ಜಾತಿ ಸಂವಾದ - ಅಭಿಪ್ರಾಯ 2

ಜಾತಿ ಮತ್ತು ಆಹಾರ ಹಾಗೂ ಸಂಕೀರ್ಣತೆ
ಮೂರ್ತಿತಿಮ್ಮನಹಳ್ಳಿ, ಹೊಸಂಗಡಿ

೨೦೦೫ರಲ್ಲಿ ಜಲನಿರ್ಮಲ ಯೋಜನೆಯವರ ಬೀದಿ ನಾಟಕಗಳನ್ನು ತೆಗೆದುಕೊಂಡು ಹಾವೇರಿಗೆ ಹೋಗಿದ್ದ ಸಂಧರ್ಭದಲ್ಲಿ ಚಿಕ್ಕ ಹೆಣ್ಣು ಮಗುವೊಂದು "ಅಣ್ಣಾ ನೀ ಲಿಂಗ್ಯಾತರನೋ.. ಮುಸಲರನೋ.. ಅಂತ ಕೇಳಿತ್ತು ಅವತ್ತು ನಾ ತಬ್ಬಿಬ್ಬಾಗಿದ್ದೆ, ಇವತ್ತು ಹೆದರಿಕೆ ಆಗ್ತಿದೆ ಯಾಕೆಂದರೆ ಈ ಜಾತಿಯ ವಿಷಬೀಜವನ್ನು ಆ ಮಗುವಿನಲ್ಲಿ ಬಿತ್ತಿದ್ದು ಯಾರು..? ಜಾತಿಯ ಈ ಬಿತ್ತನೆ ಎಂಥಹ ಭಯಾನಕ ಫಲ ಕೊಡಬಹುದೆಂಬ ಆತಂಕದಿಂದ.

 ಉಪನ್ಯಾಸಕರ ವೃತ್ತಿನಿರತ ತರಭೇತಿಗೆಂದು ಹಾಸನಕ್ಕೆ ಹೋಗಿದ್ದ್ದೆ ನಮ್ಮೊಂದಿಗೆ ಕಾರ್ಯಾಗಾರಕ್ಕೆ ಬಂದಿದ್ದ ದ.ಕ ಜಿಲ್ಲೆಯ ಶಿಬಿರಾರ್ಥಿಯೊಬ್ಬರು ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ವೇದಿಕೆಯ ಮೇಲೆ ಹಂಚಿಕೊಂಡ ಮಾತುಗಳಿವು,.."ಹಾಸನದಲ್ಲಿ ತರಬೇತಿ ಎಂದು ತಿಳಿದಾಗ ತುಂಬಾ ಹೆದರಿಕೆ ಆಯ್ತು ನಂಗೆ, ಯಾಕಂದ್ರೆ ನಾವು ತುಂಬಾ ಕಲ್ಚರ‍್ಡು ಅಲ್ಲಿನ(ಹಾಸನದ)ಜನ ಕ್ಲೀನ್ ಇರೋಲ್ಲ ಕಲ್ಚರ‍್ಡಲ್ಲ ಅಂತ...(ಶಿಭಿರಾರ್ಥಿಗಳಲ್ಲಿ ಅಸಮಾಧಾನದ ಹಾ..ಹೋ.. ಶಬ್ಧಗಳು ಮೂಡಿದವು) ಆದ್ರೆ ಇಲ್ಲಿ ಬಂದಾಗ ಅಂತಹ ಯಾವುದೇ ಭಯ ಆಗ್ಲಿಲ್ಲ ಸಂತೋಷ ಆಯ್ತು" ಈ ಮಾತುಗಳು ಕೊನೆಯಲ್ಲಿ ತಿಪ್ಪೆಸಾರಿಸಿದ್ದರೂ ಅವರ ಮನಸ್ಸಿನಲ್ಲಿನ ಘಟ್ಟದಮೇಲಿನವರ ಬಗೆಗಿನ ಪೂರ್ವಾಗ್ರಹ ಪೆಡಂಭೂತ ಎಷ್ಟು ಅಪಾಯಕಾರಿಯಾದುದು ಎಂಬುದನ್ನು ಯೋಚಿಸಬೇಕಾಗಿದೆ. ಇನ್ನೊಬ್ಬರ ಶಾಂತಿಯನ್ನು ಕದಡುವ, ಭಾವನೆಗಳನ್ನು ಘಾಸಿಗೊಳಿಸುವ ಹಾಗೆ ವೇದಿಕೆಯ ಮೇಲೆ ಮಾತಾಡುವುದು ಎಂಥ "ಕಲ್ಚರ್ರು".
 
 ಶಿಕ್ಷಕರಾದ ಇವರ ಮನಸ್ಸಿನಲ್ಲಿಯೇ ಈ ರೀತಿಯ ಜಾತಿ ಆಧಾರಿತ ಪ್ರಾದೇಶಿಕ ಮನೋಭಾವವಿದ್ದರೆ ರಾಷ್ಟ್ರೀಯ ಭಾವೈಕ್ಯತೆ, ಜಾತ್ಯತೀತತೆ, ಭಾರತದ ಅಖಂಡತ್ವ ಮನೋಭಾವವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದಾದರೂ ಹೇಗೆ..? ಜಾತೀಯತೆ ಎನ್ನುವುದು ಸೀಮಿತಾರ್ಥವನ್ನು ದಾಟಿ ವಿಕೃತವಾದ ವಿಶಾಲಾರ್ಥವನ್ನು ಪಡೆಯ ಹೊರಟಿದೆ, ನಾಡಿನ ಕರಾವಳಿ ಭಾಗದಲ್ಲಿ ಘಟ್ಟದವರು, ಘಟ್ಟದಕೆಳಗಿನವರು ಎಂಬ ಬಹಳ ಮುಖ್ಯವಾದ ಕ್ಲಾಸಿಫಿಕೇಷನ್ ಇದೆ. 
 
ಈ ’ಘಟ್ಟದವರು’ ಎಂಬ ಮಾತಿನಲ್ಲಿ ಹಲವಾರು ವ್ಯಂಗ್ಯ ಗೂಡಾರ್ಥಗಳಿವೆ ಇದು ಕೇವಲ ಪ್ರಾದೇಶಿಕತೆಯನ್ನು ಸೂಚಿಸುವ ಪದವಾಗಿದ್ದರೆ ಅಪಾಯವಿಲ್ಲ... ಆದರೆ ಅದನ್ನು ಮೀರಿದ ದಡ್ಡರು, ವಿಚಾರಶೂನ್ಯರು, ಸಂಸ್ಕಾರಹೀನರು, ಶೂದ್ರವರ್ಗದವರು, ಆಚಾರವಿಲ್ಲದವರು, ಭಾಷೆ ಬರದವರು ಎಂಬ ಅರ್ಥಗಳು ಅಡಗಿವೆ. ಇದು ಜಾತಿ ಪ್ರಾದೇಶಿಕವಾಗುತ್ತಿರುವುದನ್ನು ಸೂಚಿಸುತ್ತದೆ. ಈ ಭಾಗದ ಕೆಲವು ಬೃಹಸ್ಪತಿಗಳು ಮೂರುಹೊತ್ತು ಸ್ನಾನ ಮಾಡಿ, ಮಡಿಯುಟ್ಟು, ನಯವಾದ ಮಾತನಾಡುತ ಜಪ-ತಪ ಮಾಡುವುದೇ ಸಂಸ್ಕಾರ ಸಂಸ್ಕೃತಿ ಎಂದು ಅರ್ಥೈಸಿಕೊಂಡಂತಿದೆ. "ಸ್ನಾನ ಪಾನ ಎಲ್ಲ ಮೈಗಲ್ಲ ಕಣೋ ಕಂದಾ ಮನಸ್ಸಿಗೆ.."ಎಂಬ ಸೂಚನಾಫಲಕಗಳನ್ನು ಅಲ್ಲಲ್ಲಿ ತೂಗುಹಾಕುವ ಅನಿವಾರ್ಯವಿದೆ. ವೈಚಾರಿಕರೂ ಸ್ನೇಹಮಯಿಗಳೂ ಇದ್ದಾರೆ ಆದರೆ ಅವರ ಸಂಖ್ಯೆ ತೀರಾ ತೀರಾ ಕಡಿವೆದ, ಮೆರೆವಣಿಗೆ ಹೊರಟ ಮದುಮಗನ ಜೊತೆಯಲ್ಲಿನ ರಾಜನ ಹಾಗೆ ಗೌಣವಾಗಿದ್ದಾರೆ.
 
 ದ ಕ ಜಿಲ್ಲೆಯಲ್ಲಿ ಉಪನ್ಯಾಸಕರಾಗಿರುವ ಗೆಳೆಯರ ಮನೆಗೆ ಹೋದಾಗ ಅವರ ಮನೆ ಚಿಕ್ಕದಾಗಿರುವುದಕ್ಕೆ ನಾನು ಕೇಳದಿದ್ದರೂ ಸಮಜಾಯಿಷಿ ನೀಡಿದರು "ಏನ್ಮಾಡ್ಲಿ ಗೆಳೆಯಾ..ಇಲ್ಲಿ ಮನೆ ಸಿಗೋದು ತುಂಬಾ ಕಷ್ಟ. ನೀವು ಘಟ್ಟದೋರಾ..? ವೆಜ್ಜಾ... ನಾನ್ವೆಜ್ಜಾ..?ಅಂತ ಕೇಳ್ತಾರೆ. ಈ ಮನೆ ಸಿಕ್ಕಿದ್ದೇ ಹೆಚ್ಚು ಅಂದರು.
 
ಪ್ರಾದೇಶಿಕತೆಯನ್ನು ಸಾಮಾನ್ಯವಾಗಿ ಭಾಷೆ ಹಿನ್ನಲೆಯಲ್ಲಿ, ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಗುರುತಿಸಲಾಗುತ್ತದೆ. ಆದರೆ ಇಲ್ಲಿ ಪ್ರಾದೇಶಿಕತೆಯೆಂಬುದು ಜಾತಿಯಿಂದ ಲೇಪಿತವಾಗಿ ಮಲಿನವಾಗಿದೆ. ಸುಮಾರು ಮೂರ‍್ನಾಲ್ಕು ತಲೆಮಾರುಗಳಿಂದಲೂ ಭಾರತ ಪ್ರಗತಿಶೀಲರಾಷ್ಟ್ರ ಅಭಿವೃದ್ದಿ ಹೊಂದುತ್ತಿರುವರಾಷ್ಟ್ರ ಎಂದೇ ಓದಿಕೊಂಡು ಬಂದಿದ್ದೇವೆ. ಈ ಜಾತೀಯತೆ, ಧರ್ಮಾಂಧತೆ, ಕಂದಾಚಾರಗಳು ಅಳಿಯದ ಹೊರತು ಇನ್ನು ಮುಂದಿನ ಪೀಳಿಗೆಯೂ ಕೂಡ ಭಾರತ ಪ್ರಗತಿಶೀಲ ರಾಷ್ಟ್ರ ಎಂದೇ ಓದಬೇಕಾಗುತ್ತದೆ. ಪ್ರಗತಿಹೊಂದಿದ ರಾಷ್ಟ್ರ ಎಂದಲ್ಲ..,
 
comments powered by Disqus
Top