ಜಾತಿ ಸಂವಾದ - ಅಭಿಪ್ರಾಯ 13

ಕಲೆಗಳು ಕೂಡ ಜಾತಿಯ ಚರ್ಮವನ್ನು ಅಂಟಿಸಿಕೊಂಡಿವೆಯೇ...
ಡಾ.ಜಗದೀಶ ಕೆರೆನಳ್ಳಿ. ಸಂಡೂರು.

ಈಗ ಕಲೆಗಳು ಕೂಡ ಜಾತಿಯ ಚರ್ಮವನ್ನು ಅಂಟಿಸಿಕೊಂಡು ಚರ್ಚೆಯಾಗುತ್ತಿವೆ. ಇಲ್ಲಿಯವರೆಗೆ ಕುಲಮೂಲಗಳು ಚರ್ಚೆಯಾಗುತ್ತಿದ್ದವು, ಈಗ ಕಲೆಮೂಲಗಳ ಚರ್ಚೆಯು ನಡೆಯುತ್ತಿದೆ. ಯೋಗೀಶ ಅವರು ’ವೀರಗಾಸೆ ಕುಣಿತ ಲಿಂಗಾಯತರ ಜಾನಪದ ಕಲಾ ಪ್ರಕಾರವಲ್ಲ ಅದು ಕುರುಬರ ಜಾನಪದ ಸಂಪ್ರದಾಯ ಹಾಗೂ ಕಲಾಪ್ರಕಾರ’. ಎಂದು ಹೇಳಿದ್ದಾರೆ. ಅಲ್ಲದೆ ಹಿಂದೆ ( ಅಂದರೆ ಯಾವ ಶತಮಾನದಲ್ಲಿ ಎನ್ನುವುದು ತಿಳಿಸಿ) ಈ ವೀರಗಾಸೆ ಕುಣಿತ ಹಳೆ ಮೈಸೂರು ಪ್ರಾಂತ್ಯಕ್ಕೆ ಮಾತ್ರ ಸೀಮಿತವಾಗಿತ್ತು ಎನ್ನುತ್ತಾರೆ.

ಕುರುಬರ ದೇವಸ್ಥಾನದಲ್ಲಿ ಪೂಜೆ ಮಾಡುವ ಅರ್ಚಕರು ಲಿಂಗ ಕಟ್ಟಿಕೊಂಡು ಹಬ್ಬ ಹರಿದಿನಗಳಲ್ಲಿ, ಹರಿಸೇವೆಗಳಲ್ಲಿ ಈ ಕಾರ್ಯವನ್ನು ಕೈಗೊಳ್ಳುತ್ತಾರೆ. ಎನ್ನುತ್ತಾ ವೀರಭದ್ರನನ್ನು ಹೊಗಳುವ ದಕ್ಷಯಜ್ಞದ ಕೆಲವು ಪ್ರಸಂಗದ ಒಡಪುಗಳನ್ನು /ಕಟಿಗೆಗಳನ್ನು ಹೇಳಿ ವೀರಭದ್ರನನ್ನು ಸೌಮ್ಯವಾಗಿಸುತ್ತಾರೆ. ನಂತರ ೮೮ಕುಲದ ಒಡಪುಗಳ ಕೆಲವು ಸನ್ನಿವೇಶಗಳನ್ನು ವೀರಗಾಸೆ ಕಟ್ಟಿದ ವೀರಮಕ್ಕಳು ಹೇಳುತ್ತಾರೆ. ಇದು ವೀರಗಾಸೆ ಕುಣಿತ ಅಥವಾ ವೀರಮಕ್ಕಳ ಕುಣಿತ’ ಎಂದು ಈ ಕಲೆಯ ಪದ್ದತಿಯನ್ನು ವಿವರಿಸಿದ್ದಾರೆ. 

  ಮೇಲಿನ ಹೇಳಿಕೆಗೆ ಪ್ರತಿಕ್ರಿಯಿಸುವುದಾದರೆ. ಮೂಲತಹ ವೀರಗಾಸೆ ಶೈವಾರಾಧನೆಯಾಗಿದೆ. ಕರ್ನಾಟಕದಲ್ಲಿ ಅಪಾರ ಜನಪ್ರಿಯತೆ ಪಡೆದ ದೈವಗಳಲ್ಲಿ ವೀರಭದ್ರ ದೇವರು ಒಬ್ಬ. ಮುಖ್ಯವಾಗಿ ಶೈವ ಮತ್ತು ವೀರಶೈವರ ಆರಾಧ್ಯ ಪುರುಷ. ದಕ್ಷಬ್ರಹನನ್ನು ಸಂಹಾರ ಮಾಡಲು ಶಿವನ ಅಣತಿಯಂತೆ ಜನ್ಮತಾಳಿದವನು ವೀರಭದ್ರ. ಕರ್ನಾಟಕದಲ್ಲಿ ಹಲವು ರೀತಿಯಲ್ಲಿ ಆರಾಧನೆ ಗೊಳ್ಳುತ್ತಿದ್ದಾನೆ. ಪುರಾಣಗಳಾದ ’ಕೂರ್ಮಪುರಾಣ’, ’ಭಾಗವತಪುರಾಣ’, ಕನ್ನಡ ಕಾವ್ಯಗಳಾದ ಕ್ರಿ.ಶ.೧೨೦೦ರ ರಾಘವಾಂಕನ ’ವೀರೇಶ ಚರಿತೆ’, ಕ್ರಿ.ಶ.೧೬೫೦ರ ರಂಗನಾಥನ ’ವೀರಭದ್ರ ವಿಜಯ’ ಕೃತಿಗಳಲ್ಲಿ ವೀರಭದ್ರನ ಕಥೆಯ ಉಲ್ಲೇಖ ಸಿಗುತ್ತದೆ. 

ವೀರಭದ್ರನ ಪ್ರೀತಿಗಾಗಿ ’ಗುಗ್ಗಳ ಸೇವೆ’ ಯನ್ನು ನೆಡೆಸುವ ವೀರಶೈವ ಭಕ್ತರು ವೀರಭದ್ರ ಕುಣಿತ, ವೀರಗಾಸೆ, ಕಾಸೆ ಕುಣಿತ, ಪುರವಂತರ ಕುಣಿತ ಮುಂತಾಗಿ ಕಲಾ ಸೇವೆಯನ್ನು ಅರ್ಪಿಸುವ ಪರಿಪಾಟವಿದೆ. ದಕ್ಷಿಣ ಕರ್ನಾಟಕದಲ್ಲಿ ’ಕಾಸೆಕುಣಿತ’ ಎಂದು, ಇದನ್ನೇ ಉತ್ತರ ಕರ್ನಾಟಕದಲ್ಲಿ ’ಪುರವಂತರ ಕುಣಿತ’ ಎಂದು ಕರೆಯುತ್ತಾರೆ. ಹಲಗೆ ಕುಣಿತ, ಲಿಂಗದ ಬೀರನ ಕುಣಿತ, ಕಟಕಿ ಹೇಳುವುದು, ಇತ್ಯಾದಿ ಅಂಕಿತಗಳು ಇದಕ್ಕೆ ಪರ್ಯಾಯವಾದವು. ಇವೆಲ್ಲಕ್ಕೂ ’ವೀರಗಾಸೆ’ ಯಲ್ಲಿ ಹೇಳುವ ಕಥೆಯೇ ಹಿನ್ನೆಲೆ. ವೇಷ ಭೂಷಣಗಳಲ್ಲಿ ಮಾತ್ರ ಸ್ವಲ್ಪ ವ್ಯತ್ಯಾಸ ಕಂಡುಬರುತ್ತದೆ. 

ಕಾಲದ ದೃಷ್ಠಿಯಿಂದ ಗುರುತಿಸುವುದಾರೆ ವೀರಭದ್ರ ಕುಣಿತ , ಪುರವಂತಿಕೆ, ವೀರಗಾಸೆ ಎಂದು ಕ್ರಮವಾಗಿ ಹೇಳಬಹುದು. ಹಾಗೆಯೇ ಕಾಸೆ ಕುಣಿತವು ಪ್ರಾಚೀನವಾಗಿದ್ದರೂ ಅದು ಶೈವಪಂಥಕ್ಕೆ ಬದ್ಧವಾದದು. ಕಾಸೆ ಕುಣಿತ, ವೀರಗಾಸೆ, ಪುರವಂತಿಕೆ, ಈ ಮೂರು ಕಲೆಗಳಲ್ಲಿ ವ್ಯತ್ಯಾಸಕ್ಕಿಂತ ಸಾಮ್ಯತೆ ಇರುವುದೇ ಹೆಚ್ಚು. ಆದರೆ ಯೋಗೀಶ ಅವರು ಹೇಳುವಂತೆ ವೀರಗಾಸೆ ಕುಣಿತ ಅಥವಾ ವೀರಮಕ್ಕಳ ಕುಣಿತ ಒಂದೇ ಅಲ್ಲಾ. ವೀರಮಕ್ಕಳ ಕುಣಿತ ಪ್ರಧಾನವಾಗಿ ಮಾರಿ ಹಬ್ಬದಲ್ಲೂ, ಕೆಲವು ಕಡೆ ಇನ್ನಿತರ ಗ್ರಾಮದೇವತೆಯರ ಅಂದರೆ ಬ್ಯಾಲಕಮ್ಮ, ಕರಿಯಮ್ಮ, ಚೌಡಮ್ಮ, ಉಡಿಸಲಮ್ಮ, ಅಲ್ಲದೆ ಗಂಡು ದೇವರಾದ ಭೈರವನ ಹಬ್ಬದಲ್ಲೂ ನಡೆಯುವ ಒಂದು ಆಚರಣೆ. ಇದು ಮೈಸೂರು, ಮಂಡ್ಯ ಮತ್ತು ತುಮಕೂರು ಜಿಲ್ಲೆ ಗಳಲ್ಲಿ ಕಂಡು ಬರುತ್ತದೆ. ’ಚಕ್ರಾದಿ ಬಳೆ’ ಎಂಬ ವಾದ್ಯ ಇದಕ್ಕೆ ಪೂರಕವಾಗಿ ಬಳಸಲಾಗುತ್ತದೆ. ಮಣ್ಣಿನ ಮಡಿಕೆಗೆ ಮೇಕೆ ಚsರ್ಮವನ್ನು ಬಿಗಿದು ಇದನ್ನು ತಯಾರಿಸಲಾಗಿರುತ್ತದೆ. ಕೆಲವು ಕಡೆ ಕಂಚಿನಿಂದ ಮಾಡಿದ ಚಕ್ರಾದಿಬಳೆಯು ಕಾಣಸಿಗುತ್ತದೆ. ಈ ಕುಣಿತಕ್ಕೆ ’ಬಳೆ’ ಹಾಕುವುದು ಎಂದು ಹೇಳುತ್ತಾರೆ. ಕೆಂಪು ಬಣ್ಣದ ಪೈಜಾಮ, ಮಾಸಲು ಕೆಂಪಿನ ಜುಬ್ಬ ,ತೆಲೆಗೆ ಪೇಟ, ನಡುವಿಗೆ ವಸ್ತ್ರ, ಕಾಲಿಗೆ ಗೆಜ್ಜೆ , ಹಣೆಗೆ ವಿಭೂತಿ, ಒಟ್ಟು ವೇಷಭೂಷಣವಾಗಿರುತ್ತದೆ. ಸಾಮಾನ್ಯವಾಗಿ ವೀರಮಕ್ಕಳಲ್ಲಿ ಒಬ್ಬ ಮಾರಮ್ಮನನ್ನು ಕುರಿತು ಹಾಡುತ್ತಾನೆ. ಉಳಿದವರು ಅವನನ್ನು ಅನುಕರಿಸುತ್ತಾರೆ. 

ಇದನ್ನು ಮೇಲು ಸಕ್ಕರೆಯವರು, ಪರಿವಾರದವರು, ’ಹಾಲುಮತದವರು’, ಮುಂತಾಗಿ ಕೆಳವರ್ಗದ ಜನರೇ ಹೆಚ್ಚಾಗಿ ಪ್ರದರ್ಶಿಸುತ್ತಾರೆ. ಇದನ್ನು ಮೈಸೂರು ಅರಸರ ಪರಿವಾರದಲ್ಲಿ ದಂಡಿನಲ್ಲಿ ಇದ್ದ ಜನಾಂಗಗಳಿಗೆ ಸೇರಿದವರು ಈ ಕಲೆಯನ್ನು ಹೆಚ್ಚಾಗಿ ಪ್ರದರ್ಶಿಸುವುದರಿಂದ ಇವರಿಗೆ ’ವೀರಮಕ್ಕಳು’ ಎಂದು ಕರೆದಿರಬಹುದು. ವೀರ ಪುರುಷರನ್ನು ಸ್ಮರಿಸುವ ಕುಣಿತ ಇದಾಗಿದ್ದು ಆನಂತರ ಗ್ರಾಮ ದೇವತೆಗಳ ತಳುಕು ಹಾಕಿಕೊಂಡಿರುವ ಸಂಭವವು ಇದೆ. ಮಂಡ್ಯ ಜಿಲ್ಲೆಯ ಕೊತ್ತತ್ತಿಯಲ್ಲಿ ’ವೀರ ಮಕ್ಕಳು’ ಮಾರಮ್ಮ, ಬ್ಯಾಲಕಮ್ಮನ ಮೇಲಲ್ಲದೆ ಬೀರ ದೇವರ ಮೇಲೆ, ಮಾದೇಶ್ವರನ ಮೇಲೆ, ಬಸವಣ್ಣನಮೇಲೆ ಹಾಗೂ ದಕ್ಷಬ್ರಹನ ಸಂಹಾರವನ್ನು ಕುರಿತು ಹಾಡುತ್ತಾರೆ. (ಹೆಚ್ಚಿನ ಮಾಹಿತಿಗೆ ನೋಡಿ-ಕರ್ನಾಟಕ ಜನಪದ ಕಲೆಗಳ ಕೋಶ. ಸಂ. ಹಿ.ಚಿ.ಬೋ.)      

ಆದರೆ ವೀರಗಾಸೆ ಕುಣಿತ ವೀರಶೈವರ ಆರಾಧನೆಯಾಗಿದೆ. ಕರ್ನಾಟಕದಲ್ಲಿ ವೀರಭದ್ರನ ಕುಣಿತ ಅಪರೂಪವಾಗಿದೆ. ಅದ್ದರಿಂದ ಈ ವೀರಗಾಸೆ ಜನಪ್ರಿಯವಾಗಿದೆ. ಇದು ಜಾತ್ರೆ, ದೇವರ ಮೆರವಣಿಗೆ, ಹಬ್ಬ, ಹುಣ್ಣಿಮೆ, ವೀರಶೈವರ ಮದುವೆ, ಗೃಹ ಪ್ರವೇಶ ಮೊದಲಾದ ಸಂದರ್ಭದಲ್ಲಿ ನಡೆಯುತ್ತದೆ. ಇದನ್ನು ’ಅಡಣಿ’ ಎಂದು ಕರೆಯಲಾಗುತ್ತದೆ. ಇದು ವೀರಶೈವರಿಗೆ ಮಾತ್ರ ವಿಶಿಷ್ಠವಾದ ಕಲೆ. ಅವರ ವೇಷ ಭೂಷಣದಿಂದಲೇ ಈ ಹೆಸರು ಪಡೆದುಕೊಂಡಿದೆ. ವೀರ+ಕಾಸೆ= ವೀರಗಾಸೆ, ವೀರಗಚ್ಚೆ-ಕಾಸೆಕಟ್ಟುವುದು, ವೀರಕಾಸೆಯಾಗಿ-ವೀರಗಾಸೆಯಾಗಿದೆ. ಹೀಗಾಗಿ  ವೀರಗಾಸೆ ಹೇಗೆ ಕುರುಬರ ಆರಾಧನೆಯಾಯಿತು ಎಂಬುದೇ ಪ್ರಶ್ನೆ.
 ಇನ್ನು ಯೋಗೀಶ ಅವರು  ಈ ಕಲೆಗಳು ಬೀದಿಗಳಲ್ಲಿ, ವೇದಿಕೆಯಲ್ಲಿ ಪ್ರದರ್ಶಿಸುತ್ತಿರುವುದು ದುರ್ದೈವದ ಸಂಗತಿ ಎನ್ನುತ್ತಾರೆ. ಆದರೆ ಈ ಕಲೆಗಳನ್ನ ಹೊಟ್ಟೆ ಪಾಡಿಗೆ ಪರಂಪರಾಗತವಾಗಿ ಮಾಡಿ ಕೊಂಡಿರುವ ಸಮುದಾಯಗಳ ಬದುಕಿಗೆ ಆರ್ಥಿಕ ಭದ್ರತೆಯು ನೀಡುತ್ತಿ. ಹೀಗಾಗಿ ಈ ಕಲೆಗಳು ಇಂದು ಬೀದಿಗೆ ಬಂದಿವೆ. ಅವುಗಳನ್ನು ಮಾಧ್ಯಮಗಳು ವೇಷಭೂಷಣ ಮತ್ತಿತರ ಕಾರಣಗಳಿಗೆ ಅಧುನಿಕಗೊಳಿಸಿ ತಮಗೆ ಬೇಕಾದಂತೆ ಪ್ರೊಜೆಕ್ಟ್ ಮಾಡುತ್ತಿವೆ. 

ಯೋಗೀಶ ಪ್ರಸ್ಥಾಪಿಸಿದ ಇನ್ನೂ ಎರಡು ಅಂಶಗಳ ಬಗ್ಗೆ ಗಮನ ಹರಿಸೋಣ ’ವೀರಗಾಸೆಯನ್ನು’ ಹೆಣ್ಣು ಮಕ್ಕಳು ಪ್ರದರ್ಶಿಸುವ ಹಂತಕ್ಕೆ ಹೊಗಿರುವುದು ಹಾಸ್ಯಾಸ್ಪದ. ಮತ್ತು ಗಂಡು ಕಲೆಯೆಂದೇ ಬಿಂಬಿತವಾಗಿರುವ ಕುರುಬರ ಗುರುತೆಂಬಂತಿರುವ ’ಡೊಳ್ಳುಕುಣಿತ’ವನ್ನು ಹೆಣ್ಣು ಮಕ್ಕಳು ಕಲಿತು ಪ್ರದರ್ಶಿಸುವುದು ದುರಂತ’ ಎಂಬ ಹೇಳಿಕೆಯಲ್ಲಿ ಎರಡು ಸ್ತ್ರೀವಿರೋಧಿ ಸ್ಪಷ್ಟ ಅಭಿಪ್ರಾಯಗಳಿವೆ. 
ಒಂದು. ಗಂಡಿಗೆ ಮೀಸಲಾದ ಕಲೆಯನ್ನು ಹೆಣ್ಣುಮಕ್ಕಳು ಕಲಿಯ ಕೂಡದು 

ಎರಡು ’ಕುರುಬರ ಗುರುತೆಂಬಂತಿರುವ’ ಈ ಸಾಲು ಮತ್ತೆ ಕಲೆಗಳು ಆಯಾ ಜಾತಿಯವರೇ ಅವುಗಳನ್ನು ಪ್ರದರ್ಶಿಸಬೇಕು ಎಂದು ಜಾತಿಗೆ ಸೀಮಿತಮಾಡುತ್ತಿದೆ. ಕಲೆಗಳನ್ನು ಕುರಿತ ಈ ಹೇಳಿಕೆ ಅಪಾಯಕಾರಿಯಾದುದು. ಯಾಕೆಂದರೆ ವೀರಗಾಸೆಯಲ್ಲಿ ವೀರಶೈವರಲ್ಲದವರು ಭಾಗಿಯಾಗುವುದಾಗಲಿ, ಮೋಹರಂ ಹಬ್ಬದಲ್ಲಿ ಲಿಂಗಾಯಿತರು ಕೂಡ ಹಲಗೆ ಬಡಿಯುವುದಾಗಲಿ ಇಲ್ಲೆಲ್ಲಾ ಕಲೆಯ ಬಗ್ಗೆ ಜಾತಿ ಮೀರಿದ ಉತ್ಸಾಹ, ಭಕ್ತಿ, ಪ್ರೀತಿಗಳಿರುತ್ತವೆ. ಸಾಂಸ್ಕೃತಿಕ ಸಾಮರಸ್ಯವು ಇದರ ಹಿಂದೆ ಅಡಗಿರುತ್ತದೆ. ಮೊದಲ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸುವುದಾದರೆ ಕಲೆಗಳಿಗೆ, ಜನಪದ ಕಥೆಗಳಿಗೆ ಸ್ತ್ರೀಯರೇ ಮೂಲ ಎನ್ನುವ ಮಾತಿದೆ. ವೀರಗಾಸೆ, ಡೊಳ್ಳು ಕುಣಿತ ಹೆಣ್ಣು ಮಕ್ಕಳು ಯಾಕೆ ಕಲಿಯಬಾರದು, ಅದನ್ನು ಪ್ರದರ್ಶಿಸಬಾರದು? ಕಲೆಯಾಗಿ ಡೊಳ್ಳು ಕುಣಿತ ಗಂಡೋ ಅಥವಾ ಗಂಡು ಮಕ್ಕಳು ಡೊಳ್ಳು ಕುಣಿತವನ್ನು ಪ್ರದರ್ಶಿಸುತ್ತಾರೆ ಅಂತ ಅದು ಗಂಡೋ? ಕಲೆಯಾಗಿ ಡೊಳ್ಳು ಕುಣಿತ ಗಂಡಾದರೆ ಅದನ್ನು ಹೆಣ್ಣು ಕಲಿತು ಪ್ರದರ್ಶಿಸುವುದರಲ್ಲಿ ತಪ್ಪೇನಿದೆ. ಕಲೆಯು ಯಾವ ಒಂದು ಜಾತಿಯ ಸ್ವತ್ತಲ್ಲ. ಕಲೆಗೆ ಲಿಂಗ ತಾರತಮ್ಯವೂ ಇಲ್ಲ. ಹಾಗೆ ಗಂಡು-ಹೆಣ್ಣು ಕಲೆಗಳು ಅನ್ನುವ ವಿಂಗಡಣೆಯು ಸರಿಯಲ್ಲ. ಹೀಗಾಗಿ ಕಲೆಗಳ ಬಗ್ಗೆ ಸಕಾರಾತ್ಮಕ ನಿಲುವನ್ನು ತಳೆಯ ಬೇಕಾಗಿದೆ.
comments powered by Disqus
Top