ಜಾತಿ ಸಂವಾದ - ಅಭಿಪ್ರಾಯ 1

ನಗರ ಸೇರಿ ಬೆಳೆದ ಜಾತಿ
ಡಾ. ಸಿ.ಜಿ. ಲಕ್ಷ್ಮೀಪತಿ,ಸಮಾಜಶಾಸ್ತ್ರಜ್ಞ

ಜಾತಿ ಪದ್ದತಿಯು ನಗರಪ್ರದೇಶಗಳಲ್ಲಿ ಅಸ್ತಿತ್ವದಲ್ಲಿರುವ ಬಗೆಯನ್ನು ಅರ್ಥಮಾಡಿಕೊಳ್ಳುವುದು ಕುತೂಹಲಕಾರಿಯಾದುದು. ಆಧುನಿಕೋತ್ತರ ಕಾಲಘಟ್ಟದಲ್ಲಿ ಭಾರತದ ಜಾತಿವ್ಯವಸ್ಥೆಯನ್ನು ನಿರ್ವಚಿಸಿಕೊಳ್ಳದ ಹೊರತು ನಗರಗಳ ಜಾತಿಸ್ವರೂಪವನ್ನು ಗ್ರಹಿಸುವುದು ಕಷ್ಟ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕೈಗಾರಿಕೀಕರಣ ಮತ್ತು ನಗರೀಕರಣ ಹಾಗೆಯೇ 1990 ರ ನಂತರದ ಜಾಗತೀಕರಣ ಮತ್ತು ಖಾಸಗೀಕರಣ ಅಪಾರ ಸಾಮಾಜಿಕ ಬದಲಾವಣೆಯನ್ನು ಉಂಟುಮಾಡಿದೆ. ಭಾರತದ ಭೌಗೋಳಿಕ ಹಾಗೂ ಸಾಂಸ್ಕೃತಿಕ ವೈವಿಧ್ಯತೆ ಜಾತಿಯ ಸ್ವರೂಪವನ್ನು ಮತ್ತಷ್ಟು ಸಂಕೀರ್ಣ ಗೊಳಿಸಿದೆ. ಭಾರತದಲ್ಲಿ ಜಾತಿಯ ತಾರತಮ್ಯಗಳನ್ನು ಹೋಗಲಾಡಿಸಿ ವಿಸ್ತಾರವಾದ ಏಕರೂಪಿಯಾದ ಧರ್ಮದ ಅಡಿಗೆ ಸಮಾಜವನ್ನು ತರುವ ಸಾಧ್ಯತೆ ಬೌದ್ಧ, ಇಸ್ಲಾಮ್ ಹಾಗೂ ಕ್ರೈಸ್ತ ಧರ್ಮಗಳ ಪ್ರವೇಶದ ಸಂದರ್ಭದಲ್ಲಿ ಇದ್ದವು. ಆದರೆ ಬಹುತೇಕ ನಗರ ಹಿನ್ನೆಲೆಯಲ್ಲಿ ಉಳಿದು ಬೆಳೆದ ಈ ಧರ್ಮಗಳು ಜಾತಿ ವ್ಯವಸ್ಥೆಯನ್ನೇ ತನ್ನದಾಗಿಸಿಕೊಂಡು ತಾನೇ ಬಹುರೂಪಿ ಸ್ವರೂಪವನ್ನು ಪಡೆದುಕೊಂಡಿವೆ.
ಜಾತಿಯನ್ನು ಕುರಿತು ಎಲ್ಲ ಪ್ರದೇಶಗಳಿಗೂ ಅಂದರೆ ನಗರ, ಗ್ರಾಮ, ಪಟ್ಟಣ ಪ್ರದೇಶಗಳಿಗೆ ಅನ್ವಯವಾಗುವ ಸಾಮಾನ್ಯವಾದ ಒಂದು ವಿವರಣೆಯನ್ನು ನೀಡಲು ಸಾಧ್ಯವಿಲ್ಲ. ಅದರಲ್ಲೂ ಭಾರತದಲ್ಲಿ ನಗರ ಗ್ರಾಮಗಳ ಬದುಕಿನ ಕ್ರಮದಲ್ಲಿ ತೀವ್ರವಾದ ಅಂತರ ಬೆಳೆದಿದೆ. ನಗರಗಳ ಸಾಮಾಜಿಕ ಬದುಕನ್ನು ರೂಪಿಸಿರುವ ಪ್ರಮುಖವಾದ ಅಂಶಗಳು ಕೈಗಾರಿಕೆ, ವ್ಯಾಪಾರ, ಶಿಕ್ಷಣ ವ್ಯವಸ್ಥೆಗಳಾಗಿವೆ. ನಗರಗಳು, ಆಡಳಿತ ಕೇಂದ್ರಗಳು, ಮನರಂಜನಾ ತಾಣಗಳು ಆಗಿ ವಿವರಿಸಿಕೊಂಡರೆ ಸಾಲದು, ಭಾರತದ ಸಂದರ್ಭದಲ್ಲಿ ಇವೆಲ್ಲವನ್ನೂ ಮೀರಿ ಅವು ಜಾತಿಯ ತೇರುಗಳನ್ನು ಹೊತ್ತು ಸಾಗುತ್ತಿವೆ.
ನಗರವೊಂದು ಅದು ಏಕಕಾಲದಲ್ಲಿ ರೂಪಿತವಾದ ಜಗತ್ತೇನೂ ಅಲ್ಲ. ಹಲವಾರು ಪೀಳಿಗೆಗಳಿಂದ ಅಲ್ಲಿಯೇ ನೆಲೆಸಿದ್ದು, ಗ್ರಾಮ, ಬುಡಕಟ್ಟು ಪ್ರದೇಶಗಳು ಸೇರಿಹೋದ ಈ ನಗರಗಳಿಗೆ ಸಣ್ಣ ಪಟ್ಟಣಗಳಿಂದ ವಲಸೆ ಬಂದ ಲಕ್ಷಾಂತರ ಜನ ಇದರಲ್ಲಿ ಸೇರಿಹೋಗಿದ್ದಾರೆ. ಇದರಿಂದಾಗಿ ಜಾತಿಯು ಜನರು ವಾಸಿಸುವ ಪ್ರದೇಶ, ನಿರ್ದಿಷ್ಟ ಸಂಧರ್ಭ, ವ್ಯಕ್ತಿತ್ವ ಆಧರಿಸಿರುತ್ತದೆ. ಮೇಲಿನ ಎಲ್ಲ ಅಂಶಗಳನ್ನು ಪರಿಗಣಿಸಿ ನಗರ ಪ್ರದೇಶಗಳಲ್ಲಿ ಕಂಡುಬರುವ ಜಾತಿಯ ಸ್ವರೂಪವನ್ನು ಎರಡು ರೀತಿಯಲ್ಲಿ ಗುರುತಿಸಬಹುದು. ಮೊದಲನೆಯದು ಮೇಲ್ನೋಟಕ್ಕೆ ಕಂಡು ಬರುವ ಜಾತಿ ವ್ಯವಸ್ಥೆ. ಮತ್ತೊಂದು  ಅಮೂರ್ತ ಸ್ವರೂಪದಲ್ಲಿ ಕಂಡುಬರುವ ರೀತಿ. ಮೊದಲನೆಯದಾಗಿ ಮೂರ್ತ ಸ್ವರೂಪದಲ್ಲಿ ಕಂಡುಬರುವ ಜಾತಿ ವ್ಯವಸ್ಥೆಯನ್ನು ಗಮನಿಸಬಹುದು.
ಸಸ್ಯಾಹಾರ ಮತ್ತು ಮಾಂಸಾಹಾರದ ನೆವದಲ್ಲಿ ಮನೆ, ಅಂಗಡಿ ಮಳಿಗೆ ನೀಡದಿರುವುದು, ನಿವೇಶನ, ಮನೆ ಮಾರಾಟವನ್ನು ಕೊಳ್ಳುವ ಮಾರಾಟ ಮಾಡದಿರುವ ನಿರ್ಧಾರ ಕೈಗೊಳ್ಳುವುದು, ಶಾಲಾ ಕಾಲೇಜುಗಳಲ್ಲಿ ತಮ್ಮ ಜಾತಿಯ, ದೇವರ, ಧರ್ಮ ಗುರುಗಳ ಭಾವಚಿತ್ರಗಳನ್ನು ಪ್ರದರ್ಶಿಸುವುದು ಶಾಲಾ ಸೀಟುಗಳನ್ನು ಹಂಚುವಾಗ ಜಾತಿಯನ್ನು ಆಧರಿಸುವುದು, ಮಠ, ಸಂಘ, ಶಾಲೆಗಳಿಗೆ ಜಾತಿಯನ್ನು ಪ್ರತಿನಿಧಿಸುವ ಸಾಧ್ಯತೆ ಇರುವ ಹೆಸರುಗಳನ್ನಿಟ್ಟುಕೊಳ್ಳುವುದು, ಹೋಟೆಲ್‌ಗಳಿಗೆ ಉಡುಪಿ ಬ್ರಾಹ್ಮಣರ ಹೋಟೆಲ್, ಅಡಿಗಾಸ್, ಅಯ್ಯಂಗಾರ್ಸ್‌ ಬೇಕರಿ, ಕಾಮತ್ ವೀರಶೈವ ಖಾನಾವಳಿ ಗೌಡರ ಮುದ್ದೆಮನೆ ಮುಂತಾದ ಹೆಸರುಗಳನ್ನಿಟ್ಟು ಗಿರಾಕಿಗಳನ್ನು ಆಕರ್ಷಿಸುವುದು, ಬೆಂಗಳೂರಿನ ಮಟ್ಟಿಗೆ ಹೇಳುವುದಾದರೆ ಹೇರ್ ಸಲೂನ್, ವಾಶಿಂಗ್ ಲಾಂಡ್ರಿಗಳು, ಲೋಹಕೆಲಸಿಗರು ಶೇಕಡಾ 95 ರಷ್ಟು ಒಂದೇ ಜಾತಿಗೆ ಸೇರಿರುವುದು ಗೊತ್ತಿರುವ ವಿಚಾರ.
ಹಾಗೆಯೇ ವ್ಯಾಪಾರಿ ಮಳಿಗೆಗಳು ನಿರ್ದಿಷ್ಟ ವಸ್ತುಗಳನ್ನು ಮಾರುವ ಮತ್ತು ಕೊಳ್ಳುವ ಗುಂಪುಗಳು, ಸಿನೆಮಾ, ಮುದ್ರಣ ಮಾಧ್ಯಮ, ಮಾಹಿತಿ ತಂತ್ರಜ್ಞಾನ ಆಯಾ ಜಾತಿಯ ಒಡೆತನಕ್ಕೆ ಒಳಪಟ್ಟಿರುತ್ತವೆಯೋ ಅದರ ಆಧಾರದ ಮೇಲೆ ಆ ಜಾತಿಯ ಜನರನ್ನು ಕಾಣಬಹುದು. ಅರ್ಚಕರು, ಪುರೋಹಿತರು, ಮದುವೆ ದಲ್ಲಾಳಿಗಳು, ಜ್ಯೋತಿಷಿಗಳು ಕೆಲವು ಅಪವಾದಗಳನ್ನೊಳಪಡಿಸಿ ನಿರ್ದಿಷ್ಟ ಜಾತಿ ಗುಂಪುಗಳಿಗೆ ಸೇರಿರುತ್ತಾರೆ ಎನ್ನಲು ಅಡ್ಡಿ ಇಲ್ಲ. ಜಾತಿ ಸೂಚಕಗಳಾದ ಮುದ್ರೆ, ವಿಭೂತಿ ಪಟ್ಟೆ, ನಾಮ ಶಿವದಾರ, ಜನಿವಾರ ಇತ್ಯಾದಿ, ಹೆಸರಿನ ಜೊತೆಗೆ ತಳುಕು ಹಾಕಿಕೊಂಡಿರುವ ರಾವ್, ಶಾಸ್ತ್ರಿ, ಶರ್ಮ ಭಟ್ಟ, ಅಡಿಗ, ಅಯ್ಯಂಗಾರ್, ಅಯ್ಯರ್, ಗೌಡ, ರೆಡ್ಡಿ, ಮಠ ಮತ್ತು ಪ್ರಕೃತಿ ಮತ್ತು ಸ್ಥಳೀಯ ದೇವತೆಗಳ ಹೆಸರಿರುವ ಜನರ ಜಾತಿಯನ್ನು ಮೇಲ್ನೋಟಕ್ಕೆ ಗುರುತಿಸಬಹುದು.
ಹಾಗಾಗಿ ನಗರಪ್ರದೇಶದಲ್ಲಿ ಮೂರ್ತ ಸ್ವರೂಪದಲ್ಲಿ ಕಾಣಬರುವ ಜಾತಿ ಪದ್ದತಿಯನ್ನು ಗುರುತಿಸಲು ಸಾಮಾನ್ಯ ಜ್ಞಾನವಿರುವ ಯಾರಿಗೂ ಕಷ್ಟವಿಲ್ಲ. ಆದರೆ ಸಮಸ್ಯೆ ಇರುವುದು ಅಮೂರ್ತ ಸ್ವರೂಪದಲ್ಲಿ ಕಂಡುಬರುವ ಜಾತಿ. ನಗರ ಪ್ರದೇಶದಲ್ಲಿರುವ ಜಾತಿಯು ವರ್ಗದ ಸ್ವರೂಪವನ್ನು ತಾಳುತ್ತದೆ. ಸಂವಿಧಾನ ಮತ್ತು ಪ್ರಜಾಸತ್ತಾತ್ಮಕ ವ್ಯವಸ್ಥೆಯಿಂದ ವಿವಾಹ ವೃತ್ತಿ, ಸಾಮಾಜಿಕ ಸಂಪರ್ಕ, ಆಹಾರ, ಮತ್ತು  ಹೊರಗಿಡುವಿಕೆಯ ಮೇಲಿನ ನಿರ್ಬಂಧಗಳು ಸಡಿಲವಾಗಿವೆ, ಅಂತಹ ಸಂದರ್ಭದಲ್ಲಿ ಮೇಲೆ ನೀಡಿರುವ ಮೂರ್ತ ಸ್ವರೂಪದ ಜಾತಿಯು ಪ್ರಕಟಗೊಳ್ಳುವುದಿಲ್ಲ. ಅಂತಹ ಸಂದರ್ಭದಲ್ಲಿ ಜಾತಿಯನ್ನು ಕುರಿತ ವಿವರಣೆಯು ಅಮೂರ್ತವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಜಾತಿಯನ್ನು ಕಂಡಂತೆ ವಿವರಿಸಬಹುದು.
ಜಾತಿಯೆನ್ನುವುದು ವ್ಯಕ್ತಿಯೊಬ್ಬನು/ಳು ತಾನು ಹುಟ್ಟಿದ ಕುಟುಂಬ, ಜಾತಿಯ ಸಾಂಸ್ಕೃತಿಕ ಸಾಮಾಜೀಕರಣದಿಂದ ರೂಪುಗೊಂಡ ಅವನ/ಳ ಭಾಷೆ, ಆಂಗಿಕ ಭಾಷೆ, ಮೌಲ್ಯ, ಗ್ರಹಿಕೆಯ ಸಾಮರ್ಥ್ಯ, ಇತರರೊಡನೆ ನಡೆಸುವ ಸಂವಹನ, ತನ್ನದಲ್ಲದ ಆಹಾರ, ಉಡುಗೆ-ತೊಡುಗೆಗಳ ಬಗೆಗೆ ವ್ಯಕ್ತಪಡಿಸುವ ಅಭಿಪ್ರಾಯ, ಮೇಲರಿಮೆ-ಕೀಳರಿಮೆ, ಅಧೀನತೆ-ಅಧಿಕಾರ, ಸೃಜನ ಶೀಲತೆ ಮತ್ತು ಜೀವನ ಶೈಲಿ, ಸಮಾಜದ ಭವಿಷ್ಯದ ನಕಾಶೆ, ಆಶಯ-ವಿಚಾರ ಮೊದಲಾದವುಗಳ ನಡುವೆ ಏರ್ಪಡುವ ಸಾವಯವ ಸಂಬಂಧದಿಂದ ರೂಪುಗೊಳ್ಳುವ ವ್ಯಕ್ತಿತ್ವ ಮತ್ತು ಅಂತಹ ವ್ಯಕ್ತಿತ್ವದಿಂದ ಹೊರಹೊಮ್ಮುವ ಅಭಿವ್ಯಕ್ತಿಯೇ ಜಾತಿಯಾಗಿದೆ. ಪ್ರತಿ ವ್ಯಕ್ತಿಯೂ ಈ ಬಗೆಯ ಅಭಿವ್ಯಕ್ತಿಯನ್ನು ಪುನರುತ್ಪಾದಿಸುತ್ತಿರುತ್ತಾನೆ. ಈ ಮೂಲಕ ಜಾತಿಯ ಅರಿವು ದೃಢಗೊಳ್ಳುತ್ತದೆ.
ಅರಿವು ಮತ್ತು ಅಭಿವ್ಯಕ್ತಿ ಸೂಕ್ಷ್ಮವಾಗಿ ತನ್ನ ಜಾತಿಯ ಸಾಂಸ್ಕೃತಿಕ ಹಾಗು ಸಾಮಾಜಿಕ ತರಂಗಗಳನ್ನು ಹೆಣೆದು ಅಂತಿಮವಾಗಿ ಜಾತಿಯ ಜಾಲವಾಗಿ ಪರಿಣಮಿಸುತ್ತದೆ. ಇಲ್ಲಿ ಭಾಷೆ, ಸಂಕೇತ, ಆಂಗಿಕ ಭಾಷೆ, ಸಂಪರ್ಕ ಮತ್ತು ಸಂವಹನ ಪ್ರಮುಖ ಪಾತ್ರ ವಹಿಸುತ್ತದೆ. ಭಾಷೆಯಲ್ಲಿ ಹೊರಡುವ ಧ್ವನಿ, ವ್ಯಾಕರಣ, ಪದಸಂಪತ್ತು, ನಿಚ್ಚಳವಾಗಿ ಜಾತಿಯನ್ನು ಅಭಿವ್ಯಕ್ತಿಸುತ್ತವೆ. ಜಾತಿಯ ಸಂಕೇತವಾದ ಅಚರಣೆಗಳು ಮಾಹಿತಿ ತಂತ್ರಜ್ಞಾನ ಕಂಪನಿಗಳ ಅಧಿಕೃತ ಭೋಜನ ಕೂಟಗಳಲ್ಲಿ ಕೆಲವೊಮ್ಮೆ ಸಸ್ಯಾಹಾರವನ್ನು ಕಡ್ಡಾಯ ಮಾಡಿ ಮಾಂಸಾಹಾರವನ್ನು ನಿಷೇಧಿಸಲಾಗುತ್ತದೆ.
ಹಾಗೆಯೇ ಕಣ್ಣಿನ ನಡುವಿನ ಸಂಪರ್ಕ, ಹೆಗಲ ಮೇಲೆ ಕೈ ಹಾಕಿ ಸ್ಪರ್ಷಿಸುವ, ಮೆಚ್ಚುವ ಶೈಲಿಯಲ್ಲಿ ಬೆನ್ನು ತಟ್ಟುವ, ದೇಹವನ್ನು ಸಂಕೋಚದಿಂದ ಕುಬ್ಜಗೊಳಿಸಿಕೊಳ್ಳುವ ರೀತಿಯ ಆಂಗಿಕ ಭಾಷೆಯು ಸೂಕ್ಷ್ಮವಾದ ಜಾತಿಯ ಅಭಿವ್ಯಕ್ತಿಯಾಗಿದೆ. ಹಾಗೆಯೇ ಮೇಲಿನ ಅಂಶಗಳೆಲ್ಲವೂ ಸಂಪರ್ಕ ಮತ್ತು ಸಂವಹನದ ರೂಪ ತಾಳಿ, ಜಾತಿಯ ಸಾಂಪ್ರದಾಯಿಕ ಬಾಹ್ಯ ಸಂಕೇತಗಳನ್ನು ತ್ಯಜಿಸಿದ್ದರೂ ಕೂಡ ಜಾತಿಯೇ ವ್ಯಕ್ತಿತ್ವವಾಗಿಬಿಡುತ್ತದೆ. ಹೀಗಾಗಿ ಜಾತಿಯು ತನ್ನ ಜನರಲ್ಲಿ ಒಂದು ರೀತಿಯ ಸಾಮಾಜಿಕ ಕೆಮಿಸ್ಟ್ರಿಯನ್ನುಂಟುಮಾಡುತ್ತದೆ. ಆದುದರಿಂದಲೇ ನಗರ ಪ್ರದೇಶಲ್ಲಿರುವ ಕ್ಯಾಸ್ಟ್ ಕೆಮಿಸ್ಟ್ರಿಯನ್ನು ಅರ್ಥೈಸಲು ಮತ್ತಷ್ಟು ಸೂಕ್ಷ್ಮವಾದ ಅಧ್ಯಯನಗಳು ಅವಶ್ಯಕ.

comments powered by Disqus
Top