ಜಾತಿ ಸಂವಾದ - ಅಭಿಪ್ರಾಯ 3

ಸಂಸ್ಕೃತೀಕರಣ ಸಮಾನತೆಯತ್ತ ಸಾಗುತ್ತ
ನರಸಿಂಹರಾಜು ಕೆ. ತುಮಕೂರು

ಭಾರತೀಯ ಸಮಾಜದ ಆಧಾರಸ್ಥಂಭವಾಗಿರುವ ಜಾತಿಯು ಶತಮಾನಗಳಿಂದ ಅಸ್ಪೃಶ್ಯರ, ಶೂದ್ರರ, ಹಿಂದಳಿದವರ ಶೋಷಣೆಯ ವಿಷದ ಬೇರು ಎನ್ನಬಹುದು. ಗ್ರಾಮನಗರವೆನ್ನದೆ ಪ್ರತಿಯೊಬ್ಬ ಭಾರತೀಯನಿಗೂ ವಿಭಿನ್ನ ರೀತಿಯಲ್ಲಿ ಜಾತಿಯ ಅನುಭವವಾಗುತ್ತಿದೆ. ಜಾತಿಯ ಬಿಲಗಳಾದ ಗ್ರಾಮಗಳಲ್ಲಿ ಹುಟ್ಟು, ಅಸ್ಪೃಶ್ಯತೆ, ಕೆಲವು ಸಾಮಾಜಿಕ ಸೌಲಭ್ಯಗಳು ಮತ್ತು ನಿರ್ಬಂದಗಳೊಂದಿಗೆ ನಮಗೆ ನಮ್ಮ ಜಾತಿ ಯಾವುದು ಎಂದು ತಿಳಿದು ನಿರ್ದಿಷ್ಟ ಜಾತಿಗೆ ಸೇರಿದ್ದೇವೆಂಬ ಖಾತರಿ ಅನುಭವದ ಮೂಲಕ ಬರುತ್ತದೆ. ನಗರಗಳಲ್ಲಿ ಶೈಕ್ಷಣಿಕ ಸಂಸ್ಥೆಗಳಿಗೆ ದಾಖಲಾಗುವಾಗ, ಪರೀಕ್ಷೆ ತೆಗೆದುಕೊಳ್ಳುವಾಗ ನಾವು ಪಾವತಿಸುವ ದುಬಾರಿ ಅಥವಾ ಕಡಿಮೆ ಶುಲ್ಕಗಳು, ವರ್ಗಾವಣೆ ಪತ್ರ, ಹಲವು ಸೌಲಭ್ಯಗಳು ಮತ್ತು ಜಾತಿಸಂಘಟನೆಗಳು ಅವುಗಳ ಕಾರ‍್ಯಕ್ರಮಗಳು, ಸಮಾವೇಶಗಳ ಮೂಲಕ ನಗರವಾಸಿಗಳಿಗೆ ತಮ್ಮ ಜಾತಿಗಳು ತಿಳಿಯುವದರೊಂದಿಗೆ ನಿರ್ದಿಷ್ಟ ಜಾತಿಗೆ ಸೇರಿದ್ದೇವೆಂಬ ಖಾತರಿಯೂ ಆಗುತ್ತದೆ.

ಸಂಸ್ಕೃತೀಕರಣ ಪರಿಕಲ್ಪನೆಯನ್ನು ಖ್ಯಾತ ಸಮಾಜಶಾಸ್ತಜ್ಙರಾದ ಪ್ರೋ.ಎಂ.ಎನ್.ಶ್ರೀನಿವಾಸ್ ರವರು ರಿಲಿಜಿಯನ್ & ಸೊಸೈಟಿ ಅಮಾಂಗ್ ದಿ ಕೂರ್ಗ್ಸ್ ಆಫ್ ಸೌತ್ ಇಂಡಿಯಾ(೧೯೫೨) ಎಂಬ ಗ್ರಂಥದಲ್ಲಿ ಜಾತಿಯಲ್ಲಿಯೂ ಲಂಬಾಂತರ ಚಲನೆಗೆ ಅವಕಾಶವಿದೆಯೆಂಬುದನ್ನು ನಿರೂಪಿಸಲು ಬಳಸಿದರು. ಕೊಡವರು ಅಮ್ಮ ಕೊಡವರಾಗಿ, ಗೊಂಡರು ರಾಜಗೊಂಡರಾಗಿ ಬದಲಾಗಿರುವುದನ್ನು ಗಮನಿಸಬಹುದು.
 
ಸಂಸ್ಕೃತೀಕರಣದ ಮೂಲಕ ಪಾಶ್ಚಾತೀಕರಣಗೊಂಡು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಜಾತ್ಯಾತೀತತೆ ಮುಂತಾದ ತತ್ವಗಳನ್ನು ಅಳವಡಿಸಿಕೊಂಡು ಪರಿವರ್ತನೆ ಮೂಲಕ ವರ್ಗರಹಿತ, ಜಾತಿಮುಕ್ತ ಸಮಾಜವನ್ನು ನಿರ್ಮಿಸಬಹುದು ಎಂಬ ಆಶಯ ಅವರದಾಗಿತ್ತು. ಸಂಸ್ಕೃತೀಕರಣವು ಜಾತಿಯಲ್ಲಿನ ಆಂತರಿಕ ಚಲನೆಯೇ ಹೊರತು ಜಾತಿ ಬದಲಾವಣೆಯಲ್ಲ. ಹಾಗಾಗಿ ನಮ್ಮ ಪೂರ್ವಜರು ಬೇರೆ ಜಾತಿಗೆ ಸೇರಿರುವುದಿಲ್ಲ ಎನ್ನಬಹುದು. ಆದರೆ ಅಂತರ್ಜಾತಿಯ ವಿವಾಹದಿಂದ ಜನಿಸುವ ಮಕ್ಕಳ ತಂದೆ ತಾಯಿಯರು ವಿಭಿನ್ನ ಜಾತಿಗೆ ಸೇರಿರುತ್ತಾರೆ. 
 
ಸಂಸ್ಕೃತೀಕರಣ ಪ್ರಕ್ರಿಯೆಯು ಸಾಕಷ್ಟು ಬದಲಾವಣೆ ತಂದರೂ ಎಲ್ಲಾ ಜಾತಿ ಉಪಜಾತಿಗಳ ನಡುವೆ ವೈವಾಹಿಕವಾಗಿ, ವ್ಯವಹಾರಿಕವಾಗಿ ಸಮ ಸಂಬಂಧಗಳು ಏರ್ಪಟ್ಟಿಲ್ಲ. ಅಸ್ಪೃಶ್ಯರು ಬ್ರಾಹ್ಮಣರನ್ನು ಸ್ಪರ್ಶಿಸಿದರೆ, ದೇವಸ್ಥಾನಗಳಿಗೆ ಪ್ರವೇಶಿಸದರೆ, ಸಹ ಪಂಕ್ತಿ ಭೋಜನ ನಡೆಸಿದರೆ ಮೈಲಿಗೆ ಆಗುತ್ತದೆ ಎಂಬಂತಹ ಇನ್ನೂ ಸಾವಿರಾರು ಮೌಢ್ಯಗಳು, ನಂಬಿಕೆಗಳು ಸತ್ಯಾಸತ್ಯತೆಗಳ ಪರೀಕ್ಷೆಗೊಳಪಡದೆ ಜಾತಿ ಆಚರಣೆಯ ಹೃದಯದಲ್ಲಿ ಅಡಗಿವೆ. ರೋಗಗ್ರಸ್ಥ ಚಲನರಹಿತ ಸಂಸ್ಥೆಯಾದ ಜಾತಿಯಲ್ಲಿ ಹುಟ್ಟು ಉಚಿತವಾದರೂ ಸಮಾಜದಲ್ಲಿ ತಂದೆತಾಯಿಗಳು ಅನುಭವಿಸುತ್ತಿರುವ ಶೋಷಣೆ, ಸ್ಥಾನಮಾನಗಳು ಮಕ್ಕಳಿಗೂ ಖಚಿತವಾಗಿರುತ್ತವೆ. 
 
ಹಿಂದೂ ಧರ್ಮದಲ್ಲಿ ಜನನವು ಜಾತಿಯೊಂದಿಗೆ ಬೆಸೆದುಕೊಂಡಿರುವುದರಿಂದ ತಮ್ಮ ಅನನ್ಯತೆಯನ್ನು ಕಂಡುಕೊಳ್ಳಲು ನಿರ್ದಿಷ್ಟವಾದ ಜಾತಿಯನ್ನು ಹೇಳುವುದು ಅನಿವಾರ್ಯವಾಗಿದೆ. ಅಸ್ಪೃಶ್ಯರನ್ನು ಸ್ತ್ರೀಯರನ್ನು ಗುಲಾಮರಂತೆ ಒಂದೇ ತಕ್ಕಡಿಯಲ್ಲಿ ತೂಗುವ ಭಾರತೀಯ ಸಮಾಜದಲ್ಲಿ ಪುತ್ರನಿಂದಲೇ ಸದ್ಗತಿಯೆಂಬ ಮೌಢ್ಯದ ಆಧಾರದ ಮೇಲೆ ನಿಂತಿರುವ ಪುರುಷ ಪ್ರಧಾನ ಸಮಾಜದಲ್ಲಿ ಜಾತಿಯು ಗಂಡಿನ ಮೂಲಕವೇ ತಲೆಮಾರಿನಿಂದ ತಲೆಮಾರಿಗೆ ಹರಿಯುತ್ತಿದೆ. ತಮಗೆ ಇಷ್ಟ ಬಂದ ಧರ್ಮವನ್ನು ಸ್ವೀಕರಿಸಬಹುದೆಂದು ನೆಲದ ಕಾನೂನು ಹೇಳುತ್ತಿದೆ. ಮಾನವರನ್ನು ಮಾನವರನ್ನಾಗಿ ಕಾಣದ ಮೇಲ್ಜಾತಿಯೆಂದು ಕರೆದುಕೊಂಡವರು ಶತ-ಶತಮಾನಗಳಿಂದ ಅಸ್ಪೃಶ್ಯರ ಶೋಷಣೆಯಲ್ಲಿ ಸ್ವರ್ಗವನ್ನೇ ಕಾಣುತ್ತಿವೆ. ಇದರಿಂದ ಬೇಸತ್ತ ಅಸ್ಪೃಶ್ಯರು ಮತ್ತು ಆದಿವಾಸಿಗಳು ಸರ್ವರನ್ನೂ ಸಮಾನವಾಗಿ ಗೌರವಿಸುವ ಧರ್ಮವನ್ನು ಆಯ್ಕೆಮಾಡಿಕೊಳ್ಳುವುದು ಶೋಷಿತರ ಹಕ್ಕು. ಆಯ್ಕೆ ಸ್ವಾತಂತ್ರ್ಯವೇ ಇಲ್ಲದ ಜಾತಿ ವ್ಯವಸ್ಥೆಯ ಹೃದಯ ಹಿಂದೂಧರ್ಮವಾಗಿದೆ. 
 
ಜೈವಿಕವಾಗಿ ತಂದೆ-ತಾಯಿಗಳ ಶಾರೀರಿಕ ಲಕ್ಷಣಗಳು ಮಕ್ಕಳಿಗೆ ದೊರೆತರೂ ಅದರಲ್ಲಿ ಸಾಕಷ್ಟು ಬದಲಾವಣೆಗಳಿರುತ್ತವೆ. ಹೀಗಿರುವಾಗ ಕೇವಲ ಸಾಮಾಜಿಕವಾಗಿ ಹಾಗು ಸಾಮಾನ್ಯವಾಗಿರುವ ಜಾತಿಯನ್ನು ಜೈವಿಕವಾದುದು ಹಾಗು ನೈಸರ್ಗಿಕದತ್ತವಾದ ನಿಯಮ ಎಂದು ಹೇಳುವ ಕುತಂತ್ರದ, ಷಡ್ಯಂತ್ರದ ಪ್ರಯತ್ನಗಳು ಆರ‍್ಯರಿಂದ ಇಂದಿನವರೆಗೂ ವ್ಯವಸ್ಥಿತವಾಗಿ ನಡೆಯುತ್ತಲೇ ಬರುತ್ತಿವೆ. ಆದ್ದರಿಂದ ಪ್ರತಿಯೊಬ್ಬ ಭಾರತೀಯನೂ ಸಮಾನ ಮನಸ್ಕನಾಗಿ ಸಮಾನತೆಯತ್ತ ಬದಲಾವಣೆಯ ಮುನ್ನುಡಿ ಬರೆಯಬೇಕು.
 
ಆಧುನೀಕರಣಗೊಳ್ಳುತ್ತಿರುವ ೨೧ನೇ ಶತಮಾನದಲ್ಲಿ ಬಹು ಜನರು ಅಕ್ಷರಸ್ಥರಾಗಿದ್ದಾರೆ. ಹಾಗೆಯೇ ಜೀವನ ವಿಧಾನಗಳೂ ಸಾಕಷ್ಟು ಬದಲಾಗಿವೆ. ಆದರೂ ಪ್ರತಿದಿನವು ಜಾತಿ ಆಧಾರಿತ ವಿಭಿನ್ನ ರೀತಿಯ ಹೊಸ ಸಮಸ್ಯೆಗಳು, ದೌರ್ಜನ್ಯ, ಬಹಿಷ್ಕಾರ, ಹಲ್ಲೆ, ಮುಂತಾದವುಗಳು ಹೆಚ್ಚಾಗಿ ಸಂವಿಧಾನದ ಆಶಯವನ್ನೇ ಅಣಕಿಸುವಂತಿರುವುದು ಸುಶಿಕ್ಷಿತ ಸಮಾಜದ ದುರಂತವೆಂದರೆ ತಪ್ಪಾಗಲಾರದು. ಸಂವಿಧಾನ ವಿರೋಧಿ ಆಶಯಗಳೆಲ್ಲವನ್ನು ಮೆಟ್ಟಿನಿಲ್ಲುವ ಮನಸ್ಥಿತಿ ಪ್ರತಿಯೊಬ್ಬ ಭಾರತೀಯನಲ್ಲೂ ಬರಬೇಕು. ಜಡತ್ವವೇ ತುಂಬಿಕೊಂಡಿರುವ ಮೌಢ್ಯದ ನಂಬಿಕೆಗಳ ರೋಗಗ್ರಸ್ಥ ವ್ಯವಸ್ಥೆಗೆ ಸಮಾಜಿಕ ಚಲನೆ ಎಂಬ ಚಿಕಿತ್ಸೆನೀಡಿ ಬದಲಾವಣೆ ತಂದು ಸi ಸಮಾಜದತ್ತ ಮುನ್ನಡೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. .
 
comments powered by Disqus
Top