ಜಾತಿ ಸಂವಾದ - ಅಭಿಪ್ರಾಯ 4

ಜಾತಿಯಲ್ಲಿ ಆಹಾರದ್ದೇ ಮುಖ್ಯಪಾತ್ರ
ಶ್ವೇತರಾಣಿ.ಎಚ್. ಮೈಸೂರು

ಭಾರತೀಯ ಸಮಾಜದಲ್ಲಿ ಜಾತಿ ನಿರ್ಧಾರವಾಗುವುದು ಆಹಾರ ಪದ್ಧತಿಯಿಂದಲೆ. ಹನ್ನೆರಡನೆಯ ಶತಮಾನದಲ್ಲಿ ಕಾಯಕತತ್ವವನ್ನು ಬಳಕೆಗೆ ತಂದ ಬಸವಣ್ಣನವರು  ಶಾಕಾಹಾರಕ್ಕೆ ಹೆಚ್ಚು ಮಾನ್ಯತೆ ನೀಡಿದರು. ಅಂದಿನಿಂದಲೂ  ಕೆಳಜಾತಿಯವರೂ ಮೇಲುಜಾತಿಯವರ ಸಂಪ್ರದಾಯ ಪಾಲಿಸುತ್ತಾ ಶ್ರೇಣಿ ವ್ಯವಸ್ಥೆಯಲ್ಲಿ ಉನ್ನತ ಸ್ಥಾನ ಗಿಟ್ಟಿಸಿಕೊಂಡಿರುವುದಕ್ಕೆ  ಜಾತಿ ಇತಿಹಾಸವನ್ನು ಹೊಕ್ಕು ನೋಡಿದರೆ ಅನೇಕ ಉದಾಹರಣೆಗಳು ದೊರೆಯತ್ತವೆ.

ಅಂತಜಾತಿ ವಿವಾಹಗಳೂ ಜರುಗಿದಾಗಲೂ ಆಹಾರ ಕ್ರಮಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ.ಜಾತಿಯ ಶ್ರೇಣಿ ವ್ಯವಸ್ಥೆಯಲ್ಲಿ ಅವರ ಸ್ಥಾನ ಯಾವುದು ಎಂಬುದರ ಮೇಲು ನಿಂತಿರುತ್ತದೆ. ಜಾತಿಯಲ್ಲಿ ಮಾಂಸಾಹಾರಿಗಳು ಮಾಂಸವನ್ನು ವರ್ಜಿಸುವುದು, ಶಾಕಾಹಾರಿಗಳು ಮಾಂಸಾಹಾರ ಬಳಸುವುದು ಇತ್ತೀಚಿನ ಪ್ರವೃತ್ತಿಯಾಗಿದೆ. ಶಾಕಾಹಾರ ತಿನ್ನುವವರ ನಡುವೆ ಅಂತರ್ಜಾತಿ ವಿವಾಹಗಳು ಜರುಗಿದರೆ ದೊಡ್ಡ ಸಮಸ್ಯೆಗಳೇನು ಉದ್ಭವಿಸುವುದಿಲ್ಲ.  ಅದೇ ಶಾಕಾಹಾರ ಮಾಂಸಾಹಾರ ತಿನ್ನವವರ ಮಧ್ಯೆ ವಿವಾಹಗಳು ಜರುಗಿದಾಗ ಪ್ರೇಮಿಗಳ ಪ್ರಾಣತೆಗೆಯುವ ಅಂತದವರೆಗೂ ತಲುಪುತ್ತವೆ. ಅಷ್ಟೇ ಯಾಕೆ ಒಂದೆ ಜಾತಿಯಾದರೂ ಅದರಲ್ಲಿ ಉಪಜಾತಿಗಳಿಗೆ ಹೆಚ್ಚು ಮೌಲ್ಯವೆನ್ನುವ ಪರಿಪಾಟಲಿದೆ.
 
ಇನ್ನೂ ಪ್ರೇಮ ಪ್ರಕರಣಗಳನ್ನು ನೋಡುವುದಾದರೆ, ಪ್ರೀತಿಸುವ ಮುನ್ನ ಜಾತಿಯ ಅರಿವಿದ್ದೋ, ಇಲ್ಲದೆಯೂ ಪ್ರೀತಿಮಾಡುವ ಪ್ರೇಮಿಗಳು ಜಾತಿಯ ಕಾರಣದಿಂದಾಗಿ ದೂರವಾಗಿದ್ದಾರೆ. ಅಂತರ್ಜಾತಿ ವಿವಾಹದಿಂದ ಮುಂದೆ ಉಂಟಾಗುವ ಕೌಟುಂಬಿಕ- ಸಾಮಾಜಿಕ ತೊಂದರೆಗಳಿಗೆ ಕೆಲವೊಮ್ಮೆ ಪ್ರೇಮಿಗಳು ಅಂಜುತ್ತಾರೆ. ಇನ್ನೊಮ್ಮೆ ಮನೆಯಲ್ಲಿ ಹಿರಿಯರ ವತ್ತಡಕ್ಕೆ ಮಣಿಯಬೇಕಾದ ಸಂದರ್ಭಗಳು ಅನೇಕ ಸಲ ಏರ್ಪಡುತ್ತವೆ. ನಾವೆಲ್ಲರು ಕಣ್ಣಾರೆ ಕಂಡಂತ ಇಂತಹ ನೂರಾರು ನಿದರ್ಶನಗಳಿವೆ.
 
ಮಾಂಸಾಹಾರಿ ಮಾಂಸಾಹಾರಿ ಗಳ ಮಧ್ಯೆ ಭಿನ್ನತೆ, ತಾರಾತಮ್ಯ ಹೆಚ್ಚಾಗಿ ಕಂಡುಬರುತ್ತದೆ. ಕುರಿ, ಕೋಳಿ, ಮೇಕೆ, ಮೀನು ತಿನ್ನುವವರು ಎಮ್ಮೆ, ದನದ ಮಾಂಸ ತಿನ್ನುವವರು ನಮಗಿಂತ ಕೀಳು ಎನ್ನತ್ತಾರೆ. ಇವರಲ್ಲಿಯೇ ಜಾತಿ ಕಠಿಣ ರೀತಿಯಲ್ಲಿ  ಆಚರಣೆಯಲ್ಲಿರುವುದನ್ನು ಕಾಣಬಹುದು. ಜಾತಿ ಕೆಲವರಿಗೆ ಪ್ರತಿಷ್ಠೆಯಾದರೆ, ಮತ್ತೆ ಕೆಲವರಿಗೆ ವೈಯಕ್ತಿಕ ಉಪಯೋಗಕ್ಕಷ್ಠೇ ಸೀಮಿತಗೊಂಡಿದೆ.
 
ಈಗಲೂ  ಹಳ್ಳಿಯ ದೇವಸ್ಥಾನಗಳಲ್ಲಿ ಶೂದ್ರರಿಂದ ದೇವರಿಗೆ ನೈವೆದ್ಯೆಯಾಗಿ  "ಒಣಪಡಿ"ಯನ್ನು ಪಡೆಯುತ್ತಾರೆ. ರಾಗಿ, ಅಕ್ಕಿ, ದವಸ, ತಪ್ಪಾ ಈ ರೀತಿಯ ವಸ್ತುಗಳನ್ನು ಪಡೆಯಲು ಮೈಲಿಗೆಯಿಲ್ಲ. ಆದರೆ ಬೆಯಿಸಿದ ಆಹಾರವನ್ನು ಮಾತ್ರ ಸ್ವೀಕರಿಸುವುದಿಲ್ಲ. ಜಾತಿಯತೆ ಎಂಬುದು ಆಹಾರ ಕ್ರಮಕ್ಕಷ್ಠೇ ಸೀಮಿತವಾಗಿಲ್ಲ ಉಡುಗೆ-ತೊಡುಗೆಗೂ ವ್ಯಾಪಿಸಿದೆ. ಒಂದು ನಿರ್ದಿಷ್ಠ ಜಾತಿಗೆ ಸೇರಿದ ಮಹಿಳೆಯರು ಮೂಗುತಿ ಇಟ್ಟುಕೊಳ್ಳುವಂತಿಲ್ಲ. ಜಾಗಿಟು ( ಬ್ಲೌಸ್ ) ಧರಿಸುವಂತಿರಲಿಲ್ಲ. ಅನೇಕ ಸಂದರ್ಭದಲ್ಲಿ ಈ ಮಾತು ಕೇಳಿಬರುತ್ತವೆ. ಹೆಚ್ಚಾಗಿ ಕಾಲೇಜಿಗೆ ಸೇರಿದ ಹೆಣ್ಣುಮಗಳು  ಮೂಗು ಚುಚ್ಚಿಕೊಳ್ಳಲು ನಿರಾಕರಿಸಿದಾಗ.
 
ಜಾತಿ ಎಂಬದು ನಿಸರ್ಗದತ್ತವಾದುದ್ದಲ್ಲ ಅದು ಕೇವಲ ಸಾಮಾಜಿಕ. ಪಿತೃ ಪ್ರಧಾನ ಸಮಾಜ ನಮ್ಮದಾಗಿರುವುದರಿಂದ ಮಕ್ಕಳು ತಂದೆಯ ಜಾತಿಯಲ್ಲೆ ಗುರ್ತಿಸಿಕೊಳ್ಳುತ್ತಾರೆ. ಹೀಗೆ ಗುರ್ತಿಸಿಕೊಳ್ಳುವ ಅನಿವಾರ್ಯತೆಯನ್ನು ವ್ಯವಸ್ಥೆ ಸೃಷ್ಠಿಸಿದೆ. ತಂದೆ-ತಾಯಿಗಳು ಮಕ್ಕಳನ್ನು ಶಾಲೆಗೆ ಕಳಿಸುವಾಗ, ಅವರು ಯಾವ ಜಾತಿಯವರೊಂದಿಗೆ ಸ್ನೇಹ- ವಿಶ್ವಾಸವಿಟ್ಟುಕೊಳ್ಳಬೇಕು ಎಂದು ತಾಕೀತು ಮಾಡಿಕಳಿಸುವುದು ಇಂದಿಗೂ ನಗರ ಹಾಗೂ ಹಳ್ಳಿಯ ಸಂಪ್ರದಾಯ ನಿಷ್ಠ ಕುಟುಂಬಗಳಲ್ಲಿ ಕಾಣಬಹುದು. ಔದ್ಯೋಗಿಕ ಸ್ಥಳಗಳಲ್ಲಿ ತಮ್ಮದೆ ಜಾತಿಯ ಸ್ನೇಹಿತರನ್ನು ಆರಿಸಿಕೊಳ್ಳುವುದು. ತಮ್ಮ ಜಾತಿಯವರೆಂದು ಸಹಾಯ ಮಾಡುವುದನ್ನು ಇಂದಿಗೂ ಕಾಣಬಹುದು. ಇವುಗಳೆಲ್ಲಾ ಚಾಲ್ತಿಯಲ್ಲಿದ್ದರೂ ಎಷ್ಠರಮಟ್ಟಿಗೆ ಗೌಪ್ಯವಾಗಿರುತ್ತವೆಂದರೆ ಸಾಭೀತು ಪಡಿಸಲು ಕಷ್ಟಸಾಧ್ಯ.
 
ಜಾತಿ ಏಕೆ? ಬೇಕೆ? ಎಂಬ ಪ್ರಶ್ನೆಗೆ ಉತ್ತರ ತಿಳಿಯುವ ಮುನ್ನ ಜಾತಿಯತೆಯನ್ನು ಬುಡಸಮೇತ ಕೀಳಲು ಸಾಧ್ಯವೆ ? ಸಾಮಾಜಿಕವಾಗಿ - ಆರ್ಥಿಕವಾಗಿ ಸಮಾನತೆ ಸಾಧಿಸಲು ಸಾಧ್ಯವೆ ? ಎಂಬ ನಿಟ್ಟಿನಲ್ಲೂ ಯೋಚಿಸ ಬೇಕಾಗುತ್ತದೆ. ಜಾತಿಯಿಂದ ಅಷ್ಟೇ ಅಲ್ಲ ಮನುಷ್ಯ ಬಣ್ಣದಿಂದಲೂ ಶೋಷಿತರಾಗುತ್ತಾರೆ. ಇತ್ತೀಚೆಗೆ ಜಾತಿಯಬಗೆಗಿರುವ ಆಚರಣೆಗಳು ಸಡಿಲಗೊಂಡಿವೆಯಾದರೂ ಸಂಪೂರ್ಣವಾಗಿ ನಿಂತಿಲ್ಲ.
comments powered by Disqus
Top