ಜಾತಿ ಸಂವಾದ - ಅಭಿಪ್ರಾಯ 18

ಜಾತಿ-ಧರ್ಮ-ಲಿಂಗ ಮತ್ತು ಸಂಗೀತ
ಡಾ. ಶಶಿಕಾಂತ ಕೌಡೂರು

ಜಾತಿ-ಧರ್ಮ-ಲಿಂಗ ಇತ್ಯಾದಿ ಸಂಗೀತದ ಮೇಲೆ ಪರಿಣಾಮ ಬೀರುವುದೇ ಎಂದರೆ ಹೌದು ಎಂದೇ ಹೇಳಬೇಕಾಗುತ್ತದೆ. ಕೆಲವೊಮ್ಮೆ ಪ್ರತ್ಯಕ್ಷವೂ ಮಗದೊಮ್ಮೆ ಪರೋಕ್ಷವೂ ಆದ ಸಂಬಂಧವನ್ನು ಈ ಅಂಶಗಳು ಸಂಗೀತಕ್ಷೇತ್ರದೊಂದಿಗೆ ಹೊಂದಿದೆ. ಯಾವುದೇ ಕಲಾಪ್ರಕಾರವೇ ಆಗಲಿ, ಅದು ತಾನು ನೆಲೆಗೊಂಡ ಪರಿಸರದ ಸಮಾಜೋ-ರಾಜಕೀಯ ಪ್ರಕ್ರಿಯೆಗಳಿಗೆ ಹೊರತಾಗಿರುವುದಿಲ್ಲ. 

ನಮ್ಮ ಸಮಕಾಲೀನ ಕಲಾಪ್ರಕಾರಗಳು ಹತ್ತೊಂಬತ್ತು ಮತ್ತು ಇಪ್ಪತ್ತನೇ ಶತಮಾನದ ವಸಾಹತುಶಾಹಿ ಮತ್ತು ರಾಷ್ಟ್ರೀಯತೆಯ ಜೊತೆ ಆವಿನಾಭಾವ ಸಂಬಂಧವನ್ನು ಹೊಂದಿದೆ. ಇಪ್ಪತ್ತನೇ ಶತಮಾನದ ರಾಷ್ಟ್ರೀಯತೆಯ ಪ್ರಕ್ರಿಯೆಯು ನಮ್ಮ ಹಲವಾರು ಕಲಾಪ್ರಕಾರಗಳನ್ನು ಸಂಸ್ಥೀಕರಣ ಗೊಳಿಸಿದವು. ಹೀಗೆ ಹಿಂದುಸ್ತಾನಿ ಸಂಗೀತ, ಕರ್ನಾಟಕ ಸಂಗೀತ ಗಳು ಭಾರತೀಯ ಕಲಾಪ್ರಕಾರಗಳಾಗಿ ಹೊರಹೊಮ್ಮಿ ಆಲ್ ಇಂಡಿಯಾ ರೇಡಿಯೋ ಇತ್ಯಾದಿ ರಾಷ್ಟ್ರೀಯ ಸಂಸ್ಥೆಗಳ ಆಶ್ರಯವನ್ನು ಪಡೆದವು. ರಾಜಾಶ್ರಯದಲ್ಲಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದ ಸಂಗೀತಗಾರರು ಸಂಗೀತವನ್ನು ಆಧುನಿಕ ಉದ್ಯೋಗವಾಗಿ ಪರಿಗಣಿಸತೊಡಗಿದರು. ರಾಷ್ಟ್ರೀಯತೆಯ ಪ್ರಕ್ರಿಯೆಯಲ್ಲಿ ಮುಂಚೂಣಿಯಲ್ಲಿದ್ದ, ಮತ್ತು ಸಾಂಸ್ಕೃತಿಕ ಬಂಡವಾಳ (ಛಿuಟಣuಡಿಚಿಟ ಛಿಚಿಠಿiಣಚಿಟ) ಹೊಂದಿದ್ದ ಉಚ್ಚ ಜಾತಿಗಳು ಸಂಶಯರಹಿತವಾಗಿ ಈ ಪ್ರಕ್ರಿಯೆಯ ಲಾಭ ಪಡಕೊಂಡವು. 
 
ಹಿಂದೂ ರಾಷ್ಟ್ರೀಯತೆಯ ಸಂದರ್ಭದಲ್ಲಿ ಸಂಗೀತ ಮಾತ್ರವಲ್ಲದೇ ಇತರ ಶಾಸ್ತ್ರಗಳನ್ನೂ ವಿಶಿಷ್ಟ ರೀತಿಯಲ್ಲಿ ಅಧ್ಯಯಿಸಿ, ಸಂಸ್ಕೃತಗ್ರಂಥಗಳಿಗೂ ಉತ್ತರ ಭಾರತದ ಸಂಗೀತಕ್ಕೂ ಸಂಬಂಧ ಸ್ಥಾಪಿಸಿದವರಾದ ವಿ.ಎನ್. ಭಟ್ಕಂಡೆ, ವಿಷ್ಣು ದಿಗಂಬರ ಪಲುಸ್ಕರ್, ಎಸ್.ಎನ್. ರತಂಜನ್‌ಕರ್ ಅಂಥವರು ಹಿಂದುಸ್ತಾನೀ ಸಂಗೀತ ಕ್ಷೇತ್ರದಲ್ಲಿ ಕಾಣಿಸಿಕೊಂಡರು.  ಪರಿಣಾಮವಾಗಿ ಉತ್ತರ ಭಾರತದಲ್ಲಿ ಸಂಗೀತವೆಂಬುದು ಇಸ್ಲಾಮಿನ ಕೈಯಲ್ಲಿ ಬಿದ್ದು ನರಳಿದ ಒಂದು ಅಪ್ಪಟ ಭಾರತೀಯ ಕಲಾಪ್ರಕಾರವೆಂಬ ಮನೋಭಾವ ಬೆಳೆದುಬಂತು (ಈಗಲೂ ಸಂಗೀತದ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಾಗ ಇಡೀ ಭಾರತದಲ್ಲಿ ಮುಂಚೆ ಒಂದೇ ರೀತಿಯ ಸಂಗೀತವಿತ್ತೆಂದೂ, ಇಸ್ಲಾಮಿಕ್ ಧಾಳಿಯಿಂದಾಗಿ ಅದು ಉತ್ತರಾದಿ ಸಂಗೀತವಾಯಿತೆಂದೂ ಹಾಗೂ ದಕ್ಷಿಣದ ಕರ್ನಾಟಕ ಸಂಗೀತವೆಂಬುದು ಒಂದು ರೀತಿಯಲ್ಲಿ ಪರಿಶುದ್ಧವಾದ ಭಾರತೀಯ ಸಂಗೀತವಾಗಿಯೇ ಉಳಿದಿದೆಯೆಂದೂ ಕಲಿಯುತ್ತಾರೆ).  
 
ಈ ಅಭಿಪ್ರಾಯದ ಪ್ರಕಾರ ಭಾರತೀಯ ಸಂಗೀತವೆಂಬುದು ಆಧ್ಯಾತ್ಮಿಕ ಸಂಗೀತವಾಗಿದ್ದುದು ಐಹಿಕ ಸಂಗೀತವಾಗಿ ಮಾರ್ಪಟ್ಟಿತೆಂದೂ, ಮುಸ್ಲಿಮ್ (ಹಾಗೂ ಹಿಂದೂ) ನಾಟ್ಯಗಾತಿಯರ ಹಾಗೂ ವೇಶ್ಯೆಯರ ಪಾಲಾಯಿತೆಂದೂ ಭಾವಿಸಲಾಯಿತು. ರಾಷ್ಟ್ರೀಯತೆಯು ಶಾಸ್ತ್ರೀಯ ಅಧ್ಯಯನದ ಮೂಲಕ ಈ ಗಾಯನ ವಿಧಾನಗಳನ್ನು ಶುದ್ಧೀಕರಣ ಗೊಳಿಸುವ ಕೆಲಸವನ್ನು ಮಾಡಿತು. ದಕ್ಷಿಣದಲ್ಲಿ ಕರ್ನಾಟಕ ಸಂಗೀತದ ಕೆಲವು ದಿಗ್ಗಜರು ವೇಶ್ಯಾಜಾತಿಗಳಿಂದ ರಹಸ್ಯ ಗುರುಗಳನ್ನು ಪಡೆದಿರುತ್ತಿದ್ದರು. ಅವರ ಹೆಸರು ಬಹಿರಂಗಗೊಂಡರೆ ತಮಗೇನು ಆಪಾದನೆ ಬರಬಹುದೋ ಎಂಬ ಭಯ ಈ ದಿಗ್ಗಜಗಳಿಗಿತ್ತು. 
 
ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ಜನಮನ್ನಣೆಗಳಿಸಿದ ಕೆಲವೇ ಜನ ಮುಸ್ಲಿಮ್ ಸಂಗೀತಗಾರರಲ್ಲಿ ಬಿಸ್ಮಿಲ್ಲಾಖಾನ್, ಅಲಿ ಅಕ್ಬರ್ ಖಾನ್, ವಿಲಾಯತ್ ಖಾನ್, ಅಲ್ಲಾರಖಾ, ಬಡೇ ಗುಲಾಮ್ ಆಲಿ ಖಾನ್, ಅಮೀರ್ ಖಾನ್ ಇತ್ಯಾದಿ ಸಂಗೀತಗಾರರ ಸಂಖ್ಯೆ ಹತ್ತೊಂಬತ್ತನೇ ಶತಮಾನದ ಮುಸ್ಲಿಮ್ ಸಂಗೀತಗಾರರ ಸಂಖ್ಯೆಗೆ ಹೋಲಿಸಿದರೆ ಬಹಳ ಅಲ್ಪ.  ಸ್ವಾತಂತ್ರ್ಯ ಪೂರ್ವದಲ್ಲಿ ಕೆಲವು ದೊಡ್ಡ ಹಾಗೂ ಹಲವು ಚಿಕ್ಕ ರಾಜಸಂಸ್ಥಾನಗಳು ಬಹಳಷ್ಟು ಜನ ಮುಸ್ಲಿಂ ಸಂಗೀತಗಾರರನ್ನು ಪೋಷಿಸಿದ್ದವು.  ಗ್ವಾಲಿಯರ್, ರಾಮ್‌ಪುರ್, ಇಂದೋರ್, ಬರೋಡಾ, ಹೈದರಾಬಾದ್, ಇಚಲಕರಂಜಿ, ಕೊಲ್ಹಾಪುರ್ ಇತ್ಯಾದಿ ಸಂಸ್ಥಾನಗಳು ಇದರಲ್ಲಿ ಮುಖ್ಯವಾದವು. 
 
ಸ್ವಾತಂತ್ರ್ಯಾನಂತರ ಭಾರತದ ಸಂಗೀತ ಕ್ಷೇತ್ರದಲ್ಲಿ ಆಲ್ ಇಂಡಿಯಾ ರೇಡಿಯೋ ವಹಿಸಿದ ಪಾತ್ರ ಬಹಳ ಮುಖ್ಯ.  ೧೯೫೦ರ ದಶಕದಲ್ಲಿ ಆಕಾಶವಾಣಿಯ ಡೈರೆಕ್ಟರ್ ಜನರಲ್ ಆಗಿದ್ದ ಜೆ.ಸಿ. ಮಾಥುರ್ ಎನ್ನುವವರ ಪ್ರಕಾರ ಆ ಸಮಯದಲ್ಲಿ ಸುಮಾರು ಹತ್ತುಸಾವಿರ ಜನ ಸಂಗೀತಗಾರರು ಆಕಾಶವಾಣಿಯಿಂದ ಪೂರ್ಣಕಾಲಿಕ ಅಥವಾ ಅರೆಕಾಲಿಕ ನೌಕರಿಯನ್ನು ಪಡೆದಿದ್ದರು.  ಡೇವಿಡ್ ಲೆಲಿವೆಲ್ಡ್ ಎನ್ನುವವನೊಬ್ಬನ ಸಂಶೋಧನೆಯ ಪ್ರಕಾರ ಅವರಲ್ಲಿ ಹೆಚ್ಚಿನವರು ಹಿಂದೂಗಳಾಗಿದ್ದರು ಹಾಗೂ ಉತ್ತಮ ಸಂಗೀತಗಾತಿಯರಾಗಿದ್ದ ನಾಟ್ಯಗಾತಿಯರು ಹಾಗೂ ವೇಶ್ಯೆಯರು ಇದ್ದಿಲ್ಲವೆಂದೇ ಹೇಳಬಹುದಾಗಿತ್ತು.  
 
೧೯೫೦ರಿಂದ ೧೯೬೨ರವರೆಗೆ ಬಿ. ವಿ. ಕೇಸ್ಕರ್ ಎನ್ನುವವರು ಭಾರತದ ಮಾಹಿತಿ ಮತ್ತು ಪ್ರಸಾರ ಮಂತ್ರಿಯಾಗಿದ್ದರು.  ಲೆಲಿವೆಲ್ಡ್‌ನ ಪ್ರಕಾರ ಅವರ ನೇತೃತ್ವದಲ್ಲಿ ನಡೆದ ಪ್ರಕ್ರಿಯೆ ಇದಾಗಿತ್ತು. ನೆಹರೂ ಕ್ಯಾಬಿನೆಟ್‌ನಲ್ಲಿ ಮಂತ್ರಿಯಾಗಿದ್ದಾಗ್ಯೂ ತುಂಬಾ ಸ್ಪಷ್ಟವಾಗಿ ವೇಶ್ಯಾಜಾತಿಗೆ ಸೇರಿದವರನ್ನು ಹಾಗೂ ಮುಸ್ಲಿಮ್ ಸಂಗೀತಗಾರರನ್ನು ಆಧುನಿಕ ಸಂಸ್ಥೆಗಳಿಂದ ಹೊರಗಿಟ್ಟ ಪ್ರಯತ್ನವನ್ನು ನಾವಿಲ್ಲಿ ಕಾಣಬಹುದು.  ಲೆಲಿವೆಲ್ಡ್ ಹೇಳುವಂತೆ ಆ ಜಾಗಗಳಲ್ಲಿ ಸಾಕಷ್ಟು ಮರಾಠೀ ಬ್ರಾಹ್ಮಣರು ಭರ್ತಿಗೊಂಡರು.
 
ಶಾಸ್ತ್ರೀಯ ಸಂಗೀತ ಎಂದರೆ ಏನು ಎಂಬ ಪ್ರಶ್ನೆಗೆ ನಾವು ಇನ್ನೂ ರಾಷ್ಟ್ರೀಯತೆಯ ಸಂದರ್ಭದ ಉತ್ತರವನ್ನೇ ಕೊಡುತ್ತಿದ್ದೇವೆ. ಜಾತಿ, ಮಡಿವಂತಿಕೆ, ಶುದ್ಧೀಕರಣ ಇತ್ಯಾದಿಗಳು ಭಾರತೀಯ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಹಾಸುಹೊಕ್ಕಾಗಿವೆ. ಹೀಗೆ ರೂಪುಗೊಂಡ ಶಾಸ್ತ್ರೀಯ ಸಂಗೀತವು ಜಾತಿ, ಧರ್ಮ ಇತ್ಯಾದಿ ಪ್ರಶ್ನೆಗಳನ್ನು ತಾರ್ಕಿಕವಾಗಿ ಮತ್ತು ಬಹಿರಂಗವಾಗಿ ಎದುರಿಸದೇ ಸೂಕ್ಷ್ಮವಾಗಿ, ನಯವಾಗಿ ಮತ್ತು ಆಂತರಿಕವಾಗಿ ನಿಭಾಯಿಸಿದೆ.
comments powered by Disqus
Top