ಜಾತಿ ಸಂವಾದ - ಅಭಿಪ್ರಾಯ 7

ಎಲ್ಲರೂ ಜಾತಿಬುದ್ಧಿ ಮಾಡುವವರೆ
ಪದ್ಮಾಕೃಷ್ಣಮೂರ್ತಿ, ತುಮಕೂರು

ಯಾರನ್ನು ಕೇಳಿದರೂ ಜಾತಿ ಬುದ್ಧಿ ಮಾಡಬಾರದು ಎನ್ನುತ್ತಾರೆ, ಆದರೆ ಎಲ್ಲರೂ ಜಾತಿಬುದ್ಧಿ ಮಾಡುವವರೆ.  ಒಮ್ಮೆ ಅಂತರ್ಜಾತಿ ಹುಡುಗ ಹುಡುಗಿ ಮದುವೆಯಾಗಿ ನೇರ ನಮ್ಮ ಮನೆಗೆ ಬಾಡಿಗೆಗೆ ಬಂದರು. ಅವರ ಹತ್ತಿರ ಏನೂ ಇರಲಿಲ್ಲ. ಅವರ ಪರಿಸ್ಥಿತಿ ನೋಡಿ ನಾವು ಇರಲು ಅವಕಾಶ ಕೊಟ್ಟೆವು. ಅವರಲ್ಲಿ ಹುಡುಗಿ ಬ್ರಾಹ್ಮಣ ಜಾತಿಗೆ ಸೇರಿದ್ದರೆ ಹುಡುಗ ಕೆಳ ಜಾತಿಗೆ ಸೇರಿದವನಾಗಿದ್ದ. 

ಆದರೆ ವಿಶೇಷ ಎಂದರೆ ಆ ಹುಡುಗಿ ಕಡೆಯವರು ಅಂದರೆ ಬ್ರಾಹ್ಮಣರು ಆ ಮದುವೆ ಒಪ್ಪಿಕೊಂಡರು. ಆ ಹುಡುಗನ ಕಡೆಯವರು ಅವನನ್ನು ಉಗಿದು  ಕಣ್ಣೆತ್ತಿಯೂ ನೋಡದೆ ಹೊರಹಾಕಿದರು. ಎಷ್ಟೋ ಇಂತಹ ಘಟನೆಗಳು ನಮ್ಮ ಕಣ್ಣೆದುರಿಗಿದೆ. ಹಾಗಾಗಿ ಮೇಲ್ಜಾತಿ ಕೆಳಜಾತಿ ಎನ್ನದೆ ಎಲ್ಲರೂ ಜಾತಿ ಬಗ್ಗೆ ತಲೆಕೆಡಿಸಿಕೊಳ್ಳುವವರೆ.  ಪ್ರತಿಯೊಬ್ಬರಿಗೂ ಅವರವರ ಜಾತಿ ಮೇಲೆ ಅಭಿಮಾನ ಇದ್ದೇಇರುತ್ತದೆ. ಕುಟುಂಬ ವ್ಯವಸ್ಥೆಯಲ್ಲಿ ಜಾತಿ ಮಹತ್ವದ ಪಾತ್ರ ವಹಿಸಿ ಭದ್ರವಾಗಿರುತ್ತದೆ. 
 
ಇನ್ನು ಅಂತರ್ಜಾತಿ ವಿವಾಹವಾದವರು ಆರ್ಥಿಕವಾಗಿ ಸಬಲರಾಗಿದ್ದರೆ ಬದುಕಲು ಯಾವ ತೊಂದರಯೂ ಇಲ್ಲ. ಇವರ ಮೇಲೆ ಇವರ ಕುಟುಂಬದವರು ಡಿಪೆಂಡ್ ಆಗಿದ್ದರಂತೂ ಅನಿವಾರ್ಯವಾಗಿ ಅವರು ಒಪ್ಪಿಕೊಳ್ಳಲೇ ಬೇಕು. ಹಾಗಾಗಿ ಮದುವೆಯಾಗುವವರು ಮೊದಲು ಆರ್ಥಿಕವಾಗಿ ಸಬಲರಾಗಬೇಕು. ಯಾವ ಜಾತಿಯವರೇ ಆಗಲಿ ಸಾಮಾನ್ಯವಾಗಿ ಅಧಿಕಾರಕ್ಕೆ ಬಂದರೆಂದರೆ ತಮ್ಮವರ ಮೇಲೆ ಒಲವು ತೋರಿಸುತ್ತಾರೆ. ರಾಜಕೀಯದಲ್ಲಂತೂ ಟಿಕೆಟ್ ಕೊಡುವುದೇ ಜಾತಿ ಜನರ ನೋಡಿ. 
 
ಸರ್ಕಾರದ ಅಳಿವು ಉಳಿವು ಸಹ ಜಾತಿಯನ್ನವಲಂಬಿಸಿದೆ. ಅನೇಕ ಸಹಕಾರಿ ಸಂಸ್ಥೆಗಳು ಖಾಸಗಿ ಬ್ಯಾಂಕುಗಳು ಜಾತಿ ಜನರಿಂದಲೇ ಸ್ಥಾಪಿಸಲ್ಪಟ್ಟು ಅಲ್ಲಿ ನೌಕರಿ ಮಾಡುವವರು ಸಹ ಅದೇ ಜಾತಿಗೆ ಸೇರಿರುತ್ತಾರೆ. ಇನ್ನು ಮನೆ ಬಾಡಿಗೆಗೆ ಕೊಡುವವರು ಸಹ ತಮ್ಮ ಜಾತಿಯವರನ್ನೇ ಹುಡುಕುತ್ತಾರೆ. ಇಲ್ಲಿ ಮೇಲ್ಜಾತಿ ಕೆಳಜಾತಿ ಎನ್ನುವುದಕ್ಕಿಂತ ತಮ್ಮವರೇ ಇರಲಿ ಎನ್ನುವವರೇ ಹೆಚ್ಚು. ಮಠಮಾನ್ಯಗಳೂ ಸಹ ಇದಕ್ಕೇನೂ ಹೊರತಲ್ಲ. ಎಲ್ಲಾ ಜಾತಿಗಳಲ್ಲೂ ಸಹ ಮಠಗಳು ಹುಟ್ಟಿಕೊಳ್ಳಿತ್ತಿವೆ ಹಾಗೇ ಸ್ವಾಮೀಜಿಗಳೂ ಹುಟ್ಟಿಕೊಳ್ಳುತ್ತಿದ್ದಾರೆ. ಶಿಕ್ಷಣ ಸಂಸ್ಥೆಗಳೂ ಸಹ ಜಾತಿ ಪೋಷಕಗಳಾಗುತ್ತಿವೆ. ಹಾಗಾಗಿ ಈ ಜಾತಿ ಬೇಕೆ ಬೇಡವೆ ಎಂಬುದನ್ನು ಎಲ್ಲಿಂದ ಶುರು ಮಾಡುವುದು? ಹಾಗಾಗಿ ಯಾರನ್ನೇ ಕೇಳಿ, ಜಾತಿ ಕಟ್ಕೊಂಡ್ ಏನಾಗ್‌ಬೇಕು ಎನ್ನುತ್ತಾರೆ, ಆದರೆ ಜಾತಿಬುದ್ಧಿ ಮಾತ್ರ ಬಿಡಲ್ಲ.
comments powered by Disqus
Top