ಜಾತಿ ಸಂವಾದ - ಅಭಿಪ್ರಾಯ 1

ಆಳುವ ಅಧಿಕಾರದ ಸಮಾನ ಹಂಚಿಕೆ
ಗೋಪಾಲ್ ಗುರು ಸುಂದರ್ ಸರುಕ್ಕೈ .

ಮೀಸಲು ಕ್ಷೇತ್ರದಿಂದ ಸ್ಪರ್ಧೆಗೆ ಇಳಿಯುವ ದಲಿತ ಅಭ್ಯರ್ಥಿ ವಾಸ್ತವದಲ್ಲಿ ಒಂದು ಅಸಮಾನ ಕಣದಲ್ಲಿರುತ್ತಾನೆ. ಏಕೆಂದರೆ ಸರ್ಕಾರಿ ಉದ್ಯೋಗ ಅಥವಾ ಶೈಕ್ಷಣಿಕ ಸಂಸ್ಥೆಯೊಂದರಲ್ಲಿ ಸೀಟು ಪಡೆಯಲು ಇರುವ ಮೀಸಲಾತಿಗೂ ರಾಜಕೀಯ ಮೀಸಲಾತಿಗೂ ನಡುವೆ ರಾಚನಿಕ ವ್ಯತ್ಯಾಸಗಳಿವೆ. ಉದ್ಯೋಗ ಮತ್ತು ಶೈಕ್ಷಣಿಕ ಮೀಸಲಾತಿಯಲ್ಲಿ ಸ್ಪರ್ಧಿಸುವವನ ಬಲಕ್ಕೆ ಅನುಗುಣವಾಗಿ ಫಲ ದೊರೆಯುತ್ತದೆ.

ಆದರೆ ರಾಜಕೀಯ ಮೀಸಲಾತಿಯಲ್ಲಿ ದಲಿತ ಅಭ್ಯರ್ಥಿ ದಲಿತೇತರರ ಮತಗಳನ್ನು ಅವಲಂಬಿಸಿ ತನ್ನ ಗೆಲುವನ್ನು ಖಾತರಿ ಪಡಿಸಿಕೊಳ್ಳಬೇಕಾಗುತ್ತದೆ. ಈ ದೃಷ್ಟಿಯಲ್ಲಿ ನೋಡಿದರೆ ಅಸಮಾನ ಕಣವೊಂದರಲ್ಲಿ ನಡೆಯುವ ಸ್ಪರ್ಧೆಯನ್ನು ಎದುರಿಸಿ ದಲಿತರು ತಮ್ಮ ಶಾಸನ ಸಭೆಗಳಲ್ಲಿ ತಮ್ಮ ಪ್ರಾತಿನಿಧ್ಯವನ್ನು ಪಡೆಯಬೇಕಾಗುತ್ತದೆ. ಕಳೆದ ಅರವತ್ತು ವರ್ಷಗಳಲ್ಲಿ ರಾಜಕೀಯ ಪಕ್ಷಗಳು ದಲಿತರ ಸ್ಥಿತಿಯನ್ನು ಸಾಕಷ್ಟು ದುರ್ಬಳಕೆ ಮಾಡಿಕೊಂಡಿವೆ.

ಜಾತಿ ಪರಿಕಲ್ಪನೆಯಲ್ಲಿ ಅತಿ ಮುಖ್ಯವಾದ ಪ್ರಭಾವವಿರುವುದು ರಾಜಕಾರಣದ ಮೇಲೆ. ರಾಜಕಾರಣವೆಂಬುದು ಮೂಲತಃ ಸಾಮಾಜಿಕ ಅಧಿಕಾರಕ್ಕೆ ಸಂಬಂಧಿಸಿದ್ದಾಗಿರುವುದರಿಂದ ಜಾತಿ ಪರಿಕಲ್ಪನೆಯ ಪ್ರಭಾವ ಅದರ ಮೇಲಿರುವುದು ನಿರೀಕ್ಷಿತ ವಿದ್ಯಮಾನ. ಸ್ವಾತಂತ್ರ್ಯಾ ನಂತರ ಭಾರತ ಒಂದು ಪ್ರಜಾಪ್ರಭುತ್ವ ರಾಷ್ಟ್ರವಾಗಬೇಕೆಂದು ತೀರ್ಮಾನಿಸಿದ್ದೂ ಕೂಡ ಜಾತಿ ಪ್ರಶ್ನೆಯನ್ನು ಮುಖ್ಯವಾಗಿಸಿತು. ಆಧುನಿಕ ಭಾರತದ ನೆಲೆಗಟ್ಟಾಗಿದ್ದ ಎಲ್ಲಾ ಆದರ್ಶಗಳೂ ಕ್ರಾಂತಿಕಾರಿಯಾಗಿದ್ದವು.

ಹಲವರ ವಿರೋಧದ ನಡುವೆಯೇ ನಮ್ಮ ಸಂವಿಧಾನ ಎಲ್ಲರಿಗೂ ಮತದಾನದ ಹಕ್ಕನ್ನು ನೀಡಿತು. ಹಲವರು, ಕೇವಲ ಶಿಕ್ಷಿತರು (ಉದಾಹರಣೆಗೆ ಕೇವಲ ಪದವೀಧರರು ಮಾತ್ರ) ಅಥವಾ ಮೇಲ್ವರ್ಗದ, ಮೇಲ್ಜಾತಿಯ ಜನರಿಗಷ್ಟೇ ಮತದಾನದ ಹಕ್ಕಿರಬೇಕೆಂದು ವಾದಿಸಿದ್ದರು. ಅದೃಷ್ಟವಶಾತ್ ಈ ವಾದಗಳಿಗೆ ಮನ್ನಣೆ ದೊರೆಯದೇ ಹೋಯಿತು. ಪರಿಣಾಮವಾಗಿ ಸ್ವತಂತ್ರ ಭಾರತದ ಹುಟ್ಟಿನ ಕ್ಷಣದಿಂದಲೇ ರಾಜಕೀಯವೆಂಬುದು ಎಲ್ಲಾ ಪ್ರಜೆಗಳಿಗೂ ಸಮಾನ ಹಕ್ಕುಗಳನ್ನು ನೀಡುವ ಮಾರ್ಗವಾಯಿತು.

ರಾಜಕೀಯ ಎಂಬುದು ಪೌರನೊಬ್ಬ ಮತ ಚಲಾಯಿಸುವುದಕ್ಕೆ ಮಾತ್ರ ಸೀಮಿತವಲ್ಲ. ಇದರಲ್ಲಿ ಆಳ್ವಿಕೆ ನಡೆಸುವ ಅಧಿಕಾರದ ಪಡೆಯುವಿಕೆಯೂ ಸೇರಿದೆ. ಒಬ್ಬ ಪೌರನಿಗಿರುವ ಒಂದು ಮತ ಹೇಗೆ ಆಳ್ವಿಕೆಯ ಅಧಿಕಾರವನ್ನು ಗಳಿಸಿಕೊಡುತ್ತದೆ? ಚುನಾವಣೆ ಮೂಲಭೂತವಾಗಿ ಸಂಖ್ಯೆಗೆ ಸಂಬಂಧಿಸಿದ್ದು. ಒಂದು ಮತ ಏನನ್ನೂ ಮಾಡಲಾರದು. ಆದರೆ ಇದರ ಜೊತೆಗೆ ಇತರರ ಮತಗಳೂ ಸೇರಿಕೊಂಡರೆ ಅದು ಬಹುದೊಡ್ಡ ಬದಲಾವಣೆಯನ್ನು ಸಾಧಿಸಬಲ್ಲದು.

ಹಾಗಾಗಿ ಪ್ರಜಾಪ್ರಭುತ್ವ ಎಂಬ ಪರಿಕಲ್ಪನೆಯೇ ಒಂದು ಬಗೆಯಲ್ಲಿ ಮತ ಬ್ಯಾಂಕುಗಳನ್ನು ನಿರಂತರವಾಗಿ ಸೃಷ್ಟಿಸುವ ಕ್ರಿಯೆ. ಜಾತಿ ಕೂಡಾ ಈ ಬಗೆಯ ಮತ ಬ್ಯಾಂಕ್. ಇತ್ತೀಚಿನ ವರ್ಷಗಳಲ್ಲಿ ವಿಷಯಾಧಾರಿತವಾಗಿ ಚುನಾವಣೆಗಳಲ್ಲಿ ಸ್ಪರ್ಧೆ ನಡೆಯದೇ ಇರುವುದರಿಂದ ಜಾತಿ ಒಂದು ಬಹುಮುಖ್ಯ ಮತ ಬ್ಯಾಂಕ್ ಆಗಿದೆ.

ಹಲವರು ನಮ್ಮ ಚುನಾವಣೆಗಳೆಂದರೆ ಜಾತಿಗಳ ನಡುವಣ ಸ್ಪರ್ಧೆ ಎನ್ನುತ್ತಾರೆ. ಮುಖ್ಯಮಂತ್ರಿಗಳ ಆಯ್ಕೆಯೂ ಅವರು ಯಾವ ಜಾತಿಯನ್ನು ಪ್ರತಿನಿಧಿಸುತ್ತಿದ್ದಾರೆ ಎಂಬುದರ ಮೇಲೆ ನಡೆಯುತ್ತದೆ. ಪೌರರಾದ ನಾವು ಈ ಸ್ಪರ್ಧೆಯ ವೀಕ್ಷಕರು. ಕೆಲವರು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವಾಗ ಇನ್ನು ಕೆಲವರು ಇಡೀ ಪ್ರಕ್ರಿಯೆಯನ್ನು ಸಿನಿಕರಾಗಿ ವೀಕ್ಷಿಸುತ್ತಾರೆ.

ಈ ಜಾತಿ ರಾಜಕಾರಣದ ಮುಖ್ಯ ನೆಲೆ ಇರುವುದು ಮತದಾರರು ತಮ್ಮ ಜಾತಿಯವರಿಗೆ ಮತ ಚಲಾಯಿಸುತ್ತಾರೆ ಎಂಬ ರಾಜಕಾರಣಿಗಳ ನಂಬಿಕೆಯಲ್ಲಿ. ಇವರು ಒಕ್ಕಲಿಗ ಮತದಾರರು ಒಕ್ಕಲಿಗ ಅಭ್ಯರ್ಥಿಗೇ ಮತ ಚಲಾಯಿಸುತ್ತಾರೆ ಅಥವಾ ಲಿಂಗಾಯತರು ತಮ್ಮ ಜಾತಿಯವರಿಗೇ ಮತ ನೀಡುತ್ತಾರೆ ಎಂದು ನಂಬುತ್ತಾರೆ. ಇದೆಷ್ಟು ನಿಜ? ಈ ನಂಬಿಕೆಗೆ ಕಾರಣವೇನು? ಇದನ್ನು ಓದುತ್ತಿರುವ ನೀವೆಲ್ಲರೂ ಅಭ್ಯರ್ಥಿಯ ಜಾತಿ ನೋಡಿ ಮತ ಚಲಾಯಿಸುತ್ತೀರಾ? ಅಥವಾ ರಾಜಕಾರಣಿಗಳ ಈ ನಂಬಿಕೆಯೇ ತಪ್ಪೇ? ಅವರ ಆಲೋಚನೆ ಸುಳ್ಳು ಎಂಬುದನ್ನು ಈಗ ನಡೆಯಲಿರುವ ಚುನಾವಣೆಯಲ್ಲಿ ಸಾಬೀತು ಮಾಡುತ್ತೀರಾ?

***

ಈ ಹಿಂದೆ ನಾವು ಶಿಕ್ಷಣದಲ್ಲಿರುವ ಮೀಸಲಾತಿಯ ಕುರಿತು ಚರ್ಚಿಸಿದ್ದೆವು. ಮೀಸಲಾತಿಯ ಬಹುಮುಖ್ಯ ಮಾದರಿಗಳಿರುವುದೇ ಶಿಕ್ಷಣ ಮತ್ತು ರಾಜಕೀಯದಲ್ಲಿ. ರಾಜಕೀಯ ಮೀಸಲಾತಿಯನ್ನು ನಿರ್ದಿಷ್ಟ ಅವಧಿಗಷ್ಟೇ ಸೀಮಿತಗೊಳಿಸಬೇಕೆಂದು ಅಂಬೇಡ್ಕರ್ ಕೂಡ ಹೇಳಿದ್ದರು. ಮೀಸಲಾತಿಯ ಅವಧಿಗೆ ಸಂಬಂಧಿಸಿದಂತೆ ಅವರ ಅಭಿಪ್ರಾಯ ಇದೊಂದು ಕ್ಷೇತ್ರಕ್ಕಷ್ಟೇ ಸೀಮಿತವಾಗಿತ್ತು.
ಸ್ವತಂತ್ರ ಭಾರತ ಯಾಕೆ ರಾಜಕೀಯ ಮೀಸಲಾತಿಯನ್ನು ಅಳವಡಿಸಿಕೊಳ್ಳಲು ತೀರ್ಮಾನಿಸಿತು?

ಸಂವಿಧಾನದ 330 ಮತ್ತು 332ನೇ ವಿಧಿಗಳು ದಲಿತರಿಗೆ ರಾಜಕೀಯ ಮೀಸಲಾತಿಯನ್ನು ಒದಗಿಸುತ್ತಿದೆ. ಈ ಮೀಸಲಾತಿ ವಿಧಾನ ಮಂಡಲ ಮತ್ತು ಸಂಸತ್ತಿನ ಎರಡೂ ಮನೆಗಳಲ್ಲಿ ದಲಿತರ ಪ್ರಾತಿನಿಧ್ಯವನ್ನು ಖಾತರಿ ಪಡಿಸುತ್ತದೆ. ಜಾತಿ ಆಧಾರಿತ ಸಮಾಜದಲ್ಲಿ ದಲಿತ ಅಭ್ಯರ್ಥಿಗಳು ಸಾಮಾನ್ಯ ಕ್ಷೇತ್ರಗಳಿಂದ ಆಯ್ಕೆಯಾಗುವ ಸಾಧ್ಯತೆ ಕಡಿಮೆ ಎಂಬ ಕಾರಣಕ್ಕಾಗಿ ಈ ಮೀಸಲಾತಿಯನ್ನು ಕಾರ್ಯರೂಪಕ್ಕೆ ತರಲಾಯಿತು. ಸಾಮಾನ್ಯ ಕ್ಷೇತ್ರಗಳಿಂದ ದಲಿತರು ಆಯ್ಕೆಯಾಗುವುದರ ಕುರಿತಂತೆ ಸಂವಿಧಾನ ರಚನಾ ಸಭೆಗಿದ್ದ ಅನುಮಾನ ವರ್ತಮಾನದಲ್ಲಿ ಸಾಬೀತಾಗಿದೆ.

ಈ ದುರದೃಷ್ಟಕರ ಸನ್ನಿವೇಶದಲ್ಲಿಯೂ ಮಹಾರಾಷ್ಟ್ರದ ಒಂದೆರಡು ಸಾಮಾನ್ಯ ಕ್ಷೇತ್ರಗಳಿಂದ ದಲಿತರು ಸಂಸತ್ತಿಗೆ ಆಯ್ಕೆಯಾಗಿರುವ ಅಪವಾದಗಳಿವೆ. ಆದರೆ ಹೆಚ್ಚಿನ ಸಂಸತ್ತು ಹಾಗೂ ಶಾಸನಸಭೆಗಳಲ್ಲಿರುವ ಬಹುತೇಕ ದಲಿತರು ಮೀಸಲು ಕ್ಷೇತ್ರಗಳ ಸವಲತ್ತನ್ನು ಬಳಸಿಕೊಂಡು ವಿವಿಧ ಪಕ್ಷಗಳನ್ನು ಪ್ರತಿನಿಧಿಸಿ ಆಯ್ಕೆಯಾಗಿದ್ದಾರೆ. ದಲಿತರು ಸಾಮಾನ್ಯ ಕ್ಷೇತ್ರಗಳಿಂದ ಆಯ್ಕೆಯಾಗುವಂತೆ ನೋಡಿಕೊಳ್ಳುವ ವಿಷಯದಲ್ಲಿ ಎಡಪಕ್ಷಗಳ ಸಾಧನೆಯೂ ಬಹುತೇಕ ಶೂನ್ಯವೇ.

ಕರ್ನಾಟಕದಲ್ಲಿ ಈಗ ಸೃಷ್ಟಿಯಾಗಿರುವ ಹೊಸ ರಾಜಕೀಯ ಪಕ್ಷಗಳೂ ದಲಿತರನ್ನು ಸ್ವೀಕರಿಸುವ ವಿಷಯದಲ್ಲಿ ಬಹಳ ಧನಾತ್ಮಕವಾಗಿಯೇನೂ ಇಲ್ಲ. ಈ ಬಗೆಯ ಕೆಲವು ಹೊಸ ರಾಜಕೀಯ ಪಕ್ಷಗಳಂತೂ ದಲಿತರಿಗೆ ನೀಡುವ ರಾಜಕೀಯ ಮೀಸಲಾತಿಯೂ ಸೇರಿದಂತೆ ಎಲ್ಲ ಮೀಸಲಾತಿಗಳನ್ನೂ ವಿರೋಧಿಸುತ್ತಿವೆ.

ರಾಜಕೀಯ ಮೀಸಲಾತಿಯ ಪರಿಕಲ್ಪನೆ ದಲಿತೇತರ ಜಾತಿಗಳಿಗೆ ಬಹುದೊಡ್ಡ ನೈತಿಕ ಜವಾಬ್ದಾರಿಯೊಂದನ್ನು ಹೊರಿಸುತ್ತಿದೆ. ಮೀಸಲು ಕ್ಷೇತ್ರಗಳಿಂದ ಆಯ್ಕೆಯಾಗುವ ದಲಿತ ಅಭ್ಯರ್ಥಿ ಮೊದಲಿಗೆ ಅಸ್ಪೃಶ್ಯರ ಪರವಾಗಿ ಮತ್ತೆ ಕ್ಷೇತ್ರದ ಅಭಿವೃದ್ಧಿಗೆ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಕೆಲಸ ಮಾಡಬೇಕೆಂಬ ನೈತಿಕ ಒತ್ತಡವನ್ನು ಹೇರುವ ಕೆಲಸ ದಲಿತೇತರರಾಗಿರುತ್ತದೆ. ದಲಿತರಿಗೆ ನೀಡುವ ರಾಜಕೀಯ ಮೀಸಲಾತಿ ಸಾರ್ವಜನಿಕ ಸೇವೆಗಳಲ್ಲಿ ನೀಡುವ ಮೀಸಲಾತಿಗಿಂತ ಭಿನ್ನ. ಇದರ ಸಾರ್ಥಕತೆ ಮತ್ತು ಪರಿಣಾಮಗಳೆರಡೂ ದಲಿತೇತರ ಬಹುಸಂಖ್ಯಾತರ ಮತಗಳನ್ನು ಅವಲಂಬಿಸಿದೆ.

ಸರ್ಕಾರಿ ಕ್ಷೇತ್ರದ ಮೀಸಲಾತಿಯನ್ನು ಹೇಗೆ ಬಳಸಿಕೊಳ್ಳಬೇಕೆಂಬುದನ್ನು ಸವಲತ್ತನ್ನು ಪಡೆಯುವ ವ್ಯಕ್ತಿ ನಿರ್ಧರಿಸಲು ಸಾಧ್ಯವಿದೆ. ಹಾಗೆಯೇ ಸರ್ಕಾರಿ ಉದ್ಯೋಗವೊಂದಕ್ಕೆ ಮೀಸಲಾತಿಗೆ ಅರ್ಹರಾಗಿರುವವರ ಮಧ್ಯೆಯೇ ಸ್ಪರ್ಧೆ ಏರ್ಪಟ್ಟಿದೆ ಎಂದುಕೊಳ್ಳೋಣ. ಇಲ್ಲಿ ದಲಿತರೇ ಸ್ಪರ್ಧಿಸಿ ಅಂಕಗಳನ್ನುಗಳಿಸಿ ತಮ್ಮ ಅರ್ಹತೆಯನ್ನು ಸಾಬೀತು ಪಡಿಸಲು ಪ್ರಯತ್ನಿಸುತ್ತಾರೆ.

ಆದರೆ ಈ ಅಂಕಗಳನ್ನು ಪಡೆಯುವುದು ಮತಗಳನ್ನು ಗಳಿಸುವಷ್ಟು ಕಷ್ಟವಲ್ಲ. ರಾಜಕೀಯ ಮೀಸಲಾತಿಯನ್ನು ತಮ್ಮದಾಗಿಸಿಕೊಳ್ಳಲು ದಲಿತ ಅಭ್ಯರ್ಥಿಗೆ ಕೇವಲ ಪ್ರಮಾಣಾತ್ಮಕ ಅನುಕೂಲ ದೊರೆತರಷ್ಟೇ ಸಾಕಾಗುವುದಿಲ್ಲ. ಇದರ ಜೊತೆಗೆ ದಲಿತೇತರ ಮತದಾರರಿಂದ ಗುಣಾತ್ಮಕ ಅನುಕೂಲಗಳನ್ನು ಪಡೆಯಲು ಹೋರಾಟ ನಡೆಸಬೇಕಾಗುತ್ತದೆ.

ರಾಜಕೀಯ ಮೀಸಲಾತಿ ಎಂಬ ಸವಲತ್ತಿನ ಮೂಲಕ ಪ್ರಮಾಣಾತ್ಮಕ ಅನುಕೂಲ ದೊರೆತು ಬಿಟ್ಟಿರುತ್ತದೆ. ಆದರೆ ದಲಿತೇತರ ಮತದಾರರನ್ನು ಒಲಿಸಿಕೊಳ್ಳುವ ಕೆಲಸ ಅಷ್ಟು ಸುಲಭದ್ದಲ್ಲ. ಮೆಡಿಕಲ್ ಸೀಟೊಂದನ್ನು ಪಡೆಯಲು ಸ್ಪರ್ಧಿಸಿರುವ ಅಭ್ಯರ್ಥಿ ಪರೀಕ್ಷೆಯಲ್ಲಿ ಶೇಕಡಾ 90ರಷ್ಟು ಅಂಕಗಳನ್ನು ಪಡೆಯಬಹುದು. ಈ ಸ್ಪರ್ಧೆಯ ಕಣ ಸಮಾನವಾದದ್ದು.

ಆದರೆ ಮೀಸಲು ಕ್ಷೇತ್ರದಿಂದ ಸ್ಪರ್ಧಿಸುವಾತನ ಸ್ಥಿತಿ ಭಿನ್ನ. ಈತ ಸಮಾನವಲ್ಲದ ಒಂದು ಕಣದಲ್ಲಿರುತ್ತಾನೆ ಎಂಬುದಷ್ಟೇ ಅಲ್ಲದೆ ಒಂದು ಅಸಮಾನ ಸ್ಥಿತಿಯೊಳಗೆ ಆತ ತನ್ನ ಹೋರಾಟವನ್ನು ನಡೆಸಬೇಕಾಗುತ್ತದೆ. ಈ ದೃಷ್ಟಿಯಲ್ಲಿ ನೋಡಿದರೆ ಕ್ಷೇತ್ರದ ದಲಿತೇತರ ಮತದಾರರ ಮೇಲೆ ಎರಡು ಜವಾಬ್ದಾರಿಯಿರುತ್ತದೆ. ಮೊದಲನೆಯಾದಾಗಿ ದಲಿತ ಅಭ್ಯರ್ಥಿಗಳೊಳಗಿಂದ ಅವರು ಆರಿಸುವಾತ ದಲಿತರ ಹಿತವನ್ನು ಕಾಪಾಡುವವನೂ ಅದರ ಜೊತೆಗೆ ಕ್ಷೇತ್ರದ ಸಾಮಾನ್ಯ ಹಿತವನ್ನು ಕಾಪಾಡುವವನೂ ಆಗಿರಬೇಕಾಗುತ್ತದೆ.

ಹಾಗಾಗಿ ಅವರು ಪಕ್ಷ ರಾಜಕಾರಣವನ್ನು ಬದಿಗಿಟ್ಟು ದಲಿತರ ಹಿತ ಮತ್ತು ಕ್ಷೇತ್ರದ ಹಿತವನ್ನು ಒಟ್ಟಾಗಿ ಪರಿಗಣಿಸಿ ತಮ್ಮ ಆಯ್ಕೆಯನ್ನು ನಡೆಸಬೇಕು. ಹಾಗೆಯೇ ರಾಜಕೀಯ ಪಕ್ಷಗಳು ಈ ಮೀಸಲು ಕ್ಷೇತ್ರಗಳನ್ನು ತಮ್ಮ ಉದ್ದೇಶಗಳಿಗೆ ಬಳಸದಂತೆ ನೋಡಿಕೊಳ್ಳಬೇಕು. ಕಳೆದ ಆರು ದಶಕಗಳ ಅನುಭವವನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ ಮೊದಲನೆಯದಾಗಿ ರಾಜಕೀಯ ಪಕ್ಷಗಳು ಮೀಸಲು ಕ್ಷೇತ್ರಗಳಲ್ಲಿ ನೈತಿಕವಾಗಿ ಅಷ್ಟೇನೂ ಅರ್ಹರಲ್ಲದ ಮತ್ತು ಕ್ಷೇತ್ರದ ಹೊರಗಿನವರನ್ನು ಕಣಕ್ಕಿಳಿಸಿದ್ದೇ ಹೆಚ್ಚು.

ಎರಡನೆಯದಾಗಿ ಕ್ಷೇತ್ರ ಪುನರ್‌ವಿಂಗಡಣಾ ಆಯೋಗಗಳು ಮೀಸಲ ಕ್ಷೇತ್ರಗಳ ಗಡಿಗಳನ್ನು ಪುನಾರಚಿಸುವ ಪ್ರಲೋಭನೆಯನ್ನು ಮೀರಬೇಕು. ಇದರಿಂದಾಗಿ ಕ್ಷೇತ್ರದ ಆಡಳಿತಾತ್ಮಕ ಏಕತೆ ಇಲ್ಲವಾಗುತ್ತದೆಯಷ್ಟೇ ಅಲ್ಲದೆ ಶೇಕಡಾ 20ರಿಂದ 25ರ ನಡುವೆ ಇರುವ ದಲಿತ ಮತದಾರರ ಸಂಖ್ಯೆಯಲ್ಲಿ ವ್ಯತ್ಯಯ ಸಂಭವಿಸುತ್ತದೆ.

ಮೀಸಲು ಕ್ಷೇತ್ರಗಳಲ್ಲಿರುವ ದಲಿತೇತರ ಮತದಾರರಿಗೆ ದಲಿತರ ರಾಜಕೀಯ ಶಾಸನಾತ್ಮಕ ಕ್ರಿಯಾಶೀಲತೆಯನ್ನು ನಿಯಂತ್ರಿಸುವ ಅಧಿಕಾರವಿದೆ. ಮತದಾರರೂ ಕೂಡಾ ತಮ್ಮ ತಮ್ಮ ಜಾತಿಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡೇ ಮತ ಚಲಾಯಿಸುವುದರಿಂದ ಅವರು ತಟಸ್ಥರಾಗಿರಬಹುದು ಅಥವಾ ಪಕ್ಷದ ಹಿತಗಳನ್ನು ಗಮನದಲ್ಲಿಟ್ಟುಕೊಂಡು ಸ್ವಲ್ಪಮಟ್ಟಿಗೆ ಕ್ರಿಯಾಶೀಲರಾಗಿರಬಹುದು.

ಉತ್ತರ ಪ್ರದೇಶವನ್ನು ಹೊರತು ಪಡಿಸಿದರೆ ಬೇರೆ ಯಾವ ರಾಜ್ಯದಲ್ಲಿಯೂ ಮೀಸಲು ಕ್ಷೇತ್ರದಲ್ಲಿ `ದಲಿತ ಪಕ್ಷ'ವೊಂದರ ಅಭ್ಯರ್ಥಿ ಆಯ್ಕೆಯಾದ ಉದಾಹರಣೆಯಿಲ್ಲ. ಇದಕ್ಕೆ ಮುಖ್ಯ ಕಾರಣ ಇಲ್ಲಿ ದಲಿತ ಅಭ್ಯರ್ಥಿಗಳ ಗೆಲುವನ್ನು ನಿರ್ಧರಿಸುವುದು ದಲಿತ ಮತದಾರರಲ್ಲ. ಬದಲಿಗೆ ಲೋಕಸಭೆ ಮತ್ತು ವಿಧಾನ ಸಭೆಗಳ ಮೀಸಲು ಕ್ಷೇತ್ರಗಳಲ್ಲಿರುವ ಸರಿ ಸುಮಾರು ಶೇಕಡಾ 80ರಷ್ಟು ದಲಿತೇತರರು ಗೆಲುವನ್ನು ನಿರ್ಧರಿಸುತ್ತಾರೆ.

comments powered by Disqus
Top