ಜಾತಿ ಸಂವಾದ - ಅಭಿಪ್ರಾಯ 3

ಜನಕಥಾ ದಾಸರಿಗೆ ಜಾತಿಯ ಹಂಗಿಲ್ಲ
ಡಾ. ಲಕ್ಷ್ಮಣದಾಸ / ನಿರೂಪಣೆ: ರಾಘವೇಂದ್ರ ತೊಗರ್ಸಿ

ಕಲೆಗೆ ಜಾತಿ ಇಲ್ಲ. ಆದರೆ ಜಾತಿ ದೊಡ್ಡ ಶಕ್ತಿ ಕೇಂದ್ರ. ಪ್ರತಿಭಾವಂತ ಕಲಾವಿದನಿಗೆ ಜಾತಿ ನಗಣ್ಯ ಎನ್ನುವುದು ನನ್ನ ಅನುಭವದ ಮಾತು. ಕಲಾವಿದನಿಗೆ ಪ್ರತಿಭೆಯೇ ಬ್ರಹ್ಮಾಸ್ತ್ರ. ಅದನ್ನು ಒರೆಗೆ ಹಚ್ಚಲು ಅವಕಾಶ ಸಿಗಬೇಕು. ನಾನು ಕಲಾಕ್ಷೇತ್ರದಲ್ಲಿ ಹೆಜ್ಜೆಗಳನ್ನು ಊರುತ್ತಿದ್ದಾಗ ಜಾತಿಯ ಕಾರಣಕ್ಕೆ ಅಂತಹ ಸಮಸ್ಯೆಗಳೇನೂ ಆಗಲಿಲ್ಲ. ಅವಕಾಶಗಳನ್ನು ಹುಡುಕಿ ಪಡೆದೆ. ಜಾತಿಯನ್ನು ಮೀರಿ ಬೆಳೆದೆ. ಆದರೆ ಈಗ ಜಾತಿ ತುಂಬಾ ಕೆಲಸ ಮಾಡುತ್ತಿದೆ ಅಂತ ಅನ್ನಿಸುತ್ತಿದೆ. ಅದು ಏನೇ ಆದರೂ ಕಲಾವಿದ `ತ್ರಿ ಸೂತ್ರ' (ಪರಿಶ್ರಮ, ಪ್ರತಿಭೆ, ವಿನಮ್ರತೆ) ಪರಿಪಾಲಕನಾದರೆ ಜಾತಿಗೋಡೆಯನ್ನು ಒಡೆದು ಹಾಕಬಹುದು.

ಕಲಾವಿದನಿಗೆ ಶ್ರದ್ಧೆ ಹಾಗೂ ವಿನಯವಿದ್ದರೆ ಕಲಾಕ್ಷೇತ್ರ ಖಂಡಿತ ಬೆಳೆಸುತ್ತದೆ. ಬಾಲ್ಯದಲ್ಲಿಯೇ ಜಾತಿ ಭೇದ ಕಂಡುಂಡ ನಾನು, ರಂಗ ಚಟುವಟಿಕೆಗೆ ತೊಡಗಿಕೊಂಡಾಗ ಜಾತಿ ಕಾಡಿಸಲೇ ಇಲ್ಲ. ಏಕೆಂದರೆ ವೃತ್ತಿ ರಂಗಭೂಮಿಯಲ್ಲಿ ಜಾತಿ ಲೆಕ್ಕಕ್ಕಿರಲಿಲ್ಲ. ನಟನೆಯ ಜೊತೆಗೆ ಹರಿಕಥೆ ಅಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ನನ್ನ ಜಾತಿ ಯಾರಿಗೂ ಗೊತ್ತಿರಲಿಲ್ಲ. ಆ ನಂತರ ಗೊತ್ತಾದರೂ ಅದು ನನ್ನನ್ನು ಕಾಡದಷ್ಟು ಮುಂದೆ ಬಂದಿದ್ದೆ. ಆದರೆ ಒಂದೆರಡು ಸವಾಲಿನ ಸಂದರ್ಭಗಳೂ ಎದುರಾದವು. ನನ್ನಲ್ಲಿದ್ದ ಒಬ್ಬ ಕಲಾವಿದನ ಪೋಷಣೆಯಲ್ಲಿ ಎಲ್ಲ ಜಾತಿ ಜನರ ಬೆಂಬಲ ಮಾತ್ರ ಸಿಕ್ಕಿದೆ.

ಪುರಾಣ- ಪುಣ್ಯಕಥೆ ಕೇಂದ್ರಿತ ಹರಿಕಥೆಯನ್ನು ಸೃಜನಶೀಲ ಪ್ರಯೋಗಕ್ಕೆ ಒಡ್ಡಲು `ಪ್ರಜಾವಾಣಿ' ನನಗೆ ತುಂಬಾ ಸಹಾಯ ಮಾಡಿದೆ. ಆದ್ದರಿಂದಲೇ `ಜನ ಕಥಾ ಕೀರ್ತನ ಮಂಡಳಿ' ಎಂಬ ಹೊಸ ಬಗೆಯ ಪ್ರಯೋಗಗಳನ್ನು ನೀಡಲು ಸಾಧ್ಯವಾಯಿತು. ಅಂದು ನಾನು ರೂಪಿಸಿದ `ಭಾರತ ರತ್ನ ಅಂಬೇಡ್ಕರ್', `ಗೌತಮ ಬುದ್ಧ'ನ ಕುರಿತ ಹರಿಕಥೆ ಅತ್ಯಂತ ಜನಪ್ರಿಯವಾದವು.

ಅದಕ್ಕೆ ಪತ್ರಿಕೆಯ ಪ್ರಭಾವ ತುಂಬಾ ದೊಡ್ಡಮಟ್ಟದ್ದು ಅಂತ ಅನ್ನಿಸಿದೆ. ಇದರ ಜತೆ ಜತೆಗೆ ಮಹಾಕವಿ ಪಂಪ, ನಾಟಕ ರತ್ನ ಗುಬ್ಬಿ ವೀರಣ್ಣ, ಮಾಚಿದೇವ, ಸಿದ್ಧಗಂಗಾ ಶ್ರೀಗಳಿಗೆ ಸಂಬಂಧಿಸಿದಂತೆ ಹರಿಕಥಾ ಕಾರ್ಯಕ್ರಮಗಳನ್ನು ನೀಡಿದೆ. ಅವು ಹಳ್ಳಿಯಿಂದ ದಿಲ್ಲಿಯವರೆಗೂ ಪ್ರಸರಣಗೊಂಡವು ಎನ್ನುವುದು ಸಂತೋಷದ ವಿಷಯ.

ರಂಗಭೂಮಿಯಲ್ಲಿ ಜಾತಿಯ ಅಡ್ಡಗೋಡೆ ಕಾಣದ ನಾನು, ಹರಿಕಥೆಯಲ್ಲಿ ಕಂಡಿದ್ದೇನೆ. ಹಟ್ಟಿಯಲ್ಲಿ ಬಾಲ್ಯ ಕಳೆದಾಗ ಕಂಡ ಭೇದದ ಭಾವ ಇಲ್ಲಿ ಸವಾಲಾಯಿತು. ಅದನ್ನು ಮೆಟ್ಟಿ ನಿಲ್ಲಲು ಪ್ರತಿಭೆ ಸೋಪಾನವಾಯಿತು. ನಾನು ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಆ ಸಮಯದಲ್ಲಿ ಹರಿಕಥೆ ಮಾಡುವ ಬಗ್ಗೆ ಹೇಳಿಕೊಂಡಾಗ ಸಹೋದ್ಯೋಗಿಯೊಬ್ಬರು `ಹರಿಕಥೆ ಮಾಡುತ್ತಾನಂತೆ' ಎಂದು ಹೇಳಿದ ಚುಚ್ಚುಮಾತು ನನ್ನನ್ನು ಹರಿಕಥಾ ದಾಸನಾಗಲು ಇನ್ನಿಲ್ಲದ ಹುಚ್ಚು ಹಚ್ಚಿಸಿತು.

ಅಂದಿನ ಸವಾಲು ತರತಮ ಭಾವವನ್ನು ಮೀರಲು ಸಾಧ್ಯವಾಯಿತು. ಅಂದರೆ, ನನ್ನನ್ನು ಅದಮ್ಯವಾಗಿ ಕಾಡುತ್ತಿದ್ದ `ದಾಸ'ನಾಗುವ ಸಂಕಲ್ಪ, ತಪಸ್ಸಿನಂತಹ ಪರಿಶ್ರಮ, ಹರಿಕಥೆಯನ್ನು ಸ್ವಾರಸ್ಯಕರಗೊಳಿಸುವ ಸಂಬಂಧ ಅನೇಕ ಉಪ ಕಥೆ ಹಾಗೂ ವಿನಯದ ನಡವಳಿಕೆಯಿಂದ ಎಲ್ಲವನ್ನೂ ಗೆಲ್ಲಲು ಸಾಧ್ಯವಾಯಿತು ಅಂತ ಅನ್ನಿಸಿದೆ.

ಜಾತಿ ನಂಜು ಆರಿಸಲು ಕಲೆ ಒಂದು ಪರಿಹಾರ. ಕಲಾವಿದನ ಆಸ್ತಿ ಪ್ರತಿಭೆಯೇ ಹೊರತು ಜಾತಿ ಅಲ್ಲ. ದಲಿತನಾಗಿರಲಿ, ಓಬಿಸಿ ವರ್ಗಕ್ಕೆ ಸೇರಿರಲಿ, ಬ್ರಾಹ್ಮಣನೇ ಆಗಿರಲಿ ಅವರನ್ನು ಕಲಾ ಜಗತ್ತು ಕೈ ಹಿಡಿದು ನಡೆಸುವುದು ಪ್ರತಿಭೆ ಇದ್ದರೆ ಮಾತ್ರ. ಗುರುರಾಜುಲು ನಾಯ್ಡು ಅವರ ಮಾನಸ ಶಿಷ್ಯನಾದ ನಾನು ಅವರ ಹರಿಕಥೆಗಳು ಕೇಳುತ್ತಾ ಕೇಳುತ್ತಾ ಬೆಳೆದೆ.

ಅವರಂತೆಯೇ ಒಂದಾದರೂ ಕಾರ್ಯಕ್ರಮ ನೀಡಬೇಕು ಎಂದು ಕನಸು ಕಂಡೆ, ಅದಕ್ಕಾಗಿ ನಿರಂತರ ಚಡಪಡಿಸಿದೆ. ಅದಕ್ಕೊಂದು ಸುಯೋಗ ಬಂದೇ ಬಿಟ್ಟಿತು. ಹರಿಕಥೆ ವಿದ್ವಾಂಸ ಹಾಗೂ ಶಿಕ್ಷಕ ರಾಮಣ್ಣ ಎಂಬುವರ ಸಮ್ಮುಖದಲ್ಲಿಯೇ 1969ರ ನವೆಂಬರ್ 30ರಂದು ಮೊದಲ ಕಥೆಯನ್ನು ತುಮಕೂರು ಜಿಲ್ಲೆಯ ನಿಟ್ಟೂರಿನಲ್ಲಿ ನೀಡುವ ಮೂಲಕ ಹರಿಕಥೆಯ ದಾಸನಾಗುವತ್ತ ಮೊದಲಡಿ ಇಟ್ಟೆ.

ಅಂದಿನಿಂದ ಇಂದಿನವರೆಗೆ ನಡೆದ ಒಂದೊಂದು ಹೆಜ್ಜೆಯೂ ಅನೇಕ ಹೊಸ ಪ್ರಯೋಗಗಳಿಗೆ ದಾರಿ ಮಾಡಿಕೊಟ್ಟಿತು. ಬಾಲಕೃಷ್ಣ, ನರಸಿಂಹರಾಜು, ಹಿರಣ್ಯಯ್ಯ, ಎ.ಎಸ್.ಮೂರ್ತಿ ಸೇರಿದಂತೆ ಅನೇಕರು ನನ್ನನ್ನು `ದಾಸ'ನನ್ನಾಗಿ ಮಾಡಲು ಕಾರಣರಾಗಿದ್ದಾರೆ. ಅಂದ ಮೇಲೆ ಜಾತಿ ನನ್ನನ್ನು ಕಾಡಿತು ಎಂದು ಹೇಗೆ ಹೇಳಲಿ.

comments powered by Disqus
Top