ಜಾತಿ ಸಂವಾದ - ಅಭಿಪ್ರಾಯ 5

ಯಾರದೋ ತಪ್ಪಿಗೆ ಶಿಕ್ಷೆ
ಮು. ಅ. ಶ್ರೀರಂಗ ದೊಡ್ಡಬಳ್ಳಾಪುರ

ಮೀಸಲಾತಿ ಕುರಿತ ಪರ -ವಿರೋಧ ಚರ್ಚೆಗಳಲ್ಲಿ ಅದರ ಪರವಾಗಿ ವಾದಿಸುತ್ತಿರುವವರ ಸಂಖ್ಯೆ ಜಾಸ್ತಿಯೇ ಇದೆ. ಇದಕ್ಕೆ ಅವರು ಮನುವಿನಿಂದ ಹಿಡಿದು ಪುರೋಹಿತಶಾಹಿ ತನಕ ವಾದಗಳನ್ನು ಮಂಡಿಸುತ್ತಾ ಬಂದಿದ್ದಾರೆ.

ವಿರೋಧವಾಗಿರುವವರದ್ದು ಅವರವರ ಸದ್ಯದ ಸ್ವಂತ ಅನುಭವವಷ್ಟೇ ಆಗಿ ಕ್ಷೀಣದನಿಯಾಗಿದೆ. ಮೀಸಲಾತಿಯು ವೋಟಿನ ರಾಜಕಾರಣಕ್ಕೆ ನೇರವಾಗಿ ಸಂಬಂಧಿಸಿರುವುದರಿಂದ ಸ್ವಾತಂತ್ರ್ಯಾನಂತರ ಮೀಸಲಾತಿಯ ಕಕ್ಷೆ ವಿಸ್ತಾರಗೊಳ್ಳುತ್ತ ಬಂದಿದೆ.

ಇದು ವ್ಯೆಜ್ಞಾನಿಕವೊ ಅವೈಜ್ಞಾನಿಕವೊ ಅಥವಾ ಸಹಜ ನ್ಯಾಯವೊ ಎಂಬ ಯಾವುದೇ ಚರ್ಚೆಗೆ ಸದ್ಯದ ಪರಿಸ್ಥಿತಿಯಲ್ಲಿ ಏನೂ ಬೆಲೆಯಿಲ್ಲ. ಇಷ್ಟಾಗಿಯೂ ಸಹ ಮೀಸಲಾತಿಯ ಕಕ್ಷೆಯಿಂದಾಚೆಗೆ ಇರುವ ಜಾತಿಗಳ (ಸರ್ಕಾರದ ದೃಷ್ಟಿಯಲ್ಲಿ ಮುಂದುವರಿದವರು, ಮೇಲ್ಜಾತಿಯವರು) ಅತೃಪ್ತರು ಆಗಾಗ ತಮ್ಮ ವಿರೋಧವನ್ನು ಧರಣಿ, ಮೆರವಣಿಗೆಗಳ ಮೂಲಕ ವ್ಯಕ್ತಪಡಿಸುತ್ತಿರುತ್ತಾರೆ.

ತೀರ ಭಾವಾವೇಶಕ್ಕೊಳಗಾದ ಒಂದಿಬ್ಬರು ಸೀಮೆಯೆಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಪ್ರಾಣ ಕಳೆದುಕೊಳ್ಳುತ್ತಾರೆ. ಕಾಲ ಕಳೆದಂತೆ ಜನಗಳು ಅದನ್ನೆಲ್ಲಾ ಮರೆಯುತ್ತಾರೆ. ಸರ್ಕಾರಗಳು ಬದಲಾಗುತ್ತವೆ. ವ್ಯವಸ್ಥೆ ಹಿಂದಿನಂತೆಯೇ ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತಿರುತ್ತದೆ. ತಮ್ಮ ಹಿರಿಯರು ಮಾಡಿದರೆನ್ನಲಾದ ಪಾಪದ ಹೊರೆ ಹೊರಬೇಕಾಗಿ ಬಂದಂತಹ ಮೀಸಲಾತಿ ಕಕ್ಷೆಯ ಆಚೆ ನಿಂತ ಯುವಜನತೆ ಕಾಲ ಕಳೆದಂತೆ ಸಿನಿಕರಾಗುತ್ತಾ ಹೋಗುತ್ತಾರೆ

comments powered by Disqus
Top