ಜಾತಿ ಸಂವಾದ - ಅಭಿಪ್ರಾಯ 4

ಎರಡು ಅತಿಗಳ ನಡುವಣ ಸತ್ಯ
ಡಾ. ಪದ್ಮಪ್ರಸಾದ್ ತುಮಕೂರು

ಇದು ರೂಪಾ ಹಾಸನ ಇವರ ಲೇಖನಕ್ಕೆ ಪ್ರತಿಕ್ರಿಯೆ (13 ಮೇ 2013). ಇದು ಅವರಿಗಾಗಿರುವ ವೈಯಕ್ತಿಕ ತೇಜೋವಧೆಗೆ ಆಕ್ರೋಶವೂ ಹೌದು ಹಾಗೂ ಅದನ್ನೇ ಅವರು ಇಡೀ ಜೈನ ಸಮಾಜಕ್ಕೆ ಅನ್ವಯಿಸಿರುವುದರ ಬಗ್ಗೆ ಪ್ರತಿರೋಧವು ಹೌದು.

ರೂಪಾ ಅವರ ಪ್ರತಿಭೆ, ಸಾಮರ್ಥ್ಯ, ಗುಣಶೀಲಗಳನ್ನು ತಿಳಿದಿರುವಂತೆಯೇ ಕರ್ನಾಟಕ ಜೈನ ಸಮಾಜದಲ್ಲಿ ಅವರಿಗಿಂತ ಹೆಚ್ಚಾಗಿ ಓಡಾಡಿದವನಾಗಿ ಕರ್ನಾಟಕದ ಜೈನ ಸಮಾಜದಲ್ಲಿ ಮಹಿಳೆಯರ ಒಟ್ಟಾರೆ ಪರಿಸ್ಥಿತಿ ರೂಪಾ ಬರೆದಿರುವಂತೆ ಉಸಿರು ಕಟ್ಟಿಸುವಂತೇನೂ ಇಲ್ಲವೆಂದು ಧೈರ್ಯವಾಗಿ ಹೇಳಬಲ್ಲೆ. ವಾಸ್ತವವಾಗಿ, ಒಬ್ಬ ಸಾಮನ್ಯ ನಾಗರಿಕಳಾಗಿ ರೂಪಾ ನೀಡಿದ ಅಭಿಪ್ರಾಯವನ್ನು ಜೈನ ಸಮಾಜದ ಪ್ರತಿನಿಧಿ ನೀಡಿದ ಅಭಿಪ್ರಾಯ ಬರುವಂತೆ ಪ್ರಕಟಿಸಿದ್ದು ಅಲ್ಲಿನ ಸ್ಥಳೀಯ ಪತ್ರಿಕೆ. ಇದು ರೂಪಾ ಅವರಿಗೆ ಆ ಪತ್ರಿಕೆ ಮಾಡಿದ ಅನ್ಯಾಯ. ಆದರೆ ಅದನ್ನೇ ನಂಬಿಕೊಂಡು ರೂಪಾ ಬರೆದ ವಿವರಣೆಯನ್ನು ಗಮನಕ್ಕೆ ತೆಗೆದುಕೊಳ್ಳದೆ ತಮ್ಮ ಕೈಯಲ್ಲಿ ಭಾರೀ ಅಧಿಕಾರವಿದೆ ಎಂಬಂತೆ ನೋಟಿಸ್ ನೀಡಿ ಕ್ಷಮೆ ಕೇಳಬೇಕೆಂದು ದಬಾಯಿಸಿದ್ದು ಅಲ್ಲಿನ ಜೈನ ಸಂಘದವರು ಮಾಡಿದ ಮೂರ್ಖ ಕೆಲಸ.

ರೂಪಾ ಅವರೇನೂ ಅಪರಿಚಿತರಲ್ಲ. ಇಪ್ಪತ್ತೈದು ವರ್ಷಗಳಿಂದ ಹಾಸನದಲ್ಲೇ ಇರುವಾಕೆ. ಆಕೆ ಮತ್ತು ಆಕೆಯ ಕುಟುಂಬ ಜೈನತತ್ವಗಳನ್ನು ಚ್ಯುತಿಯಿಲ್ಲದಂತೆ ಪಾಲಿಸುತ್ತಿದ್ದುದನ್ನು ಅಲ್ಲಿನ ಎಲ್ಲರೂ ಬಲ್ಲವರೇ. ಅವರ ಮನೆಗೇ ಹೋಗಿ ಕೇಳುವಷ್ಟು ಪರಿಚಯ, ಸಾತ್ವಿಕ ಅಧಿಕಾರ, ವಯಸ್ಸಿನ ಹಿರಿತನ ಎಲ್ಲವೂ ಜೈನ ಸಂಘದ ಪದಾಧಿಕಾರಿಗಳಿಗಿತ್ತು. ಹಾಗೇ ಬಂದರೆ ಕೂರಿಸಿ ಗೌರವದಿಂದ ಮಾತನಾಡಿಸಿ ವಿವರಿಸುವ ಸೌಜನ್ಯ ರೂಪಾ ಅವರಿಗೂ ಇದೆ.

ಹೀಗಿದ್ದಾಗ ರೂಪಾ ತಾನಾಗಿಯೇ `ನನ್ನನ್ನು ಮೀಟಿಂಗ್‌ಗೆ ಕರೆಯಿರಿ, ನಾನು ಬಂದು ವಿವರಿಸುವೆ' ಎಂದರೂ ಕೇಳದೆ ದಿಡೀರನೆ ಪತ್ರಿಕೆಗಳಿಗೆ ಬರೆಯುವ ಅವಸರ ತೋರಿದ್ದು ಆ ಕಡೆಯಿಂದ ಆದ ಮೌಢ್ಯ. ಒಂದು ಸನ್ನಿವೇಶ ನಮಗೆ ವಿರುದ್ಧವೆಂದು ಅನ್ನಿಸಿದಾಗ ಇನ್ನೊಂದು ಪಕ್ಷದವರ ಅಭಿಪ್ರಾಯವನ್ನು ತಾಳ್ಮೆಯಿಂದ ಕೇಳಿ ನಿಷ್ಪಕ್ಷಪಾತವಾದ ತೀರ್ಮಾನ ತೆಗೆದು ಕೊಳ್ಳಬೇಕು. ಹಾಸನ ಜೈನ ಸಂಘದ ಈಗಿನ ಪದಾಧಿಕಾರಿಗಳು ಈ ಕೆಲಸ ಮಾಡಲಿಲ್ಲವೆಂದು ವಿಷಾದದಿಂದ ಹೇಳಬೇಕಾಗಿದೆ.

ಹೋಗಲಿ ರೂಪಾ ತನ್ನ ವಿವರಣೆಯನ್ನು ಪತ್ರಿಕೆಯಲ್ಲಿ ಎರಡು ತಿಂಗಳ ಹಿಂದೆಯೇ ನೀಡಿದರು. ಅದು ತುಂಬಾ ಸ್ಪಷ್ಟವಾಗಿತ್ತು. ಆಕೆ ಮಾಂಸಾಹಾರವನ್ನು ಸಮರ್ಥಿಸಿರಲಿಲ್ಲ. `ಆಹಾರ ಮೇಳ' ಒಂದರಲ್ಲಿ ಒಂದು ವಿಭಾಗದಲ್ಲಿ ಮಾಂಸಾಹಾರವನ್ನು ಮಾರಾಟಕ್ಕೆ ಇಟ್ಟಿದ್ದು ತಪ್ಪೇನೂ ಅಲ್ಲ ಎಂದಷ್ಟೇ ತನ್ನ ಅಭಿಪ್ರಾಯವಾಗಿತ್ತು ಎಂದಾಕೆ ವಿವರಿಸಿದರು. ಈ ವಿವರಣೆ ಪ್ರಕಟವಾದ ಮೇಲಾದರೂ ಜೈನಸಂಘದವರು `ನಮಗೆ ಸಮಾಧಾನವಾಗಿದೆ. ಒಬ್ಬ ಸಾರ್ವಜನಿಕ ವ್ಯಕ್ತಿಯಾಗಷ್ಟೇ ಆಕೆ ಅಭಿಪ್ರಾಯ ವ್ಯಕ್ತಪಡಿಸಿದ್ದು ಎಂಬುದು ಅರ್ಥವಾಗಿದೆ' - ಎಂದು ಒಂದು ಪತ್ರಿಕಾ ಹೇಳಿಕೆ ನೀಡಬೇಕಿತ್ತು ಹಾಗೂ ಜೈನಪತ್ರಿಕೆಗಳಿಗೆ ಹಿಂದೆ ನಾವು ಕಳಿಸಿದ್ದ ಈ ಸುದ್ದಿಯನ್ನು ಪ್ರಕಟಿಸಬೇಡಿ ವಿವಾದ ಬಗೆಹರಿದಿದೆ ಎಂದು ತಿಳಿಸಿ ಆ ಪ್ರಕಟಣೆಯನ್ನು ತಡೆಹಿಡಿಯಬಹುದಿತ್ತು. ಈ ವಿವೇಕವನ್ನು ಹಾಸನದ ಜೈನಸಂಘ ತೋರದೆ ಇರುವುದು ರೂಪಾ ಅವರನ್ನು ಸಹಜವಾಗಿಯೇ ಕ್ರೋಧಗೊಳ್ಳುವಂತೆ ಮಾಡಿದೆ.

ತಮಗಾದ ಈ ಅನುಭವದಿಂದ ರೂಪಾ ಅವರು `ಜೈನ ಸಮಾಜದಲ್ಲಿ ಮಹಿಳೆಗೆ ಉಸಿರುಕಟ್ಟುವಂಥ ವಾತಾವರಣವಿದೆ. ಆದ್ದರಿಂದಲೇ ಇಲ್ಲಿನ ಯುವತಿಯರು ಅಂತರ್ಜಾತೀಯ ವಿವಾಹವಾಗುತ್ತಿದ್ದಾರೆ. ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಅವರನ್ನು ಬಿಡುತ್ತಿಲ್ಲ' ಎಂಬಂತಹ ನಿರ್ಣಯಕ್ಕೆ ಬಂದಿರುವುದು ಸರಿ ಎನಿಸುವುದಿಲ್ಲ. ಕರ್ನಾಟಕದ ಅನೇಕ ಊರುಗಳಲ್ಲಿ ಜೈನ ಮಹಿಳೆಯರು ಮುಕ್ತವಾಗಿ ಸಾಮಾಜಿಕ ಕಾರ್ಯಗಳಲ್ಲಿ ಸಂತೋಷವಾಗಿ ತೊಡಗಿಕೊಂಡಿರುವುದನ್ನು ನಾನು ಕಂಡಿದ್ದೇನೆ. ತುಮಕೂರಿನಲ್ಲಿ ಪದ್ಮಾಂಬಾ ಜೈನ ಮಹಿಳಾ ಸಮಾಜ ನಲವತ್ತು ವರ್ಷಗಳಿಂದ ಸಕ್ರಿಯವಾಗಿದ್ದು ಈ ಮೊದಲು ಇದು ಅನೇಕ ಸಂಸಾರಗಳಿಗೆ ಗೃಹ ಉದ್ಯೋಗವನ್ನು ನೀಡಿತ್ತು. ಈಗ ಇದು ಅತ್ತಿಮಬ್ಬೆ ವಿದ್ಯಾಸಂಸ್ಥೆಯನ್ನು ನಡೆಸುತ್ತಿದೆ. ಹೊನ್ನಾವರ ಸಮೀಪದ ಹಳದೀಪುರದ ಗ್ರಾಮಪಂಚಾಯ್ತಿಯಲ್ಲಿ ನನ್ನ ಸೋದರ ಸೊಸೆ ಒಂದು ಅವಧಿಗೆ ಉಪಾಧ್ಯಾಕ್ಷಳಾಗಿದ್ದು, ಈಗ ಸದಸ್ಯಳಾಗಿ ಮುಂದುವರೆದಿದ್ದಾಳೆ.

ರೂಪಾ ಅವರು ಡಾ. ಬಾಳಾಸಾಹೇಬ ಲೋಕಾಪೂರ ಅವರ `ಜೈನಮಹಿಳೆ- ಸಮಾಜೋ ಧಾರ್ಮಿಕ ಅಧ್ಯಯನ' ಕೃತಿಯನ್ನು ಉಲ್ಲೇಖಿಸಿದ್ದಾರೆ. ಅದು ಕ್ರಮಬದ್ಧ ಅಧ್ಯಯನದಿಂದ ಮೂಡಿ ಬಂದಿಲ್ಲದ, ಅನೇಕ ತಪ್ಪುಗಳಿಂದ ಕೂಡಿರುವ, ಬೆಳಗಾಂ ಜಿಲ್ಲೆಯ ಒಂದು ಭಾಗದ ಮಾಹಿತಿಗಳನ್ನೇ ಮುಖ್ಯವಾಗಿ ಆಧರಿಸಿದ ಒಂದು ಕೃತಿ. ಆ ಶಿಸ್ತು ಬದ್ಧವಲ್ಲದ ಕೃತಿಯನ್ನು ಆಧರಿಸಿ ನಾವು ತೀರ್ಮಾನಕ್ಕೆ ಬರಲಾಗದು.

comments powered by Disqus
Top