ಜಾತಿ ಸಂವಾದ - ಅಭಿಪ್ರಾಯ 5

ವರ್ತಮಾನದ ವಾಸ್ತವ ಚರ್ಚಿಸೋಣ
ರವೀಂದ್ರ ಬಂಟ್ವಾಳ ಬೆಂಗಳೂರು

ಜಾತಿ ಸಂವಾದ' ಅಂಕಣದಲ್ಲಿ ಫೆ.4ರಂದು ಪ್ರಕಟವಾದ ಪಾಲ್ತಾಡಿ ರಾಮಕೃಷ್ಣಾಚಾರ್ ಅವರ ಬರಹವು ಯಕ್ಷಗಾನದ ಇತಿಹಾಸವನ್ನು ಮೇಲಿಂದ ಮೇಲೆ ನೋಡಿದಂತೆ ಇದ್ದು ಯಾವುದೇ ನಿಲುವನ್ನು ಸ್ಪಷ್ಟವಾಗಿ ಬಿಂಬಿಸುತ್ತಿಲ್ಲ. ಅಚ್ಚರಿಯ ಸಂಗತಿಯೆಂದರೆ ಸಮಾಜದ ವಿವಿಧ ಶ್ರೇಣಿಯ ಎಲ್ಲ ಜಾತಿಗಳ ಮಂದಿಗೂ ಒಳಗೊಳಗೆ `ಬ್ರಾಹ್ಮಣ'ರಾಗಬೇಕೆಂಬ ಉತ್ಸಾಹ ತೀವ್ರವಾಗಿರುತ್ತದೆ.

ಇಂತ ಉತ್ಸಾಹದಲ್ಲಿ ಬ್ರಾಹ್ಮಣರಂತೆ ಜ್ಞಾನ ಸಂಪಾದಿಸಬೇಕು ಎಂಬ ಭಾವಕ್ಕಿಂತ `ಕೆಳಜಾತಿಯವರನ್ನು ತುಳಿಯುವ ಥ್ರಿಲ್' ಅನುಭವಿಸುವ ಆತುರವಿರುವುದೇ ಹೆಚ್ಚು. ಹಾಗಾಗಿ ಕೆಲವು ಜಾತಿಗಳು ಇದ್ದಕ್ಕಿದ್ದಂತೆ ಬ್ರಾಹ್ಮಣರಾಗ ಬಯಸುವ ವಿದ್ಯಮಾನವನ್ನು ನಾವು ಗಮನಿಸುತ್ತಲೇ ಇದ್ದೇವೆ.

ಇಂಥ ಜಾತಿಗಳ ಮಂದಿ ತಮ್ಮ ಜಾತಿ ಸಂಘವನ್ನು ಕಟ್ಟಿಕೊಂಡು ಪ್ರಜಾಪ್ರಭುತ್ವದಡಿಯ ಸಾಂಸ್ಕೃತಿಕ ಸಂಸ್ಥೆಗಳಿಗೂ ತಮ್ಮ ಜಾತಿಯ ಜನವೇ ಅಧ್ಯಕ್ಷರಾಗಬೇಕೆಂದು ಒತ್ತಾಯಿಸಿದ್ದೂ ಇದೆ. ಹಾಗಾಗಿ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಜಾತಿವಾದಿಗಳೇ ಆಗಿರುವುದರಿಂದ, ಆತ್ಮಸಾಕ್ಷಿಯನ್ನು ಕಳೆದುಕೊಂಡು ಕಲೆಯೊಳಗಿನ ಜಾತಿ ವಿಷಯ ಮಾತನಾಡುವಾಗ ಹಿಂದೆ ಮುಂದೆ ನೋಡಬೇಕಾಗುತ್ತದೆ.

ವಿದ್ವಾಂಸರು ಉಳಿಯಬೇಕಾದರೆ ಜಾನಪದ ಉಳಿಯಬೇಕು! ಜಾನಪದ ಉಳಿಯಬೇಕಾದರೆ ಜಾತಿ ಉಳಿಯಬೇಕು!! ಕಲೆ ಮಾತ್ರವಲ್ಲ, ಸಾಹಿತ್ಯಿಕ-ಸಾಂಸ್ಕೃತಿಕ ಕ್ಷೇತ್ರಗಳಲ್ಲಿಯೂ ಜಾತಿಯ ವಿಷಯದಲ್ಲಿ ಯಾರೂ ಯಾವುದೇ ಗೊಂದಲವಿಲ್ಲದ ರೀತಿಯಲ್ಲಿ ವ್ಯವಹರಿಸುತ್ತಿರುವುದು ವಿಪರ್ಯಾಸ. ಜ್ಞಾನಪೀಠ ಪ್ರಶಸ್ತಿ ಪಡೆದವರು ಕೂಡಾ ಬೆಳಿಗ್ಗೆ ತಮ್ಮ ಜಾತಿಗಳ ಧಾರ್ಮಿಕ ಸಭೆಗೆ ಹಾಜರಾಗಿ ಸಂಜೆ ಜಾನಪದ ಸಾಹಿತ್ಯದ ಬಗ್ಗೆ ಮಾತನಾಡುತ್ತಾರೆ.

ಹಾಗಾಗಿ ಜಾತಿಯ ಬಗ್ಗೆ ಮಾತನಾಡುವುದು ಮತ್ತು ಜಾತಿ ವಿರೋಧಿಯಂತೆ ತೋರ್ಪಡಿಸಿಕೊಳ್ಳುವುದು ಕಲೆಯ ವಿಷಯದಲ್ಲಿಯೂ ಕಲೇತರ ವಿಷಯದಲ್ಲಿಯೂ ಬರೀ `ಲೊಳಲೊಟ್ಟೆ'ಯೇ ಆಗಿಬಿಡುವ ಅಪಾಯವಿದೆ.

ಯಕ್ಷಗಾನದಲ್ಲಿ ಯಾವ ಯಾವ ಜಾತಿಗಳ ಮಂದಿ ಹೇಗೆ ತೊಡಗಿಸಿಕೊಂಡಿದ್ದಾರೆ ಎಂದು `ಐತಿಹಾಸಿಕ' ಲೆಕ್ಕ ತೆಗೆಯುವುದಕ್ಕಿಂತ ಕೊರಗ ಸಮುದಾಯಗಳಂಥ ಮಂದಿಯನ್ನು ಈ ಕಲೆಯೊಳಗೆ ಸೇರಿಸಿಕೊಳ್ಳುವ ಬಗ್ಗೆ ಕ್ರಿಯಾಶೀಲ ಪ್ರಯತ್ನ `ವರ್ತಮಾನ'ದಲ್ಲಿ ನಡೆಯುವುದು ಅಗತ್ಯ.

comments powered by Disqus
Top