ಜಾತಿ ಸಂವಾದ - ಅಭಿಪ್ರಾಯ 2

ಮಡಿ ಗಂಡಸಿನ ಹುಡುಕಾಟದಲ್ಲಿ...
ಆರತಿ ಕೃಷ್ಣಮೂರ್ತಿ .

ಜಾತಿ ಆಚರಣೆಗಳನ್ನು ಮುಂದುವರಿಸುವುದರಲ್ಲಿ ಮಹಿಳೆಯ ಪಾತ್ರ ಮುಖ್ಯವಲ್ಲವೇ? ಎಂಬ ಪ್ರಶ್ನೆಗೆ ಸರಳ ಉತ್ತರವೊಂದನ್ನು ಕೊಡಬಹುದಾದರೆ ಆಕೆಯೇ ಮುಂದುವರಿಸಿಕೊಂಡು ಹೋಗುವಂತೆ ನೋಡಿಕೊಳ್ಳಲಾಗಿದೆ ಎನ್ನಬಹುದು.

ಮಡಿ-ಮೈಲಿಗೆ ಎಂಬುದು ಬ್ರಾಹ್ಮಣರೂ ಸೇರಿದಂತೆ `ಮೇಲ್ಜಾತಿ' ಪಟ್ಟಿಯಲ್ಲಿರುವ ಎಲ್ಲಾ ಜಾತಿಗಳ ಪುರುಷ ಮತ್ತು ಮಹಿಳೆಯರಿಬ್ಬರಿಗೂ ಅನ್ವಯಿಸುತ್ತದೆ. ಆದರೆ ಸೃಜನಶೀಲ ಅಭಿವ್ಯಕ್ತಿಗಳಿಂದ ಆರಂಭಿಸಿ ನಿತ್ಯದ ಮಾತುಕತೆಗಳ ತನಕ ಒಂದು ಸ್ಥೂಲ ಸಮೀಕ್ಷೆ ಮಾಡಿದರೆ `ಮಡಿ ಹೆಂಗಸು' ಎಂಬ ಪ್ರಯೋಗ ಬಹಳ ಸುಲಭವಾಗಿ ಸಿಗುತ್ತದೆ. ಆದರೆ `ಮಡಿ ಗಂಡಸು' ಎಂಬ ಪ್ರಯೋಗ ಹುಡುಕಿದರೂ ಸಿಗುವುದಿಲ್ಲ.

ಜಾತಿ ಎಂಬ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಮಹಿಳೆಯನ್ನು `ಬಳಸುವ' ಕ್ರಿಯೆ ಹೇಗೆ ನಡೆಯುತ್ತದೆ ಎಂಬುದು ಇದರಿಂದ ಅರ್ಥವಾಗುತ್ತದೆ. ಮಡಿ ಹೆಂಗಸು ಎಂಬ ಪ್ರಯೋಗ ನಮ್ಮ ಮನಸ್ಸಿನಲ್ಲಿ ಮೂಡಿಸುವ ಚಿತ್ರ ಯಾವುದು? ಮಡಿ ಮುತ್ತೈದೆಯರ ಉದಾಹರಣೆ ಗಳನ್ನು ತಾರ್ಕಿಕವಾಗಿ ಮುಂದೊಡ್ಡಲು ಸಾಧ್ಯವಿದೆಯಾದರೂ ಈ ಪದ ಪ್ರಯೋಗ ನಮ್ಮ ಮನಸ್ಸಿನಲ್ಲಿ ಮೂಡಿಸುವುದು ವಿಧವೆಯೊಬ್ಬಳ ಚಿತ್ರವನ್ನು. ಆಕೆಯನ್ನು ಯಾರು ಯಾಕೆ `ಮಡಿ' ಯಲ್ಲಿಟ್ಟರು ಎಂಬುದಕ್ಕೆ ಹೆಚ್ಚಿನ ಹುಡುಕಾಟದ ಅಗತ್ಯವೇನೂ ಇಲ್ಲ. ಮನೆಯ ಮರ್ಯಾದೆ ಹೋಗಿಬಿಡುವ ಸಾಧ್ಯತೆ ಇರುವುದು `ಕೇವಲ ಹೆಣ್ಣಿನಿಂದ ಮಾತ್ರ' ಎಂಬ ಪೂರ್ವಗ್ರಹ ಈ `ಮಡಿ ಹೆಂಗಸ'ನ್ನು ಸೃಷ್ಟಿಸುವುದರ ಹಿಂದಿದೆ.

ಮನೆ ಮರ್ಯಾದೆ ಕಾಪಾಡುವ ಇನ್ನೊಂದು ಉದಾಹರಣೆಯನ್ನು ನೋಡೋಣ. ಮಗ ಯಾವ ಜಾತಿಯ ಹುಡುಗಿಯೊಂದಿಗೆ ಓಡಾಡಿದರೂ ಅಷ್ಟೇನೂ ತಲೆಕೆಡಿಸಿಕೊಳ್ಳದ, ವಯೋಸಹಜ, ಬುದ್ಧಿ ಹೇಳಿ ಸರಿಪಡಿಸಬಹುದು ಎಂದು ಭಾವಿಸುವ ಆಧುನಿಕ ಮನಸ್ಥಿತಿಯ ಪಾಲಕರೂ ಕೂಡಾ ಮಗಳು ಬೇರೆ ಜಾತಿಯ ಹುಡುಗನೊಂದಿಗೆ ಹೆಚ್ಚು ಮಾತನಾಡುತ್ತಿದ್ದಾಳೆ ಎಂದು ಗೊತ್ತಾದರೆ ಖಿನ್ನರಾಗುತ್ತಾರೆ. ಮನೆಯ ಮರ್ಯಾದೆ ಹೋಯಿತೆಂದು ಅಲವತ್ತುಕೊಳ್ಳಲು ತೊಡಗುತ್ತಾರೆ. ನಮ್ಮ ಮನೆಯಲ್ಲಿ ಅದು ಹೇಗೆ ನೀನು ಹುಟ್ಟಿದೆ ಎಂಬ ಪ್ರಶ್ನೆ ತೆಗೆಯುತ್ತಾರೆ.

ಇನ್ನು ಬೇರೆ ಜಾತಿಯ ಹುಡುಗನನ್ನು ಮದುವೆಯಾಗಿಬಿಟ್ಟರಂತೂ ಅದು ಸರಿಯಾಗುವ ಹೊತ್ತಿಗೆ (ಸರಿಯಾದರೆ!) ಆಕಾಶ-ಭೂಮಿಗಳೇ ಒಂದಾಗಿಬಿಟ್ಟಿರುತ್ತವೆ.

ಇಂಥ ಸಂದರ್ಭಗಳನ್ನು ಸ್ವಲ್ಪ ಸೂಕ್ಷ್ಮವಾಗಿ ನೋಡೋಣ. ಮಗಳು ತನ್ನ ಜಾತಿಯ ಹೊರಗೆ ವಿವಾಹವಾಗುತ್ತಾಳೆ ಎಂದು ಅರಿತಾಗ ಸಿಟ್ಟು, ಕೋಪ-ತಾಪಗಳು ವ್ಯಕ್ತವಾಗುವುದು ಅಪ್ಪನಿಂದಲೇ ಹೊರತು ಅಮ್ಮನಿಂದಲ್ಲ. ಇದಕ್ಕೆ ಅಪವಾದಗಳಿರಬಹುದಾದರೂ ಹೆಚ್ಚಿನ ಸಂದರ್ಭಗಳಲ್ಲಿ `ಮನೆ ಮರ್ಯಾದೆ' ಹೋಯಿತೆಂದು ಪರಿತಪಿಸುವವರೆಲ್ಲರೂ ಗಂಡಸರೇ. ಇವರಲ್ಲಿ ಅಪ್ಪ, ಅಣ್ಣ, ತಮ್ಮ, ಸೋದರ ಮಾವಂದಿರು ಮುಂತಾದವರಷ್ಟೇ ಇರುತ್ತಾರೆ. ಮರ್ಯಾದಾ ಹತ್ಯೆಯ ಪ್ರಕರಣಗಳನ್ನು ನೋಡಿದರೆ ಹತ್ಯೆಯ ನಿರ್ಧಾರದಿಂದ ಆರಂಭಿಸಿ ಕಾರ್ಯರೂಪಕ್ಕೆ ಬರುವ ತನಕದ ಎಲ್ಲಾ ಕ್ರಿಯೆಗಳೂ ಗಂಡಸರಿಂದ, ಗಂಡಸರಿಗಷ್ಟೇ ಗೊತ್ತಿರುವ ಕಾರಣಗಳಿಗಾಗಿ ನಡೆಯುತ್ತವೆ. ಇಲ್ಲಿ ಹೆಣ್ಣಿನ ಮೌನ ಪ್ರತಿಭಟನೆಗೆ ಧ್ವನಿ ದೊರೆಯುವುದೇ ಇಲ್ಲ.

ಗಂಡಸರು ಎಷ್ಟೇ ಆಧುನಿಕರಾಗಿದ್ದರೂ ಹೆಣ್ಣು ಪ್ರತೀ ತಿಂಗಳ ಮೂರು ದಿನ ಅನುಭವಿಸುವ ಕಷ್ಟವನ್ನು ಅರ್ಥ ಮಾಡಿಕೊಳ್ಳಲಾರರು. ಮುಜಗರ ಪಡದೆ ಅಂಗಡಿಗೆ ಹೋಗಿ ಹೆಂಡತಿಗೋ ಮಗಳಿಗೋ ಸ್ಯಾನಿಟರಿ ನ್ಯಾಪ್ಕಿನ್ ತಂದುಕೊಡುವ ಗಂಡಸರೆಷ್ಟು ಮಂದಿ ಇದ್ದಾರೆ? ಧೈರ್ಯವಾಗಿ ಕಾಂಡೋಂ ಖರೀದಿಸುವ ಗಂಡಸರೂ ಈ ವಿಚಾರಕ್ಕೆ ಬರುವ ಹೊತ್ತಿಗೆ `ತಂದಿಟ್ಕೊಳ್ಳೋಕೆ ಆಗಲ್ವಾ...?' ಎಂದು ಗೊಣಗುತ್ತಾರೆ. ನಗರಗಳಲ್ಲಾದರೆ ಸೂಪರ್ ಮಾರ್ಕೆಟ್‌ಗಳಿವೆ.

ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಲ್ಲಿರುವ ಗಂಡಸರಂತೂ ಇದನ್ನು ಖಂಡತುಂಡವಾಗಿಯೇ ಅಲ್ಲಗಳೆದು ಬಿಡುತ್ತಾರೆಂದು ಗೆಳತಿಯೊಬ್ಬಳು ವಿವರಿಸಿದ್ದಳು. ಇನ್ನು ಮೂರು ದಿನಗಳ ಕಾಲ `ಮೈಲಿಗೆ'ಯಾಗದಂತೆ ನೋಡಿಕೊಳ್ಳುವ ಹೊಣೆ ಮತ್ತೆ ಆಕೆಯದ್ದೇ ಹೊರತು ಇತರರದ್ದಲ್ಲ. ತನ್ನ ದಿನಗಳನ್ನು ನೆನಪಿಟ್ಟುಕೊಂಡು ಅದಕ್ಕೆ ಮೊದಲೇ ಎಲ್ಲಾ ಸಿದ್ಧತೆ ಮಾಡಿಟ್ಟು `ಮಡಿ'ಯನ್ನು ಉಳಿಸಬೇಕು.

ಕಾಲ ಬದಲಾಗಿದೆ. ಈಗ ಇಂಥದ್ದಕ್ಕೆಲ್ಲಾ ಯಾರೂ ಅಂಥ ಮಹತ್ವವನ್ನೇನೂ ನೀಡುವುದಿಲ್ಲ. ಇದೆಲ್ಲಾ ಹಳೆಯ ಕಾಲದ ಮಾತು ಎಂಬ ಮಾತುಗಳನ್ನು ಬರೆಯುವ ಧೈರ್ಯ ಬರುವುದು ಗಂಡಸರಿಗೆ ಮಾತ್ರ ಅನ್ನಿಸುತ್ತದೆ. ಏಕೆಂದರೆ ಅವರು ಯಾವತ್ತೂ `ಇಂಥದ್ದನ್ನು' ಅನುಭವಿಸಿಯೇ ಇರುವುದಿಲ್ಲವಲ್ಲ. ಅಮೆರಿಕದ ವರನ ಕುರಿತು ಪ್ರಸ್ತಾಪಿಸಿದವರು `ಆಚಾರ ವಿಚಾರ ಗೊತ್ತಿರಬೇಕು. ಹೊರ ದೇಶದಲ್ಲಿ ಆಚಾರ ನೋಡಿಕೊಳ್ಳುವ ಸೊಸೆ ಬೇಕೆಂದು ಭಾವಿ ಮಾವನವರು ಅಪೇಕ್ಷಿಸಿದ್ದಾರೆ' ಎಂಬ ಮಾತು ಕೇಳಿಕೊಂಡು ಬರುವ ವಧುವಿನ ತಂದೆ ಮಾಡುವುದೇನನ್ನು?

ಮಗಳು ಜೀನ್ಸ್ ಪ್ಯಾಂಟ್ ಹಾಕಿದ್ದರಿಂದಲೇ, ಅದನ್ನು ಧರಿಸಲು ಅವಳ ಅಮ್ಮ ಬಿಟ್ಟಿದ್ದರಿಂದಲೇ ಎಲ್ಲಾ ಅನಾಹುತವಾಯಿತೆಂದು ಭಾವಿಸುವುದು.ಇಷ್ಟೆಲ್ಲಾ ನಡೆಯುತ್ತಿರುವಾಗ ಜಾತಿ ಮುಂದುವರಿಯುವುದು ಮಾತ್ರ ಹೆಣ್ಣಿನಿಂದಲೇ ಎಂಬ ಮತ್ತೊಂದು ಸಿದ್ಧ ಮಾದರಿಯೂ ಉಳಿದುಕೊಂಡೇ ಬಂದಿದೆ. ವಾಸ್ತವದಲ್ಲಿ ಜಾತಿಯನ್ನು ಮೀರಲು ಸದಾ ಪ್ರಯತ್ನ ನಡೆಸುತ್ತಿರುವವಳು ಹೆಣ್ಣು ಮಾತ್ರ.

ಅದನ್ನು ತಿಳಿದಿರುವ ಪಿತೃ ಪ್ರಧಾನ ವ್ಯವಸ್ಥೆ ಆಕೆಯ ಸುತ್ತ ಒಂದು ಆಚರಣೆಗಳ, ವಿಧಿ-ನಿಷೇಧಗಳ ಕೋಟೆಯನ್ನು ಕಟ್ಟಿಟ್ಟಿರುತ್ತದೆ. ಆಕೆ ಅದನ್ನು ಆಗೀಗ ಮೀರುತ್ತಲೇ ಇರುತ್ತಾಳೆ. ಈ ಮೀರುವಿಕೆ ಎಷ್ಟೋ ಬಾರಿ ಅವ್ಯಕ್ತವಾಗಿರುತ್ತದೆ ಎಂಬುದು ಇಲ್ಲಿರುವ ದುರಂತ. ಮಗಳು ಜೀನ್ಸ್ ಧರಿಸಿದ ಕ್ಷಣ, ತನಗೆ ಇಂಥದ್ದೇ ಹುಡುಗ ಬೇಕು ಎಂದ ಕ್ಷಣ, ಅಪ್ಪನ ಎದುರು ವಾದಿಸಿದ ಕ್ಷಣದಲ್ಲೆಲ್ಲಾ ಅಮ್ಮ ತನ್ನ ವಿಮೋಚನೆಯನ್ನೂ ಕಾಣುತ್ತಿರುತ್ತಾಳೆ. ತನಗಾಗದ್ದನ್ನು ಮಗಳು ಸಾಧಿಸಿದ್ದಕ್ಕೆ ಹೆಮ್ಮೆ ಪಡುತ್ತಿರುತ್ತಾಳೆ.

comments powered by Disqus
Top