ಜಾತಿ ಸಂವಾದ - ಅಭಿಪ್ರಾಯ 4

ಅಂತರ್ಜಾತಿ ವಿವಾಹದಿಂದ ಹುಟ್ಟಿದ ಅಮಾಯಕ ಯುವಕನ ಕರುಣಾಜನಕ ಕಥೆ
ನಾರಾಯಣ್ ರಂಗಯ್ಯ

ಮೊದಲಿಗೆ ತಾವು ಜಾತಿ ವಿಷಯದ ಬಗ್ಗೆ ಓದುಗರು ತಮ್ಮ ಅಭಿಪ್ರಾಯಗಳನ್ನು ಮತ್ತು ವಿಚಾರಗಳನ್ನು ವ್ಯಕ್ತಪಡಿಸುವುದಕ್ಕೆ ಹಾಗೂ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವುದಕ್ಕೆ ಒಂದು ವೇದಿಕೆ ಕಲ್ಪಿಸಿಕೊಟ್ಟಿರುವುದಕ್ಕೆ ತಮ್ಮ ಪತ್ರಿಕೆಗೆ ತುಂಬಾ ಧನ್ಯವಂದನೆಗಳು.ಇದು ಇತರೆ ಪತ್ರಗಳಿಗೂ ಸ್ಪೂರ್ತಿ,ಪ್ರೇರಣೆ ನೀಡುವಂತಾಗಲಿ ಎಂಬ ಸದಾಶಯಗಲೋಂದಿಗೆ ಸಲ್ಲಿಕೆ.

ತಮ್ಮ ಪತ್ರಿಕೆಯಲ್ಲಿ ಅಂತರ್ಜಾತಿ ವಿವಾಹ ಸಂಚಿಕೆಯಲ್ಲಿ ಪ್ರಕಟಗೊಂಡ ಶ್ರೀಯುತ ಧನಂಜಯ ಶಿವಮೊಗ್ಗ ರವರ ಲೇಖನದ ಬಗ್ಗೆ ನನ್ನ ಅಭಿಪ್ರಾಯ ಹಂಚಿಕೊಳ್ಳಬಯಸುತ್ತೇನೆ.ಜಾತಿ ವ್ಯವಸ್ಥೆ ಎಷ್ಟು ಕಠೋರತೆಯಿಂದ ಕೂಡಿದೆ ಎಂಬುದಕ್ಕೆ ಶ್ರೀಯುತ ಧನಂಜಯರವರ ಅನುಭವ ಮೂಕ ಸಾಕ್ಷಿಯಾಗಿ ಪ್ರತಿಬಿಂಬಿತವಾಗಿದೆ ಎಂದರೆ ತಪ್ಪಾಗಲಾರದು. ಶ್ರೀಯುತ ಧನಂಜಯರವರ ತಂದೆಯವರು ಬ್ರಾಹ್ಮಣ ಜಾತಿಯವರಾಗಿ ವಾಲ್ಮೀಕಿ ಜನಾಂಗದಲ್ಲಿ ತನ್ನ ಬಾಳ ಸಂಗಾತಿಯನ್ನು ಆರಿಸಿಕೊಂಡದ್ದು ಅವರ ಜಾತ್ಯಾತೀತ ಮನೋಭಾವದ ದ್ಯೋತಕವಾಗಿದೆ ಅವರಿಗೆ ನನ್ನ ನಮನಗಳು.ಇವರಂತೆ ಅನೇಕ ಮಂದಿ ಇದ್ದರೂ ಜಾತಿ ವ್ಯವಸ್ಥೆಗೆ ಹೆದರಿ ತಮಗೆ ತಾವೇ ದ್ರೋಹಮಾಡಿಕೊಂಡವರೆಷ್ಟೋ !!! 
 
ಆದರೆ,ತಂದೆಯವರ ಮರಣಾ ನಂತರ ಅವರು ಅನುಭವಿಸಿದ ಯಾತನೆ ಅವರ ಮಾತುಗಳಲ್ಲೇ ವ್ಯಕ್ತವಾಗುತ್ತದೆ. ಬ್ರಾಹ್ಮಣರೆಲ್ಲ ಸಾತ್ವಿಕ ಸ್ವಭಾವದವರು ಎನಿಸಿಕೊಳ್ಳುವ ತಂದೆಯ ಸಹೋದರರು ಶ್ರೀಯುತ ಧನಂಜಯರವರು ಅನ್ಯ ಜಾತಿಯವಳಿಗೆ ಹುಟ್ಟಿದವ ಎಂಬ ಕಾರಣಕ್ಕೆ ಕಾನೂನುರೀತ್ಯ ಸಲ್ಲಬೇಕಾಗಿದ್ದ ಆಸ್ತಿಯನ್ನು ನೀಡದೇ ಹೋದುದು ಅಮಾನವೀಯ ಮತ್ತು ಅಕ್ಷಮ್ಯ ಹಾಗೂ ನಾಚಿಕೆಗೇಡಿನ ಸಂಗತಿ. ಅಂತರ್ಜಾತಿ ವಿವಾಹದಿಂದ ಹುಟ್ಟಿದವರನ್ನು ಈ ಸಮಾಜ ಮೂದಲಿಸುವ ರೀತಿ ಅನುಭವ ವೇದ್ಯ. ಒಂದು ಕಡೆ ಶಾಲಾ ದಾಖಲಾತಿಗಳಲ್ಲಿ ಬ್ರಾಹ್ಮಣ,ಸಮಾಜದಲ್ಲಿ ಕೆಳ ವರ್ಗದವಳಿಗೆ ಜನಿಸಿದವ ಎಂಬಂತಾಗಿ ಸಮಾಜದಿಂದ ಮತ್ತು ಸರ್ಕಾರದಿಂದ ಯಾವುದೇ ಸವಲತ್ತುಗಳಿಲ್ಲದೇ ವಿದ್ಯಾಭ್ಯಾಸ ಪಡೆದದ್ದು ಮಾತ್ರ ಹರಸಾಹಸವೇ ಸರಿ. 
 
ಆದ್ದರಿಂದ, ಸರ್ಕಾರಗಳು ಜಾತಿ ನಿರ್ಮೂಲನೆ ಅವರ ನಿಜವಾದ ಸಾಮಾಜಿಕ ಕಾಳಜಿಯಾಗಿದ್ದಲ್ಲಿ ಹೀಗೆ ಅಂತರ್ಜಾತೀಯ ಸಂಜಾತರಿಗೂ ಸಹ ಮೀಸಲಾತಿ ಸೌಲಭ್ಯವನ್ನು ವಿಸ್ತರಿಸುವಂತಾಗಬೇಕೆಂಬುದು ನನ್ನ ಅಭಿಪ್ರಾಯ. ಇದರಿಂದ, ಅಂತರ್ಜಾತೀಯ ವಿವಾಹ ಸಂಬಂಧಗಳು ಹೆಚ್ಚಾಗುವುದರೊಂದಿಗೆ ಜಾತಿ ವ್ಯವಸ್ಥೆ ನಿರ್ಮೂಲನೆಗೆ ಇದು ಸಹಕಾರಿಯಾಗುವುದಲ್ಲದೆ  ಅಂತರ್ಜಾತೀಯ ಸಂಜಾತರಿಗೆ ಪ್ರೋತ್ಸಾಹ,ರಕ್ಷಣೆ ಮತ್ತು ಭದ್ರತೆ ಸಿಗುವುದರಲ್ಲಿ ಸಂದೇಹವಿಲ್ಲ. ಇಲ್ಲವಾದಲ್ಲಿ ಎಲ್ಲಾ ಜಾತಿಗಳು ತಂತಮ್ಮ ಜಾತಿಗೆ ಅಂಟಿಕೊಳ್ಳುವ ಸಾಧ್ಯತೆಯೇ ಹೆಚ್ಚಾಗಿ ಸಾಮಾಜಿಕ ಅಸಮಾನತೆ ತಾರಕಕ್ಕೇರುತ್ತದೆ. 
 
ಆದ್ದರಿಂದ,ಜಾತಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಆಳುವ ಸರ್ಕಾರಗಳು,ಪಕ್ಷಗಳು ಜಾತಿಯನ್ನ ತಮ್ಮ ವೋಟ್ ಬ್ಯಾಂಕ್ ಮಾಡಿಕೊಳ್ಳದೆ ಸಮಾಜಮುಖಿಯಾಗಿ ಚಿಂತನೆ ಮಾಡಿ ಸಾಮಾಜಿಕ ಜವಾಬ್ದಾರಿ,ಕಳಕಳಿ ಮತ್ತು ಬದ್ಧತೆಯಿಂದ ಅಂತರ್ಜಾತೀಯ ಮದುವೆಗಳಿಗೆ ಮತ್ತು ಅಂತರ್ಜಾತೀಯ ಸಂಜಾತರಿಗೆ ಮೀಸಲಾತಿ ಸೌಲಭ್ಯವನ್ನು ವಿಸ್ತರಿಸಬೇಕು,ಎಲ್ಲ ವರ್ಗದ ಜನರಿಗೂ,ಊರುಗಳಿಗೂ ಮೂಲಭೂತ ಸೌಕರ್ಯಗಳನ್ನು ಮಾಡಿಕೊಟ್ಟು,ತುಳಿತಕ್ಕೊಳಗಾದ ಎಲ್ಲಾ ವರ್ಗದ ಜನರನ್ನು ಮುಂದುವರಿದ ಜನಾಂಗಗಳ ಮಟ್ಟಕ್ಕೆ ತಂದು,ನಂತರ ಯಾವುದೇ ಖಾಸಗಿ ಅಥವಾ ಸರ್ಕಾರಿ ಕಡತಗಳಲ್ಲಿ ಜಾತಿಗೆ ಬದಲಾಗಿ ಕೇವಲ ಭಾರತೀಯ ಎಂಬ ಪದವನ್ನು ಮಾತ್ರ ನಮೂದಿಸುವಂತೆ ಮಾಡಿ ನಂತರ ಮೀಸಲಾತಿಯನ್ನ ತೆಗೆದುಹಾಕುವ ಮೂಲಕ (ಏಕೆಂದರೆ ಜಾತಿ ವ್ಯವಸ್ಥೆ ಇರುವವರೆಗೂ ಮೀಸಲಾತಿ ಇದ್ದೇಇರುತ್ತದೆ)ಸಮಸಮಾಜವನ್ನು ನಿರ್ಮಾಣ ಮಾಡುವಂತಾಗಬೇಕು.
 
ಇದು ನಮ್ಮ ಗ್ರೇಟ್ ಇಂಡಿಯಾದಲ್ಲಿ ಸಾಧ್ಯವೇ ?! ಬುದ್ಧ,ಬಸವ.ಅಂಬೇಡ್ಕರ್ ರಂತೆ ಸಮಾನತೆಗಾಗಿ ಹೋರಾಡಿದ ಮಹಾನ್ ನಾಯಕರುಗಳ ಅಭಿಲಾಷೆ ಈಡೇರುತ್ತದೆಯೇ ?! ಸಂವಿಧಾನದ ಆಶೋತ್ತರಗಳ ನನಸಾಗುತ್ತವೆಯೇ ಇದಕ್ಕೆ ಹಿಂದೂ ಧರ್ಮವನ್ನು ಗುತ್ತಿಗೆ ಹಿಡಿದು ಬಹುಸಂಖ್ಯಾತ ಹಿಂದೂಗಳ ಮನಸ್ಸಿನಲ್ಲಿ ದೇವರು-ದೆವ್ವ, ಪಾಪ-ಪುಣ್ಯ,ಭವಿಷ್ಯ-ಜೋತಿಷ್ಯ ಮೊದಲಾದ ಮೂಢನಂಬಿಕೆಗಳ ಮೂಲಕ ಅಧಿಪತ್ಯ ಸಾಧಿಸಿರುವ ಅಲ್ಪಸಂಖ್ಯಾತ ಜನ ಅವಕಾಶಕೊಟ್ಟು ಎಲ್ಲ ವರ್ಗಗಳ ಜನರನ್ನು ಒಂದೇ ವಾಹಿನಿಗೆ ತರುವಲ್ಲಿ ತಮ್ಮ ಸಹಕಾರ ನೀಡುವರೇ ಎಂಬುದನ್ನು ಕಾಲವೇ ನಿರ್ಧರಿಸಬೇಕು. ಇದೇ ಇಂದಿನ ಯಕ್ಷ ಪ್ರಶ್ನೆಯಾಗಿದೆ. 
comments powered by Disqus
Top