ಜಾತಿ ಸಂವಾದ - ಅಭಿಪ್ರಾಯ 7

ಜಾತಿಯಿಂದ ದೇಶ ಅಭದ್ರ
- ಕೆ.ಸಿ. ರಾಜಣ್ಣ,ಕುಣಿಗಲ್.

ಜಾತಿ ಅನಿವಾರ್ಯವಲ್ಲ. ಬದುಕು ಅನಿವಾರ್ಯ.  ಒಂದು ಬಲಿಷ್ಠವಾದ ಜಾತಿಗೆ, ಧರ್ಮಕ್ಕೆ, ಜಾತಿ ಅನಿವಾರ್ಯವಾಗಿರಬಹುದು. ರಾಜಕೀಯದ ಹಿತಾಸಕ್ತಿ ಮತ್ತು ಸಾಮಾಜಿಕ ವೈಭವೀಕರಣಗಳಿಗಾಗಿ ಜಾತಿಯ ಹೆಸರಿನಲ್ಲಿ ಜೀವನ ಮಾಡುವ ಮತ್ತು ಗೌರವ ಸಂಪಾದಿಸುವ ಜನರಿದ್ದಾರೆ. ಅವರಿಗೆ ಇದು ಅನಿವಾರ್ಯವಿರಬಹುದು.
ಜಾತಿಯನ್ನು ದುರುಪಯೋಗಪಡಿಸಿಕೊಳ್ಳುವ `ಕ್ಯಾಸ್ಟ್ ಟ್ರೇಡರ್' ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವರು ಅದೇ ಜಾತಿಯಲ್ಲಿ ಇರಲು ಇಷ್ಟಪಡುತ್ತಾರೆ, ಜಾತಿ ಬದುಕಿಗೆ ನೆರವಾದರೆ ಅದರಲ್ಲಿ ಮುಂದುವರೆಯುತ್ತಾರೆ, ಜಾತಿ ಶಾಪವಾದರೆ ಅನಿವಾರ್ಯವಾಗಿ ಜಾತಿ ಬಿಡಲೇ ಬೇಕಾಗುತ್ತದೆ. ಇಂಥವರು ಮೇಲು ಅಥವ ಇಂಥವರು ಕೀಳೆಂದು ಯಾವುದೇ ಧರ್ಮ ಹೇಳುವುದಿಲ್ಲ. ಆದರೆ ಭಾರತದ ಮಟ್ಟಿಗೆ ಎಲ್ಲಾ ಮೇಲು ಜಾತಿಗಳೂ ನಾವೇ ಶ್ರೇಷ್ಠ ಎಂಬಂತಹ ಹಣೆಪಟ್ಟಿ ಕಟ್ಟಿಕೊಂಡಿವೆ.
ಭಾರತದಲ್ಲಿ ಜಾತಿಗೊಂದು ಸಂಘ, ಪಕ್ಷ, ಮಠ, ಶೈಕ್ಷಣಿಕ ಸಂಸ್ಥೆಗಳು ಇತ್ಯಾದಿ ವ್ಯವಸ್ಥೆಗಳಿಂದ ಭಾರತ ಜಾತ್ಯಾತೀತ ರಾಷ್ಟ್ರದ ಬದಲು “ಜಾತಿಯ” ರಾಷ್ಟ್ರವೇನೋ ಎಂಬ ಅನುಮಾನ ಬರುತ್ತಿದೆ. ಹಾಗೆಯೇ ಈ ಪರಿಸ್ಥಿತಿ ಭಯವನ್ನೂ ಹುಟ್ಟಿಸುತ್ತಿದೆ. ನನ್ನ ಮಟ್ಟಿಗೆ ಜಾತಿ ದೇಶವನ್ನು ಅಭದ್ರಗೊಳಿಸುತ್ತಿದೆಯೇ ಹೊರತು ಒಳಿತನ್ನು ಮಾಡುತ್ತಿಲ್ಲ.
 

comments powered by Disqus
Top