾದ ಕುರಿತಂತೆ ಈ ವಾರ ತಾವು ನೀಡಿರುವ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಅಂತರಾಷ್ಟ್ರೀಯ ಚಿತ್ರ ಕಲಾವಿದರಾದ ಕೆ.ಟಿ. ಶಿವಪ್ರಸಾದ್ ಅವರನ್ನು ಮಾತನಾಡಿಸಿ ಅಭಿಪ್ರಾಯ ಕಳುಹಿಸಿಸಲಾಗಿದೆ  )
comments powered by Disqus
Top