ಜಾತಿ ಸಂವಾದ - ಅಭಿಪ್ರಾಯ 2

ಕ್ರಾಂತಿ ಎಂಬ ಭ್ರಾಂತಿ
(ಮೈಸೂರಿನ ಈ ಪತ್ರದ ಲೇಖಕಿಯ ಕೋರಿಕೆ ಮೇರೆಗೆ ಹೆಸರು ಗೌಪ್ಯವಾಗಿ ಇಡಲಾಗಿದೆ)

ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ನಾನು, ಹಳ್ಳಿಗಾಡಿನಲ್ಲಿ ದಲಿತರನ್ನು ಕಾಣುತ್ತಿದ್ದ, ಶೋಷಿಸುತ್ತಿದ್ದ ಬಗೆಯನ್ನು ಬಾಲ್ಯದಿಂದಲೇ ತೀರ ಹತ್ತಿರದಿಂದ ಬಹುಸೂಕ್ಷ್ಮವಾಗಿ ಅರಿತಿದ್ದೆ. ಮುಂದೆ ನನಗೆ ಹೆಚ್ಚು ಆಕರ್ಷಿಸಿದ್ದು ಬುದ್ಧ, ಬಸವ, ಲೋಹಿಯಾ, ಮಾರ್ಕ್ಸ್, ಅಂಬೇಡ್ಕರ್ ಮೊದಲಾದವರ ವಿಚಾರಧಾರೆಗಳು. ಇವರು ಜಾತಿವಿನಾಶ ಅಂತರ್ಜಾತಿ ವಿವಾಹಗಳಿಂದ ಸಾಧ್ಯವೆಂದಿರುವುದು ಯೌವ್ವನದ ಹಂತದಲ್ಲಿ ನನ್ನ ಮನಸ್ಸನ್ನು ನಾಟಿದ್ದು ಸುಳ್ಳಲ್ಲ. ಕನ್ನಡ ಎಂ.ಎ. ಪದವಿಗೆ ಸೇರಿದಾಗ ದಲಿತ-ಬಂಡಾಯ ಸಾಹಿತ್ಯದ ಅಬ್ಬರಕ್ಕೆ ಮನಸೋತು, ಕವಿತೆ ಗೀಚಿ ಕ್ರಾಂತಿ, ಕವಿ, ಸಮಾನತೆ, ಹೋರಾಟ.... ಎಂಬ ಭ್ರಾಂತಿಗೆ ಒಳಗಾಗಿದ್ದೆ.
ನಂತರ ನಾನೇ ಓದಿದ್ದ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಪಡೆದೆ. ಆದರೆ ದಲಿತರೊಬ್ಬರನ್ನು ಬಾಳ ಸಂಗಾತಿಯಾಗಿ ಆಯ್ಕೆ ಮಾಡಿಕೊಂಡಿದ್ದ ಕಾರಣಕ್ಕಾಗಿ ನನ್ನನ್ನು ಕೆಲಸದಿಂದ ತೆಗೆದುಹಾಕಿದರು. ಅದರ ನಂತರ ಬೇರೆ ಊರಿಗೆ ಹೋಗಿ ಮೂಲಜಾತಿಯಲ್ಲಿಯೇ ಗುರುತಿಸಿಕೊಂಡು ಪ್ರತಿಭೆ ಮತ್ತು ನಾನು ಗಳಿಸಿದ ಅಂಕಗಳ ಆಧಾರದ ಮೇಲೆ ಕೆಲಸ ಪಡೆದೆ. ಅಲ್ಲಿಯೂ ನನ್ನ ವೈಯಕ್ತಿಕ ಬದುಕು ಗೊತ್ತಾದ ಕೆಲದಿನಗಳಲ್ಲಿಯೇ ಕೆಲಸವನ್ನು ಕಳೆದುಕೊಂಡೆ. ಇನ್ನು ಕೆಲ ಖಾಸಗಿ ಸಂಸ್ಥೆಯಲ್ಲಿಯೂ ಇದೇ ಕಾರಣಕ್ಕಾಗಿ ಅವಕಾಶದಿಂದ ವಂಚಿತಳಾದೆ.
ಸರ್ಕಾರಿ ಕೆಲಸ ಸಿಗದಿದ್ದರೂ ಅಕ್ಷರಸ್ಥರು, ಸುಶಿಕ್ಷಿತರೂ ಎಂಬ ಹಣೆಪಟ್ಟಿ ಹೊತ್ತವರು “ಇನ್ನೇನಪ್ಪ ಗೌರ್ಮೆಂಟ್ ಬ್ರಾಹ್ಮಣತಿ; ನಿನಗೆ ಕೆಲಸ ಗ್ಯಾರಂಟಿ” ಎಂದು ಕುಟುಕುತ್ತಿದ್ದಾಗ ನೋವಾಗುತ್ತಿತ್ತು. ಇನ್ನು ಕೆಲವರು `ನೀನು ಏನು ಪಾಪ ಮಾಡಿದ್ದಿ? ' ಎಂದಾಗ ಪುನರ್ಜನ್ಮದ ಬಗ್ಗೆ ತಲೆಕೆಡಿಸಿ ಕೊಂಡಿದ್ದೇನೆ. “ಬ್ರಾಹ್ಮಣತಿ-ಹೊಲೆಯ ಓ.....ಹೋ.... ಎಂದು ಕೆಲವರು ತಲೆಕೆಡಿಸಿಕೊಂಡು, ಹೇಗೆ ಬದುಕೋದು? ಎಷ್ಟು ದಿನ? ನಾವೂ ನೋಡ್ತೀವಿ” ಎಂದಾಗ ಕೇಳಿಯೂ ಕೇಳದ ಹಾಗೆ ನನ್ನ ಬದುಕನ್ನು ಮತ್ತಷ್ಟು ಗಟ್ಟಿಮಾಡಿಕೊಂಡಿದ್ದೇನೆ. ಕೆಲವರು ನೋಡಿದಾಗಲೆಲ್ಲ ಮೂತಿ ತಿರುವಿದನ್ನು, ಕನಿಕರದಿಂದ ನನ್ನ ನೋಡಿದ್ದನ್ನು, ಪಿಸುಗುಟ್ಟಿ ಕಿಸಕ್ಕನೆ ನಕ್ಕಿದನ್ನು ಕಂಡು ಕಾಣದ ಹಾಗೆ ಮುಂದೆ ಸಾಗಿದ್ದೇನೆ.
ಇವೆಲ್ಲ ಜಾತಿಕಾರಣದಿಂದಾದ ಶೋಷಣೆ, ತಾರತಮ್ಯ ಕ್ರೌರ್ಯ ಅಂಥ ಹೇಳಬಹುದಾದರೂ ಕುಳಿತು ಚಿಂತಿಸಿದಾಗ ಇವೆಲ್ಲ ನನಗೆ ಅತ್ಯುನ್ನತ ಅನುಭವಗಳನ್ನು ಕೊಟ್ಟು ನನ್ನ ಆಲೋಚನಾ ಸಾಮರ್ಥ್ಯವನ್ನು ಹೆಚ್ಚಿಸಿದೆ ಹಾಗೂ ಬದುಕನ್ನು ಸೂಕ್ಷ್ಮವಾಗಿ ಗ್ರಹಿಸುವ ಶಕ್ತಿಯನ್ನು ಕರುಣಿಸಿದೆ. ನನ್ನ ಯೌವ್ವನದ ಕ್ರಾಂತಿ ಎಂಬ ಭ್ರಾಂತಿ ಕಳಚಿ ವಾಸ್ತವ ಸ್ಥಿತಿ ಅರಿವಾಗಿದೆ. ಕಹಿಯನ್ನು ಸಹಿಸುವ ಶಕ್ತಿ ಗಳಿಸಿದಂತೆ ಜೀವನ ಮತ್ತಷ್ಟು ಬಲಗೊಳ್ಳುತ್ತದೆ ಅಲ್ಲವೆ?

comments powered by Disqus
Top