ಜಾತಿ ಸಂವಾದ - ಅಭಿಪ್ರಾಯ 3

ಆಹಾರ ಸಂಬಂಧಿ ಜಾತೀಯತೆ
ಡಾ. ಆರ್. ಸುನಂದಮ್ಮ, ವಿಜಾಪುರ

ಜಾತಿಯನ್ನು ರಕ್ಷಿಸಲು ವಿವಾಹ ಸಂಸ್ಥೆಯನ್ನು ಜಾರಿ ಮಾಡಿಕೊಂಡ ಸಮಾಜ, ಆಹಾರವನ್ನು ಒಂದು ಆಯುಧವಾಗಿ ಜಾತಿಶ್ರೇಷ್ಠತೆಯನ್ನು ಕಾಪಾಡಲು ಬಳಸಿದೆ. ಆಹಾರ ಜೀವನಪದ್ಧತಿಯಾಗಿದೆ. ಸಂಸ್ಕೃತಿಯ ಭಾಗವಾದ ಆಹಾರವನ್ನು ಶ್ರೇಷ್ಠ - ಅಧಮ ಎಂದು ಗುರುತಿಸಿಕೊಳ್ಳಲು ಬಳಸಿಕೊಳ್ಳಲಾಗಿದೆ. 

ವೀರಶೈವದ ಪ್ರವರ್ತಕರಾದ ಬಸವಣ್ಣನವರು ಸಮಾನತೆಯನ್ನು ಎತ್ತಿಹಿಡಿದರೂ ಲಿಂಗಧಾರಣೆ ಮತ್ತು ಆಹಾರದ ನಿಯಮವನ್ನು ಪಾಲಿಸುವುದನ್ನು ಒಪ್ಪಿಕೊಂಡರು. ಹೀಗಾಗಿ ’ಕೊಲುವವನೆ ಮಾದಿಗ, ಹೊಲಸು ತಿನ್ನುವವನೇ ಹೊಲೆಯ’ ಎಂದು ಅಂದಿಗಾಗಲೆ ರೂಢಿಯಲ್ಲಿದ್ದ ಕೊಲ್ಲುವ ಕಾಯಕವನ್ನು ಮಾಡುತ್ತಿದ್ದ ಮಾದಿಗರನ್ನು ಆ ಕಾಯಕ ಪರಿಕಲ್ಪನೆಯೊಂದಿಗೆ ಒಳಗು ಮಾಡಿಕೊಳ್ಳಲಿಲ್ಲ. ಮಾತ್ರವಲ್ಲ ಆ ಕಾಯಕ ಮಾಡುವ ಎಲ್ಲರನ್ನು ಮಾದಿಗ ಎಂದರು. ಅಂದಿಗೆ ರೂಢಿಯಲ್ಲಿದ್ದ ಈ ಕಾಯಕ ಜಾತಿಗಳನ್ನು ಸ್ಥಿರೀಕರಣಗೊಳಿಸಿದರು. ಹಾಗಾಗಿ ಕಡಿಯುವುದು, ತಿನ್ನುವುದು ಅಸ್ಪೃಶ್ಯತೆಗೆ ಸಮಾನವೆಂದರು. 
 
ಪ್ರಾಣಿಗಳನ್ನು ಆಹಾರವಾಗಿ ಸೇವಿಸುತ್ತಿದ್ದ ಜಾತಿಗಳು ವೀರಶೈವ ಧರ್ಮಕ್ಕೆ ಬಂದರೂ ಅವರೆಲ್ಲಾ ಸಸ್ಯಾಹಾರಿಗಳಾಗಿ ಮಾರ್ಪಟ್ಟರು. ಸಸ್ಯಾಹಾರಿಗಳಾಗಿ ಅದೇ ಜಾತಿಯಾಗಿ ಅವರು ಮುಂದುವರೆದರೆ, ಸಸ್ಯಾಹಾರಿಗಳು ಶ್ರೇಷ್ಠರಾದ ಅನಂತರದಲ್ಲಿ ತಮ್ಮದೇ ಜಾತಿಯ ಮಾಂಸಾಹಾರಿಗಳೊಂದಿಗೆ ವಿವಾಹ ಸಂಬಂಧಗಳನ್ನು ತೊರೆದರು. ಇದು ಆಹಾರ ರಾಜಕಾರಣವಾಗಿ ಇಂದು ಪ್ರಭಲವಾಗಿ ಬೆಳೆದಿದೆ. ಮಹಿಳೆಯರು ಮಾಂಸ ತಿನ್ನಬಾರದು. ಅವರು ಮನೆಯ ಸಂಸ್ಕೃತಿಯನ್ನು ಉಳಿಸಬೇಕೆಂದು ಹೇಳುತ್ತಾ ಪುರುಷರು ಮಾಂಸಹಾರಿಗಳಾಗಿ ಮನೆಯ ಹೊರಗೆ ತಿನ್ನುವಂತಾದರು. ತಿನ್ನುವ, ಕುಡಿಯುವ ಕ್ರಿಯೆಯಿಂದ ಅವರೇನು ಮಾದಿಗರಾಗಲಿಲ್ಲ. ಸದ್ಭಕ್ತರಾಗಿ ವಿಜೃಂಭಿಸಿದ್ದಾರೆ. 
 
ಮಾಂಸಹಾರವನ್ನು ಮತ್ತು ಕೊಲ್ಲುವ ಕೆಲಸವನ್ನು ಸರ್ವಜ್ಞ ಭಿನ್ನವಾಗಿ ಯೋಚಿಸಿ ಮಾತನಾಡುವ ಮೂಲಕ ಈ ದೇಶದ ತಾತ್ವಿಕತೆಯನ್ನೇ ಪ್ರಶ್ನಿಸಿದ್ದಾನೆ. ’ಸತ್ತದನು ತಿಂಬಾತ ಎತ್ತಣದ ಹೊಲೆಯನು, ಒತ್ತಿ ಜೀವವನು ಕೊರೆ ಕೊರೆದು ತಿಂಬಾತ, ಉತ್ತಮದ ಹೊಲೆಯ ಸರ್ವಜ್ಞ’ (ಪುಟ ೧೮೬, ಸರ್ವಜ್ಞನ ವಚನ ಸಂಪುಟ). ಹಾಗೆಯೇ ’ಕೊಂದು ತಿನ್ನುವವ ಹೊಲೆಯನೆಂದು ನೀನೆನಬೇಡ, ನೊಂದ ಜೀವವನು ಅರಿವ ಹಾರುವ, ನಾಡ ಕೊಂದಾದ ಹೊಲೆಯ ಸರ್ವಜ್ಞ’ (ಪುಟ ೧೮೬) ಎಂದಿದ್ದಾನೆ. ಬಸವಣ್ಣ ಕೊಟ್ಟ ವ್ಯಾಖ್ಯಾನವನ್ನು ನಿರಚಿಸಿದ ಸರ್ವಜ್ಞ ಮಾಂಸಹಾರಿಗಳಿಗೆ ಆತ್ಮಬಲವನ್ನು ತಂದಿದ್ದಾನೆ. ಮಾಂಸ ತಿನ್ನುವವರನ್ನು ಅತ್ಯಂತ ಹೀನಾಯವಾಗಿ ಕಾಣುವ ಪರಂಪರೆ ಹಲವು ರೀತಿಯ ಮಡಿಗಳನ್ನು ಜನರಲ್ಲಿ ಸ್ಥಾಪಿಸಿದೆ. 
 
ಮನೆಯೊಳಗೆ ಕೌಸನ್ನು ಸೇರಿಸಬಾರದು. ಮಾಂಸವನ್ನು ಕೌಸು ಎಂದು ಕರೆಯುವ ಮೂಲಕ ಅತ್ಯಂತ ಹೀನಾಯವಾಗಿ ಕಂಡರು. ಕೋಳಿ, ಕುರಿ ತಿನ್ನುವವರನ್ನು ಒಪ್ಪಿಕೊಂಡಂತೆ ಹಂದಿ, ದನ,    ಹೆಗ್ಗಣ,ಬೆಕ್ಕು, ಹಾವು ಮುಂತಾದ ಪ್ರಾಣಿಗಳನ್ನು ತಿನ್ನುವವರನ್ನು ಒಪ್ಪಿಕೊಳ್ಳಲಿಲ್ಲ. ಅವರನ್ನು ಮತ್ತಷ್ಟು ಹೀನಾಯವಾಗಿ ಕಾಣುವುದು ರೂಢಿಗೆ ತಂದರು. ಮಾಂಸವನ್ನು ಹೊರಗೆ ಮಾಡಿ ಹೊರಗೆ ತಿಂದು ಮರುದಿನ ಸ್ನಾನ ಮಾಡಿ ಒಳಗೆ ಬರುವುದು ರೂಢಿಗೆ ತರಲಾಗಿದೆ. ಭಾನುವಾರ, ಬುಧವಾರ, ಮಂಗಳವಾರಗಳು ಮಾತ್ರ ಕೆಲವರು ತಿನ್ನುವರು. ಹೀಗೆ ಯಾವುದನ್ನು ತಿಂದವರು ಉತ್ತಮರು ಯಾವುದನ್ನು ತಿಂದವರು ಅಧಮರು ಎಂದು ವಿಭಾಗಿಸಿದರು. 
 
ಅದನ್ನು ವಚನಕಾರ್ತಿ ಕಾಳವ್ವೆ ಆಗಲೇ ಪ್ರಶ್ನಿಸಿದ್ದಾಳೆ "ಕುರಿ ಕೋಳಿ ಕಿರುಮೀನು ತಿಂಬರಿಗೆಲ್ಲ ಕುಲಜ ಕುಲಜರೆಂದೆಂಬರು ಶಿವಗೆ ಪಂಚಾಮೃತವ ಕರೆವ ಪಶುವ ತಿಂದ ಮಾದಿಗ ಕೀಳುಜಾತಿಯೆಂಬರು"ಎನ್ನುವ ಮೂಲಕ ಜಾತಿ ಶ್ರೇಣೀಕರಣದ ವಿಧಾನವನ್ನು ಪ್ರಶ್ನಿಸಿದ್ದಾಳೆ. ಮಾಂಸಹಾರಿಗಳು ಸಸ್ಯಹಾರಿಗಳನ್ನು ವಿವಾಹವಾದರೆ ಇಂದಿಗೂ ಹಲವು ರೀತಿ ಅವಮಾನ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಇಂದು ಮಾತ್ರವಲ್ಲ ವೇದಕಾಲದಲ್ಲೂ ಈ ಸಮಸ್ಯೆ ಇತ್ತೆನ್ನುವುದಕ್ಕೆ ಧರ್ಮವ್ಯಾಧನ ಕತೆಯೇ ಉದಾಹರಣೆ. ಧರ್ಮವ್ಯಾಧ ತನ್ನ ಮಗಳಾದ ಅರ್ಜುನಕಿಯನ್ನು ಮಾತಂಗ ಮುನಿಯ ಮಗ ಪ್ರಸನ್ನನಿಗೆ ಮದುವೆ ಮಾಡಿಕೊಟ್ಟಿರುತ್ತಾನೆ. 
ಮಾಂಸಹಾರಿಯಾದ ಧರ್ಮವ್ಯಾಧನ ಮಗಳು ಸಸ್ಯಹಾರಿಗಳಾದ ಮಾತಂಗನ ಮನೆಯಲ್ಲಿ ಅವಮಾನಕ್ಕೆ ಒಳಗಾಗುತ್ತಾಳೆ. ಅದನ್ನು ಸಹಿಸಲಾರದೆ ಧರ್ಮವ್ಯಾಧನ ಮಗಳು ತಾನು ತವರಿಗೆ ಹಿಂತಿರುಗುವುದಾಗಿ ತಿಳಿಸುತ್ತಾಳೆ. ಆಗ ಧರ್ಮವ್ಯಾಧ ತಾನೊಂದು ಬಾರಿ ನಿನ್ನ ಗಂಡನ ಮನೆಗೆ ಬರುತ್ತೇನೆ ಅನಂತರ ತೀರ್ಮಾನಿಸೋಣವೆಂದು ಮಗಳಿಗೆ ತಿಳಿಸುತ್ತಾನೆ. ಧರ್ಮಬೋಧನೆಯಿಂದ ಬಿಡುವು ಮಾಡಿಕೊಂಡು ಧರ್ಮವ್ಯಾಧ ಮಗಳ ಮನೆಗೆ ಬರುತ್ತಾನೆ. ಅದನ್ನು ಕಂಡು ಪ್ರಸನ್ನ ಮತ್ತು ಅರ್ಜುನಕಿ ಪ್ರೀತಿಯಿಂದ ಬರಮಾಡಿಕೊಂಡು ಆತಿಥ್ಯ ನೀಡುತ್ತಾರೆ ಮತ್ತು ಊಟ ಮಾಡಿ ಹೋಗುವಂತೆ ವಿನಂತಿಸುತ್ತಾರೆ. 
 
ಆಗ ಧರ್ಮವ್ಯಾಧ ನಿಮ್ಮ ಮನೆಯಲ್ಲಿ ಏನು ಅಡುಗೆ ಮಾಡಿದ್ದೀರೆಂದು ಕೇಳುತ್ತಾನೆ. ಆ ಕೂಡಲೆ ಮಾತಂಗನ ಹೆಂಡತಿ ಅಂದು ಅಡುಗೆ ಮಾಡಲು ಬಳಸಿದ ಎಲ್ಲಾ ಪದಾರ್ಥಗಳನ್ನು ತಂದು ತೋರಿಸುತ್ತಾಳೆ. ಆಗ ಧರ್ಮವ್ಯಾಧ ’ನಾನು ನಿಮ್ಮ ಮನೆಯಲ್ಲಿ ಊಟ ಮಾಡಲು ಸಾಧ್ಯವಿಲ್ಲ ಯಾಕಂದರೆ ನಾನು ಒಂದು ಬೀಜವನ್ನು ಕೊಂದು ಏಳು ದಿನಗಳು ಜೀವಿಸುತ್ತೇನೆ. ತಾವು ಒಂದೇ ದಿನದಲ್ಲಿ ಇಷ್ಟೊಂದು ಬೀಜಗಳನ್ನು ಬಳಸುತ್ತಿದ್ದೀರಿ ಹೀಗಾಗಿ ಇದು ಧರ್ಮಸಮ್ಮತವಲ್ಲವೆಂದು ತಿಳಿಸುತ್ತಾನೆ. ಧರ್ಮವ್ಯಾಧನ ಸೂಕ್ಷ್ಮವಾದ ತಿಳುವಳಿಕೆ ಕಂಡು ಮಾತಂಗನ ಹೆಂಡತಿ ಅವರಲ್ಲಿ ಕ್ಷಮೆಯನ್ನು ಕೇಳಿ ತಾರತಮ್ಯ ಮಾಡುವುದರಿಂದ ಮುಕ್ತಳಾಗುತ್ತಾಳೆ. 
 
ಪ್ರಸ್ತುತ ಸಂದರ್ಭದಲ್ಲಿ ಹಲವಾರು ರೀತಿಯ ದ್ವಂದ್ವಗಳಿಂದ ಹಿಂಸೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದ ನಾವು ಮೇಲ್ಪದರಿನಲ್ಲಿ ಹಿಂಸೆಯ ಮಾನದಂಡಗಳನ್ನು ಹುಡುಕ ಹೊರಟಿದ್ದೇವೆ. ಹಿಂಸೆಯಿಂದ ಮುಕ್ತನಾಗಿ ಜೀವನ ನಡೆಸುವುದು ಸಾಧ್ಯವಿಲ್ಲವೆಂಬ ಅರಿವಿನೊಂದಿಗೆ ಅತ್ಯಂತ ಕಡಿಮೆ ಪ್ರಮಾಣದ ಸಂಪನ್ಮೂಲ ಬಳಸಿ ಬದುಕುವುದು ಅಹಿಂಸೆಯೆಂದು ಧರ್ಮವ್ಯಾಧ ವೇದಕಾಲದಲ್ಲಿಯೇ ಮಾಂಸಹಾರ ಅಧಮವೆಂದು ನೋಡುವವರಿಗೆ ತಿಳಿಸಿಕೊಟ್ಟಿದ್ದಾರೆ. ಆದರೂ ಮಾಂಸಹಾರಿಗಳಲ್ಲೇ ಶ್ರೇಣಿಯನ್ನು ಸೃಷ್ಟಿಸಿದ ವ್ಯವಸ್ಥೆ ರೂಢಿಯಲ್ಲಿದೆ. ಈ ಶ್ರೇಣಿಯನ್ನು ನಂಬುತ್ತಾ ಹೊರಡುವವರು ವಾರ, ತಿಥಿಗಳಲ್ಲಿ ಮಾಂಸವನ್ನು ತ್ಯಜಿಸುತ್ತಾ ಬಂದಿದ್ದಾರೆ. ಹಂದಿ, ದನ ಮತ್ತಿತರೆ ಪ್ರಾಣಿಗಳನ್ನು ಆಹಾರವಾಗಿ ಸೇವಿಸುವುದನ್ನು ತ್ಯಜಿಸುತ್ತಿದ್ದಾರೆ.
 
ಇತ್ತೀಚಿನವರೆಗೂ ಮಾಂಸಹಾರದ ಅಡುಗೆಯನ್ನು ದೂರದರ್ಶನದಲ್ಲಿ ತೋರಿಸುತ್ತಿರಲಿಲ್ಲ. ಈಗೀಗ ’ಭಾನುವಾರದ ಬಾಡೂಟ’ ಕಾರ್ಯಕ್ರಮ ದೂರದರ್ಶನದಲ್ಲಿ ಕಾಣುತ್ತಾ ಅಷ್ಟರ ಮಟ್ಟಿನ ಮಡಿವಂತಿಕೆಯಿಂದ ಅದು ಹೊರಬಂದಿದೆ. ಆಹಾರವು ಜಾತಿಗೋಡೆಗಳನ್ನು ಸೃಷ್ಟಿಸುವಲ್ಲಿ ಮತ್ತು ಭದ್ರಗೊಳಿಸುವಲ್ಲಿ ಪಾತ್ರವಹಿಸುತ್ತಿದೆ. ಆಹಾರದ ಮಡಿವಂತಿಕೆಯನ್ನು ಖಾಸಗಿ ಎನ್ನಲಾಗದು. ಉಡುಪಿ ಮಠದ ಪಂಕ್ತಿಬೇಧದಿಂದ ಹಿಡಿದು ದೇವಸ್ಥಾನಗಳಲ್ಲಿ ಪ್ರಸಾದದ ವಿನಿಯೋಗದವರೆಗೆ ಜಾತಿ ಸೂಕ್ಷ್ಮವಾಗಿ ಕೆಲಸ ಮಾಡುತ್ತದೆ. ಬಟ್ಟೆ ಬಿಚ್ಚಿ ಜನಿವಾರ ತೋರಿಯೇ ಊಟದ ಹಾಲ್ ಗೆ ಹಾಜರಾಗಬೇಕು. ಜನಿವಾರ ಇಲ್ಲದವರಿಗೆ ಬೇರೆ ಕಡೆ ಊಟ. ಇಲ್ಲಿ ಮೈತೆರೆದು ಓಡಾಡಲು ಗಂಡಸರಿಗೆ ಎಲ್ಲಾ ರೀತಿ ಅನುಮತಿ ಇದೆ. ಇಂಗು, ಬೆಳ್ಳುಳ್ಳಿಯ ನಡುವಿನ ರಾಜಕೀಯವು ಜಾತಿ ಸಂದರ್ಭದಲ್ಲಿ ಮುಖ್ಯವಾಗಿ ಪರಿಗಣಿಸಬೇಕಾಗಿದೆ. ಬೆಳ್ಳುಳ್ಳಿ ವಾಸನೆಯಿಂದ ಬ್ರಾಹ್ಮಣರು ಮೂಗು ಹಿಡಿದರೆ ಇಂಗಿನ ವಾಸನೆಗೆ ಶೂದ್ರಾದಿಗಳು ಮೂಗು ಹಿಡಿಯುತ್ತಾರೆ. ಎರಡನ್ನು ಬಳಸುವ ಅಗತ್ಯವನ್ನು ಕಾಣುವ ಅಗತ್ಯ ನಮಗೆ ಮನವರಿಕೆಯಾಗಬೇಕಾಗಿದೆ.
 
ಸಸ್ಯಹಾರಿಗಳಿಂದ ನಡೆಯುವ ಹಿಂಸೆಯ ಪ್ರಮಾಣ ಅಷ್ಟಿಷ್ಟಲ್ಲ. ಅರವತ್ತು ಸಾವಿರ ಜೀವಕೋಟಿಗಳಲ್ಲಿಯೂ ಭಗವಂತ ನೆಲೆಸಿದ್ದಾನೆ ಎಂದು ವಿಷ್ಣು ಅಥವಾ ಶಿವ ಅಥವಾ ದೇವಿ ಪುರಾಣಗಳಲ್ಲಿ ಕಾಣುತ್ತೇವೆ. ಈ ಅರವತ್ತು ಕೋಟಿ ಜೀವರಾಶಿಯ ಪಟ್ಟಿಯಲ್ಲಿ ಹುಳ, ಹುಪ್ಪಟ, ಕೀಟ, ಇರುವೆ, ಜಿರಳೆ, ಚಿಟ್ಟೆ ಇತ್ಯಾದಿ ಸೂಕ್ಷ್ಮ ಜೀವಿಗಳು ಸೇರಿವೆ. ಹಾಗಾದರೆ ತರಕಾರಿ ಬೆಳೆಯಲು ಬಳಸುವ ಕೀಟನಾಶಕಗಳು, ಮನೆಯಲ್ಲಿ ಜಿರಳೆ ಇತ್ಯಾದಿ ಕೊಲ್ಲಲು ಬಳಸುವ ಔಷಧಿಯಿಂದ ಆಗುವ ಪರಿಸರ ಹಾನಿ ಅಷ್ಟಿಷ್ಟಲ್ಲ. ಅದರ ಜೊತೆಗೆ ಈ ಪ್ರಾಣಿಗಳು ಜೀವ ಕಳೆದುಕೊಳ್ಳುತ್ತವೆ. 
 
ಮಾಂಸಹಾರಿಗಳನ್ನು ಅಧಮರೆಂದು ತಿಳಿಯುವ ಸಸ್ಯಹಾರಿಗಳು ಔಷಧ ಸಿಂಪಡಿಸುವ ಮೂಲಕ ಮಾಡುವ ಹಿಂಸೆಯನ್ನು ಹೇಗೆ ವ್ಯಾಖ್ಯಾನಿಸುವುದು. ಜೀವಜಾಲದ ಉಳಿಯುವಿಕೆಯನ್ನು ಅರ್ಥ ಮಾಡಿಕೊಳ್ಳದ ಮತ್ತು ಅದರ ಪ್ರವೃತ್ತಿಯನ್ನು ಅರಿಯದೆ ವೈಜ್ಞಾನಿಕವಾಗಿ ಚಿಂತಿಸದೆ ರೂಢಿಸಿಕೊಂಡ ಸಂಸ್ಕೃತಿಯಾಗಿದೆ. ಗಿಡ, ಮರಗಳಿಗೂ ಪ್ರಾಣವಿದೆ ಎಂಬ ವೈಜ್ಞಾನಿಕತೆಯನ್ನು ಅರ್ಥ ಮಾಡಿಕೊಂಡಲ್ಲಿ ಕಾಡು ನಾಶವಾಗುತ್ತಿರಲಿಲ್ಲ. ಪ್ರಾಣಿ ತಿಂದರಷ್ಟೇ ಹಿಂಸೆಯಲ್ಲ ಜೀವಜಾಲವನ್ನು ನಾಶಪಡಿಸುವುದೂ ಹಿಂಸೆಯೇ ಆಗಿದೆ. ಪ್ರಾಣಿ ಹಿಂಸೆಯಷ್ಟೇ ಕಾಡು ಕಡಿಯುವ ಮತ್ತು ಗಣಿಗಾರಿಕೆ ಮಾಡುವ ಕ್ರಿಯೆಗಳು ಜೀವ ವೈವಿಧ್ಯತೆಗೆ ಮಾರಕವಾಗಿದೆ.
 
comments powered by Disqus
Top