ಜಾತಿ ಸಂವಾದ - ಅಭಿಪ್ರಾಯ 2

ಮೀಸಲಾತಿ ಬೇಡ, ಆದರೆ...
ರಘೋತ್ತಮ ಹೊ.ಬ. ಚಾಮರಾಜನಗರ .

ನಾನೊಬ್ಬ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿ. ಎಲ್ಲರಿಗೂ ತಿಳಿದ ಹಾಗೆ ನಮ್ಮ ಸಮುದಾಯಕ್ಕೆ ಮೀಸಲಾತಿ ನೀಡಲಾಗಿದೆ. ಇದರ ವಿರುದ್ಧ ಕೇಳಿಬರುತ್ತಿರುವ ಟೀಕೆ, ಕುಹಕ ಇತ್ಯಾದಿಗಳ ಕಾರಣಕ್ಕೆ ಅದು ಬೇಡವೇ ಬೇಡ ಅನ್ನಿಸುತ್ತಿದೆ.

ಮೀಸಲಾತಿಯ ಹಂಗು ತೊರೆದು ಸ್ವಾಭಿಮಾನಿಯಾಗಿ ಬೇರೆ ಸಮುದಾಯಗಳ ಹಾಗೆ ಏನಾದರೂ ಮಾಡೋಣ ಎಂದು ಪೇಟೆ ಬೀದಿಯ ಕಡೆಗೆ ನಡೆದೆ. ಅಲ್ಲಿ ಚಿನ್ನದ ಅಂಗಡಿ, ಕಬ್ಬಿಣದ ಅಂಗಡಿ, ಪಾತ್ರೆ ಪಗಡೆ ಅಂಗಡಿ, ಬಟ್ಟೆ ಅಂಗಡಿ, ಹೋಟೆಲ್ ಗಳು (ಸಸ್ಯಾಹಾರಿ ಮತ್ತು ಮಾಂಸಾಹಾರಿ), ರೆಸ್ಟೋರೆಂಟ್‌ಗಳು ಹೀಗೆ ನಾನಾ ತರಹದ ವ್ಯಾಪಾರ ವ್ಯವಹಾರ ನಡೆಯುತ್ತಿತ್ತು. ಇದನ್ನೆಲ್ಲಾ ಕಂಡು ಖುಷಿಯಾಯಿತು.

ಎಷ್ಟೊಂದು ಅವಕಾಶಗಳಿವೆ. ನಾವ್ಯಾಕೆ ಆ ದರಿದ್ರ ಮೀಸಲಾತಿಗೆ ಜೋತು ಬೀಳಬೇಕು ಎಂದುಕೊಳ್ಳುತ್ತಾ ಚಿನ್ನದ ಅಂಗಡಿ, ಕಬ್ಬಿಣದ ಅಂಗಡಿ, ಪಾತ್ರೆ ಪಗಡೆಗಳ ಅಂಗಡಿಗಳನ್ನು ವಿಚಾರಿಸಿದೆ. ಅವರೆಲ್ಲ ಬಹುತೇಕ ಶೇಟುಗಳೆ ಆಗಿದ್ದರು! ಹಾಗೆಯೇ ಹೋಟೆಲ್‌ಗಳತ್ತ ಮುಖ ಮಾಡುತ್ತಲೇ ಬೋರ್ಡುಗಳೇ ಹೇಳುತ್ತಿದ್ದವು ಅವು ಯಾವ ಜಾತಿಯವು ಎಂಬುದನ್ನು. ಮಾಂಸಾಹಾರಿ ಹೋಟೆಲ್ ಆರಂಭಿಸೋಣ ಹೋಟೆಲ್ ಏನಾದರೂ ಪ್ರಾರಂಭಿಸೋಣ ಎಂದು ತಿರುಗಿದರೆ ಹಿಂದೂ ಧರ್ಮದ ನಾನ್ ವೆಜ್ ಮೇಲ್ಜಾತಿಗಳು ಅದಾಗಲೇ ಆ ಹೋಟೆಲ್‌ಗಳ ಮಾಲೀಕರಾಗಿದ್ದರು! ಒಟ್ಟಾರೆ ಅಲ್ಲೆಲ್ಲ ನಮ್ಮವರ (ಪರಿಶಿಷ್ಟರ) ಸುಳಿವೇ ಇಲ್ಲ.

ಹಾಗೇ ಮುಂದುವರಿದು ಫುಟ್‌ಪಾತ್‌ನತ್ತ ಬಂದೆ. ಅಲ್ಲಲ್ಲಿ ಬಾಳೆ ಹಣ್ಣುಮಾರುವವರು, ಸೊಪ್ಪು-ಸೆದೆ ಮಾರುವವರು, ಹೂ ಮಾರುವವರು, ಮಾಂಸ ಮಾರಾಟ ಮಾಡುವವರು ಇತ್ಯಾದಿ ಸಣ್ಣ ಸಣ್ಣ ವ್ಯಾಪಾರಗಾರರಿದ್ದರು. ಸೊಪ್ಪು, ಬಾಳೆಹಣ್ಣು, ಹೂ ಮಾರಾಟ ಇತ್ಯಾದಿ ವ್ಯಾಪಾರಗಳನ್ನು ನಾಯಕ, ಉಪ್ಪಾರ, ಕುರುಬ ಇತ್ಯಾದಿ ಹಿಂದೂ ಧರ್ಮದ ಹಿಂದುಳಿದ ಜಾತಿಗಳು ಮಾಡಿದರೆ ಮಾಂಸ ಮಾರಾಟಗಾರರು ಬಹುತೇಕ ಮುಸ್ಲಿಮರೇ ಆಗಿದ್ದರು!

ಒಟ್ಟಾರೆ ಇಡೀ ಪೇಟೆಯನ್ನು ಬಗಬಗನೇ ಸುತ್ತಿದರೂ ನಮ್ಮವರ ಮಾಲೀಕತ್ವದ ಒಂದು ಸಣ್ಣ ಗೂಡಂಗಡಿಯೂ ಸಿಗಲಿಲ್ಲ! ಕಡೆಗೆ ಸುಸ್ತಾಗಿ ಒಂದು ಕಲ್ಲು ಬೆಂಚಿನ ಮೇಲೆ ಕುಳಿತುಕೊಂಡೆ. ಅಲ್ಲಿ ವಯಸ್ಕನೊಬ್ಬ ಮರದ ಪೆಟ್ಟಿಗೆ ಅಂಗಡಿಯೊಳಗೆ ಕುಳಿತು ಚಪ್ಪಲಿ ಹೊಲೆಯುವ ಕೆಲಸ ಮಾಡುತ್ತಿದ್ದ. ಅವನ ಅಂಗಡಿಗೆ ತಗಲುಹಾಕಿದ್ದ ಅಂಬೇಡ್ಕರ್ ಫೋಟೋನೇ ಹೇಳುತ್ತಿತ್ತು ಅವನು ಯಾವ ಜಾತಿಯವನು ಎಂದು. ಮೀಸಲಾತಿ ಬೇಡ ಎಂದರೆ ನನಗೆ ಉಳಿಯುವುದು ಚಪ್ಪಲಿ ಹೊಲಿಯುವ ಕೆಲಸ! ಹಾಗೆಯೇ ಚರಂಡಿ ಶುಚಿಗೊಳಿಸುವ, ಮ್ಯೋನ್ ಹೋಲ್ ಕ್ಲೀನ್ ಮಾಡುವ, ಕಕ್ಕಸ್ಸು ಶುಚಿಗೊಳಿಸುವ ಅತ್ಯಂತ ಕೀಳು ದರ್ಜೆಯ ಕೆಲಸ!

ಮೀಸಲಾತಿಯನ್ನು ನೋಡಬೇಕಾದದ್ದೇ ಹೀಗೆ. ಯಾಕೆಂದರೆ ಜಾತಿಗೊಂದರಂತೆ ಉದ್ಯೋಗ ಸೃಷ್ಟಿಸಿ ಪರಿಶಿಷ್ಟರನ್ನು ಎಲ್ಲಾ ಉದ್ಯೋಗಗಳಿಂದ ದೂರ ಇಟ್ಟು ಬರೀ ಕೂಲಿ ಕೆಲಸ, ಹೊಲಸು ಕೆಲಸಗಳಿಗೆ ಮೀಸಲಿಟ್ಟರೆ ಏನು ಮಾಡುವುದು? ಬರೀ ಹೊಲಸು ಕೆಲಸ ಮಾಡುತ್ತಾ ಹೊಲಸಾಗಿಯೇ ಬದುಕಬೇಕೆ? ಸಮಾಜದಲ್ಲಿ ನಾವೂ ಕೂಡ ಘನತೆಯಿಂದ ತಲೆ ಎತ್ತಿ ನಿಲ್ಲುವುದು ಬೇಡವೆ? ನಿಲ್ಲಬೇಕಾದರೆ ಏನು ಮಾಡಬೇಕು?

ಬಟ್ಟೆ ಅಂಗಡಿ, ಚಿನ್ನದ ಅಂಗಡಿ (ಬಹುಶಃ ಅದನ್ನು ಕಲ್ಪಿಸಿಕೊಳ್ಳಲೂ ಕೂಡ ದಲಿತರು ಸಾಧ್ಯವಿಲ್ಲ!) ಇನ್ಯಾವುದೇ ಅಂಗಡಿ ತೆಗೆದರೂ ಮಾಲೀಕ ದಲಿತ ಎಂದಾಕ್ಷಣ ಯಾರೂ ಬರುವುದಿಲ್ಲ. ಹೋಟೆಲ್‌ಗಳನ್ನು ತೆಗೆಯೋಣವೆರಂದರೆ ಅಲ್ಲಿ ಕ್ಲೀನಿಂಗ್ ಡಿವಿಷನ್ ಬಿಟ್ಟರೆ ಬೇರೆಲ್ಲೂ ನಮ್ಮನ್ನೂ ಸೇರಿಸುವುದಿಲ್ಲ. ಶಾಲೆಗಳಲ್ಲಿ ದಲಿತರು ಬಿಸಿಯೂಟ ತಯಾರಿಸಿದರೆ ಬೇರೆಯವರು ಮೂಸಿಯೂ ನೋಡುವುದಿಲ್ಲ.

ಹೀಗಿರುವಾಗ ಹೋಟೆಲ್ ತೆರೆದರೆ ಯಾರು ಬರುತ್ತಾರೆ? ಒಟ್ಟಿನಲ್ಲಿ ಸರ್ವರೀತಿಯ ವ್ಯಾಪಾರ ವ್ಯವಹಾರ ಪರಿಶಿಷ್ಟರಿಗೆ ಬಂದ್. ಇನ್ನು ಹೊಲಗಳಲ್ಲಿ ದುಡಿಯೋಣವೆಂದರೆ ಸ್ವಂತ ಜಮೀನಿಲ್ಲ. ಉಳಿಯುವುದು ಕೂಲಿಯೊಂದೇ. (ಸಾಮಾಜಿಕ ಬಹಿಷ್ಕಾರವಾದರೆ ಅದೂ ಇಲ್ಲ!)

ಒಟ್ಟಾರೆ ಆರ್ಥಿಕ ವ್ಯವಹಾರದ ಪ್ರತಿಯೊಂದು ಕ್ಷೇತ್ರ ದಲಿತರಿಗೆ ಬಂದ್...ಬಂದ್...ಬಂದ್...! ಹಾಗಿದ್ದರೆ ನಾವು ಬದುಕುವುದು ಹೇಗೆ? ಕಕ್ಕಸ್ಸು ಗುಂಡಿಯಲ್ಲಿ? ಮ್ಯೋನ್ ಹೋಲ್ ಗಲೀಜಿನಲ್ಲಿ? ಶೌಚಾಲಯದ ಗಬ್ಬಿನಲ್ಲಿ? ಸಾಕಾಗಿದೆ. ಅದಕ್ಕೆ ಮೀಸಲಾತಿ ಇರಬೇಕಾಗಿದೆ. ಕಡೇ ಪಕ್ಷ ಸರಕಾರಿ ಸಂಬಳವಾದರೂ ಪಡೆದು ನಿಮ್ಮ ಅಂಗಡಿಗಳಿಗೆ ಸ್ವಾಭಿಮಾನಿ ಗ್ರಾಹಕರಾಗಿ ಬರಲಿಕ್ಕೆ. ಗೌರವಯುತವಾಗಿ ಸಮಾಜದಲ್ಲಿ ತಲೆ ಎತ್ತಿ ಬದುಕಲಿಕ್ಕೆ.

comments powered by Disqus
Top