ಜಾತಿ ಸಂವಾದ - ಅಭಿಪ್ರಾಯ 1

ಜಾತಿ ಮತ್ತು ಜಾತೀಯತೆ:
- ಶ್ರೀ ಶ್ರೀಧರ್.

ಜಾತಿ ಮತ್ತು ಜಾತೀಯತೆಗಳ ಬಗ್ಗೆ ಕೂಲಂಕುಷವಾಗಿ ತಿಳಿಯುವ ಮೊದಲು ಮಾನವನ ವಿಕಸನ ಮತ್ತು ಸ್ವಭಾವತಃ ಮಾನವನ ಗುಣಾವಗುಣಗಳನ್ನು ವಿಶ್ಲೇಷಣೆ ಮಾಡುವುದು ಒಳಿತು.  ಇದರಿಂದ ಜಾತಿಗಳು ಹುಟ್ಟಿದ ಬಗೆ ಮತ್ತು ಇಂದು ಸಮಾಜದಲ್ಲಿ ಅದರ ಆಳ, ವಿಸ್ತಾರ ಹಾಗೂ ವ್ಯಾಪಕತೆಗಳನ್ನು ಅರಿಯುವುದು ಸುಲಭವಾಗುತ್ತದೆ. 

ಮಂಗನಿಂದ ವಾನರ, ವಾನರನಿಂದ ಮಾನವನ ಸೃಷ್ಟಿ ಎಂಬ ಡಾರ್ವಿನ್ನನ ಸಿದ್ದಾಂತ ಸರ್ವಕಾಲಿಕ ಸತ್ಯವಾಗಿದೆ. ಮಾನವನ ವಿಕಸನ ಈ ಹಂತದಿಂದ ಪ್ರಾರಂಭವಾಗುತ್ತದೆ. ಆರಂಭದ ಮಾನವ ಅಂದಿನ ಮೃಗಗಳಿಗಿಂತ ಹೆಚ್ಚು ಭಿನ್ನವಾಗೇನೂ ಇರಲಿಲ್ಲ.  ಅವನ ಜೀವನಕ್ರಮ ಅವನ ಸುತ್ತಮುತ್ತಲಿನ ಇತರೆ ಜೀವಿಗಳಂತೆಯೇ ಇತ್ತು.  ಆದರೂ ನಾವುಗಳು ಮಾನವನನ್ನು ’ಸಂಘಜೀವಿ’ ಎಂದು ಕರೆಯುತ್ತೇವೆ. ತನ್ನವರೊಟ್ಟಿಗೆ ಒಟ್ಟಿಗೆ ಒಂದಡೆ ಕಲೆತು ಇರುವುದು ಮಾನವನಿಗೇ ಬಂದಿರುವ ವಿಶೇಷ ಗುಣವೇನಲ್ಲ.  ವನ್ಯಜೀವಿಗಳಾದ ಆನೆ, ಜಿಂಕೆ, ಕಾಡೆಮ್ಮೆ ಇತ್ಯಾದಿಗಳೂ ಸಹ ಒಂದಡೆ ಕಲೆತು ಇರುವುದು ಸಹಜವಾಗಿಯೇ ಅವುಗಳಿಗೆ ಬಂದಿರುವ ಗುಣಲಕ್ಷಣ.  ಅದಲ್ಲದೇ ಇನ್ನು ಕೆಲವು ವನ್ಯಜೀವಿಗಳಾದ ಹುಲಿ, ಸಿಂಹ, ಚಿರತೆ ಮುಂತಾದವುಗಳು ತಮ್ಮ ತಮ್ಮ ಕುಟುಂಬದೊಂದಿಗೆ ವಾಸಿಸುತ್ತವೆಯೇ ಹೊರತು ಸಾಧಾರಣವಾಗಿ ಈ ಜಗತ್ತಿನಲ್ಲಿ ಯಾವುದೇ ಜೀವಿಯು ಒಂಟಿಯಾಗಿರುವುದಿಲ್ಲ. ಇದರಿಂದ ನಾವು ಅರಿಯಬೇಕಾದ ಬಹು ಮುಖ್ಯ ಅಂಶವೆಂದರೆ ಸಮಾಜ, ಸಾಮಾಜಿಕ ಜೀವನ ಮಾನವ ನಾಡಿಗೆ ಬಂದು ಕಲಿತ ವಿದ್ಯೆಯಲ್ಲ, ಅವನ ಸೃಷ್ಟಿಯಿಂದಲೇ ಅವನಿಗೆ ಬಂದಿರುವ ಗುಣಲಕ್ಷಣವೆಂಬುದು. 
 
ಪ್ರಕೃತಿಯ ಇತರೆ ಜೀವಿಗಳಿಗಿಂತ ಮಾನವ ಸಹಜವಾಗಿಯೇ ಉನ್ನತ ಸ್ತರದ ಜೀವಿಯಾಗಿದ್ದಾನೆ. ಹಾಗೆಂದ ಮಾತ್ರಕ್ಕೆ ಅವನಲ್ಲಿರುವ ಪ್ರಾಣಿ ಸಹಜ ಗುಣಲಕ್ಷಣಗಳಲ್ಲಿ ಮಹತ್ತರವಾದ ಬದಲಾವಣೆಗಳಾಗಿವೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು ಎಂದರೆ ಅತಿಶಯೋಕ್ತಿಯೇನಲ್ಲ.  ಕುಟುಂಬ ನಿರ್ವಹಣೆ, ನಾಯಕತ್ವದ ಗುಣಗಳು, ಹಿಂಬಾಲಿಸುವ ಗುಣಗಳು, ಹಿಂಸೆ, ಸ್ವಜಾತಿ ಪಕ್ಷಪಾತ ಇತ್ಯಾದಿಗಳೂ ಸಹ ಮಾನವನಲ್ಲಿರುವ ಪ್ರಾಣಿ ಸಹಜ ಗುಣಗಳೇ ಆಗಿವೆ. ಪ್ರಾಣಿಗಳ ಹಿಂಡಿನಲ್ಲೂ ಶಕ್ತಶಾಲಿಯಾದ ನಾಯಕನಿರುವುದು, ಇತರೆ ಪ್ರಾಣಿಗಳು ಅದರ ಹಿಂಬಾಲಕರಾಗಿರುವುದನ್ನು ಕಾಣುತ್ತೇವೆ. 
 
ಹಾಗಯೇ ಬಂಡಾಯವೇಳುವುದು, ನಾಯಕತ್ವಕ್ಕಾಗಿ ಹೋರಾಡುವುದು ಇವುಗಳೂ ಸಹ ಪ್ರಾಣಿ ಸಹಜ ಗುಣಗಳೇ ಆಗಿವೆ. ಆದರೆ ಇವೆಲ್ಲವುಗಳಿಗಿಂತ ಮುಖ್ಯವಾದುದು ’ಉಳಿವಿಗಾಗಿ ಹಾಗೂ ಗುರುತಿಸಿಕೊಳ್ಳುವದಕ್ಕಾಗಿ ಮಾಡುವ ಹೋರಾಟ’. ಇದನ್ನೆ ಡಾರ್ವಿನ್ ’ಉಳಿವಿಗಾಗಿ ಹೋರಾಟ ಮತ್ತು ಸಧೃಡರ ಉಳಿವು’ (ಸ್ಟ್ರಗಲ್ ಫಾರ್ ಎಕ್ಸಿಸ್ಟೆನ್ಸ್ ಅಂಡ್ ಸರ್ವೈವಲ್ ಆಫ್ ದ ಫಿಟ್ಟೆಸ್ಟ್) ಎಂದು ಹೇಳಿರುವುದು ಅನ್ನಿಸುತ್ತದೆ. ಏಕೆಂದರೆ ಪ್ರತಿಯೊಂದು ಜೀವಿಯೂ ತನ್ನನ್ನು ಒಂದು ನಿರ್ದಿಷ್ಟ ಗುಂಪಿನೊಂದಿಗೆ ಗುರುತಿಸಿಕೊಳ್ಳುತ್ತದೆ. ಈ ರೀತಿ ಗುಂಪಿನೊಂದಿಗೆ ಗುರುತಿಸಿಕೊಳ್ಳುವುದರಿಂದ ಅದಕ್ಕೆ ಒಂಟಿತನ ಹಾಗೂ ಅಸುರಕ್ಷತೆಯ ಭೀತಿ ತೊಲಗಿ ಸುರಕ್ಷತಾ ಭಾವನೆ ಮೂಡುವುದು. ಮಾನವನಲ್ಲಿ ಈ ಗುರುತಿಸಲ್ಪಡುವ ಗೀಳು ಬೇರೆಲ್ಲಾ ಪ್ರಾಣಿಗಳಿಗಿಂತ ಹೆಚ್ಚಾಗಿರುವುದು ಕಂಡುಬರುತ್ತದೆ. ಇದರ ವ್ಯಾಪಕತೆಯನ್ನು ಮುಂದೆ ಚರ್ಚಿಸೋಣ.
 
ತನ್ನ ಹುಟ್ಟಿನಿಂದಲೇ ಕಲಿತ ಈ ಎಲ್ಲಾ ಸಹಜ ಗುಣಗಳೊಂದಿಗೆ ಪ್ರಾಚೀನ ಮಾನವ ಕಾಡಿನಲ್ಲಿ ತನ್ನದೇ ಆದ ನಾಡನ್ನು ಕಟ್ಟತೊಡಗಿದ.  ಆಗ ಅವನ ಈ ಎಲ್ಲಾ ಸಹಜ ಗುಣಗಳನ್ನು ವೈಚಾರಿಕತೆಯ, ಚಿಂತನೆಯ ಒರೆಗೆ ಹಚ್ಚಿ ನೋಡುವ ಅಭ್ಯಾಸ ಮೊದಲಾಯಿತು. ಮೊದ-ಮೊದಲು ಮಾನವ ತನ್ನ ಗುಂಪಿನಲ್ಲಿ ಶಕ್ತಿಶಾಲಿಯಾದ ವ್ಯಕ್ತಿಯನ್ನು ನಾಯಕನನ್ನಾಗಿ ಒಪ್ಪಿಕೊಳ್ಳುತ್ತಿದ್ದ. ಅದರಂತೆ ನಾಯಕನಾದ ವ್ಯಕ್ತಿಯು ಪ್ರಾಣಿಗಳ ಗುಂಪಿನಲ್ಲಿ ಹೇಗೆ ಶಕ್ತಶಾಲಿಯಾದ ಪ್ರಾಣಿಯು ನಾಯಕನಾಗಿ ತನ್ನು ಹೊಣೆಗಾರಿಕೆಯನ್ನು ನಿಭಾಯಿಸುವುದೋ ಅದರಂತೆಯೇ ಇವನೂ ಸಹ ತನ್ನ ಹೊಣೆಗಾರಿಕೆಯನ್ನು ನಿಭಾಯಿಸತೊಡಗಿದ.  ಈ ಮಟ್ಟದ ಮನುಷ್ಯನಿಗೆ ಕೃಷಿಯ ಅರಿವಾಗಲೀ, ಪಶುಸಂಗೋಪನೆಯ ಕಲೆಯಾಗಲೀ ತಿಳಿದಿರಲಿಲ್ಲ.  ಅವನು ಸಹಜವಾಗಿ ಮಾಂಸಾಹಾರಿಯಾಗಿದ್ದು ತನ್ನ ಗುಂಪಿನೊಂದಿಗೆ ಬೇಟೆಯನ್ನಾಡುತ್ತಿದ್ದ.  ಇವನನ್ನೇ ನಾವು ಪ್ರಾಚೀನ ಶಿಲಾಯುಗದ ಮಾನವ ಎಂದು ಕರೆಯುತ್ತೇವೆ.  
 
ನಿಧಾನವಾಗಿ ಮನುಷ್ಯ ಕೃಷಿ, ಪಶುಸಂಗೋಪನೆ ಹಾಗೂ ತನ್ನ ಅಭಿವೃದ್ಧಿಗಾಗಿ ಪ್ರಕೃತಿಯನ್ನು ಉಪಯೋಗಿಸುವುದನ್ನು ಕಲಿಯತೊಡಗಿದ. ಕಾಡುಗಳು ಇದ್ದ ಜಾಗಗಳು ಹಳ್ಳಿಗಳಾಗಿ, ಹಳ್ಳಿಗಳು ಪಟ್ಟಣಗಳಾಗಿ ಬದಲಾಗತೊಡಗಿತು. ಈ ಕಾಲದಲ್ಲಿ ಅವನಿಗೆ ದೈಹಿಕ ಶಕ್ತಿಗಿಂತ ಬುದ್ಧಿವಂತಿಕೆಯ ಬಲದ ಅಗತ್ಯ ಹಾಗೂ ಅದರ ಬೆಲೆ ತಿಳಿಯತೊಡಗಿತು. ಅಲೆಮಾರಿ ಜೀವನವನ್ನು ತ್ಯಜಿಸಿದ ಮಾನವ ಒಂದೆಡೆ ನೆಲೆನಿಂತು ತನ್ನ ಸುತ್ತಮುತ್ತಲಿನ ಪರಿಸರದ ಮೇಲೆ ಪ್ರಭುತ್ವ ಸಾಧಿಸತೊಡಗಿದ. ನಿಧಾನವಾಗಿ ಮಾನವ ಸಮಾಜ ನಾಗರೀಕತೆಯ ಕಡೆ ಹೆಜ್ಜೆಯಿಡತೊಡಗಿತು. ಕುಟುಂಬಗಳ ಕಲ್ಪನೆ, ವೃತ್ತಿಪರತೆಯ ಯುಗ ಆರಂಭವಾಯಿತು. ಈಗ ಮನುಷ್ಯನಿಗೆ ಮತ್ತೊಬ್ಬ ಮನುಷ್ಯನ ಅವಶ್ಯಕತೆ ಹೆಚ್ಚತೊಡಗಿತು.  ವೃತ್ತಿಯಿಂದ ಕೃಷಿಕನಾದವನಿಗೆ ನೇಗಿಲು, ಗಾಡಿ ಇತ್ಯಾದಿಗಳ ಅಗತ್ಯತೆಯನ್ನು ಪೂರೈಸುವವರು ಬೇಕಾದರು. 
 
ಅದರಂತೆ ಇತರೆ ವೃತ್ತಿಪರರೂ ಬೆಳೆಯತೊಡಗಿದರು. ಈಗ ಸಮಾಜದಲ್ಲಿ ’ವರ್ಣಾಶ್ರಮ’ ನಿಧಾನವಾಗಿ ಬೇರೂರತೊಡಗಿತು. ಕೃಷಿಕನ ಮಗ ಕೃಷಿಕನಾದರೆ, ಸೈನಿಕನ ಮಗ ಸೈನಿಕ, ಕಮ್ಮಾರನ ಮಗ ಕಮ್ಮಾರ ಹೀಗೆ ಇವರೆಲ್ಲರ ಸಂಖ್ಯೆ ಬೆಳೆಯತೊದಗಿತು. ಇವೆಲ್ಲದರ ನಡುವೆ ತಾನು ಹಾಗೂ ತನ್ನವರ ರಕ್ಷಣೆಯ ಗುರುತರ ಕಾರ್ಯ ಅವನಿಗೆ ಕಷ್ಟವಾಗತೊಡಗಿತು.  ಅಂತೆಯೇ ಅವರನ್ನು ರಕ್ಷಣೆ ಮಾಡುವ ನಾಯಕನ ಅಗತ್ಯ ಕಂಡುಬಂತು. ಸುರಕ್ಷತೆಯ ದೃಷ್ಟಿಯಿಂದ ಶಕ್ತಿಶಾಲಿಯಾದವನನ್ನೇ ಸಮಾಜ ತನ್ನ ನಾಯಕನನ್ನಾಗಿ ಗುರುತಿಸಿಕೊಂಡಿತ್ತು. ಅಂತೆಯೇ ಶಕ್ತಿಶಾಲಿಯಾದವರು, ಸೈನ್ಯವನ್ನು ಕಟ್ಟಿ ಆಳಬಲ್ಲವರು ರಾಜರಾಗತೊಡಗಿದರು.  ಕ್ರಮೇಣ ಮಾನವನಿಗೆ ಯುಕ್ತಿಯ ಮಹತ್ವದ ಅರಿವಾಗತೊಡಗಿತು.  ಅದರಂತೆ ಬುದ್ಧಿವಂತರನ್ನೊಳಗೊಂಡ ಗುಂಪು ಆ ನಾಯಕನಿಗೆ ಸಲಹೆ, ಸೂಚನೆಗಳನ್ನು ನೀಡತೊಡಗಿತು.  ನಾಯಕನು ಈ ಬುದ್ಧಿವಂತ ಗುಂಪಿನ ಸೂಚನೆ, ಸಲಹೆಗಳನ್ನು ಕಾರ್ಯರೂಪಕ್ಕೆ ತರುವ ಕೆಲಸ ಮಾಡತೊಡಗಿದ. 
ಇಲ್ಲಿಂದ ಮಾನವನ ಸಮಾಜದಲ್ಲಿ ’ರಾಜ್ಯಶಾಸ್ತ’ದ ಉದಯವಾಯಿತು. ಅದರನ್ವಯ ನಾಯಕನನ್ನು ದೊರೆ, ರಾಜ ಅಥವಾ ಚಕ್ರವರ್ತಿ ಎಂತಲೂ, ಬುದ್ಧಿವಂತರ ಗುಂಪನ್ನು ರಾಜಸಭೆ, ಮಂತ್ರಿಮಂಡಲ ಇತ್ಯಾದಿಗಳಾಗಿ ಕರೆಯಲಾಯಿತು.  ಗುಂಪಿನಲ್ಲಿನ ಪ್ರತಿಯೊಬ್ಬ ಸದಸ್ಯನನ್ನೂ ಮಂತ್ರಿ, ಅಮಾತ್ಯ ಎಂತಲೂ, ಅದರ ಮುಖ್ಯಸ್ಥನನ್ನು ಪ್ರಧಾನಿ ಎಂದೂ ಕರೆಯಲು ಮೊದಲಾಯಿತು.  ಈ ಹಿಂದೆ ಶಕ್ತಶಾಲಿಯಾದ ರಾಜನು ಸ್ವತಃ ತೆಗೆದುಕೊಳ್ಳುತ್ತಿದ್ದ ನಿರ್ಣಯಗಳನ್ನು ಈಗ ತನ್ನ ಮಂತ್ರಿಗಳ ಸಹಾಯದಿಂದ ನಿರ್ಣಯಿಸತೊಡಗಿದ. ಅದರಲ್ಲೂ ಮುಖ್ಯವಾಗಿ ಪ್ರಧಾನಿಯ ಸಲಹೆ, ಸೂಚನೆಗಳನ್ನು  ನಿರ್ಲಕ್ಷಿಸಿ ಸಾಮಾನ್ಯವಾಗಿ ಯಾವುದೇ ಕಾರ್ಯಗಳನ್ನು ಮಾಡುತ್ತಿರಲಿಲ್ಲ. ಹೀಗೆ ಬುದ್ಧಿಶಕ್ತಿ ದೈಹಿಕಶಕ್ತಿಗಿಂತ ಮುಖ್ಯಸ್ಥಾನವನ್ನು ನಿಧಾನವಾಗಿ ಆಕ್ರಮಿಸತೊಡಗಿತು.  ಈ ರೀತಿ ಬೆಳೆದ ಹಲವಾರು ಗುಂಪುಗಳು ಜನಸಂಖ್ಯೆ ಹಾಗೂ ವಿಸ್ತಾರವಾದ ಭೂಪ್ರದೇಶಗಳಲ್ಲಿ ನೆಲೆಯೂರಿತು.  ಈ ರೀತಿ ಬೆಳೆದ ಸಾಮಾಜಿಕ ವ್ಯವಸ್ಥೆಗಳನ್ನು ನಾವು ಸಂಸ್ಕೃತಿಗಳೆಂದು ಕರೆಯುತ್ತೇವೆ.  ಉದಾಹರಣೆಗೆ, ಆರ್ಯ, ದ್ರಾವಿಡ, ಗ್ರೀಕ್, ರೋಮ್, ಈಜಿಪ್ಟ್ ಇತ್ಯಾದಿ. 
 
ಹೀಗೆ ವ್ಯಾಪಕವಾಗಿ ಬೆಳೆದ ಸಮುದಾಯಗಳು ಆಂತರಿಕವಾಗಿ ತಮ್ಮದೇ ಆದ ಸಮಸ್ಯೆಗಳ ಗೂಡಾಗಿತ್ತು. ಕಾಡಿನಿಂದ ಬಂದ ಮಾನವ ತನ್ನ ಬುದ್ಧಿಶಕ್ತಿಯಿಂದಾಗಿ ತನ್ನದೇ ಆದ ಸಮಾಜದಲ್ಲಿ ತನ್ನ ಪರಿವಾರದೊಂದಿಗೆ ಇರತೊಡಗಿದ. ಮೊದಲ-ಮಾನವನಿಗೆ ಇದ್ದ ಬದುಕಿಗಾಗಿ ಹೋರಾಡುವ ಅನಿವಾರ್ಯತೆ ಇಲ್ಲವಾಯಿತು. ಅವನು ತನ್ನ ಸುತ್ತ ಸುರಕ್ಷತೆಯ, ಭದ್ರತೆಯ ಕೋಟೆ ಕಟ್ಟಿಕೊಂಡು ಕ್ಷೇಮವಾಗಿ ಇರತೊಡಗಿದ. ಆಹಾರಕ್ಕಾಗಿ ಪರದಾಟ, ಬದುಕಿಗಾಗಿ ಹೋರಾಟ ಸಾಕಷ್ಟು ಕಡಿಮೆಯಾಯಿತು. ಇದರ ಪರಿಣಾಮ ಅವನು ತನ್ನ ಹಾಗೂ ತನ್ನವರ ಅಭಿವೃದ್ಧಿ, ಆರ್ಥಿಕ ಸಬಲೀಕರಣಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸತೊಡಗಿದ.  ಈ ಹಿಂದೆ ಕೃಷಿಕನಾದವನು ಈಗ ಜಮೀನ್ದಾರನಾಗಿದ್ದ. ಪರಿಕರಗಳನ್ನು ಮಾಡಿಕೊಡುವವ ಕಾರ್ಖಾನೆಯ ಮಾಲೀಕನಾಗಿದ್ದ. ಅದರಂತೆ ವ್ಯಾಪಾರಿಗಳು, ದಲ್ಲಾಳಿಗಳು, ಹೀಗೆ ಹಲವಾರು ಉನ್ನತ ಸ್ತರದ ಶ್ರೀಮಂತ ಸಮಾಜ ನಿರ್ಮಾಣವಾಗಿತ್ತು.  
 
ಇವರ ಅಗತ್ಯತೆಗಳನ್ನು ಪೂರೈಸಲು ಶ್ರಮಿಕ ವರ್ಗದ ನಿರ್ಮಾಣವಾಗಿತ್ತು. ಅಂತೆಯೇ ರಾಜನಾದವನಿಗೆ ತನ್ನ ಸಾಮ್ರಾಜ್ಯದ ರಕ್ಷಣೆಗಾಗಿ ಸೈನ್ಯ, ಸೇನಾಪತಿಗಳು, ದಳವಾಯಿಗಳೂ ಹುಟ್ಟಿಕೊಂಡಿದ್ದರು. ನಿಧಾನವಾಗಿ ವರ್ಣಾಶ್ರಮ ಜಾತಿಯ ಕಡೆಗೆ ವಾಲತೊಡಗಿತು.  ಈ ಹಿಂದೆ ಧರ್ಮದ ಪ್ರವರ್ತಕರು(ಬ್ರಾಹ್ಮಣ), ರಕ್ಷಕರು (ಕ್ಷತ್ರಿಯ), ವ್ಯಾಪಾರಿಗಳು (ವೈಶ್ಯ) ಹಾಗೂ ಕೃಷಿಕರು(ಶೂದ್ರ) ಇವರೆಲ್ಲ ತಮ್ಮ ಪುತ್ರರನ್ನೇ ತಮ್ಮ ವಾರಸುದಾರರನ್ನಾಗಿ ಮಾಡಿಕೊಳ್ಳಲು ಪ್ರಾರಂಭಿಸಿದ್ದರಿಂದ ವ್ಯವಹಾರಿಕವಾಗಿದ್ದ ವರ್ಣಾಶ್ರಮ ಕಾಯಂ ರೂಪ ಪಡೆದು ಜಾತಿಯಾಗಿ ಬದಲಾಗತೊಡಗಿತು. ಅದರೊಂದಿಗೆ ವರ್ಣಾಶ್ರಮದಲ್ಲಿದ್ದ ಮುಖ್ಯವಾದ ಸಾಮಾಜಿಕ ಪದ್ಧತಿಯೂ ಸಂಪೂರ್ಣವಾಗಿ ಅಳಿಸಿಹೋಯಿತು. ಅದೆಂದರೆ ವರ್ಣಾಶ್ರಮದ ಕಾಲದಲ್ಲಿ ವಿವಾಹಗಳಿಗೆ ವರ್ಣ ಮಾನದಂಡವಾಗಿರಲಿಲ್ಲ, ಅಂದರೆ, ಯಾವ ವರ್ಣಾಶ್ರಮದವರು ಯಾವ ವರ್ಣಾಶ್ರಮದ ಹೆಣ್ಣನ್ನು ಬೇಕಾದರೂ ಮದುವೆಯಾಗಬಹುದಿತ್ತು ಕೇವಲ ಅವಳ ಹಾಗೂ ಅವಳ ಪಾಲಕರ ಸಮ್ಮತಿಯ ಅಗತ್ಯ ಮಾತ್ರ ಇತ್ತು. ಆದರೆ ಜಾತಿಯ ಆವಿಷ್ಕಾರ ಸಜಾತೀಯರಲ್ಲಿ ಮಾತ್ರ ವೈವಾಹಿಕ ಸಂಬಂಧಗಳನ್ನು ಪ್ರತಿಪಾದಿಸಿ ಸಮಾಜವನ್ನು ಪ್ರತ್ಯೇಕಿಸಿತು.  
 
ಬದಲಾಗುತ್ತಿರುವ ವ್ಯವಸ್ಥಯಲ್ಲಿ ಆರ್ಥಿಕವಾಗಿ ಹಾಗೂ ವೈಚಾರಿಕವಾಗಿ ಹಿಂದುಳಿದ ಶ್ರಮಿಕ ವರ್ಗವನ್ನು ಕಡೆಗಣಿಸಿ ಅಜಾತೀಯರನ್ನಾಗಿ ಮಾಡಲಾಯಿತು. ಇದು ಕೇವಲ ನಮ್ಮ ದೇಶದ ಸಂಸ್ಕೃತಿಯಲ್ಲಷ್ಟೇ ಅಲ್ಲ, ಎಲ್ಲ ಸಂಸ್ಕೃತಿಗಳಲ್ಲೂ ಕಾಣಬಹುದು. ವ್ಯವಹಾರಿಕವಾಗಿ ಮಾತ್ರ ವ್ಯಕ್ತವಾಗುತ್ತಿದ್ದ ವರ್ಣಾಶ್ರಮ ಜಾತಿಯಾಗಿ ಮಾರ್ಪಾಡಾದುದಲ್ಲದೇ ಇದು ಧರ್ಮದ ಆಶ್ರಯದಲ್ಲಿ ಭದ್ರವಾಗಿ ನೆಲೆನಿಂತು ಇಡೀ ಸಮಾಜವನ್ನೇ ಆಕ್ರಮಿಸಿಕೊಂಡಿತು. ಧರ್ಮದ ಆಧಾರದಿಂದಲೇ ಉತ್ತಮ ಕುಲದವರು ಅದರ ಪಾರಮ್ಯವನ್ನು ಬಲವಂತವಾಗಿ ಅನ್ಯ ವರ್ಣೀಯರ ಮೇಲೆ ಹೇರತೊಡಗಿದರು. ಇದರ ಪರಿಣಾಮ ಜಾತಿಯ ಅಂಧಶ್ರದ್ಧೆ ಬೆಳೆಯತೊಡಗಿದ್ದು, ಅಲ್ಲದೇ ಸಮಾಜದ ಪ್ರವರ್ತಕರು ಈ ಅಂಧಶ್ರದ್ಧೆಗೆ ನೀರೆರೆದು ಉದಾರವಾಗಿ ಪೋಷಿಸತೊಡಗಿದರು. ನಿಧಾನವಾಗಿ ಸಮಾಜ ಬುದ್ಧಿವಂತರ  ಆಸ್ತಿಯಾಗತೊಡಗಿತು.  ಬುದ್ಧಿವಂತರ ಶೋಷಣೆಯಿಂದ ಸಮಾಜ ಬಳಲತೊಡಗಿತು. ತನ್ನದು ಮೇಲ್ಜಾತಿ, ತಾನು ತನ್ನ ಕರ್ಮದಿಂದ ಅಲ್ಲ, ಜನ್ಮದಿಂದಲೇ ಆದರಣೀಯ ಎನ್ನುವ ಭಾವನೆ ಉನ್ನತ ಜಾತಿಯವರಲ್ಲಿ ಬೆಳೆಯತೊಡಗಿತು. ತಾನು ಮೇಲು, ಇವನು ಕೀಳು ಎಂಬ ವಿಷದಿಂದ ತಯಾರಾದ ವಸ್ತುವೇ ’ಜಾತೀಯತೆ’. 
 
ಮೊದಮೊದಲು ಈ ಜಾತೀಯತೆ ಉನ್ನತ ಜಾತಿಯವರಲ್ಲಿ ಮಾತ್ರ ಕಂಡುಬಂತು.  ಇದರ ಪರಿಣಾಮ ಉನ್ನತ ಜಾತಿಗಳಲ್ಲಿ ಹಲವಾರು ಒಳಜಾತಿಗಳು, ಪಂಗಡಗಳು ಹುಟ್ಟಿಕೊಂಡವು.  ಪ್ರತಿಯೊಂದು ಪಂಗಡವೂ ತನ್ನದೇ ಉತ್ತಮ ಎಂಬ ಧೋರಣೆಯನ್ನು ಹೊಂದಿದ್ದು  ಧರ್ಮ ಸಹಿಷ್ಣುತೆ ಗೌಣವಾಗಿತ್ತು. ಇನ್ನು ಶ್ರಮಿಕ ವರ್ಗಕ್ಕೆ ಇದಾವುದರ ಸೋಂಕೂ ಕೂಡ ಇರಲಿಲ್ಲ.  ಏಕೆಂದರೆ ಈ ವರ್ಗದ ಜನರಿಗೆ ಬದುಕು ಇನ್ನೂ ಹೋರಾಟಮಯವಾಗಿತ್ತು. ಅನುಕರಣೆ ಹಾಗೂ ಅನುಸರಣೆಗಳು ಅನಿವಾರ್ಯವಾಗಿತ್ತು.  ಹಾಗಾಗಿ ಈ ವರ್ಗದ ಜನ ನಿರಂತರ ಶೋಷಣೆಗೆ ಒಳಗಾಗಿದ್ದರೂ ಒಂದು ರೀತಿ "ಒಪ್ಪಿಕೊಂಡ ದಾಸ್ಯ"ಕ್ಕೆ ಕಟ್ಟುಬಿದ್ದವರಂತೆ ವೈಚಾರಿಕತೆ, ಬಂಡಾಯಗಳಿಂದ ದೂರವಾಗಿ ಉನ್ನತ ಜಾತಿಯವರು ತೋರಿದಂತೆ ನಡೆಯತೊಡಗಿದರು.  ಅದರಲ್ಲೂ ಹಲವಾರು ಬಾರಿ ಶೋಷಣೆಗೆ ವಿರುದ್ಧವಾದ ಬಂಡಾಯಗಳನ್ನು ಹತ್ತಿಕ್ಕುವಲ್ಲಿ ಉನ್ನತ ಜಾತಿಯವರು ಸಬಲರಾಗಿದ್ದುದಲ್ಲದೇ ದೈನಂದಿನ ಬದುಕಿಗಾಗಿ ಅವರನ್ನೇ ಅವಲಂಬಿಸಿದ್ದ ಶ್ರಮಿಕವರ್ಗ ಅಸಂಘಟಿತವಾಗಿತ್ತು ಮತ್ತು ಬಲಹೀನವಾಗಿತ್ತು.  ಇವೆಲ್ಲವುಗಳಿಂದ ಬಲಗೊಂಡ ಜಾತೀಯ ಭಾವನೆ ಉನ್ನತ ಜಾತಿಯವರಲ್ಲಿ ಅವ್ಯಾಹತವಾಗಿ ಬೆಳೆದು ಸಾಮ್ರಾಜ್ಯ, ಸಮಾಜ, ಧರ್ಮ, ದೇವಾಲಯಗಳು, ಸಭೆಗಳು ಎಲ್ಲವನ್ನೂ ತನ್ನ ಕಬಂಧ ಬಾಹುಗಳಿಂದ ಆವರಿಸಿಕೊಂಡಿತು.
 
ಕಾಲವು ಮುಂದೆ ಸರಿಯುತ್ತಿದ್ದಂತೆಯೇ ಕಾಲದೊಂದಿಗೆ ಬದಲಾಗುತ್ತಿದ್ದ ವೈಚಾರಿಕತೆ, ಬೆಳೆಯತ್ತಿದ್ದ ಜ್ಞಾನ ಇವುಗಳಿಂದ ಮಾನವನ ಸಮಾಜವೂ ಬದಲಾಗುತ್ತ ಸಾಗತೊಡಗಿತು. ಎಲ್ಲ ಧರ್ಮಗಳಲ್ಲೂ ಬಂಡಾಯ ನಾಯಕರುಗಳು ತಲೆ ಎತ್ತತೊಡಗಿದರು.  ಇದರ ಪರಿಣಾಮ ಇಲ್ಲವೇ ಧರ್ಮದಲ್ಲಿ ಹೊಸ ಒಳಪಂಗಡಗಳು ಹುಟ್ಟಿಕೊಂಡವು ಅಥವಾ ಅದೇ ಧರ್ಮದ ಬೆಳಕಿನಲ್ಲಿ ಹೊಸ ಧರ್ಮಗಳು, ಜಾತಿಗಳು ಹುಟ್ಟಿಕೊಂಡವು. ಈ ಹೊಸ ಧರ್ಮ, ಜಾತಿ, ಪಂಗಡಗಳಿಗೆ ಹೊಸ, ಹೊಸ ಧರ್ಮಪ್ರವರ್ತಕರುಗಳು, ಅವರ ಹಿಂಬಾಲಕರುಗಳು ಆದರು.  ಅದರಲ್ಲಿನ ವಿಶೇಷವೆಂದರೆ, ಈ ಹೊಸ ಧರ್ಮ, ಜಾತಿ, ಪಂಗಡಗಳು ಅಜಾತೀಯವರಿಗೆ ಮಣೆ ಹಾಕಿ ತಮ್ಮ ಧರ್ಮದ ಅನುಯಾಯಿಗಳ ಸಂಖ್ಯೆಯನ್ನು ಬೆಳೆಸಿಕೊಳ್ಳಲು ಯತ್ನಿಸಿದವು. 
 
ಆದರೆ ಈಗಾಗಲೇ ಬೆಳೆದಿದ್ದ ಅಂಧಶ್ರದ್ಧೆ, ಉನ್ನತ ಜಾತೀಯರ ಬಿಗಿ ಹಿಡಿತ ಇವುಗಳನ್ನು ದಾಟಿ ಹೊಸ ಧರ್ಮಗಳನ್ನು ಸೇರುವವರ ಸಂಖ್ಯೆ ಹೆಚ್ಚೇನೂ ಇರಲಿಲ್ಲ. ಆದರೂ ಇವುಗಳ ಆರ್ಭಟದಲ್ಲಿ ಹಲವಾರು ಹಾಲಿ ಇದ್ದ ಧರ್ಮಗಳು, ಉನ್ನತ ಜಾತಿಗಳು ಸಂಪೂರ್ಣವಾಗಿ ಸಮಾಜದಿಂದ ಅಳಿಸಿಹೋದವು ಇಲ್ಲವೇ ಈ ಹೊಸ ಧರ್ಮವನ್ನೆ ತಮ್ಮ ಧರ್ಮದ ಇನ್ನೊಂದು ಪಂಗಡವೆಂದು ಗುರುತಿಸಿ ಇಲ್ಲಿಯವರೆವಿಗೂ ಅಜಾತೀಯರಿಗೆ ಅವಕಾಶವಿಲ್ಲದಿದ್ದ ತಮ್ಮ ದೇವಾಲಯ, ಪ್ರಾರ್ಥನಾಮಂದಿರಗಳ ಬಾಗಿಲನ್ನು ಈ ಹೊಸ ಪಂಗಡಕ್ಕೆ ಸೇರಿದ ಅಜಾತೀಯರಿಗೆ ತೆರೆದವು.  ಆದರೂ ಆ ಹೊತ್ತಿಗಾಗಲೇ ಹೆಮ್ಮರವಾಗಿ ಬೆಳೆದು ನಿಂತದ್ದ ಜಾತೀಯತೆ ಇವರನ್ನು ಸಂಪೂರ್ಣವಾಗಿ ತಮ್ಮ ಧರ್ಮದೊಳಗೆ ಅವರನ್ನು ಸೇರಿಸಿಕೊಳ್ಳಲು ಅವಕಾಶ ನೀಡಲಿಲ್ಲ.  ಬಾಹ್ಯವಾಗಿ ಅಲ್ಲದಿದ್ದರೂ ಆಂತರಿಕವಾಗಿ ಅಜಾತೀಯರು ಅಜಾತೀಯರಾಗೆ ಉಳಿದರು.  ಇದರ ಪರಿಣಾಮವಾಗಿ ಹೊಸದಾಗಿ ತಲೆಎತ್ತಿದ್ದ ಧರ್ಮ, ಪಂಗಡದವರು ತಮಗೆಂದೇ ಬೇರೆ ದೇವಾಲಯಗಳು, ಪ್ರಾರ್ಥನಾಮಂದಿರಗಳು, ಸಭಾಭವನಗಳು ಇತ್ಯಾದಿಗಳನ್ನು ನಿರ್ಮಿಸಿಕೊಂಡರು.  
 
ಧರ್ಮಗಳ ವಿಸ್ತರಣೆ, ಅರ್ಥಗಳಿಗೆ ಬೇರೆಯದೇ ಆದ ವ್ಯಾಖ್ಯಾನಗಳು ಹುಟ್ಟಿ ಮೂಲ ಧರ್ಮದ ಆಶಯಗಳನ್ನೇ ಬುಡಮೇಲು ಮಾಡಿತು.  ಅಲ್ಲದೇ ಮತೀಯ ಭಾವನೆಗಳು ಜಾತೀಯತೆಯೊಂದಿಗೆ ಬೆಳೆದು ತಾರತಮ್ಯಗಳು ಮುಗಿಲೆತ್ತರಕ್ಕೆ ಬೆಳೆದು ನಿಂತಿತು. ಧರ್ಮ, ಜಾತಿಯೆಂದರೆ ಅದರ ಆಶಯಗಳು, ಸಾಮರಸ್ಯ, ಸಹಜೀವನದ ಬದಲಾಗಿ ಸಂಪ್ರದಾಯ, ಆಚರಣೆ, ಅಂಧಶ್ರದ್ಧೆಗಳು ಹೆಮ್ಮರಗಳಾಗಿ ಬೆಳೆದು ಅದರ ವಿಶಾಲ ಬೇರುಗಳು ಎಲ್ಲರ ಮನಗಳನ್ನೂ ಆವರಿಸಿಕೊಂಡಿತು. ಇದು ಎಷ್ಟರ ಮಟ್ಟಿಗೆ ಬೆಳೆಯಿತೆಂದರೆ, ಅನ್ಯ ಜಾತೀಯರನ್ನು ಮನೆಗಳಿಗೆ ಸೇರಿಸಿದಲ್ಲಿ ಅಂತಹ ಕುಟುಂಬವನ್ನು ಸಮಾಜದಿಂದಲೇ ಬಹಿಷ್ಕರಿಸುವಷ್ಟರ ಮಟ್ಟಕ್ಕೆ ಬೆಳೆಯಿತು.  ಇದರ ಪರಿಣಾಮವಾಗಿ ಅಜಾತೀಯರನ್ನು ಸಮಾಜದ ಹೊರಗೆ ಇಡುವ, ಅವರನ್ನು ಶ್ರಮಿಕ ವರ್ಗವಾಗಿ ಮಾತ್ರ ನೋಡುವ ಅಂದರೆ ಅವರನ್ನು ಮನುಷ್ಯರನ್ನಾಗಿಯೂ ನೋಡದ ಮಟ್ಟಕ್ಕೆ ಜಾತೀಯ ಧೋರಣೆ ಬೆಳೆಯಿತು.
 
ಇವೆಲ್ಲವುದರ ನಡುವೆ ಮಾನವನ ಜ್ಞಾನ, ಆವಿಷ್ಕಾರಗಳು, ವೈಜ್ಞಾನಿಕತೆ ಬೆಳೆಯುತ್ತಲೇ ಇತ್ತು. ಎಲ್ಲ ಧರ್ಮಗಳ ಸಾರವಾದ ಸೃಷ್ಟಿ, ಪ್ರಕೃತಿಯ ಬಗ್ಗೆ ಇದ್ದ ಮಿಥ್ಯಗಳನ್ನು ವಿಜ್ಞಾನ ತೋರಿಸಿದರೂ ಸಮಾಜ ಜಾತೀಯತೆ, ಮತೀಯತೆಯಿಂದ ವಿಮುಖವಾಗಲಿಲ್ಲ.  ತಂತ್ರಜ್ಞಾನವು ಅಂಧಶ್ರದ್ಧೆಯನ್ನು ಅಳಿಸಿ, ವೈಜ್ಞಾನಿಕ ವೈಚಾರಿಕತೆಯನ್ನು ಬೆಳೆಸುವಲ್ಲಿ ಸಂಪೂರ್ಣವಾಗಿ ವಿಫಲವಾಯಿತು. ವೈಜ್ಞಾನಿಕ ಜ್ಞಾನವನ್ನು ಪ್ರಚುರ ಪಡಿಸುವವರನ್ನು ಧರ್ಮದ್ರೋಹಿಗಳೆಂದು ಕರೆಯಲಾಯಿತು.  ಅವರಲ್ಲಿ ಕೆಲವರನ್ನಂತೂ ಹತ್ಯೆ ಮಾಡಲಾಯಿತು. 
 
ಬದಲಾಗುತ್ತಿದ್ದ ಕಾಲಮಾನದಲ್ಲಿ ಮಾನವನ ಜ್ಞಾನದಾಹ ಇನ್ನೂ ಹೆಚ್ಚೆಚ್ಚು ಬೆಳೆಯಿತು.  ಬರಬರುತ್ತಾ ಪ್ರಪಂಚ ಸಣ್ಣದಾಗತೊಡಗಿತು.  ಹೊಸ ಹೊಸ ದೇಶಗಳು, ಹೊಸ ರೀತಿಯ ಆಳ್ವಿಕೆಯ ಪದ್ಧತಿಗಳು ಬರತೊಡಗಿದವು.  ಆದರೆ, ಇವೆಲ್ಲವೂ ಧರ್ಮ, ಜಾತಿ ಮತ್ತು ಜಾತೀಯತೆಯನ್ನು ನಿವಾರಿಸುವ ಬದಲಾಗಿ ಅದನ್ನು ಇನ್ನೂ ಹೆಚ್ಚು ಬೆಳೆಸಿತು.  ಬದಲಾವಣೆ ಜೀವನಶೈಲಿಯಲ್ಲಾಯಿತೇ ವಿನಃ ಜೀವನಮಟ್ಟದಲ್ಲಾಗಲಿಲ್ಲ.  ಅಲ್ಲಿಯವರೆವಿಗೂ ಗುರುಕುಲ ಇತ್ಯಾದಿಗಳನ್ನು ನಡೆಸಿ ತಮ್ಮ ಧರ್ಮಗ್ರಂಥಗಳ ಶಿಕ್ಷಣ ನೀಡುತ್ತಿದ್ದ ಧರ್ಮಪ್ರವರ್ತಕರು ಹೊಸದಾಗಿ ಬದಲಾದ ಶೈಕ್ಷಣಿಕ ಪದ್ದತಿಯನ್ನು ಬೋಧಿಸುವ ಶಾಲೆಗಳನ್ನು ತೆರೆದರಷ್ಟೇ ವಿನಃ ಸಮಾಜದಲ್ಲಿನ ಜನರ ಜೀವನಮಟ್ಟವನ್ನು ಸುಧಾರಿಸುವ ಯಾವುದೇ ಪ್ರಯತ್ನಗಳನ್ನು ಮಾಡಲಿಲ್ಲ. 
 
ಅಲ್ಲದೇ ಆ ಕಾಲದಲ್ಲಿ ವಿಜ್ಞಾನ- ತಂತ್ರಜ್ಞಾನಗಳಲ್ಲಾದ ಆವಿಷ್ಕಾರಗಳಿಗೆ ಧರ್ಮಗಳು ತಮ್ಮದೇ ಅರ್ಥ-ವ್ಯಾಖ್ಯಾನಗಳನ್ನು ನೀಡತೊಡಗಿದರು. ಜೊತೆಗೆ ಬದಲಾಗಿ ಬೆಳೆಯತ್ತಿದ್ದ ವಿಜ್ಞಾನ- ತಂತ್ರಜ್ಞಾನಗಳನ್ನು ಈ ಅಂಧಶ್ರದ್ಧೆಯನ್ನು ಇನ್ನೂ ಹೆಚ್ಚಿನ ಮಟ್ಟಕ್ಕೆ ಬೆಳೆಸಲು ಅಪ್ರತ್ಯಕ್ಷವಾಗಿ ಉಪಯೋಗಿಸಲಾಯಿತು. ಹೀಗಾಗಿಯೇ ಎಂದೋ ಈ ಸಮಾಜದಿಂದ ತೊಲಗಬೇಕಾಗಿದ್ದ ಜಾತೀಯತೆ, ಅಂಧಶ್ರದ್ಧೆಗಳು ಇಂದೂ ಸಹ ಹೆಮ್ಮರವಾಗಿ ಬೆಳೆದು ನಿಂತಿರುವುದು. ಇದಕ್ಕೆ ಬಹುಮುಖ್ಯವಾದ ಎರಡು ಕಾರಣಗಳು ಇವೆ.  ಮೊದಲನೆಯದಾಗಿ  ಮಾನವನ ಜೀವನದಲ್ಲಿನ ಅನಿಶ್ಚಿತತೆ.  ಪ್ರತಿಯೊಬ್ಬ ಮನುಷ್ಯನಿಗೂ ಅವನ ನಾಳೆಗಳ ಬಗೆಗಿನ ಆಸೆ, ಆಕಾಂಕ್ಷೆಗಳು ಹಾಗೂ ಅವುಗಳನ್ನು ಪಡೆಯದಿರುವ ಬಗ್ಗೆಯ ಭಯಗಳೂ ಇರುವುದು ಸಹಜ ಪ್ರಕ್ರಿಯೆ. 
 
ಅಲ್ಲದೇ ಪ್ರತಿಯೊಬ್ಬನಿಗೂ ಅವನ ಜೀವನದಲ್ಲಿನ ಇಂದಿನ ಕಷ್ಟಗಳ ಸುಲಭ ನಿವಾರಣೆಯ ಬಯಕೆ ಅವನನ್ನು ಧರ್ಮದ ಅಂಧಶ್ರದ್ದೆಯೊಳಗಿನಿಂದ ಹೊರ ಬರದಂತೆ ತಡೆಯತ್ತಿದ್ದರೆ,  ಅಂಧಶ್ರದ್ಧೆ ಇದರ ದುರುಪಯೋಗವನ್ನು ಯಶಸ್ವಿಯಾಗಿ  ಮಾಡಿಕೊಳ್ಳುತ್ತಿದೆ. ಎರಡನೆಯದಾಗಿ ಹುಟ್ಟಿನಿಂದ ಅವನು ಗುರುತಿಸಲ್ಪಟ್ಟಿರುವ ಅವನ ಜಾತಿ, ಧರ್ಮ ಹಾಗೂ ಅವನ ಸುತ್ತಮುತ್ತಲಿನ ಮಾನವ ಸಂಬಂಧಗಳು ಅವನನ್ನು ಅಸಹಾಯಕನನ್ನಾಗಿ ಮಾಡಿರುವುದು. ಏನೆಲ್ಲವನ್ನೂ ಸಾಧಿಸಿರುವ ವಿಜ್ಞಾನಕ್ಕೆ ಸಮಾಜದ ಈ ಸ್ಥಿತಿಯನ್ನು ಬದಲಾಯಿಸಲು ಆಗದಿರುವ ಅದರ ದುಸ್ಥಿತಿ.  ಏಕೆಂದರೆ ವಿಜ್ಞಾನ ಕಠೋರ ಸತ್ಯವನ್ನು ಮಾತ್ರ ಹೇಳಬಲ್ಲುದೇ ಹೊರತು ಮಿಥ್ಯವಾದ ಸಾಂತ್ವನವನ್ನಲ್ಲ. ಅನಿಶ್ಚಿತತೆಯಿಂದ ತೊಳಲುತ್ತಿರುವ ಮಾನವನಿಗೆ ಕಠೋರ ಸತ್ಯಕ್ಕಿಂತ ಮೃದು ಸಾಂತ್ವನದ ಅಗತ್ಯ ಹೆಚ್ಚಿದ್ದು ಅವನು ತನ್ನ ಧರ್ಮ, ಜಾತಿ ಹಾಗೂ ಅವುಗಳ ಅಂಧಶ್ರದ್ಧೆಯನ್ನು ಒಪ್ಪಿ ನಡೆಯುವಂತೆ ಮಾಡುತ್ತದೆ.  
 
ಇನ್ನು ಈ ಕಠೋರ ಸತ್ಯವನ್ನೇ ಬಯಸಿ ಬದುಕಲು ಯತ್ನಿಸುವವನು ತನ್ನ ಸುತ್ತ ಮುತ್ತಲಿನ ಸಮಾಜ ಹಾಗೂ ಮಾನವ ಸಂಬಂಧಗಳನ್ನು ಕಳಚಿ ಬದುಕುವ ವಿಪರ್ಯಾಸಕ್ಕೆ ಹೆದರಿ ಅದರಿಂದ ವಿಮುಖನಾಗುತ್ತಿದ್ದಾನೆ. ಆದ ಕಾರಣವೇ ಇಂದು ಎಲ್ಲಾ ಧರ್ಮಗಳಲ್ಲೂ ಧಾರ್ಮಿಕ ಆಚರಣೆಗಳು ಬಹಳವೇ ಕ್ಷೀಣಿಸಿದ್ದರೂ, ಅಂಧಶ್ರದ್ಧೆಯು ಇನ್ನೂ ಹೆಚ್ಚಿನ ರೀತಿಯಲ್ಲಿ ಬೆಳೆಯುತ್ತಿದೆ. ಜಾತೀಯತೆ ಎಂದಿಗಿಂತ ಹೆಚ್ಚಾಗಿ ಬೆಳೆಯುತ್ತಿದೆ.  ಪ್ರತಿಯೊಂದನ್ನೂ ಪರೀಕ್ಷಿಸಿ, ಪರಾಮರ್ಶಿಸಿ ನೋಡುವ ಮಾನವ ಪ್ರವೃತ್ತಿಯು ಧರ್ಮದ ವಿಷಯದಲ್ಲಿ ದಿವ್ಯಮೌನ ತಾಳುತ್ತದೆ.  ಹಾಗಾಗಿ ಅರ್ಥವಿಲ್ಲದ ಅಂಧಶ್ರದ್ಧೆ ಇಂದು ಎಂದಿಗಿಂತ ಹೆಚ್ಚಾಗಿದೆ. 
ಹೀಗೆ ಕಾಡಿನಿಂದ ಬಂದ ಮಾನವ ತನ್ನದೇ ಆದ ನಾಡನ್ನು ಕಟ್ಟಿ, ಬೆಳೆಸುತ್ತಿದ್ದಾನೆ.  ಆದರೆ, ನಾನು ಈ ಮೊದಲೇ ಹೇಳಿದಂತೆ ಅವನು ತನ್ನೊಳಗಿನ ಮೃಗೀಯ ಗುಣಗಳನ್ನಾಗಲೀ, ಕಾಡಿನ ಸಂಸ್ಕೃತಿಯನ್ನಾಗಲೀ ಸಂಪೂರ್ಣವಾಗಿ ಮರೆತಿಲ್ಲ. ಇದು ಅವನ ಇಂದಿನ ಸಮಾಜದಲ್ಲೂ ಕಾಣಬರುತ್ತದೆ. ಕಾಡಿನ ಸಮಾಜಕ್ಕೂ ನಾಡಿನ ಸಮಾಜಕ್ಕೂ ಇರುವ ವ್ಯತ್ಯಾಸ ಒಂದೇ.  ಕಾಡಿನಲ್ಲಿ ಶಕ್ತಿವಂತರ ನ್ಯಾಯ ನಡೆದರೆ,  ನಾಡಿನಲ್ಲಿ ಬುದ್ಧಿವಂತರದು.  ಇದಕ್ಕೊಂದು ಸುಂದರವಾದ ಕಾಡಿನ ಕಥೆಯೊಂದಿದೆ. 
 
ಒಂದು ಕಾಡಿನಲ್ಲಿ ಹುಲಿ, ಚಿರತೆ, ನರಿ ಮೊದಲಾದ ಮಾಂಸಾಹಾರಿ ಪ್ರಾಣಿಗಳಿದ್ದವು.  ಹಾಗೂ ಅವುಗಳಿಗೆ ಮುಖ್ಯ ಆಹಾರವಾಗಿದ್ದುದು ಜಿಂಕೆಗಳು.  ಜಿಂಕೆಗಳ ಸಂಖ್ಯೆಗೆ ಹೋಲಿಸಿದಲ್ಲಿ ಮಾಂಸಾಹಾರಿ ಪ್ರಾಣಿಗಳ ಸಂಖ್ಯೆ ಗೌಣ. ಆದರೆ ಅವು ಸಂಘಟಿತ, ಬಲಶಾಲಿ ಮತ್ತು ಆಕ್ರಮಣ ಸ್ವಭಾವದವಾದ್ದರಿಂದ ಜಿಂಕೆಗಳು ಸುಲಭವಾಗಿ ಅವುಗಳಿಗೆ ಆಹಾರವಾಗಿದ್ದವು.  ಹೀಗಿರುವಾಗ, ಜಿಂಕೆಗಳ ಹಿಂಡಿನಲ್ಲೊಂದು ಶಕ್ತಿಶಾಲಿಯಾದ, ಆಕ್ರಮಣಕಾರಿ ಸ್ವಭಾವದ ಜಿಂಕೆಯೊಂದು ಹುಟ್ಟಿತು.  ಆ ಜಿಂಕೆಯ ಬೆಳೆದು ದೊಡ್ಡದಾದಾಗ ಸಹಜವಾಗಿಯೇ ಹಿಂಡಿನ ನಾಯಕನಾಯಿತು.  ಈಗ ಹೊಸ ನಾಯಕನ ಹಿಂಬಾಲಕರು ನಾಯಕನಿಗೆ ತಮ್ಮ ಗುಂಪುಗಳ ಕಷ್ಟಗಳನ್ನು ಹೇಳಿಕೊಂಡರು. ಹೇಗಾದರೂ ಮಾಡಿ ಹುಲಿ, ಚಿರತೆ, ನರಿಗಳು ತಮ್ಮವರನ್ನೂ ಮತ್ತು ತಮ್ಮ ಎಳೆಗರುಗಳನ್ನು ಹಿಡಿದು ತಿನ್ನುವುದನ್ನು ತಪ್ಪಿಸಬೇಕೆಂದು ಕೋರಿಕೊಂಡರು.  
 
ಸರಿ, ಹೊಸ ನಾಯಕನು ಜಿಂಕೆಗಳ ರಕ್ಷಕನಾದ ಅಲ್ಲದೇ ತನ್ನ ಆಕ್ರಮಣಕಾರಿ ಸ್ವಭಾವ ಹಾಗೂ ಬಲದಿಂದ ಹುಲಿಗಳನ್ನು ಹೆದರಿಸಿ ಓಡಿಸತೊಡಗಿದ.  ಬೇಟೆಯಿಲ್ಲದೇ, ಆಹಾರವಿಲ್ಲದೇ ಮಾಂಸಾಹಾರಿ ಪ್ರಾಣಿಗಳ ಜೀವನ ಕಷ್ಟವಾಯಿತು. ಅವುಗಳೆಲ್ಲ ಸೇರಿ ಈ ನೂತನ ನಾಯಕನೊಂದಿಗೆ ಸಂಧಿ ಮಾಡಿಕೊಂಡವು. ಪರಿಣಾಮ ಮಾಂಸಾಹಾರಿ ಪ್ರಾಣಿಗಳು ಜಿಂಕೆಯೊಂದನ್ನು ಬಿಟ್ಟು ಉಳಿದ ದುರ್ಬಲ ಪ್ರಾಣಿಗಳಾದ ಮೊಲ, ಅಳಿಲು ಇತ್ಯಾದಿಗಳನ್ನು ಮಾತ್ರ ಕೊಂದು ತಿನ್ನುವಂತಾಯಿತು.  ಕೆಲವೇ ದಿನಗಳಲ್ಲಿ ಕಾಡಿನಲ್ಲಿ ಜಿಂಕೆಗಳನ್ನು ಬಿಟ್ಟರೆ ಬೇರೆ ಸಸ್ಯಾಹಾರಿ ಪ್ರಾಣಿಗಳೇ ಇಲ್ಲದಂತಾಯಿತು.  ವಿಧಿಯಿಲ್ಲದೇ ಮಾಂಸಾಹಾರಿ ಪ್ರಾಣಿಗಳು ಸಹ ಸಸ್ಯಾಹಾರ ಸೇವಿಸಬೇಕಾಯಿತು. 
 
ಮಾಂಸಾಹಾರಿ ಪ್ರಾಣಿಗಳ ಗುಂಪಿನಲ್ಲಿ ಚತುರನಾದ ನರಿಯೊಂದಿತ್ತು. ಇದು ಒಂದು ದಿನ ವಿರಾಮವಾಗಿ ವಿಹರಿಸುತ್ತಿದ್ದ ನಾಯಕ ಜಿಂಕೆಯ ಬಳಿ ಬಂದಿತು.  ನಿಧಾನವಾಗಿ ಅದರೊಂದಿಗೆ ಸ್ನೇಹ ಬೆಳೆಸಿತು. ದಿನಕಳೆದಂತೆ ಅವುಗಳ ಸ್ನೇಹ ಬಲವಾಯಿತು. ಒಂದು ದಿನ ನರಿಯು ಜಿಂಕೆಯನ್ನು ಹೊಗಳುತ್ತ, ಹೇ ಬಲಾಢ್ಯನಾದ ಜಿಂಕೆಯೇ, ನೀನು ಕೇವಲ ಸಸ್ಯಾಹಾರಿಯಾಗಿ ಇಷ್ಟೊಂದು ಬಲಶಾಲಿಯಾಗಿದ್ದೀ, ಆದರೆ ನಿನ್ನ ಹಲ್ಲುಗಳು, ಉಗುರುಗಳು ಹುಲಿಯ ಹಲ್ಲು, ಉಗುರುಗಳಂತೆ ಬಲವಾಗಿಲ್ಲ ಹಾಗೂ ಚೂಪಾಗಿಲ್ಲ.   ಆದ ಕಾರಣ ನೀನು ಅವುಗಳನ್ನು ಆಳಲು ಸಾಧ್ಯವಾಗಿಲ್ಲ.  
 
ಒಂದೊಮ್ಮೆ ನೀನೂ ಸಹ ಅವುಗಳಂತೆಯೇ ಚೂಪಾದ ಹಲ್ಲು, ಉಗುರುಗಳನ್ನು ಹೊಂದಿದೆಯಾದರೆ ನೀನು ಕೇವಲ ಜಿಂಕೆಗಳಿಗಷ್ಟೇ ಅಲ್ಲ ಈ ಕಾಡಿಗೇ ರಾಜನಾಗಿ ಬಿಡಬಹುದು ಎಂದಿತು. ಇದರ ಮಾತಿನಿಂದ ಪ್ರಭಾವಿತನಾದ ಜಿಂಕೆಯು ನಾನು ಅವುಗಳನ್ನು ಹೊಂದಲು ಏನು ಮಾಡಬೇಕು ಎಂದು ನರಿಯನ್ನು ಕೇಳಿತು. ಅದಕ್ಕೆ ನರಿಯು ನೀನೂ ಸಹ ಹುಲಿಗಳಂತೆ ಮಾಂಸಾಹಾರಿಯಾಗಬೇಕು ಆಗ ಮಾತ್ರ ಇದು ಸಾಧ್ಯ ಎಂದಿತು.  ಹಲವಾರು ದಿನಗಳ ಜಿಜ್ಞಾಸೆ, ವಾದ-ವಿವಾದಗಳ ನಂತರ ಕೇವಲ ಪರೀಕ್ಷೆ ಮಾಡುವ ಮಟ್ಟಿಗೆ ಮಾಂಸಾಹಾರಿಯಾಗಲು ಜಿಂಕೆ ಒಪ್ಪಿತು.  ಹೀಗೆ ಮಾಂಸಾಹಾರಿಯಾದ ಜಿಂಕೆಗೆ ಹುಲ್ಲು ಹೇಗೆ ತಾನೆ ರುಚಿಸೀತು.  ನಿಧಾನವಾಗಿ ಈ ಜಿಂಕೆಯು ತನ್ನವರನ್ನೇ ತಿನ್ನಲು ಆರಂಭಿಸಿತು.  
 
ಈ ಕಥೆಯ ಸಾರಾಂಶ ಇಷ್ಟೆ, ಜಿಂಕೆಗಳ ಗುಂಪಿನಲ್ಲಿ ಹುಟ್ಟಿದ ಬಲಾಢ್ಯನಾದ, ಚತುರನಾದ ಹಾಗೂ ಆಕ್ರಮಣಕಾರಿಯಾದ ಜಿಂಕೆಯು ಉಳಿದ ಜಿಂಕೆಗಳ ರಕ್ಷಕನಾಗಲಿಲ್ಲ. ಬದಲಿಗೆ ಅದೂ ಸಹ ಜಿಂಕೆಗಳ ಪಾಲಿಗೆ ಇನ್ನೊಂದು ಹುಲಿಯಾಯಿತು.  ಇದು ಒಂದು ರೀತಿ ಕಾಡಿನಲ್ಲಿನ ಸಮಾಜದ ಅವಸ್ಥೆಯಾದರೆ ನಾಡಿನಲ್ಲಿ ಇದನ್ನೇ ಸ್ವಲ್ಪ ಬದಲಾವಣೆಯೊಂದಿಗೆ ನೋಡಬಹುದು.  
 
ದೈನಂದಿನ ಬದುಕು, ಬವಣೆಗಳು, ಹೋರಾಟಗಳಿಂದ ಬಳಲುತ್ತಿರುವ ವರ್ಗವು ಎಲ್ಲಾ ಸಮಾಜದಲ್ಲೂ ಬಹುಸಂಖ್ಯಾತ.  ಅದೇ ಸಮಾಜದಲ್ಲಿ ಉನ್ನತ ವರ್ಗದ ಸಂಖ್ಯೆ ಇವರಿಗೆ ಹೋಲಿಸಿದಲ್ಲಿ ಗೌಣ.  ಆದರೆ, ಬಹುಸಂಖ್ಯಾತ ಜನರಿಗೆ ಬದುಕು ಇನ್ನೂ ಹೋರಾಟ ಹಾಗಾಗಿ ಅವರು ದಿನಪೂರ್ತಿ ದುಡಿಮೆ, ಸಂಸಾರ ನಿರ್ವಹಣೆ ಇತ್ಯಾದಿಗಳಲ್ಲೇ ಮುಳುಗಿರುತ್ತಾರೆ.  ಅದನ್ನು ಬಿಟ್ಟು ಬೇರೆ ವಿಚಾರ, ವಿಮರ್ಶೆಗಳಿಗೆ ಅವರಲ್ಲಿ ಸಮಯಾವಕಾಶವಾಗಲೀ, ಸಹನೆಯಾಗಲೀ ಇರುವುದಿಲ್ಲ.  ಇವರಿಗೆ ಬೇಕಾದದ್ದು ಸ್ವಸ್ಥ ಸುಂದರ ಬದುಕು. ಅದು ಅವರ ಕನಸು. ಇವರು ನಾಡಿನ ಜಿಂಕೆಗಳು.  ಇವರ ಈ ಅನಿವಾರ್ಯತೆಯನ್ನು ಬಳಸಿಕೊಳ್ಳುವವರು ಸಮಾಜದಲ್ಲಿನ ಹುಲಿಗಳು.  ಕಾಡಿನ ಹುಲಿಗಳು ಜಿಂಕೆಯ ದೇಹವನ್ನು ತಿಂದರೆ ಇವರುಗಳು ನಾಡಿನ ಜಿಂಕೆಗಳ ಸ್ವಾತಂತ್ರ್ಯ, ಯೋಚನಾಶಕ್ತಿಯನ್ನೇ ತಮ್ಮ ಆಹಾರವನ್ನಾಗಿ ಮಾಡಿಕೊಂಡಿದ್ದಾರೆ. ಇವರುಗಳಿಗೆ ಸಹಕರಿಸುವ ನರಿಗಳು ನಮ್ಮ ಸಮಾಜದಲ್ಲಿ ಹೇರಳವಾಗಿದ್ದಾರೆ. 
 
ಇದರ ನಡುವೆ ನಿಮಗೊಂದು ಮಾತು ಹೇಳಬಯಸುತ್ತೇನೆ. ಕಾಡಿನಲ್ಲಿ ಜಿಂಕೆಗಳು, ಮೊಲಗಳು ಇತ್ಯಾದಿ ಇವುಗಳು ಸಾಧಾರಣವಾಗಿ ಎಲ್ಲ ಮಾಂಸಾಹಾರಿ ಪ್ರಾಣಿಗಳ ಆಹಾರ.  ಇವುಗಳನ್ನು ತಿನ್ನಲು ಹೇಗೆ, ಸಿಂಹ, ಹುಲಿ, ಚಿರತೆ, ಕಿರುಬ ಇತ್ಯಾದಿ ಪ್ರಾಣಿಗಳಿವೆಯೋ ಹಾಗೆ ನಾಡಿನಲ್ಲೂ ಈ ಅಸಹಾಯಕ ನಾಡಿನ ಜಿಂಕೆಗಳನ್ನು ತಿಂದು ತೇಗುವ ಬುದ್ಧಿವಂತ ಸಿಂಹ, ಹುಲಿ, ಚಿರತೆ, ಕಿರುಬ ಹೀಗೆ ಹಲವಾರು ಪ್ರಾಣಿಗಳಲ್ಲದೇ ಕಾಡು ಕಂಡಿಲ್ಲದ, ಕಾಡಿನಲ್ಲಿಲ್ಲದ ಇನ್ನೂ ಭಯಂಕರ ಪ್ರಾಣಿಗಳಿವೆ.  ಇವರೆಲ್ಲರುಗಳಿಂದ ಹೊರಬಂದು ತಮ್ಮದೇ ಆದ ಸುಂದರ ಬದುಕನ್ನು ಕಟ್ಟಿಕೊಳ್ಳುವುದು ಈ ನಾಡಿನ ಜಿಂಕೆಗಳಿಗೆ ಕನಸೇ ಸರಿ. ನಲ್ಮೆಯ ಓದುಗರೆ, ನಾವು ನಮ್ಮ ಸುತ್ತ ಮುತ್ತ ಕಾಣುವ ಜಾತಿ ಧರ್ಮಗಳಿಗಿಂತ ಮಿಗಿಲಾದ ಜಾತಿಯೊಂದಿದೆ. ಈ ಜಾತಿಯೇ ನಿರ್ಣಾಯಕವಾದುದು. 
 
ಅದೆಂದರೆ ’ಶೋಷಕ’ ರ ಜಾತಿ ಮತ್ತು ’ಶೋಷಿv’ ರ ಜಾತಿ. ಶೋಷಕರು ಹುಲಿ, ಸಿಂಹ, ನರಿಗಳ ರೂಪದಲ್ಲಿದ್ದರೆ, ಶೋಷಿತರು ಜಂಕೆ, ಮೊಲಗಳ ರೂಪದಲ್ಲಿರುತ್ತಾರೆ.  ಕಥೆಯಲ್ಲಿ ಹೇಳಿದಂತೆ ಈ ಜಿಂಕೆಗಳ ಗುಂಪಿನಿಂದ ಯಾವಾಗಲಾದರೊಮ್ಮೆ ಬಲಾಢ್ಯನಾದ ಜಿಂಕೆಯೊಂದು ಹುಟ್ಟಿಬಂದರೆ, ನಮ್ಮ ನಾಡಿನ ಹುಲಿ, ನರಿಗಳು ಈ ಜಿಂಕೆಗೆ ಉನ್ನತ ಸ್ಥಾನಮಾನ, ಉತ್ತಮ ಜೀವನಶೈಲಿಯ ಪರಿಚಯ ಮಾಡಿಸಿ ಬಿಡುತ್ತವೆ, ಇದರಿಂದ ಈ ಜಿಂಕೆಯೂ ಸಹ ಉಳಿದ ಜಿಂಕೆಗಳನ್ನು ತಿನ್ನುವ ಹೊಸ ಪ್ರಾಣಿಯಾಗುತ್ತಿದೆಯೇ ಹೊರತು ಜಿಂಕೆಗಳ ರಕ್ಷಕನಾಗುತ್ತಿಲ್ಲ. ಇವೆಲ್ಲವುಗಳ ನಡುವೆ ಮತೀಯತೆ, ಜಾತೀಯತೆಯೆಂಬ ಬ್ರಹ್ಮರಾಕ್ಷಸ ದಿನದಿಂದ ದಿನಕ್ಕೆ ಉಬ್ಬಿ ಎತ್ತರೆತ್ತರಕ್ಕೆ ಬೆಳೆಯುತ್ತಿದ್ದಾನೆ. 
 
ಸಮಾಜ ಇವೆಲ್ಲವನ್ನೂ ಕಂಡೂಕಾಣದಂತೆ ಮುನ್ನಡೆಯುತ್ತಿದೆ. ಹೊಸ ವಿಚಾರಗಳು ಚರ್ಚೆಗೆ ಮಾತ್ರ ಸೀಮಿತವಾಗಿದ್ದು ನಂತರ ಅನಷ್ಟಾನಹೀನ ಆಗುತ್ತಿದೆ. ಸಮಾಜದಲ್ಲಿ ತನ್ನ ಜಾತಿ ಮೇಲು ಎನ್ನುವ ಮನುಷ್ಯ, ಸವಲತ್ತುಗಳ ವಿಚಾರ ಬಂದರೆ ತನ್ನದು ಹಿಂದುಳಿದ ಜಾತಿ ಎಂದು ಹೇಳಿಕೊಳ್ಳುತ್ತಿರುವ ಈ ಕಾಲದಲ್ಲಿ ಜಾತಿ, ಜಾತೀಯತೆ ಕೆಲವರಿಗೆ ಮಾತ್ರ ಬೇಕಾದ ಮಾರ್ಗ.  ಆದರೆ ಈ ಕೆಲವರನ್ನು ಯಶಸ್ವಿಯಾಗಿ ಬಡಿದು ಕೂರಿಸುವ ಸಾಮಾಜಿಕ ನಾಯಕರುಗಳು ಯಾವ ಧರ್ಮದಲ್ಲೂ, ಜಾತಿಯಲ್ಲೂ, ದೇಶದಲ್ಲೂ ಇಲ್ಲ.  ವಿಪರ‍್ಯಾಸವೆಂದರೆ, ಶತಮಾನಗಳಿಂದ ತುಳಿತಕ್ಕೊಳಗಾದ ಜನಾಂಗದ ನಾಯಕನೊಬ್ಬ ಇಂದು ಪ್ರಪಂಚದ ಬಲಿಷ್ಟ ದೇಶವನ್ನಾಳುವ ನಾಯಕನಾದರೂ ಅವನಿರುವ ಮನೆಯ ಹೆಸರನ್ನು ಅವನಿಂದ ಬದಲಾಯಿಸಲಾಗಿಲ್ಲ.  ಯಾಕೆಂದರೆ ಇಷ್ಟೇ, ಎಷ್ಟೇ, ಅಷ್ಟೇ - " ಒಪ್ಪಿಕೊಂಡ ದಾಸ್ಯ ".                                                                     
 
comments powered by Disqus
Top