ಜಾತಿ ಸಂವಾದ - ಅಭಿಪ್ರಾಯ 6

ಜಾತಿ ಆಚರಣೆ ಗೊತ್ತು ಗುರಿ ಇಲ್ಲದ್ದೇ?
ಹೆಸರು ಬೇಡ.

ಜಾತಿ ಎಂಬುದು ಮೂಲದಲ್ಲಿ ವರ್ಣವ್ಯವಸ್ಥೆಯ ರೂಪದಲ್ಲಿತ್ತು ಎಂಬುದು ಎಲ್ಲರಿಗೂ ತಿಳಿದ ಸಂಗತಿ. ನಾಗರಿಕತೆ ಬೆಳೆದಂತೆಲ್ಲಾ ಹತ್ತು ಹಲವು ಉದ್ಯೋಗಗಳು ಹುಟ್ಟಿಕೊಂಡು, ಕುರಿ ಕಾಯುವವರನ್ನು ಕುರುಬ, ಮಡಿಕೆ ಮಾಡುವವರನ್ನು ಕುಂಬಾರ. ಆಭರಣಗಳನ್ನು ತಯಾರಿಸುವವರನ್ನು ಅಕ್ಕಸಾಲಿಗ, ಬಟ್ಟೆ ನೇಯುವವನ್ನು ನೇಕಾರ, ಎಂದು ಮುಂತಾಗಿ ಉದ್ಯೋಗದ ಆಧಾರದ ಮೇಲೆ ಗುರುತಿಸಲಾಯಿತು ಎಂದು ವಿವಿಧ ಮೂಲಗಳಿಂದ ತಿಳಿದು ಬರುವ ಸಂಗತಿ. 

ಸಂವಿಧಾನದಲ್ಲಿ ಜಾತಿ ಮೀಸಲಾತಿ ವಿಷಯವನ್ನು ಸೇರ್ಪಡೆ ಮಾಡಿದ್ದರ ಉದ್ದೇಶ ತುಳಿತಕ್ಕೆ ಒಳಗಾದ ಜನರಿಗೆ ಅವರ ಮೂಲ ಭೂತ ಹಕ್ಕುಗಳನ್ನು ಒದಗಿಸುವುದಾಗಿದೆ ನಿಜ. ಆದರೆ ಯಾವಾಗ ರಾಜಕೀಯ ಪಕ್ಷಗಳು ಜಾತಿ ರಾಜಕಾರಣದ ಕೆಸರನ್ನು ಎರಚತೊಡಗಿದವೋ, ಆವಾಗಿನಿಂದಲೇ ಸಾಮಾನ್ಯ ಜನರು ಮತ್ತಷ್ಟು ಜಾತಿ ಪ್ರಜ್ಞೆಯಿಂದ ಗುಂಪುಗಾರಿಕೆಯಲ್ಲಿ ತೊಡಗಿದರು. ಇದು ಊದುವುದನ್ನು ಕೊಟ್ಟು ಬಾರಿಸುವುದನ್ನು ತೆಗೆದುಕೊಂಡರು ಎಂಬಂತೆ ಆಗಿದೆ. 
 
ಗ್ರಾಮ ಪ್ರಧಾನವೇ ಆಗಿರುವ ನಮ್ಮ ನಾಡಿನಲ್ಲಿ ಜನಸಾಮಾನ್ಯರು, ಒಂದೇ ಊರಿನಲ್ಲಿರುವ ವಿವಿಧ ಜಾತಿಯ ಜನರು ’ಆಯಾ’  ಪದ್ಧತಿಯನ್ನು ಆಚರಿಸುತ್ತ ಪರಸ್ಪರ ಅವಲಂಬಿತರಾಗಿ, ಸಾಮರಸ್ಯದ ಜೀವನ ನಡೆಸಿದ ಉದಾಹರಣೆಯನ್ನು ನಮ್ಮ  ಗುರು-ಹಿರಿಯರಿಂದ ತಿಳಿದುಕೊಂಡಿದ್ದೇವೆ. ಇನ್ನೊಂದು ಕಡೆ ದುರ್ಬಲ ವರ್ಗದ ಜನತೆಯನ್ನು ಶೋಷಿಸಿದ ಸಂಗತಿಯೂ ನಿಜ. ಆದರೆ ಸರಕಾರದ ಎಲ್ಲಾ ಕಾಗದ ಪತ್ರಗಳಲ್ಲಿ, ಸಲ್ಲಿಸಬೇಕಾದ ಅರ್ಜಿಗಳಲ್ಲಿ, ದಾಖಲೆಗಳಲ್ಲಿ ಜಾತಿ ಸೂಚಕ ಅಂಕಣ ಯಾವ ಉದ್ದೇಶಕ್ಕೆ ಮುದ್ರಿತವಾಗಿರುತ್ತದೆ? ಇದಕ್ಕೆ ಸೂಕ್ತ ಉತ್ತರ ಹೊಳೆದರೆ ಜಾತಿ ಪದ್ಧತಿಯನ್ನು ಇಂದಿಗೂ ಯಾಕೆ ಆಚರಿಸಲಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. 
 
ಹಿಂದುಳಿದ ಗ್ರಾಮಗಳಲ್ಲಿ ಇಂದಿಗೂ ಅಸ್ಪೃಶ್ಯತೆ ಇರುವುದನ್ನು ಅಲ್ಲಗಳೆಯಲಾಗದು. ಆದರೆ  ಸಂವಿಧಾನಪೂರ್ವ ಸಂದರ್ಭಗಳಿಗೆ ಹೋಲಿಸಿದರೆ ಇಂದು ಜಾತಿ ಆಧಾರಿತ ದುಸ್ಕೃತ್ಯಗಳು ಬಹಳ ಕಡಿಮೆಯಾಗಿವೆ ಎಂದೇ ಅನ್ನಿಸುತ್ತದೆ. ಆದರೆ ಜನರ ಸಾಮಾಜಿಕ ಜೀವನದಲ್ಲಿ ರಾಜಕೀಯದ ಸೋಂಕು ತಾಕಿದ್ದು ಸುಳ್ಳಲ್ಲ. ಜಾತಿ ಪದ್ಧತಿಯ ಎಲ್ಲಾ ಕಹಿ ಅಂಶಗಳನ್ನು ಬಿಟ್ಟು ಒಟ್ಟಾಗಿ ಬಾಳುವ ತುಡಿತದಲ್ಲಿರುವ ಜನರನ್ನು ಜಾತಿ ಆಧಾರದ ಮೇಲೆ ವಿಂಗಡಿಸಿ ಮತ ಯಾಚನೆ ಮಾಡುತ್ತಿರುವ ರಾಜಕಾರಣಿಗಳು, ಜಾತಿ ವ್ಯವಸ್ಥೆ ಮತ್ತೊಂದು ಕ್ಲಿಷ್ಟ ರೂಪ ತಾಳುವಂತೆ ಮಾಡುತ್ತಿದ್ದಾರೆ.  
 
comments powered by Disqus
Top