ಜಾತಿ ಸಂವಾದ - ಅಭಿಪ್ರಾಯ 3

ಸ್ತ್ರೀವಾದಿಗಳು ಮಾಡುತ್ತಿರುವ ಪ್ರಮಾದ!
ಮು.ಅ. ಶ್ರೀರಂಗ

ಇಂದು ನಮ್ಮನಡುವೆ ಇರುವ ಬಹುಪಾಲು ಮಂದಿ ಪ್ರಗತಿವಾದಿಗಳು ಪುರೋಗಾಮಿಗಳು ಸ್ತ್ರೀವಾದಿಗಳಲ್ಲಿ ಭಾರತದ ಸ್ವಾತಂತ್ರ್ಯಾ ನಂತರದ ಪೀಳಿಗೆಯವರೇ ಜಾಸ್ತಿ (ಸುಮಾರು ಅರವತ್ತರಿಂದ ಅರವತ್ತೈದರ ವಯೋಮಾನದವರು). ನನ್ನ ಅನುಭವದ ಪ್ರಕಾರವೇ ಹೇಳುವುದಾದರೆ ಈಗ್ಗೆ ಅರವತ್ತು ವರ್ಷಗಳ ಹಿಂದೆ (ಮತ್ತು ಅವರುಗಳೇ ಹೇಳಿದಂತೆ ಅದಕ್ಕೂ ಹಿಂದೆ ಅವರ ಚಿಕ್ಕ ವಯಸ್ಸಿನಲ್ಲಿ ಅವರು ನೋಡಿದಂತೆ) ನನ್ನ ಅಜ್ಜಿ ಮತ್ತು ತಾಯಿ ಆ ಮೂರು ದಿನಗಳು ಹಳ್ಳಿಯಲ್ಲಿನ ವಿಶಾಲವಾದ ದೊಡ್ಡ ಮನೆಯಲ್ಲಿ ಅದಕ್ಕೆಂದೇ ಮೀಸಲಾದ ಒಂದು ಕೋಣೆಯಲ್ಲಿರುತ್ತಿದ್ದರು. ಅದು ನಿಜ. ಇಂದು ಬ್ರಾಹ್ಮಣರಲ್ಲೂ ಸಹ ಯಾರೂ ಹಿಂದಿನಂತೆ ಆ ಮೈಲಿಗೆಯ ಮೂರು ದಿನಗಳಲ್ಲಿ ಅಸ್ಪೃಶ್ಯರಾಗಿ ಇರುತ್ತಿಲ್ಲ. ಇದಕ್ಕೆ ಬದಲಾದ ಸಾಮಾಜಿಕ ಜೀವನದ ರೀತಿಗಳೇ ಕಾರಣ. ಶಿಕ್ಷಣಕ್ಕಾಗಿ ಉದ್ಯೋಗಕ್ಕಾಗಿ ಹಳ್ಳಿಗಳನ್ನು ಬಿಟ್ಟು ಪಟ್ಟಣ ಸೇರಿದ ಮೇಲೆ ನಂತರ ಮದುವೆ ಸಂಸಾರ ಮಕ್ಕಳು ಈ ಚಕ್ರ ತಿರುಗಬೇಕಾದರೆ ಗಂಡ ಹೆಂಡತಿ ಇಬ್ಬರೂ ದುಡಿಯಲೇ ಬೇಕಾದ ಪರಿಸ್ಥಿತಿ ಅನಿವಾರ್ಯ .

ಒಂದು ಕಡೆ ದೇವಸ್ಥಾನಗಳನ್ನು ಶೋಷಣೆಯ ಕೇಂದ್ರಗಳೆಂದು ಟೀಕಿಸುವುದು ಮತ್ತೊಂದೆಡೆ ಅಲ್ಲಿ ಮಹಿಳೆಯರಿಗೆ ಸೂಕ್ತ ಮೀಸಲಾತಿ ಇಲ್ಲವೆಂದು ವಾದಿಸುವುದು! ಇದೊಂದು ತರಹದ ವಿಚಿತ್ರ ವಿತಂಡವಾದ. ನನ್ನ ಅಭಿಪ್ರಾಯವೆಂದರೆ ಋತುಸ್ರಾವದ ದಿನಗಳಲ್ಲಿ ಮಹಿಳೆ ದೇವಸ್ಥಾನಕ್ಕೆ ಹೋಗುವುದು ಬಿಡುವುದು ಆಕೆಯ ಸ್ವಂತ ವಿಚಾರ. ಹೋದರೆ ಯಾರು ತಡೆಯುತ್ತಾರೆ. ಹೋಗಲಿ ಬೇಡವೆಂದು ಹೇಳಿದವರು ಯಾರು? ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನವಾದರೆ ಅದು ನೇರವಾಗಿ ಸರ್ಕಾರದ ಹಿಡಿತಕ್ಕೆ ಬರುತ್ತದೆ. ಅದಕ್ಕೆಂದೇ ಸರ್ಕಾರದಲ್ಲಿ ಪ್ರತ್ಯೇಕ ಸಚಿವರು ಇದ್ದಾರೆ. ಅಲ್ಲಿ ಸರ್ಕಾರದ್ದೇ ಕೊನೆಯಮಾತು.

ಪ್ರಗತಿಗಾಮಿಗಳು ಸರ್ಕಾರದ ಮೇಲೆ ಒತ್ತಡತಂದು ಮಹಿಳಾ ಪುರೋಹಿತರನ್ನು ನೇಮಿಸುವ ನಿಟ್ಟಿನಲ್ಲಿ ಮತ್ತು ಮಹಿಳೆಯರಿಗೂ ಪ್ರಸಾದವನ್ನು ತಯಾರಿಸುವ ಅನುಮತಿ ಕೊಡಿಸುವತ್ತ ಕ್ರಾಂತಿಕಾರಿ ಹೆಜ್ಜೆ ಹಾಕಲು ಇಂದಿನಿಂದಲೇ ಪ್ರಾರಂಭಿಸಬಹುದಲ್ಲವೇ? ಯಾವುದಾದರೊಂದು ಮೇಲ್ಜಾತಿ ಸರ್ಕಾರದ ಯಾವುದೇ ಧನ ಸಹಾಯವಿಲ್ಲದೆ ಕೇವಲ ತನ್ನವರಿಗೆಂದೇ ಒಂದು ದೇವಸ್ಥಾನವನ್ನು ಕಟ್ಟಿಕೊಂಡಿದ್ದರೆ ಅಲ್ಲಿ ಇತರೆ ಜಾತಿಯ ಗಂಡಸರಿಗೆ ಮತ್ತು ಹೆಂಗಸರಿಗೆ ಪ್ರವೇಶವಿಲ್ಲ ಎಂದಾದರೆ ಸಾಂವಿಧಾನಿಕ ನಿಯಮಗಳಿಂದ ನ್ಯಾಯಾಂಗ ವ್ಯವಸ್ಥೆಯಡಿಯಲ್ಲಿ ಅದನ್ನು ಪ್ರಶ್ನಿಸುವ ಎಲ್ಲಾ ಹಕ್ಕುಗಳು ಭಾರತೀಯರಿಗಿದೆ. ಈ ನೆಲದ ಕಾನೂನನ್ನು ಪಾಲಿಸಲೇ ಬೇಕಾಗಿರುವುದು ಅದರ ಪ್ರಜೆಗಳ ಕರ್ತವ್ಯ.

comments powered by Disqus
Top