ಜಾತಿ ಸಂವಾದ - ಅಭಿಪ್ರಾಯ 2

ರಾಜಕಾರಣ, ಸರಕಾರಗಳಿಂದಲೇ ಜಾತಿಗೆ ನೆಲೆ!
-ಸುಜಾತಾ ವಿಶ್ವನಾಥ್.

ಮನುಷ್ಯರಾಗಿ ಬದುಕಲು ’ಜಾತಿ’ ಬೇಕಿಲ್ಲ. ಜಾತಿ ವಿನಾಶಕ್ಕಾಗಿ ಈ ನೆಲದಲ್ಲಿ ಕನಕದಾಸ, ಸರ್ವಜ್ಞ, ಬಸವಣ್ಣ, ಶರೀಫ್‌ರಂಥವರು ಸಾಕಷ್ಟು ಹಿರಿಯರು ಬೆಟ್ಟದಷ್ಟು ಪ್ರಯತ್ನ ನಡೆಸಿದರೂ ಆ ’ಜಾತಿ’ ದೂರವಾಗಿಲ್ಲ! ಅಂದರೆ ಅದರಿಂದಲೇ ತಿಳಿಯುತ್ತದೆ ಜಾತಿ ವ್ಯವಸ್ಥೆ ನಮ್ಮನ್ನು, ನಮ್ಮ ಸಮಾಜವನ್ನು ಎಷ್ಟು ಆಳವಾಗಿ ಹಾಳುಗೆಡವಿದೆ ಎಂಬುದು.

ಇದು ಪುರುಷ ಪ್ರಧಾನ ಸಮಾಜ. ಇಲ್ಲಿ ಹೆಣ್ಣಿಗೆ ಎಷ್ಟೇ ಸಮಾನತೆ ನೀಡಲಾಗಿದೆ ಎನ್ನುವ ಆಶ್ವಾಸನೆ, ಭರವಸೆಗಳ ಮಹಾಪೂರವೇ ಹರಿದರೂ ಈ ’ಜಾತಿ’ ಎಂಬ ವ್ಯವಸ್ಥೆಯನ್ನು ದೂರ ಮಾಡಲು ಸಾಧ್ಯವಿಲ್ಲವೇನೋ ಎನ್ನುವಂಥ ಸ್ಥಿತಿ ತಲುಪಿದೆ. ಅದಕ್ಕೆ ಪ್ರಮುಖ ಕಾರಣ ಸರಕಾರಗಳೇ. ಜಾತಿ ವ್ಯವಸ್ಥೆಯನ್ನು ದೂರ ಮಾಡಬೇಕು. ಜಾತ್ಯತೀತ ಸಮಾಜ ಕಟ್ಟಬೇಕು ಎಂದು ಎಲ್ಲ ಪಕ್ಷಗಳ ರಾಜಕಾರಣಿಗಳೂ ಉದ್ದುದ್ದ ಭಾಷಣ ಬಿಗಿಯುತ್ತಾರೆಯೇ ಹೊರತು ಅದನ್ನು ಅನುಷ್ಠಾನಗೊಳಿಸುವಲ್ಲಿ ಮಾತ್ರ ಯಾರೂ ನಿಷ್ಠೆ ತೋರುತ್ತಿಲ್ಲ. 
 
ಅಂತರ್ಜಾತಿ ವಿವಾಹ ಹಾಗೂ ಅಂತರ್ ಧರ್ಮೀಯ ವಿವಾಹವಾದವರಿಗೆ ಸರಕಾರದಿಂದಲೇ ಸಾಕಷ್ಟು ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಆದರೆ ಹೀಗೆ ಒಂದು ಕಡೆ ಜಾತಿಯತೆ ತೊಡೆದು ಹಾಕಲು ಹೊಸ ಯೋಜನೆಗಳನ್ನು ಹುಟ್ಟು ಹಾಕುವ ಸರಕಾರಗಳೇ ಮಕ್ಕಳು ಹುಟ್ಟಿದಾಕ್ಷಣ ಜನನ ಪ್ರಮಾಣ ಪತ್ರ ಪಡೆಯುವಾಗ, ಅವರನ್ನು ಶಾಲೆಗಳಿಗೆ ಸೇರಿಸುವಾಗ ಜಾತಿ ಮಾತ್ರವಲ್ಲ ಜಾತಿಯೊಳಗಿನ ಪಂಗಡಗಳನ್ನೂ ಗುರುತಿಸಿ ಅದಕ್ಕೊಂದು ಕಾಲಂ ಮೀಸಲಿಟ್ಟು ಅದರಲ್ಲಿ ಮಗುವಿನ ಜಾತಿ, ಒಳ ಪಂಗಡವನ್ನು ನಮೂದಿಸುತ್ತದೆ. ಅದೂ ಗಂಡಿನ ಜಾತಿಯನ್ನೇ ಆಧಾರವಾಗಿಟ್ಟುಕೊಂಡು ಮಗುವಿನ ಜಾತಿಯನ್ನು ನಿರ್ಧರಿಸುತ್ತದೆ! ಹೀಗೆ ಒಂದು ಕೈಯ್ಯಲ್ಲಿ ತೊಟ್ಟಿಲು ತೂಗುತ್ತ ಇನ್ನೊಂದು ಕೈಯ್ಯಲ್ಲಿ ಮಗುವನ್ನು ಚಿವುಟುತ್ತಾ ಹೋದರೆ ಈ ವ್ಯವಸ್ಥೆ ದೂರವಾಗುವುದಾದರೂ ಎಲ್ಲ? ಯಾವಾಗ?
 
ಮಗು ಹುಟ್ಟಿದಾಗಿನಿಂದ ಹಿಡಿದು ಶಿಕ್ಷಣ, ಸಾಮಾಜಿಕ ಬದುಕು, ಉದ್ಯೋಗ ಹೀಗೆ ಎಲ್ಲೆಂದರಲ್ಲಿ ಜಾತಿಯನ್ನು ಆಧಾರವಾಗಿಯೇ ಎಲ್ಲವೂ ನಿರ್ಧಾರವಾಗುತ್ತಿವೆ. ಇಂದು ಸಮಾಜದಲ್ಲಿ ಜಾತಿಯತೆ ಮೊದಲಿನಷ್ಟಿಲ್ಲ. ಕಡಿಮೆಯಾಗಿದೆ ನಿಜ, ಆದರೂ ಇದೂ ಸಂಪೂರ್ಣವಾಗಿ ನಿವಾರಣೆಯಾಗುವುದು ಮಾತ್ರ ಅಕ್ಷರಶಃ ಸುಳ್ಳು.
ಮಹಾತ್ಮ ಗಾಂಧಿ ’ಹರಿಜನ’ ಎನ್ನುವ ಪದವನ್ನು ಹುಟ್ಟು ಹಾಗಿ ಕೆಲವರ್ಗದವರಿಗಾಗಿಯೇ ಒಂದು ಪತ್ರಿಕೆಯನ್ನೂ ತಂದು ಆ ಮೂಲಕ ಜಾತಿ ವ್ಯವಸ್ಥೆಯನ್ನು ದೂರ ಮಾಡಲು ಹೋರಾಟ ನಡೆಸಿದರು. ಆದರೆ ಇಂದು ಆ ಪದ ಬಳಕೆಯೇ ಬೇಡ ಎನ್ನುವುದನ್ನು ಬಲವಾಗಿ ವಿರೋಧಿಸುವ ಪಂಗಡ ಕೂಡ ತಲೆ ಎತ್ತಿದೆ. ಅಂದರೆ ನಮಗೆ ಜಾತಿ ಎಷ್ಟು ಅವಶ್ಯ ಹಾಗೂ ಮುಖ್ಯ ಎನ್ನುವುದು ಇಲ್ಲಿ ಸ್ಪಷ್ಟವಾಗುತ್ತದೆ. 
 
ಈ ಕಾರಣಕ್ಕಾಗಿಯೋ ಏನೋ ಅಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ತಮ್ಮ ಜಾತಿಯನ್ನು ಬಿಟ್ಟು ದೂರ ಸರಿದಿದ್ದು ಎನಿಸುತ್ತದೆ. ಜಾತಿ ವ್ಯವಸ್ಥೆಯನ್ನು ಬುಡ ಸಮೇತ ಕಿತ್ತು ಹಾಕಿ ಸಮಾನತೆಯನ್ನು ಸಾರಲು ಹೊರಟ ಅವರೇ ತಮ್ಮ ಜಾತಿಯ ಜನರಲ್ಲಿದ್ದ ದಾರಿದ್ರ್ಯ, ಅಂಧಕಾರತೆ, ಸ್ವಾರ್ಥದಿಂದ ಬೇಸತ್ತಿದ್ದರೇನೋ ಎನ್ನುವ ಭಾವ ಕಾಡುತ್ತದೆ. ಈ ವ್ಯವಸ್ಥೆಯನ್ನು ಸಂಪೂರ್ಣವಾಗಿ ದೂರ ಮಾಡಬೇಕಾದರೆ ಆ ವ್ಯವಸ್ಥೆಯಲ್ಲಿ ತೊಳಲಾಡುವ ಜನರಿಗೂ ಅದರಿಂದಾಚೆ ಬರುವ ಮನಸ್ಸಿರಬೇಕು, ಜತೆ ಜಾಗೃತಿ ಕೂಡ. ಹಾಗಿದ್ದಾಗ ಮಾತ್ರ ಇದರ ನಿವಾರಣೆ ಸಾಧ್ಯವಾಗಬಹುದೇನೋ... ಆದರೆ ನಿರೀಕ್ಷೆ ಗಾಂಧಿ, ಅಂಬೇಡ್ಕರ್ ಕಾಲದಿಂದಲೂ ಮರೀಚಿಕೆಯಾಗಿಯೇ ಉಳಿದಿದೆ.
 
ಜಾತಿ ವ್ಯವಸ್ಥೆಗೆ ಕೇವಲ ಹಳ್ಳಿ ಅಥವಾ ಪಣ್ಣಗಳ ಬೇಧವಿಲ್ಲ. ಅದು ಎಲ್ಲ ಹಂತ, ವರ್ಗಗಳಲ್ಲೂ ನುಸುಳಿಕೊಂಡಿದೆ. ಇನ್ನು ಜಾತಿ ಆಧಾರದ ಮೇಲೆ ನಡೆಯುತ್ತಿರುವ ಹಿಂಸಾಚಾರಗಳಿಗೆ ಕೊನೆಯೇ ಇಲ್ಲ. ಸ್ವಾತಂತ್ರ್ಯ ದೊರೆತು ೬೦ ವರ್ಷಗಳ ಮೇಲಾದರೂ ಈ ಜಾತಿಯತೆಯನ್ನು ಆಧಾರವಾಗಿಟ್ಟುಕೊಂಡೇ ದಲಿತರ ಮೇಲೆ ದೌರ್ಜನ್ಯಗಳು, ಹಿಂಸಾಚಾರಗಳು ನಡೆದಿವೆ. ನಡೆಯುತ್ತಲೇ ಇವೆ.
 
ಖೆರಲಾಂಜಿ ನರಮೇಧ, ೨೦೦೬ರ ಮಹಾರಾಷ್ಟ್ರದಲ್ಲಿ ದಲಿತರ ಮೇಲಾದ ದೌರ್ಜನ್ಯ, ಚಂಬಲ್ ಕಣಿವೆಯ ರಾಣಿ ಪೂಲನ್ ದೇವಿಯ ಮೇಲೆ ಆರಂಭದಲ್ಲಿ  ಕೊಡ ಮಲಾದ ಅಮಾನವೀಯ ಅತ್ಯಾಚಾರ, ಆಗಾಗ ಅಲ್ಲಲ್ಲಿ ನಡೆಯುವ ದಲಿತರ ಮೇಲಿನ ಬಹಿಷ್ಕಾರ ಎಲ್ಲದಕ್ಕೂ ಜಾತಿಯೇ ಮೂಲಾಧಾರ. ಅದು ಇತ್ತೀಚೆಗೆ ಉದ್ಯೋಗ ಕ್ಷೇತ್ರಕ್ಕೂ ಕಾಲಿಟ್ಟಿದ್ದೂ ಚಿತ್ರದುರ್ಗದಲ್ಲಿ ದಲಿತ ಮಹಿಳೆಯೊಬ್ಬಳಿಗೆ ಅಂಗನವಾಡಿ ಸಹಾಯಕಿ ಹುದ್ದೆ ನೀಡಿದ್ದರಿಂದ ಆ ಗ್ರಾಮದ ಸವರ್ಣೀಯರು ಅವಳನ್ನು ಹಾಗೂ ಅವಳ ಜಾತಿಯವರೆಲ್ಲರನ್ನೂ ಗ್ರಾಮದಿಂದ ಬಹಿಷ್ಕಾರ ಹಾಕಿರುವುದನ್ನು ನೋಡಿದೆ ಈ ಜಾತಿಯತೆ ಎನ್ನುವ ಅನಿಷ್ಟ ಅಷ್ಟು ಸುಲಭವಾಗಿ ಈ ಸಮಾಜದಿಂದ ದೂರಾಗುವುದಿಲ್ಲ ಎನ್ನುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. 
 
ಆದ್ದರಿಂದ ಮೊದಲು ಸರಕಾರಗಳು ಈ ಚುನಾವಣೆ ರಾಜಕಾರಣ, ಮತ ಬ್ಯಾಂಕ್ ರಾಜಕಾರಣ ಮಾಡುವುದನ್ನು ಬಿಟ್ಟು ಪ್ರಾಮಾಣಿಕವಾಗಿ ಜಾತಿಯತೆಯನ್ನು ದೂರ ಮಾಡಲು ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು, ಶಿಕ್ಷಣ ವ್ಯವಸ್ಥೆಯಲ್ಲಿ ಈ ಜಾತಿ ಕಾಲಂ ಅನ್ನು ಕಿತ್ತು. ನಾವೆಲ್ಲರೂ ಮನುಷ್ಯರು ಎನ್ನುವುದನ್ನು ನಮೂದಿಸಿ ಆರ್ಥಿಕವಾಗಿ ಹಿಂದುಳಿದವರನ್ನು ಪತ್ತೆ ಹಚ್ಚಿ ಅಂಥವರಿಗೆ ಸರಕಾರದ ಸವಲತ್ತುಗಳನ್ನು ನೀಡಿದರೆ ಮೀಸಲಾತಿಗಾಗಿ ಜಾತಿ ಹೆಸರು ಹೇಳಿಕೊಂಡು ದುಂಬಾಲು ಬೀಳುವ, ಆ ಮೂಲಕ ಜಾತಿಯನ್ನೇ ಬಂಡವಾಳ ಮಾಡಿಕೊಂಡು ಅಮಾಯಕರ ಹೆಸರಿನಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವ ದಂಧೆಗೆ ಕಡಿವಾಣ ಬೀಳುತ್ತದೆ. ಜತೆಗೆ ಮೇಲ್ವರ್ಗದಲ್ಲೂ ಇರುವ, ಕೆಲವು ಆರ್ಥಿಕವಾಗಿ ಹಿಂದುಳಿದಿರುವವರನ್ನೂ ಮೇಲೆತ್ತಲು ಅನುಕೂಲವಾಗುತ್ತದೆ.
 
ಮನುಷ್ಯರಾಗಿ ಬದುಕಲು ಜಾತಿಯ ಅವಶ್ಯಕತೆಯೇ ಇಲ್ಲ. ಇಂದು ಜಾತಿ ವ್ಯವಸ್ಥೆ ಬಹಳಷ್ಟು ಅಮಾಯಕ ಹಾಗೂ ಪ್ರತಿಭಾವಂತರನ್ನು ಹಿಂದೆ ತಳ್ಳಿದೆ. ಜಾತಿ ಬಹಳಷ್ಟು ಮಂದಿಗೆ ಅಸ್ತ್ರವಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡವರು ಸಲೀಸಾಗಿ ಬದುಕುತ್ತಿದ್ದಾರೆ. ಆದರೆ ನಿಜವಾಗಿ ಮೀಸಲಾತಿ ಸಲ್ಲ ಬೇಕಾದ ದಲಿತರಿಗೆ ಹಿಂದುಳಿದ ವರ್ಗಗಳಿಗೆ ಸಿಗುತ್ತಿಲ್ಲ. ಆದ್ದರಿಂದ ಈ ಜಾತಿ ವ್ಯವಸ್ಥೆಯನ್ನೆ ಸಂಪೂರ್ಣವಾಗಿ ಕಿತ್ತು. ಆರ್ಥಿಕವಾಗಿ ಹಿಂದುಳಿದವರ ಬಗ್ಗೆ ಪಾರದರ್ಶಕವಾಗಿ ಮತ್ತೊಮ್ಮೆ ಸಮೀಕ್ಷೆ ನಡೆಸಿ ಅದರ ಆಧಾರದ ಮೇಲೆ ಸಮಾನತೆಗೆ ಬೇಕಾದ ಯೋಜನೆಗಳನ್ನು ಜಾರಿಗೊಳುಸುವುದು ಸೂಕ್ತ. ಇಲ್ಲದಿದ್ದರೆ ಈ ವ್ಯವಸ್ಥೆಯನ್ನು ಸುಧಾರಣೆ ಮಾಡಲು ಗಾಂಧಿ, ಅಂಬೇಡ್ಕರ್ ಮತ್ತೆ ಹುಟ್ಟಿಬಂದರೂ ಸಾಧ್ಯವಾಗುವುದಿಲ್ಲವೇನೋ ಎನಿಸದಿರದು.
comments powered by Disqus
Top