ಜಾತಿ ಸಂವಾದ - ಅಭಿಪ್ರಾಯ 8

ಮಾನವ ಪ್ರಕೃತಿ ಸಹಜ ಸೃಷ್ಟಿ, ಜಾತಿಯಲ್ಲ.
ರಾಜಾ ಹೊಸಮಾಳ/ಮೈಸೂರು

ಇತರೇ ಜೀವಗಳಂತೆ ಮನುಷ್ಯನೂ ಒಂದು ಜೀವಿ. ಪ್ರತಿಯೊಂದು ಜೀವಿಗೂ ಜೀವ ಇರುತ್ತದೆ. ಹಾಗೆಯೇ ಪ್ರತಿ ಜೀವಿಗೂ ಹಸಿವು ಆಗುತ್ತದೆ. ಬಾಯಾರಿಕೆ ಆಗುತ್ತದೆ. ನಿದ್ರೆ ಮಾಡುತ್ತವೆ. ಸಂತಾನ ಪಡೆಯುವ ಶಕ್ತಿ ಇರುತ್ತದೆ. ಇದು ಪ್ರತಿಯೊಂದು ಜೀವಿಗಳಿಗೂ ಇರುವ ಗುಣ ಲಕ್ಷಣ. ಅವು ಪ್ರಾಣಿ-ಪಕ್ಷಿ ಇರಬಹುದು, ಕ್ರೀಮಿ-ಕೀಟ ಇರಬಹುದು. ಇವುಗಳಲ್ಲಿ ನಮ್ಮ ತಲೆಯಲ್ಲಿ ಇರುವ ಹೇನಿನಿಂದ ಇಡೀದು ಸಮುದ್ರದಲ್ಲಿ ಇರುವ ತಿಮಿಂಗಿಲವೂ ಸೇರಿವೆ.

ಈ ಎಲ್ಲಾ ಜೀವಿಗಳಂತೆ ಮನುಷ್ಯನೂ ಒಂದು ಜೀವಿ. ವಿಶೇಷವಾಗಿ ಈ ಜೀವಿಗಳ ಪೈಕಿ ಮನುಷ್ಯನಿಗೆ ಮಾತನಾಡುವ ಶಕ್ತಿ ಇದೆ. ಈ ಮಾತನಾಡುವ ಶಕ್ತಿಯಿಂದಾಗಿ ಇತರೇ ಜೀವಿಗಳಿಗಿಂತ ಮನುಷ್ಯ ಭಿನ್ನವಾಗಿದ್ದಾನೆ. ಈ ಒಂದು ಕಾರಣಕ್ಕೆ ಮನುಷ್ಯನೂ ತಾನು ಮೇಲು ಎಂದುಕೊಂಡ. ಎಲ್ಲವನ್ನು ಹಾಗೂ ಎಲ್ಲರನ್ನು ತಾನು ನಿಯಂತ್ರಿಸಬಲ್ಲೆ ಎನ್ನುವ ಅಹಂ ಹಾಗೂ ದುಷ್ಟತನ ರೂಢಿಸಿಕೊಂಡ. 
 
ಈ ಭಾವನೆಯು ಸ್ವಾರ್ಥ ಸಾಧನೆಗೆ ರಹದಾರಿ ಆಯಿತು. ಮನುಷ್ಯ iನುಷ್ಯರಲ್ಲೆ ತಾನು ಮೇಲು, ತನಗಿಂತ ಇತರರು ಕೀಳು ಎನ್ನುವ ಭಾವನೆ ಮೊಳಕೆ ಹೊಡೆಯಿತು. ಇದಕ್ಕೆ ದೇವರು, ಧರ್ಮ ಮತ್ತು ಜಾತಿ-ಇವುಗಳ ಸೃಷ್ಟಿಗೆ ಮುಂದಾದ, ಜತೆಗೆ ಇವುಗಳನ್ನೆ ಅಸಮಾನತೆಯ ಸೃಷ್ಟಿಗೆ ಅಸ್ತ್ರವನ್ನಾಗಿ ಬಳಸಿಕೊಂಡ. 
ನಮ್ಮಲ್ಲಿನ ದೇವರು-ಧರ್ಮ-ಜಾತಿ ಈ ಮೂರಕ್ಕೂ ಪರಸ್ಪರ ಸಂಬಂದವಿದೆ. ಇವುಗಳನ್ನು ಒಂದರಿಂದ ಮತ್ತೊಂದನ್ನು ಬೇರ್ಪಡಿಸುವುದು ಅಸಾಧ್ಯವಾಗಿದೆ. ಯಾರೇ ಆದರೂ ದೇವರನ್ನು ಪೂಜಿಸುವ /ಆರಾಧಿಸುವ ಉದ್ದೇಶ ಒಂದೇ ಆಗಿರುತ್ತದೆ. ಆದರೆ ಪೂಜಿಸುವ ದೇವರ ಹೆಸರು ಹಾಗೂ ವಿಧಾನ ಬೇರೆ ಬೇರೆ ಆಗಿರುತ್ತದೆ. ಈ ಒಂದೇ ಕಾರಣಕ್ಕೆ ಮನುಷ್ಯರಾದ ನಾವು ಹಿಂದೂ, ಮುಸ್ಲಿಂ, ಕ್ರೈಸ್ತರು ಎಂದು ಬೇರೆ ಬೇರೆ ಆಗಿದ್ದೇವೆ. ಮಾತು ಕಲಿತ ಮನುಷ್ಯ ಕಂಡುಹಿಡಿದ ಈ ದೇವರು-ಧರ್ಮ-ಜಾತಿಗಳು ಇತರೇ ಜೀವಿಗಳಲ್ಲಾಗಲಿ, ಪ್ರಾಣಿಗಳಲ್ಲಾಗಲಿ ಕಂಡು ಬರುವುದಿಲ್ಲ ಎಂಬುದನ್ನು ಮರೆತ್ತಿದ್ದೇವೆ.
 
ದೇವರ ಸೃಷ್ಟಿ ಅಸಮಾನತೆಗೆ ಮೂಲ!
ಆದಿಮಾನವ ಪ್ರಾಣಿಗಳಂತೆ ಬದುಕುತ್ತಿದ್ದ. ಗೆಡ್ಡೆಗೆಣಸು ತಿನ್ನುತ್ತಿದ್ದ. ಬೇಟೆಯಾಡಿ ಮಾಂಸ ತಿನ್ನುತ್ತಿದ್ದ. ಕಂಡಲ್ಲಿ ನೀರು ಕುಡಿಯುತ್ತಿದ್ದ. ಮರದ ಪೊಟರೆ-ಗುಹೆಗಳಲ್ಲಿ ಮಲಗುತ್ತಿದ್ದ. ಹೀಗಿರುವಾಗ, ತನ್ನ ಸುತ್ತ ಮುತ್ತ ಆಗುತ್ತಿದ್ದ ಬದಲಾವಣೆಗಳನ್ನು ಗಮನಿಸುತ್ತಿದ್ದ. ಸೂರ‍್ಯ ಚಂದ್ರರು ಮೂಡಿದಾಗ ಬೆಳಕಾಗುವುದು, ಮುಳುಗಿದಾಗ ಕತ್ತಲಾಗುವುದು, ಇವುಗಳು ಕೈಗೆ ಎಟುಕದಂತೆ ಇರುವುದು-ಇವು ಅವನಲ್ಲಿ ಆಶ್ಚರ‍್ಯ ಉಂಟು ಮಾಡುತ್ತಿದ್ದವು. ಹಾಗೆಯೇ ಮರಗಳು ಮುರಿದು ಬೀಳುವಂತೆ ಬೀಸುವ ಗಾಳಿ, ಕಾಡನ್ನೆಲ್ಲಾ ಸುಟ್ಟು ಬೂದಿ ಮಾಡುವ ಬೆಂಕಿ, ದಿಢೀರನೆ ಎಗರುವ ಸಿಡಿಲು, ದಟ್ಟ ಮೋಡ ಕರಗಿ ಬೀಳುವ ಮಳೆ-ಪ್ರವಾಹ-ಇವು ಭಯ ಉಂಟು ಮಾಡುತ್ತಿದ್ದವು.
 
ಆದಿಮಾನವ ತಾನು ನೋಡಿದ ದೃಶ್ಯಗಳಿಗೆ ಹೆದುರುತ್ತಿದ್ದ. ಕೇಳಿದ ಶಬ್ದಕ್ಕೆ ಅಂಜುತ್ತಿದ್ದ. ಕಂಡ ಕನಸಿಗೆ ಭಯ ಭೀತನಾಗುತ್ತಿದ್ದ. ಪ್ರಾಣಿ ಪಕ್ಷಿಗಳ ದಾಳಿಗೆ ತತ್ತರಿಸುತ್ತಿದ್ದ. ಇವು ಏನು? ಏಕೆ? ಹೇಗೆ? ಎನ್ನುವ ಪ್ರಶ್ನೆಗಳಿಗೆ ಉತ್ತರ ತಿಳಿಯುತ್ತಿರಲಿಲ್ಲ ಹಾಗೂ ಗೊತ್ತಾಗುತ್ತಿರಲಿಲ್ಲ. ಆಗ ಯಾವುದೋ ಶಕ್ತಿ, ಮಾಯೆ ಹೀಗೆಲ್ಲಾ ಮಾಡುತ್ತಿರಬಹುದು ಎಂದು ಊಹಿಸಿದ. ಈ ಊಹೆ ಅವನ ನಂಬಿಕೆ ಆಯಿತು. ನಂತರ ಈ ನಂಬಿಕೆಯೇ ಅವನ ದೇವರಾಯಿತು. ಆ ದೇವರನ್ನು ತಾನು ಒಲಿಸಿಕೊಲ್ಲಬೇಕು, ತೃಪ್ತಿಪಡಿಸಬೇಕು. ಆಗ ತನಗೆ ಯಾವ ತೊಂದರೆಯೂ ಆಗದು. ತಾನೂ ಕೇಳಿದನ್ನು ಪಡೆಯಬಹುದು ಎಂದು ನಂಬಿದ. ಅದಕ್ಕಾಗಿ ಪೂಜೆ ಪುರಸ್ಕಾರಕ್ಕೆ ಮುಂದಾದ.
 
ಆದರೆ ಆದಿಮಾನವನು ಇದ್ದ ಪ್ರಪಂಚದಲ್ಲಿ ಈಗಿರುವಂತೆ ಕಲ್ಲಿದ್ದವು, ಅಡವಿಗಳಿದ್ದವು, ನೀರು ಕೂಡ ಇತ್ತು. ಇವುಗಳನ್ನು ಕಣ್ಣಿಂದ ನೋಡುತ್ತಿದ್ದರು. ಕೈಯಿಂದ ಮುಟ್ಟುತ್ತಿದ್ದರು. ಆದರೆ ದೇವರನ್ನ್ಲು ಅವರೆಂದು ಕಣ್ಣಿಂದ ನೋಡಿಲ್ಲ ಮತ್ತು ಕೈಯಿಂದ ಮುಟ್ಟಿಲ್ಲ. ತಮ್ಮ ಊಹೆಯಿಂದ ದೇವರು ಇದ್ದಾನೆ ಎಂದು ಕಲ್ಪಿಸಿಕೊಂಡರು. 
ಹೆಸರಿಲ್ಲದ ವಸ್ತುವಿಗೆ ಹೆಸರಿಟ್ಟರು, ರೂಪವಿಲ್ಲದಕ್ಕೆ ರೂಪ ಕೊಟ್ಟರು. ಅದಕ್ಕೆ ಆ ಶಕ್ತಿ ಕಲ್ಪಿಸಿದರು, ಈ ಶಕ್ತಿ ಕಲ್ಪಿಸಿದರು. ಎಲ್ಲಾ ಗುಣಗಳನ್ನು ಕೊಟ್ಟರು. ಎಲ್ಲಾ ಲಕ್ಷಣಗಳನ್ನು ಕೊಟ್ಟರು. ನಂತರ ಅದಕ್ಕೆ ಒಂದು ಸ್ಥಾನ ಕಲ್ಪಿಸಿದರು. ಅದರಲ್ಲಿ ಒಂದು ಸಿಂಹಾಸನ ಇಟ್ಟರು. ಅದರ ಮೇಲೆ ತಮ್ಮ ಕಲ್ಪನೆಯ ದೇವರನ್ನು ಕೂರಿಸಿದರು. ದಿನಗಳೆದಂತೆ ಆ ದೇವರ ಶಕ್ತಿಯನ್ನು ಸ್ಥಾನಮಾನವನ್ನು ಹೆಚ್ಚಿಸುತ್ತಾ ಬಂದರು. ಅಂದರೆ ಕಾಣದ ವಸ್ತುವಿಗೆ ದೇವರಿಗೆ ಸ್ಥಾನ ಕೊಟ್ಟವನು ಮಾನವ. ದೇವರಿಗೆ ಆ ಶಕ್ತಿಗಳನ್ನೆಲ್ಲಾ ಕೊಟ್ಟವನು ಮಾನವ. ಆ ಮಹತ್ವವನ್ನು ಕೊಟ್ಟವನು ಮಾನವ. ಅಂದರೆ ದೇವರು ಮಾನವನ ಸೃಷ್ಟಿಯೇ ಹೊರತು ಪ್ರಕೃತಿಯ ಸೃಷ್ಟಿ ಅಲ್ಲ.
 
ಸಹಾಯ ಯಾರದು !
ದೇವರು ಸರ್ವಶಕ್ತ ಅನಾಥರಕ್ಷಕ ಭಕ್ತರ ಸೇವೆಗೆ ಒಲಿಯುವವನು. ಬೇಡಿದ್ದನ್ನು ನೀಡುವ ಕರುಣಾಳು. ಇವು ದೇವರ ಬಗೆಗಿರುವ ಮಾನವರ ನಂಬಿಕೆಗಳು. ಅದರಿಂದಲೇ ಮನುಷ್ಯನಿಗೆ ದೇವರು ಸಹಾಯ ಮಾಡುತ್ತಾನೆ ಎಂದು ನಂಬಿದ್ದಾರೆ. ಆದರೆ ನಿಜ ಜೀವನದಲ್ಲಿ ಈ ನಂಬಿಕೆ ಸುಳ್ಳಾಗಿದೆ. ತಿರುಗ- ಮುರುಗ ಆಗಿದೆ. ಮನುಷ್ಯಗೆ ದೇವರ ಸಹಾಯ ಏನೂ ಇಲ್ಲ. ಬದಲಿಗೆ ದೇವರಿಗೆ ಮನುಷ್ಯ ಮಾಡುವ ಸಹಾಯವೇ ಜಾಸ್ತಿ ಆಗಿದೆ.
 
ಅದು ಹೇಗೆಂದರೆ, ದೇವರಿಗೆ ದೇವಸ್ಥಾನ ಕಟ್ಟಿದವನು ಮಾನವ. ಅವನಿಗೆ ಅಸ್ತ್ರ-ವಸ್ತ್ರ ಆಭರಣಗಳನ್ನು ಕೊಟ್ಟವನು ಮಾನವ. ದೇವರ ಸೇವೆಗೆ ದಾಸಿಯರನ್ನು ಗೊತ್ತು ಮಾಡಿದವನು ಮಾನವ. ದೇವರಿಗೆ ಕೀರ್ತಿ ತಂದ ಕೊಟ್ಟವನು ಮಾನವ. ದೇವರಿಗೆ ಮದುವೆ ಮಾಡಿಸಿದವನು ಮಾನವ. ದೇವರಿಗೆ ಮಕ್ಕಳು ಮಾಡಿಸಿದವನು ಮಾನವ. ದೇವರಿಗೆ ವಾಹನ-ಆಯುಧ ನೀಡಿದವನು ಮಾನವ. ದೇವರಿಗೆ ಬೇಕಾದ್ದನ್ನು ದಾನ ಮಾಡಿದವನು ಮಾನವ. ಹೀಗೆ ದೇವರಿಗೆ ಮಾನವನು ಮಾಡಿದ ಸಹಾಯ ಅನೇಕ ವಿಧ. ಹೀಗಾಗಿ ದೇವರು ನಮ್ಮನ್ನು ಕೈ ಬಿಡುವುದಿಲ್ಲ ಎನ್ನುವುದು ತಪ್ಪು. ಅದರ ಬದಲು ದೇವರನ್ನು ಮಾನವರೇ ಕೈ ಬಿಡುತ್ತಿಲ್ಲ ಎನ್ನವಂತಾಗಿದೆ.
 
ಭ್ರಮಯೇ ದೆವ್ವ
ದೇವರನ್ನು ಭಯದಿಂದ ಕಲ್ಪಿಸಿಕೊಂಡ. ಹಾಗೇ ದೆವ್ವವನ್ನು ಭ್ರಮೆಯಿಂದಲ್ಲೇ ಕಲ್ಪಿಸಿಕೊಂಡ. ಅಂದು ಆದಿ ಮಾನವನ ತಲೆಯಲ್ಲಿ ಹೊಕ್ಕ ಭೀತಿ, ಇಂದಿಗೂ ಅದು ಅವನನ್ನು ಬಿಟ್ಟಿಲ್ಲ. ಈ ದೆವ್ವ ಭೂತಗಳು ಇರುವುದಕ್ಕೆ ಯಾವುದೇ ಆಧಾರ ಇಲ್ಲ. ಮಾನವರಿಗಿರುವ ಭ್ರಮೆ ಮತ್ತು ಭಯವೇ ದೇವರು-ದೆವ್ವಗಳ ಹುಟ್ಟಿಗೆ ಕಾರಣವಾಗಿವೆ. 
 
ಜಾತಿ ಮಾನವ ಸೃಷಿ!
ಮನುಷ್ಯರಲ್ಲಿ ಕೆಲವರು ತಮ್ಮ ಸ್ವಾರ್ಥ ಸಾಧನೆಗೆ ಜಾತಿ ಕಲ್ಪನೆಯನ್ನು ಹುಟ್ಟು ಹಾಕಿದರು. ಇಂಥವರು ಜಾತಿ ಹೆಸರಿನಿಂದ ರಕ್ಷಣೆ, ಸ್ಥಾನಮಾನ ಹಾಗೂ ಗೌರವ ಪಡೆಯುತ್ತಿದ್ದಾರೆ. ಜತೆಗೆ ಜಾತಿಯನ್ನು ಅಭಿಮಾನದ ಸಂಕೇತವಾಗಿ ಮಾರ್ಪಡಿಸಿಕೊಂಡಿದ್ದಾರೆ. ಅದಕ್ಕಾಗಿ ಅವರು ಜಾತಿಯನ್ನು ಪೋಷಿಸುತ್ತಿದ್ದಾರೆ. ಹಾಗೂ ಅದನ್ನು ಉಳಿಸಿ, ಬೆಳೆಸಲು ಶ್ರಮಿಸುತ್ತಿದ್ದಾರೆ. ಆದರೆ ಜಾತಿ ಹೆಸರಿನಿಂದ ಅನ್ಯಾಯ, ಅವಕಾಶ ವಂಚನೆ, ಅಗೌರವಕ್ಕೆ ಹಲವರು ಗುರಿಯಾಗುತ್ತಿದ್ದಾರೆ. ಜತೆಗೆ ಸಮಾಜದಲ್ಲಿ ಅವಮಾನಕ್ಕೆ ಈಡಾಗುತ್ತಿದ್ದಾರೆ. ಇಂಥವರು ಜಾತಿಯನ್ನು ಧಿಕ್ಕರಿಸುತ್ತಿದ್ದಾರೆ. ಮತ್ತು ಶಪಿಸುತ್ತಿದ್ದಾರೆ. ಹಾಗಾಗಿ ಜಾತಿ ಕೆಲವರಿಗೆ ವರವಾದರೆ; ಹಲವರ ಪಾಲಿಗೆ ಶಾಪವಾಗಿದೆ. 
 
ಜಾತಿಯನ್ನು ಬೆಳೆಸುತ್ತಿರುವುದೇ ಮದುವೆ ಪದ್ದತಿ
ಇಂಥ ಜಾತಿ ಪದ್ದತಿಯೂ ರಕ್ತ ಸಂಬಂಧ ಮತ್ತು ವಿವಾಹ ಸಂಬಂಧಗಳಿಂದಾದ ತತ್ವದ ವಿಸ್ತರಣೆಯಾಗಿದೆ. ಎಲ್ಲಾ ಜಾತಿಯ ವಿವಾಹ ವಿಧಿಗಳಿಗೂ ಒಂದು ಹೊರ ವೃತ್ತ ಅಥವಾ ಗಡಿ ಇದೆ. ಈ ಮಾನಸಿಕ ವೃತ್ತದಿಂದ ಹೊರಗೆ ಗಂಡಸಾಗಲಿ, ಹೆಂಗಸಾಗಲಿ ಮದುವೆ ಆಗುವುದು ಸಾಧ್ಯವಿಲ್ಲ. ಈ ಮಾನಸಿಕ ವೃತ್ತವನ್ನೇ "ಜಾತಿ" ಎಂದು ಹೆಸರಿಸಲಾಗಿದೆ. ಹೀಗಾಗಿ ಭಾರತದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಸಂಗಾತಿಯನ್ನು ಆಯ್ದುಕೊಳ್ಳಲು ಜಾತಿ ಅಡ್ಡಿಯಾಗಿದೆ. ಉದಾ: ಯಾವುದೇ ವ್ಯಕ್ತಿ ತಾನು ಎಷ್ಟೇ ವಿದ್ಯಾವಂಥ, ಬುದ್ದಿವಂಥ, ಸಿರಿವಂಥನಾಗಿದ್ದರೂ, ಸಮಾಜದಲ್ಲಿ ಎಂತಹ ಉನ್ನತ ಸ್ಥಾನಮಾನವನ್ನೆ ಪಡೆದಿದ್ದರೂ, ಆತ ತನ್ನ ಕುಲಗೋತ್ರದ ಆಧಾರದ ಮೇಲೆ ಸಂಗಾತಿ ಅಯ್ಕೆ ಮಾಡಿಕೊಳ್ಳಬೇಕಾಗಿದೆ.  
 
ಇಂಥ ಮದುವೆಯಿಂದ ಜಾತಿಯ ಪವಿತ್ರತೆಯನ್ನು ಕಾಪಾಡುತ್ತದ್ದೇವೆ ಎನ್ನುವ ಸಮಾಧಾನ ಅವರದು. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಮದುವೆ ಪದ್ದತಿಯು ಜಾತಿಯನ್ನು ಬೆಳೆಸುವ ಮೂಲವಾಗಿದೆ. ಹಾಗೆಯೇ ಈ ಮದುವೆ ಪದ್ದತಿ ಬದಲಾವಣೆಯಿಂದಲೇ ಮಾನವ ಹುಟ್ಟು ಹಾಕಿರುವ ಜಾತಿಯನ್ನು ತೊಡೆದು ಹಾಕುವ ಶಕ್ತಿ ಇದೆ. ಇದನ್ನು ಮನಗಂಡೇ ಬುದ್ದ, ಬಸವ, ಗಾಂಧಿ ಹಾಗೂ ಅಂಬೇಡ್ಕರ ಅವರು ಅಂತರಜಾತಿ ಮದುವೆಗಳನ್ನು ಬೆಂಬಲಿಸಿದರು. ಈ ಸಂಬಂಧ ಬುದ್ದನು ಜಾತಿಯನ್ನು ಗುರುತಿಸುವ ಮಾನದಂಡದ ಬಗ್ಗೆ ಹೇಳಿರುವ ಅಭಿಪ್ರಾಯ ಹೀಗಿದೆ.
 
ನಾನು ನೀನು ಬಂಧು, ಈ ಜಗವೆಲ್ಲಾ ಒಂದು.
ಒಮ್ಮೆ ಬುದ್ಧನ ಬಳಿಗೆ ಒಬ್ಬ ಸಜ್ಜನನು ಬಂದನು. ಅವನು "ಪ್ರಭು, ಜಾತಿಗಳನ್ನು ಹೇಗೆ ಗುರುತಿಸುವುದು?"ಎಂದು ಕೇಳಿದನು.
ಈ ಪ್ರಶ್ನೆಯನ್ನು ಕೇಳಿಸಿಕೊಂಡ ಬುದ್ಧ ನಕ್ಕನು. ನಂತರ; "ಎಲೈ ಸಜ್ಜನನೆ, ಒಂದು ಹೆಣ್ಣು ಗಿಣಿಗೂ ಒಂದು ಗಂಡು ನವಿಲಿಗೂ ಮದುವೆ ಮಾಡಿದರೆ ಹೇಗೆ?"ಎಂದನು. ಇದು ಹೇಗೆ ಸಾಧ್ಯ ಪ್ರಭುವೆ? ಗಿಣಿಗೂ ನವಿಲಿಗೂ ಮದುವೆ ಆಗುವುದುಂಟೆ?  ಅವುಗಳು ಮದುವೆ ಆದರೆ ಗಿಣಿಯ ವಂಶವೂ ಬೆಳೆಯುವುದಿಲ್ಲ, ನವಿಲಿನ ವಂಶವೂ ಬೆಳೆಯುವುದಿಲ್ಲ".
 
"ಹಾಗಾದರೆ ಈ ಮದುವೆ ಬೇಡ. ಹಸುವಿಗೂ ಗಂಡು ಕುದುರೆಗೂ ಮದುವೆ ಮಾಡೋಣವೆ? "
"ಇದೂ ಕೂಡಾ ಸಾಧ್ಯವಿಲ್ಲ ಪ್ರಭು. ಹಸುವಿಗೂ ಕುದುರೆಗೂ ಮದುವೆ ಮಾಡಿದರೂ ಅವುಗಳ ವಂಶವೂ ಬೆಳೆಯುವುದಿಲ್ಲ. ಇಂತಹ ಮದುವೆ ಮಾಡಿದರೆ ಜನರು ಆಡಿಕೊಂಡು ನಗುವುದಿಲ್ಲವೆ?"
"ಈಗ ನಿನಗೆ ಜಾತಿಯನ್ನು ಹೇಗೆ ಗುರುತಿಸಬೇಕು ಎಂದು ತಿಳಿಯಿತೆ?"
"ಇಲ್ಲ ಪ್ರಭುವೆ, ನಿಮ್ಮ ಒಗಟಿನ ಉತ್ತರ ನನಗೆ ಅರ್ಥ ಆಗಲಿಲ್ಲ, ದಯವಿಟ್ಟು ಬಿಡಿಸಿ ಹೇಳಿ ".
ಸರಿ, ಹಾಗಾದರೆ ಕೇಳು. ಹಸು ಮತ್ತು ಕುದುರೆ ಬೇರೆ ಬೇರೆ ಜಾತಿಯ ಪ್ರಾಣಿಗಳು. ಹಾಗೆಯೇ ಗಿಣಿ ಮತ್ತು ನವಿಲು ಬೇರೆ ಬೇರೆ ಜಾತಿಯ ಪಕ್ಷಿಗಳು. ಇವುಗಳು ಮದುವೆ ಆದರೆ ಮಕ್ಕಳು ಆಗುವುದಿಲ್ಲ. ಇದು ನೀನೆ ಹೇಳಿದ ಉತ್ತರ ಅಲ್ಲವೇ.
 
"ಹೌದು ಪ್ರಭು "
" ನಿನ್ನ ಜಾತಿಯ ಸಮಸ್ಯೆಗೂ ಇದೇ ಉತ್ತರ "
"ಅದು ಹೇಗೆ ಪ್ರಭುವೆ? "
"ಒಂದೇ ಜಾತಿಯ ಗಂಡು-ಹೆಣ್ಣು ಸೇರಿದರೆ ಮಾತ್ರ ಮಕ್ಕಳು ಆಗುತ್ತವೆ. ಬೇರೆ ಬೇರೆ ಜಾತಿಯ ಪ್ರಾಣಿಗಳಾಗಲಿ, ಪಕ್ಷಿಗಳಾಗಲಿ ಸೇರಿದರೆ ಮಕ್ಕಳು ಆಗುವುದಿಲ್ಲ. ಇದೇ ಜಾತಿ ಗುರುತಿಸಲು ಇರುವ ಸರಳ ನಿಯಮ. ಇದರ ಹೊರತು ಬೇರೆ ನಿಯಮ ಇಲ್ಲ."
"ಇದು ಸರಿ. ಮನುಷ್ಯ ಜಾತಿಗೆ ಬೇರೆ ನಿಯಮ ಇಲ್ಲವೆ ಪ್ರಭು?"
"ಇಲ್ಲ. ಭೂಮಿ ಮೇಲಿರುವ ಮನುಷ್ಯರೆಲ್ಲ ಒಂದೇ ಜಾತಿ. ಇಲ್ಲಿರುವ ಯಾವುದೇ ಜಾತಿಯ ಗಂಡು-ಹೆಣ್ಣು ಸೇರಿದರೂ ಮಕ್ಕಳು ಆಗುತ್ತವೆ. ಮನುಷ್ಯರ ಜಾತಿ ಗುರುತಿಸುವುದಕ್ಕೂ ಇದೇ ನಿಯಮ. ಇದರ ಹೊರತು ಬೇರೆ ನಿಯಮವಿಲ್ಲ." ಎಂದು ಬುದ್ಧ ನುಡಿದನು. ಬುದ್ಧನ ಮಾತಿಗೆ ಸಜ್ಜನನು ಒಪ್ಪಿ ಎದ್ದು ಹೋದನು.
 
comments powered by Disqus
Top