ಜಾತಿ ಸಂವಾದ - ಅಭಿಪ್ರಾಯ 5

ಜಾತಿಯೊಳಗೆ ನಾವ... ನಮ್ಮೊಳಗೆ ಜಾತಿಯ.?
- ನಿರಂಜನ ಆಚಾರ್ಯ ಕಡ್ಲಾರು, ಸುಳ್ಯ ತಾಲೂಕು. ದ.ಕ

ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದಲ್ಲಿ ’ಜಾತಿ’ ಬೇಕೇ? ಎಂಬ ಜಿಜ್ಞಾಸೆ ಮೂಡುವುದಂತೂ ಸಹಜ. ಜಾತಿ ಪ್ರಿಯರಿಗೆ ಜಾತಿ ಮುಖ್ಯವೆನಿಸಿದರೆ, ಜಾತ್ಯಾತೀತರಿಗೆ ಜಾತಿ ಬೇಡ.ಆದರೆ ಬಹುಸಂಖ್ಯಾತರು ಜಾತಿಯನ್ನು ಬೆಂಬಲಿಸುತ್ತಾರೆ. ಭಾರತದಲ್ಲಿ ಸುಮಾರು ೨೦೦೦ ಕ್ಕಿಂತಲೂ ಹೆಚ್ಚಿನ ಜಾತಿಗಳು ಇದ್ದು, ಅವು ಒಂದಕ್ಕಿಂತ ಒಂದು ಭಿನ್ನವಾಗಿದೆ. ’ಜಾತಿ ದೇವರ ಸೃಷ್ಟಿ’ ಎಂಬುದು ಜಾತಿ ಬೆಂಬಲಿಗರ ಮಾತು. ದೇವರ ಇರುವಿಕೆಯ ಮೇಲೆ ಅನುಮಾನ ಇರುವಾಗ ಜಾತಿ ದೇವರ ಸೃಷ್ಟಿ ಎಂಬುದನ್ನು ನಂಬಲು ಅಸಾದ್ಯ. "ಜಾತಿ ಮಾನವ ನಿರ್ಮಿತ ಒಂದು ಸಂಘಟ" ಎಂದು ವಿದ್ವಾಂಸರ ಮಾತು. ಇದನ್ನು ಜಾತಿ ವಿರೋಧಿಗಳು ವಾದಿಸುವುದು ಸಾಮಾನ್ಯ.

  ಆದರೆ, ಜಾತಿಯೊಳಗೆ ನಾವು ಇದ್ದೇವಾ? ಅಥವಾ ನಮ್ಮೊಳಗೆ ಜಾತಿಯಿದೆಯಾ? ಎಂಬುದನ್ನು ನಾವು ತಿಳಿದುಕೊಳ್ಳಬೇಕಾಗಿದೆ. ಅಂದಿನಿಂದ ಇಂದಿನವರೆಗೂ ಜಾತಿಯನ್ನು ಮೇಲೈಸುತ್ತಾ ಬಂದಿರುವ ನಾವು ಈ ಪ್ರಶ್ನೆಯನ್ನು ನಮ್ಮಲ್ಲಿ ನಾವು ತರ್ಕಿಸಬೇಕಾಗಿದೆ. ಕೆಲವು ಶತಮಾನಗಳ ಹಿಂದಿನ ಇತಿಹಾಸವನ್ನು ಗಮನಿಸಿದರೆ, ಇಂದು ಜಾತಿಯ ಬಲಿಷ್ಟತೆ ಕ್ಷೀಣಿಸುತ್ತಿದೆ. ಆದರೆ ಪ್ರಸ್ತುತ ಸಮಾಜದಲ್ಲಿ ರಾಜಕೀಯವಾಗಿ, ಧಾರ್ಮಿಕವಾಗಿ ಹಾಗೂ ಸಾಮಾಜಿಕವಾಗಿ ಜಾತಿಯೇ ಕೆಲಸ ಮಾಡುತ್ತಿದೆ ಎಂಬುದು ಸ್ಥೂಲ ನೋಟಕ್ಕೆ ಕಂಡು ಬರುತ್ತಿದೆ. ನಮ್ಮ ರಾಜ್ಯದಲ್ಲಿ ಗಮನಿಸಿದರೆ, ರಾಜಕೀಯವಾಗಿ ಎರಡು ಜಾತಿಗಳಾದ ಲಿಂಗಾಯತ ಮತ್ತು ಒಕ್ಕಲಿಗರು ಬಲಿಷ್ಟವಾಗಿದ್ದು, ತಮ್ಮ ವರ್ಚಸ್ಸನ್ನು ಕಾಯ್ದುಕೊಂಡಿದೆ. ಹಾಗೆಯೆ ಇನ್ನಿತರರು ತಮ್ಮ ತಮ್ಮ ಜಾತಿಯ ಬಗ್ಗೆ ಅಪಾರ ಕಾಳಜಿಯಿಂದ ಕಾರ್ಯಪ್ರವೃತ್ತರಾಗಿದ್ದಾರೆ. ಜಾತಿಯ ಮೂಲಕ ರಾಜಕೀಯ ಪಕ್ಷದ ಉಳಿವಿಗಾಗಿ ಹಾಗೂ ರಾಜಕೀಯದ ಮೂಲಕ ಜಾತಿ ಉಳಿಯಲು ಸಾದ್ಯ. ಎಂಬುದು ರಾಜಕಾರಣಿಗಳ ನಿಲುವು ಆಗಿರುತ್ತದೆ.
 
ಇನ್ನು ಭೂಸುರರು ತಮ್ಮ ಬೇರನ್ನು ಧಾರ್ಮಿಕ ಕ್ಷೇತ್ರದಲ್ಲಿ ಗಟ್ಟಿಯಾಗಿ ಹಿಡಿದಿಟ್ಟಿದ್ದಾರೆ. ಅವರ ಅಡಿಯಾಳಾಗಿ ಉಳಿದ ಜಾತಿಗಳನ್ನು ಮುಷ್ಟಿಯಲ್ಲಿ ಇಟ್ಟುಕೊಂಡು ತಮ್ಮ ಅಂತಸ್ತನ್ನು ಮೇಲಿನ ಸ್ತರಕ್ಕೆ ಇರಿಸಿದ್ದಾರೆ. ಇದನ್ನು ನಾವುಗಳು ನಂಬಿಕೆ, ಆಚಾರವೆಂದು ದೃಢವಾಗಿ ನಂಬಿದ್ದೇವೆ. ಇತ್ತೀಚೆಗೆ ಸುದ್ದಿ ಮಾಡಿರುವ ಕುಕ್ಕೆ ಸುಬ್ರಹ್ಮಣ್ಯದ ’ಮಡೆಮಡಸ್ನಾನ ಪ್ರಕರಣದ ಇಂತಹ ಧಾರ್ಮಿಕತೆಯನ್ನು ವಿರೋಧಿಸುವ ಪ್ರಸಂಗವಾಗಿದೆ. ಆದರೆ ಬ್ರಾಹ್ಮಣೇvರರಿಂದಲೇ ಇದಕ್ಕೆ ವಿರೋಧ ನಿಲುವು ಇದ್ದದ್ದು ಕಾಣಬಹುದು.
 
 ಕರಾವಳಿಯಲ್ಲಿ ಪ್ರಸಿದ್ಧಿಯಾಗಿರುವ ದೈವಾರಾಧನೆಯಲ್ಲಿ ಹೆಚ್ಚಿನ ದೈವಗಳು ಕೆಳಜಾತಿಯಿಂದ ಬಂದವುಗಳೆಂದು ಗಮನಿಸಬೇಕಾಗಿದೆ . ಇವು ಕೆಳಜಾತಿಯಿಂದ ಬಂದರೂ ಇವರನ್ನು ಬ್ರಾಹ್ಮಣರು ಕೂಡ ಆರಾಧಿಸುತ್ತಾರೆ. ಇದು ದೈವತ್ವದ ನೆಲೆಯಿಂದಮಾತ್ರ ಸಾದ್ಯವಾಗಿದೆ. ಆದರೆ ಇಲ್ಲಿ ಕೂಡ ಜಾತಿಯತೆ ಇದೆ ಎಂಬುದನ್ನು ಕಾಣಬಹುದು. ಇದಕ್ಕೆ ಇತ್ತೀಚೆಗೆ ಸುಳ್ಯದಲ್ಲಿ ತಿಲಾಂಜಲಿ ಹಾಡಿದ ’ದೈವದ ಭಂಡಾರ ಬರುವಾಗ ದಲಿತರು ಮನೆ ಬಿಡಬೇಕಾದ ಸಂಪ್ರದಾಯ’ ಉದಾಹರಣೆಯಾಗಿ ನೋಡಬಹುದು. ಇವೆಲ್ಲವು ಸಂಪ್ರದಾಯ-ಆಚರಣೆಗೆ ಸೀಮಿತವಾಗಿ ಜಾತೀಯತೆ ಇದೆ.
  
ಸಾಮಾಜಿಕವಾಗಿ ಗಮನಿಸಿದರೆ ಜಾತಿ ಗಾಢವಾಗಿ ಬೇರು ಬಿಟ್ಟಿದೆ. ಎಲ್ಲದಕ್ಕೂ ಇಲ್ಲಿ ಜಾತಿ ನಿರೂಪಿಸುತ್ತದೆ. ಜಾತಿಯ ಮೂಲಕ ತಮ್ಮ ತಮ್ಮ ಪ್ರತಿಷ್ಟೆ ಕಾಯ್ದು ಕೊಳ್ಳುವುದು ಸಾಮಾನ್ಯವಾಗಿದೆ. ಬ್ರಾಹ್ಮಣಕೇರಿ-ದಲಿತಕೇರಿ ಎಂದು ಊರನ್ನೇ ವಿಭಾಗಿಸುತ್ತಾರೆ. ಅದೇ ರೀತಿ ಮಠಗಳಲ್ಲಿ ಮೇಲ್ವರ್ಗದವರು ತಂಗಿದ್ದರೆ, ಇತರರಿಗೆ ಛತ್ರವೇ ಗತಿ. ಭೋಜನದಲ್ಲಿಯೂ ಅಷ್ಟೆ ಕೆಳವರ್ಗದವರಲ್ಲಿ ಮೇಲ್ವರ್ಗವರು ಉಣ್ಣುವಂತಿಲ್ಲ. ಅದು ಬಿಡಿ ಕೆಳವರ್ಗದವರು ಮೇಲ್ವರ್ಗದವರ ಮನೆಗೆ ಪ್ರವೇಶಿಸುವಂತಿಲ್ಲ. ಆದರೆ ಅಧಿಕಾರಿಯೋ ರಾಜಕಾರಣಿಯೋ ಪ್ರವೇಶಿಸಿದರೆ ಮಾತನಾಡಲು ಅವಕಾಶವಿಲ್ಲದೆ ಸುಮ್ಮನಿರುವುದುಂಟು.
 
ಎಲ್ಲ ಆಗು ಹೋಗುಗಳಲ್ಲಿ ಜಾತಿಯೇ ನಾಟ್ಯವಾಡುವುತ್ತಿದ್ದು ಇದು ನಿಜವಾದ ಮನುಷ್ಯತ್ವದ ಕೊಲೆಯಾಗಿ ಪರಿಣಮಿಸುತ್ತದೆ. ಇದನ್ನು ನಾವು ಅರ್ಥಮಾಡಿಕೊಳ್ಳಲು ಯಾಕೆ ಸಾಧ್ಯವಿಲ್ಲ. ಜಾತಿಯೆಂಬ ರೋಗ ಮನುಷ್ಯನನ್ನು ಅಂಟಿಕೊಂಡಿದ್ದು, ಇದು ’ನಮ್ಮೊಳಗೆ ಜಾತಿಯ? ಜಾತಿಯೊಳಗೆ ನಾವಾ?’ ಎಂದು ಚಿಂತಿಸುವಂತೆ ಮಾಡುತ್ತದೆ ಮನುಷ್ಯನೇ ಸೃಷ್ಟಿಸಿದ ಈ ಜಾತಿಯು ಮನುಷ್ಯನ ಮನಸ್ಸನ್ನು ಬಲವಾಗಿ ಅಚ್ಚಾಗಿ ಹೋಗಿದೆ. ಇದು ಪಾರಂಪರಿಗತವಾಗಿ ಮನುಷ್ಯನನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುತ್ತದೆ. ಆದರೆ ಈ ಜಾತಿಯನ್ನು ನಮ್ಮ ಮನಸ್ಸಿನಿಂದ ತೊಳೆಯುವುದು ಹೇಗೆ ? ನೀರಿನಿಂದ ತೊಳೆದರೆ ಹೋದಿತೇ? ಗಂಗಾಜಲ ಸಿಂಪಡಿಸಿದರೆ ಸರಿ ಆದಿತೇ? ಇವೆಲ್ಲವು ಆಚರಣೆಗೆ ಮಾತ್ರ ಸೀಮಿತ. ನಮ್ಮನ್ನು ನಾವು ಪ್ರಶ್ನಿಸಿಕೊಂಡರೆ ಜಾತಿಯನ್ನು ತೊರೆಯಬಹುದೋ ಏನೋ? ಆದರೆ ಹೀಗೆ ಪ್ರಶ್ನಿಸಿಕೊಳ್ಳುವರು. ಈ ದೇಶದಲ್ಲಿ ಎಷ್ಟು ಜನ ಇರಬಹುದು. ಎಲ್ಲರು ತಮ್ಮ ಪ್ರಚಾರಕ್ಕೋಸ್ಕರ ವೇದಿಕೆಯಲ್ಲಿ ಮೇಜು ಗುದ್ದುವವರು ಎಷ್ಟೋ ಜನ ಇದ್ದಾರೆ. ಆದರೆ ಅವರ‍್ಯಾರು ಜಾತ್ಯಾತೀತ ಪಾಲನೆ ಮಾಡುತ್ತಾರೆ ಎಂಬುದರಲ್ಲಿ ಹುರುಳಿಲ್ಲ.
  
ನಿಜವಾಗಿ ಜಾತಿಯನ್ನು ತ್ಯಜಿಸುವುದು ನಮ್ಮ ಮನಸ್ಸಿನಿಂದ ಜಾತಿಯನ್ನು ಕಿತೆಸೆದಾಗ ಮಾತ್ರ. ’ಹನಿ ಹನಿಗೂಡಿ ಹಳ್ಳ’ ವೆಂಬಂತೆ ಪ್ರತಿಯೊಬರೂ ಜಾತಿಯನ್ನು ತ್ಯಜಿಸಿದಾಗ ಜಾತಿ ನಿರ್ನಾಮವಾಗಬಹುದು. ಆವಾಗ ತಿಳಿಯುತ್ತದೆ. ಜಾತಿಯೊಳಗೆ ನಾವಿಲ್ಲ... ನಮ್ಮೊಳಗೆ ಜಾತಿಯಿದೆ’ ಎಂದು.
comments powered by Disqus
Top