ಜಾತಿ ಸಂವಾದ - ಅಭಿಪ್ರಾಯ 2

ಜಾತಿ ಮೀರುವ ಹೆಣ್ಣಿನ ಧೀಶಕ್ತಿ
ಎಂ.ಎಸ್. ಆಶಾದೇವಿ .

`ಹೆಣ್ಣು ಜಾತಿ' ಎನ್ನುವ ಆದಿಮ ಜಾತಿ ಭೇಧದಿಂದ ಮುಕ್ತಳಾಗಲು ಬಯಸುತ್ತಿರುವ ಹೆಣ್ಣು ಜಾತಿ-ಜಾತಿ ವ್ಯವಸ್ಥೆಯನ್ನು ಪರಿಭಾವಿಸುವ ಬಗೆಯಾಗಲೀ ಅದು ಅವಳ ವ್ಯಕ್ತಿತ್ವ ಮತ್ತು ಬದುಕನ್ನು ಹೊಕ್ಕು ಬಳಸುವ ಪರಿಗಳಾಗಲೀ ಸಂಕೀರ್ಣ ಸ್ವರೂಪದವು.

ಜಾತಿ ವ್ಯವಸ್ಥೆಯ ಪೋಷಕಿಯ ಪಾತ್ರದಲ್ಲಿ ಹೆಣ್ಣನ್ನು ಪದೇ ಪದೇ ಗುರುತಿಸಲಾಗುತ್ತೆ. ಆದರೆ ಈ ಪಾತ್ರವಾದರೂ ಅವಳ ಆಯ್ಕೆಯದೋ ಅಥವಾ ಅವಳ ದತ್ತ ವ್ಯಕ್ತಿತ್ವದ ಒಂದು ಭಾಗವೋ ಎನ್ನುವ ಅಂಶದ ಚರ್ಚೆ ಮತ್ತು ಅಧ್ಯಯನ ಅನೇಕ ಕುತೂಹಲಕರ ವಿವರಗಳನ್ನು ನೀಡಬಲ್ಲದು. ಜಾತಿಯ ಸಾಮಾಜಿಕ, ರಾಜಕೀಯ ಆಯಾಮಗಳಿಗಿಂತ ಅದರ ಸಾಂಸ್ಕೃತಿಕ, ಕೌಟುಂಬಿಕ ಹಾಗೂ ವ್ಯಕ್ತಿಗತವಾದ ಅದರಲ್ಲೂ ಆಚರಣಾತ್ಮಕ ವಿವರಗಳಲ್ಲಿ ಜಾತಿಯನ್ನು ಭದ್ರಪಡಿಸುವ ಹಾಗೂ ಕಾಪಾಡುವ ಆಕರವಾಗಿಯೂ ಪರಿಕರವಾಗಿಯೂ ಹೆಣ್ಣನ್ನು `ಬಳಸಲಾಗುತ್ತದೆ'.

ಆದರೆ ಈ ಅಂಶ ಮೇಲ್ನೋಟಕ್ಕೆ ಕಾಣುವಷ್ಟು ಸರಳವೂ ಏಕಮುಖದ್ದೂ ಆಗಿರುವುದಿಲ್ಲ. ದತ್ತ ಪಾತ್ರವನ್ನೇ ಬಳಸಿಕೊಂಡು ತನ್ನ ಅಸ್ಮಿತೆಯನ್ನು ಹುಡುಕಲು, ಕಟ್ಟಿಕೊಳ್ಳಲು ಪ್ರಯತ್ನಿಸುವ ಅನಿವಾರ್ಯತೆಯಲ್ಲಿರುವ ಹೆಣ್ಣು ಜಾತಿಯ ಪೋಷಣೆಯನ್ನೂ ಎಗ್ಗಿಲ್ಲದೆ ಮಾಡುವ ಪ್ರಯತ್ನಗಳನ್ನು ಜಾತಿಯನ್ನೂ ಒಳಗೊಂಡ ಲಿಂಗ ರಾಜಕಾರಣದ ಹಿನ್ನೆಲೆಯಲ್ಲಿಯೇ ಚರ್ಚಿಸಬೇಕಾಗುತ್ತದೆ. ಉದಾಹರಣೆಗೆ ಅಂತರ್ಜಾತಿಯ ವಿವಾಹಗಳಲ್ಲಿ ಹೆಣ್ಣು ಕೆಳಜಾತಿಯವಳಾದರೆ ಮೇಲ್ಜಾತಿಯ ಆಚರಣೆಗಳನ್ನು ಅಪಾರ ಸಡಗರ ಸಂಭ್ರಮದಲ್ಲಿ ಪಾಲಿಸುವಂತೆ ಅವಳೇ ಮೇಲ್ಜಾತಿಯವಳಾಗಿ ಕೆಳಜಾತಿಯವನನ್ನು ಮದುವೆಯಾದಾಗ ಅನಿವಾರ್ಯವಾಗಿ ಸಹಿಸಬೇಕಾದ ಅಥವಾ ಒಪ್ಪಬೇಕಾದ ಆಚರಣೆಗಳನ್ನು ಅದೇ ಸಡಗರ ಸಂಭ್ರಮದಲ್ಲಿ ಮಾಡುವುದಿಲ್ಲ.

ವೈಯಕ್ತಿಕವಾಗಿ ಜಾತಿಯ ಕಬಂಧ ಬಾಹುವಿನ ಹಿಡಿತಗಳಿಲ್ಲದ ಅಥವಾ ಅದರ ಅಗತ್ಯವೂ ಅನಿವಾರ್ಯತೆಯೋ ಇಲ್ಲದ ಮಧ್ಯಮ ವರ್ಗದ ಸರ್ಕಾರಿ ಉದ್ಯೋಗಿ ವರ್ಗದ ಹಿನ್ನೆಲೆಯಲ್ಲಿ ಬಂದದ್ದರಿಂದಲೇ ನನಗೆ ಜಾತಿಯ ದಮನಕಾರಿ, ವಿಚ್ಛಿದ್ರಕಾರಿ ನೆಲೆಗಳ ಅನುಭವವಿಲ್ಲ. ನಾನು ಸರ್ಕಾರಿ ಕೆಲಸಕ್ಕೆ ಸೇರಿದ ಆರಂಭದ ದಿನಗಳಲ್ಲಿ ನನ್ನನ್ನು ಬ್ರಾಹ್ಮಣಳೆಂದು ತಿಳಿದ ಪ್ರಿನ್ಸಿಪಾಲರೊಬ್ಬರು ನನಗೆ ಕೊಟ್ಟ ಇನ್ನಿಲ್ಲದ ಹಿಂಸೆಯನ್ನು ಗಮನಿಸಿದ ನನ್ನ ಸಹೋದ್ಯೋಗಿಗಳಲ್ಲಿ ಕೆಲವರು `ಹೋಗಿ ಮೇಡಂಗೆ ಹೇಳಿ, ನೀವು ಬ್ರಾಹ್ಮಣರಲ್ಲವೆಂದು. ನಿಮ್ಮ ಸಮಸ್ಯೆಗಳೆಲ್ಲ ಕ್ಷಣ ಮಾತ್ರದಲ್ಲಿ ಪರಿಹಾರವಾಗುತ್ತವೆ' ಎಂಬ ಸಲಹೆ ಕೊಟ್ಟರು. ಸಮಸ್ಯೆಗಿಂತ ಸಲಹೆಯೇ ಅಸಹ್ಯಕರವಾಗಿ ಕಂಡದ್ದರಿಂದ ನಾನು ಅದನ್ನು ಪಾಲಿಸಲಿಲ್ಲ. ಆ ಕಾಲೇಜಿನಿಂದ ವರ್ಗವಾಗಿ ಹೋದ ಮೇಲೆ ನಾನು ಬ್ರಾಹ್ಮಣಳಲ್ಲವೆಂದು ತಿಳಿದು ನನ್ನ ಸಹೋದ್ಯೋಗಿಯ ಬಳಿ `ಆ ಪಾಪದ ಹುಡುಗಿಯನ್ನು ಗೋಳಾಡಿಸಿಬಿಟ್ಟೆನಲ್ಲ' ಎಂದು ಆ ಪ್ರಿನ್ಸಿಪಾಲರು ಹೇಳಿದ್ದೊಂದೇ ನನ್ನ ಜೀವನದಲ್ಲಿ ಈ ತನಕ ಎದುರಾಗಿರುವ ಜಾತಿ ಅನುಭವ.

ಹೀಗಿದ್ದೂ ಜಾತಿಯ ಲಕ್ಷ್ಮಣ ರೇಖೆಗಳನ್ನು ಮೀರಲು ಬೇಕಾಗುವ ಧೀಶಕ್ತಿ ಹೆಣ್ಣಿಗೆ ಗಂಡಿಗಿಂತಲೂ ಹೆಚ್ಚಿದೆ ಎಂದು ನಾನು ನಂಬಿದ್ದೇನೆ. ಮನುಷ್ಯನನ್ನು ಜಾತಿಯ ಗಡಿಗಳನ್ನು ಮನುಷ್ಯತ್ವದ ನೆಲೆಯಲ್ಲಿ ನೋಡಲು ಬೇಕಾಗುವ ಅಂತಃಕರಣದ ಸೆಲೆಯನ್ನು ಬಾಹ್ಯ ಶಕ್ತಿಗಳ ಪ್ರಯತ್ನಗಳ ಬೆಂಬಲವಿಲ್ಲದೆಯೂ ಸ್ವಯಂ ಜಾಗೃತಗೊಳಿಸಿಕೊಳ್ಳಬಲ್ಲ ಶಕ್ತಿ ಹೆಣ್ಣಿಗಿದೆ.

ಮಾಸ್ತಿಯವರ ಕೊನೆಯ ಮಗಳು ಶಾಂತಮ್ಮ ಅಮೆರಿಕಕ್ಕೆ ಉನ್ನತ ಶಿಕ್ಷಣಕ್ಕೆ ಹೋದವರು ಅಲ್ಲಿಯ ಹುಡುಗನೊಬ್ಬನನ್ನು ಪ್ರೀತಿಸಿ ಮದುವೆಯಾದರು. ಕೆಲವು ಕಾಲದ ಮೇಲೆ ಭಾರತಕ್ಕೆ ಬರುತ್ತೇವೆ ಎಂದು ಅವರು ಪತ್ರ ಬರೆದಾಗ ಮಾಸ್ತಿ ಮತ್ತು ಅವರ ಹೆಂಡತಿ ಇಬ್ಬರೂ ಅದರ ಬಗ್ಗೆ ಚರ್ಚಿಸುತ್ತಾರೆ. ಆ ದಂಪತಿಗಳನ್ನು ಹೇಗೆ ನಡೆಸಿಕೊಳ್ಳಬೇಕು ಎನ್ನುವ ಪ್ರಶ್ನೆಗೆ ಮಾಸ್ತಿ ಮನೆಗೆ ಅತಿಥಿಗಳು ಬಂದಾಗ ಎಷ್ಟು ಗೌರವದಿಂದ ನಡೆಸಿಕೊಳ್ಳುತ್ತೇನೆಯೋ ಅವರನ್ನು ಅಷ್ಟೇ ಗೌರವದಿಂದ ನಡೆಸಿಕೊಳ್ಳುತ್ತೇನೆ ಎನ್ನುತ್ತಾರೆ. ಆದರೆ ಹೆಂಡತಿ ಪಂಕಜಮ್ಮ ಮಾತ್ರ ಮನೆಗೆ ಮಗಳು ಅಳಿಯ ಬಂದಾಗ ಹೇಗೆ ನಡೆಸಿಕೊಳ್ಳಬೇಕೋ ಹಾಗೇ ನಡೆಸಿಕೊಳ್ಳುತ್ತೇನೆ ಎನ್ನುತ್ತಾರೆ. ಈ ಪ್ರಸಂಗವನ್ನು ಉಲ್ಲೇಖಿಸುತ್ತಾ ಮಾಸ್ತಿ, ಅವರ ಸ್ನೇಹಿತರೊಬ್ಬರು ಮಾಸ್ತಿಯವರಿಗೆ `ನಿಮಗಿಂತ ನಿಮ್ಮ ಹೆಂಡತಿ ಆಲೋಚನೆಯಲ್ಲಿ ಮತ್ತು ವ್ಯಕ್ತಿತ್ವದಲ್ಲಿ ಮೇಲ್ಮಟ್ಟದ್ದಲ್ಲಿದ್ದಾರೆ' ಎಂದಿದ್ದನ್ನು ನೆನಪಿಸಿಕೊಳ್ಳುತ್ತಾರೆ.ಇಂಥ ನೂರು ಪ್ರಸಂಗಗಳನ್ನು ನಮ್ಮ ಸಮಕಾಲೀನ ಬದುಕಿನ ಸಂದರ್ಭಗಳಿಂದಲೂ ನಾವು ಕಂಡುಕೊಳ್ಳಬಹುದು.

comments powered by Disqus
Top