ಜಾತಿ ಸಂವಾದ - ಅಭಿಪ್ರಾಯ 6

ಜಾಣ ಮರೆವು ಸಲ್ಲ
ಮಂಜುನಾಥ್ ನಿವಣೆ ಹೊಸನಗರ .

`ಜಾತಿ ಸಂವಾದ'ದಲ್ಲಿನ ವಾದಗಳನ್ನು ಓದುತ್ತಾ ಬಂದಾಗ ನನಗನ್ನಿಸಿದ್ದು ಇದರಲ್ಲಿ `ಆರು ಹೆತ್ತವರಿಗಿಂತ ಮೂರು ಹೆತ್ತವರ' ನರಳಾಟವೇ ಅತಿರಂಜಿತವಾಗಿ ಕಾಣಿಸಿಕೊಳ್ಳುತ್ತಿದೆ ಎಂಬುದು. ಮೀಸಲಾತಿ ಎಂದರೆ ಅದು ಸರ್ಕಾರ ನೀಡುವ ಶಿಕ್ಷಣ ಮತ್ತು ಉದ್ಯೋಗಕ್ಕೆ ಸೀಮಿತ ಎಂಬತೆ ಚರ್ಚೆ ನಡೆಯುತ್ತಿದೆ. ಬದಲಾಗಿ ಸರ್ಕಾರಗಳು ಸಂವಿಧಾನದ ಮೀಸಲಾತಿಗೆ ಪರ್ಯಾಯವಾಗಿ ಮೇಲ್ವರ್ಗದವರಿಗೆ ಒಳದಾರಿಯ ಮೂಲಕ ನೀಡುವ ಇತರ ಸೌಲಭ್ಯಗಳ ಬಗ್ಗೆಯೂ `ಅಂಕಿ ಅಂಶ' ಗಳಿಂದ ಕೂಡಿದ ಮಾಹಿತಿಗಳು ಪ್ರಕಟವಾಗಬೇಕಿದೆ.

ಮೀಸಲಾತಿ ಪರ/ವಿರೋಧಿ ವಾದಿಗಳು ಬರೆಯದೇ (ಮರೆತು?) ಬಿಟ್ಟಿರುವ, ಬರೆದರೂ ಅಂಕಿ ಅಂಶಗಳಿಲ್ಲದ ವಿಷಯಗಳು ಸಾಕಷ್ಟಿವೆ. ಉದಾಹರಣೆಗೆ ನಮ್ಮ ದೇಶದಲ್ಲಿ ಭೂಮಿ ಹಕ್ಕು ಹೊಂದಿರುವ ದಲಿತರೆಷ್ಟು? ಅದೇ ರೀತಿ `ಮಣ್ಣನ್ನೇ ಮುಟ್ಟದ' ಎಷ್ಟೋ ಮೇಲ್ವರ್ಗದವರ ಬಳಿಯಿರುವ ಭೂಮಿಯೆಷ್ಟು? ಈ ಬಗ್ಗೆ ಯಾರಾದರು ಅಂಕಿ ಅಂಶ ಕಂಡುಕೊಂಡು ಪ್ರಕಟಿಸಬೇಕಾಗಿದೆ.

ಹಾಗೆಯೇ ಉದ್ಯೋಗವೆಂದರೆ ಬರೀ ಸರ್ಕಾರಿ ಉದ್ಯೊಗ ಮಾತ್ರವಲ್ಲ. ಖಾಸಗಿ ಉದ್ದಿಮೆಗಳಲ್ಲಿ ದಲಿತರ ಪಾಲೆಷ್ಟು? ಮೇಲ್ವರ್ಗದವರ ಪಾಲೆಷ್ಟು? ಅದರಲ್ಲಿ ದುಡಿಯುವ ನೌಕರರಲ್ಲಿ ದಲಿತರು ಎಷ್ಟಿದ್ದಾರೆ? ಯಾವ ಸ್ಥಾನಗಳಲ್ಲಿದ್ದಾರೆ?

ಮುಜರಾಯಿ ಇಲಾಖೆ ನಿರ್ವಹಿಸುವ ದೇವಸ್ಥಾನಗಳಲ್ಲಿ ಎಷ್ಟು ಜನ ದಲಿತ ಅರ್ಚಕರಿದ್ದಾರೆ? ಇಲ್ಲಿ ಮೀಸಲಾತಿ ಇದೆಯೇ? ಸರ್ಕಾರ ಯಾಕೆ ಸೂಕ್ತ ತರಬೇತಿ ನೀಡಿ ದಲಿತರನ್ನು ಯಾಕೆ ಅರ್ಚಕರನ್ನಾಗಿ ಮಾಡಬಾರದು? ಹಾಗೂ ದೇವಸ್ಥಾನಗಳ ಸರಾಸರಿ ಆದಾಯದಲ್ಲಿ ಅದರ ಆಡಳಿತ ವರ್ಗದ ಯಾರಿಗೆ ಎಷ್ಟು ಆದಾಯವಿರುತ್ತದೆ? ಸರ್ಕಾರದಿಂದ ಸಿಗುವ ಸಾಲಮನ್ನಾ, ಕೃಷಿ ಸಬ್ಸಿಡಿಯೂ ಸೇರಿದಂತೆ ಇತರ ಸಬ್ಸಿಡಿಗಳ ಫಲಾನುಭವಿಗಳು ಯಾರು? ಇತ್ಯಾದಿ ವಿಷಯಗಳ ಬಗ್ಗೆಯೂ ಚರ್ಚೆಗಳಾಗಬೇಕು.

ಉದಾರಿ ಮೇಲ್ವರ್ಗದವರು ಹಾಗೂ ಉಳ್ಳ ದಲಿತರು ದಯೆಯಿಟ್ಟು ತಮಗೆ ಅವಶ್ಯವಿರುವಷ್ಟು ಭೂಮಿ ಬಿಟ್ಟು ಹೆಚ್ಚಿನದನ್ನು ತಮ್ಮ ನೆರೆಹೊರೆಗೆ ಹಂಚಿಬಿಡಲಿ, ದೇವಸ್ಥಾನಗಳಿಗೆ ಒಬ್ಬನೇ ಪೂಜಾರಿಯಿರುವ ಬದಲು ಊರಿನ ಪ್ರತಿ ಮನೆಯವರು ಒಂದೊಂದು ದಿನ ಬಂದು ಪೂಜೆ ಮಾಡಿ ಹೋಗುವಂತಾಗಲಿ.

ಇಂತಹ ಹತ್ತುಹಲವು ಸುಧಾರಣೆಗಳು ಕಾರ್ಯಗತವಾದ ಕೆಲವಾರು ವರ್ಷಗಳ ಬಳಿಕ `ಮೀಸಲಾತಿ' ವಿರೋಧಿಸುವವರು ತಮಗೆ ಪರಿಚಯವಿಲ್ಲದ ಇನ್ನೊಂದು ಪ್ರದೇಶಕ್ಕೆ ಹೋಗಿ ಅಲ್ಲಿ ದಲಿತರೆಂದುಕೊಂಡು ಕೆಲವು ಕಾಲ ಬದುಕಲಿ, ನಂತರ ಅವರು ಮೀಸಲಾತಿ ಬಗ್ಗೆ ಬರೆದರೆ ಆಗ ನಿಜ ತಿಳಿಯುತ್ತದೆ. ಅದಿಲ್ಲದಿದ್ದರೆ `ಅಕ್ಕ' ಹೇಳಿದಂತೆ `ನೊಂದವರ ನೋವ ನೋಯದವರೆತ್ತ ಬಲ್ಲರು' ಎಂದೇ ಹೇಳಬೇಕಾಗುತ್ತದೆ.

comments powered by Disqus
Top