ಜಾತಿ ಸಂವಾದ - ಅಭಿಪ್ರಾಯ 3

ಈ ಓಲೈಕೆಗೆ ಕೊನೆಯಿಲ್ಲವೇ?
ವಿಪಿ ತಿಪಟೂರು.

ಚಾರಿತ್ರಿಕವಾಗಿ ತುಳಿತಕ್ಕೊಳಗಾದವರಿಗೆ ಸಾಮಾಜಿಕ ನ್ಯಾಯ ಸಿಗಬೇಕು ಅನ್ನುವುದರಲ್ಲಿ ಎರಡು ಮಾತಿಲ್ಲ. ಇದಕ್ಕಾಗಿ ಮೀಸಲಾತಿ ನೀಡಿದರೆ ತಪ್ಪು ಅಂತ ಯಾರೂ ಹೇಳುವುದಿಲ್ಲ. ಆದರೆ ಆತಂಕವಿರುವುದು ಮೀಸಲಾತಿಯ ಪ್ರಮಾಣ ಮತ್ತು ಅವಧಿಯ ಬಗ್ಗೆ. ಸಾಮಾಜಿಕ ಅಸಮಾನತೆಗೆ ಮೀಸಲಾತಿಯು ಒಂದು ಪರಿಹಾರ ಹೌದು ಅನ್ನುವುದು ಎಷ್ಟು ನಿಜವೋ ಅದೊಂದೇ ಪರಿಹಾರವಲ್ಲ ಅನ್ನುವುದು ಅಷ್ಟೇ ನಿಜ.

ನಮ್ಮ ಪರಿಚಯದ, ಪರಿಶಿಷ್ಟ ಜಾತಿಗೆ ಸೇರಿದ, ಹೈಸ್ಕೂಲ್ ಶಿಕ್ಷಕರೊಬ್ಬರ ಮಗನಿಗೆ ಮೀಸಲಾತಿ ಮತ್ತು ಮೆರಿಟ್ ಎರಡೂ ಇದ್ದರೂ ಸರಕಾರಿ ಕೆಲಸವೊಂದರಲ್ಲಿ ನೌಕರಿ ಸಿಗಲಿಲ್ಲ. ಕಾರಣ ಅದೇ ಜಾತಿಗೆ ಸೇರಿದ ಇತರ ಶ್ರೀಮಂತರ ಮಕ್ಕಳು (ಮೆರಿಟ್ ಇಲ್ಲದಿದ್ದರೂ) ಲಂಚ ನೀಡಿ ಆ ಕೆಲಸವನ್ನು ತಮ್ಮದಾಗಿಸಿಕೊಂಡರು!

ಇದೇ ರೀತಿ ವೈದ್ಯಕೀಯ ಕಾಲೇಜುಗಳನ್ನು ಸೇರಬೇಕಾದರೆ ಒಂದೋ ಧನಬಲ ಬೇಕು ಇಲ್ಲವೇ ಮೀಸಲಾತಿಯ ಅನುಕೂಲ ಇರಬೇಕು ಅನ್ನುವಂತಹ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದಲೇ ಮೀಸಲಾತಿಯ ಲಾಭ ಪಡೆದ ಕೆನೆಪದರದಲ್ಲಿರುವ ಅಸುರಕ್ಷಿತ ಭಾವದ ಒಂದು ವರ್ಗವು ಈ ನೀತಿಯನ್ನು ವಿರೋಧಿಸುವ ಸಣ್ಣ ಧ್ವನಿಯನ್ನೂ ದೊಡ್ಡ ಗಂಟಲಲ್ಲಿ ಅಡಗಿಸುವ ಪ್ರಯತ್ನ ಮಾಡುತ್ತಿದೆಯೇನೋ ಅನ್ನಿಸುತ್ತದೆ. ಇದರಿಂದಲೇ ಅದು ಆರ್ಥಿಕ ಹಿನ್ನೆಲೆಯನ್ನಾಧರಿಸಿದ ಮೀಸಲಾತಿಯನ್ನು ಕೂಡ ವಿರೋಧಿಸುತ್ತದೆ.

ಮೀಸಲಾತಿಯ ಉದ್ದೇಶ ಶೋಷಿತ ವರ್ಗದವರ ಶಿಕ್ಷಣ, ಕೌಶಲ, ಆತ್ಮವಿಶ್ವಾಸಗಳನ್ನು ಹೆಚ್ಚಿಸುವುದೇ ಆಗಿದ್ದರೆ ಶೈಕ್ಷಣಿಕ ಹಂತದಲ್ಲಿ ಬೇಕಾದ ಎಲ್ಲಾ ಸವಲತ್ತುಗಳನ್ನು ನೀಡಬೇಕು. ಈ ಹಂತದಲ್ಲಿನ ಮೀಸಲಾತಿಗೆ ಸಾಮಾನ್ಯವಾಗಿ ಯಾರೂ ವಿರೋಧ ಮಾಡುವುದಿಲ್ಲ. ಆದರೆ ಉದ್ಯೋಗ ಮತ್ತು ಮುಖ್ಯವಾಗಿ ಬಡ್ತಿ ಹಂತದಲ್ಲೂ ಇದನ್ನು ಮುಂದುವರಿಸುವುದು ಯಾವ ನ್ಯಾಯ?

ಒಂದು ಕಡೆ ಅರ್ಹರಿಗೆ ಸರ್ಕಾರಿ ನೌಕರಿಯನ್ನು ನಿರಾಕರಿಸಿ ಅವರು ಖಾಸಗಿ ಕಂಪೆನಿಗಳಲ್ಲಿ ಕೆಲಸಮಾಡುವಂತೆ ಮಾಡುತ್ತಾರೆ. ಈಗ ಅವರ ಸಂಖ್ಯೆ ಜಾಸ್ತಿಯಿದೆ ಎಂಬ ಕಾರಣಕ್ಕೆ ಅಲ್ಲಿಯೂ ಮೀಸಲಾತಿ ಕಾಯಿದೆ ತರುವ ಹುನ್ನಾರ ನಡೆಯುತ್ತಿದೆ. ಇದು ಯಾವ ಸಾಮಾಜಿಕ ನ್ಯಾಯ?

comments powered by Disqus
Top