ಜಾತಿ ಸಂವಾದ - ಅಭಿಪ್ರಾಯ 4

ಸಂಸ್ಕೃತಿ ರಕ್ಷಣೆಯ ನಿಜ ರೂಪ
ಟಿ. ಕೃಷ್ಣಕುಮಾರ್, ಮೈಸೂರು .

ಒಂದು ಉಪಸಂಸ್ಕೃತಿ ಕ್ಷೀಣಿಸುತ್ತಿರುವಾಗ, ಒಂದು ಉಪಭಾಷೆ ಕಣ್ಮರೆಯಾಗುತ್ತಿರುವಾಗ ಅದನ್ನು ಉಳಿಸಬೇಕೆಂಬ ಕಾಳಜಿಯ ಮಾತುಗಳನ್ನು ಚರ್ವಿತಚರ್ವಣವೆಂಬಂತೆ ನಾವು ಕೇಳುತ್ತಿರುತ್ತೇವೆ. ಒಂದು ಜನಪದ ಕುಣಿತ ಈಗ ಮಾಯವಾಗುತ್ತಿರುವುದರ ಹಿಂದೆ ಅದನ್ನು ಕುಣಿಯುತ್ತಿದ್ದ ಜಾತಿಮಕ್ಕಳ ಸ್ಥಿತಿ ಬದಲಾಗಿರುವುದು ಒಂದು ಮುಖ್ಯ ಕಾರಣ.

ಜನಪದ ಸಂಸ್ಕೃತಿ, ಉಪಭಾಷೆಗಳ ಬಗ್ಗೆ ಕೆಲಸ ಮಾಡಲು ಕೊಡವ, ಬ್ಯಾರಿ, ತುಳು, ಅರಬಾಸೆ ಮುಂತಾದ ಅಕಾಡೆಮಿಗಳಿವೆ. ನಿಜವಾಗಿ, ನಮ್ಮ ಜಾನಪದವನ್ನು ಉಳಿಸಿಕೊಳ್ಳುವ ಯಾವುದೇ ಕೆಲಸವು ನಮ್ಮ ಜಾತಿಯನ್ನು ಕೂಡ ಉಳಿಸುವ ಆಶಯದೊಂದಿಗೆ ತಳುಕುಹಾಕಿಕೊಳ್ಳುತ್ತದೆ. ನಮ್ಮ ಆಡಳಿತದಲ್ಲಿ ಅಕಾಡೆಮಿಗಳಲ್ಲಿ, ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮಾಡುವ ಬ್ರಾಹ್ಮಣ, ಒಕ್ಕಲಿಗ, ಗೌಡ, ಲಿಂಗಾಯಿತ, ಬಂಟ ಮುಂತಾದ ಸಾಮುದಾಯಿಕ ಮನಸ್ಸುಗಳಿಗೆ ಜನಪದ ಸಂಸ್ಕೃತಿ ಬಹಳ ರಮ್ಯವಾಗಿ ಕಾಣುತ್ತದೆ.

ಅವರದೇ ಪ್ರಭಾವದಲ್ಲಿರುವ ದಲಿತ/ಹಿಂದುಳಿದ ವರ್ಗಗಳ ಸಂಶೋಧಕರೂ ಇದನ್ನು ನಂಬಿಬಿಡುತ್ತಾರೆ. ಆಧುನಿಕೋತ್ತರ ಚಿಂತಕರು 'ಕೆಳಜಾತಿಯ ಜಾನಪದರಿಗೆ ತಾವು ಇಂಥ ಸಂಸ್ಕೃತಿಯವರೆಂದು ಹೇಳಿಕೊಳ್ಳಲು ಮುಜುಗರವೇಕೆ? ತಮ್ಮ ಅಸ್ಮಿತೆಯನ್ನು ಅವರು ದಿಟ್ಟವಾಗಿ ತೋರ್ಪಡಿಸಬಾರದೇಕೆ?' ಎಂದು ಸ್ವಾಭಿಮಾನ ಬೋಧಿಸುತ್ತಾರೆ.

`ಮಾರಿ ಆಚರಣೆ ಎಷ್ಟು ಅದ್ಭುತವಾಗಿದೆ! ಹಂದಿ ಕಡಿಯುವ ದೃಶ್ಯ ಎಷ್ಟೊಂದು ಎನರ್ಜಿಟಿಕ್ ಆಗಿದೆ! ಚಿಲ್ ಎಂದು ರಕ್ತ ಚಿಮ್ಮುವ ದೃಶ್ಯವನ್ನೊಮ್ಮೆ ನೋಡಬೇಕು! ಆಹಾ, ಅವರು ಮಾಂಸ ಚಪ್ಪರಿಸುವ ಅಂದವನ್ನು ನೋಡಬೇಕು! ಅದು ನಮ್ಮ ಸಂಸ್ಕೃತಿ ಎಂದು ಎದೆತಟ್ಟಿ ಅವರು ಹೇಳಿಕೊಳ್ಳುವಂತಾಗಬೇಕು' ಎಂದೆಲ್ಲಾ ವೈಭವೀಕರಿಸಿ ಬರೆಯುವ ಸಂಸ್ಕೃತಿಪ್ರಿಯರು ತಮ್ಮ ಮಕ್ಕಳನ್ನು ಮಾತ್ರ ಸಾಫ್ಟ್‌ವೇರ್ ಎಂಜಿನಿಯರ್‌ಗಳಾಗಿಸಿರುತ್ತಾರೆ.

`ಬೆತ್ತಲೆ ಸ್ನಾನ ಯಾಕೆ ಕೂಡದು? ಮಡೆಸ್ನಾನ ಯಾಕೆ ಮಾಡಬಾರದು?' ಎಂಬ ವಾದಗಳ ಹಿಂದಿರುವುದು ಇದೇ ಮನಸ್ಸು. ಭಾರತದಲ್ಲಿ ಯಾವುದೇ ಕಲೆ, ಸಂಸ್ಕೃತಿ, ಭಾಷೆ ಸಾಮಾನ್ಯವಾಗಿ ಒಂದು ಜಾತಿಯೊಂದಿಗೆ ಬೆಸೆದುಕೊಂಡೇ ಇರುತ್ತದೆ.

ಒಂದು ಭಾಷೆಯನ್ನು ಮಾತನಾಡುವ ರೀತಿಯಲ್ಲಿ ಅವನು ಯಾವ ಜಾತಿಯವನೆಂದು ಗುರುತಿಸಬಹುದು. ಜಾತಿಯನ್ನು ಮತ್ತೆ ಮತ್ತೆ ನೆನಪಿಸುವಂತೆ ಮಾಡುವ ಸಂಸ್ಕೃತಿ, ಭಾಷೆಗಳು ಅಳಿಯುವ ಬಗ್ಗೆ ಯಾಕೆ ಚಿಂತೆ? ಆ ಅರ್ಥದಲ್ಲಿ ನಮ್ಮ ಭಾಷೆ, ಸಂಸ್ಕೃತಿಗಳನ್ನು ಉಳಿಸುವ ಆಶಯವು ಮಠಗಳನ್ನು ಸ್ಥಾಪಿಸುವ ಉದ್ದೇಶಗಳಷ್ಟೇ ಅಪಾಯಕಾರಿಯಾದುದು.

ಮಡಕೆ ಮಾಡುವುದು ಒಂದು ಜನಪದ ಕಲೆಯೆಂದಾದರೆ ಅದನ್ನು ಬ್ರಾಹ್ಮಣರ ಮಕ್ಕಳಿಗೂ ಕಲಿಸುವ ವ್ಯವಸ್ಥೆ ಆಗುವವರೆಗೆ, ಶೇಂದಿ ಮಾರಾಟ ದೇಸಿ ಆಹಾರ ಸಂಸ್ಕತಿಯ ಒಂದು ಭಾಗವಾಗಿರುವುದಾದರೆ ಈಡಿಗರಿಗೆ ಮಾತ್ರವಲ್ಲದೆ ಎಲ್ಲ ಜಾತಿಯವರೂ ಶೇಂದಿ ಇಳಿಸುವುದನ್ನು ಕಲಿತು ಅದರ ಮಾರಾಟದ ಪರವಾನಿಗೆ ಪಡೆಯುವವರೆಗೆ ಕಲೆ-ಸಂಸ್ಕೃತಿ-ಭಾಷೆಯನ್ನು ಉಳಿಸುವ ಯಾವುದೇ ಹೇಳಿಕೆಯ ಹಿಂದೆ ಅಮಾನವೀಯ ಧೋರಣೆಯೊಂದು ಕೆಲಸಮಾಡುತ್ತಿರುತ್ತದೆ ಎಂದು ಭಾವಿಸಬೇಕಾಗುತ್ತದೆ.

comments powered by Disqus
Top