ಜಾತಿ ಸಂವಾದ - ಅಭಿಪ್ರಾಯ 2

ಜನಗಳಿದ್ದಷ್ಟು ಧರ್ಮಗಳಿರಲಿ
ಕೆ. ಜಿ. ಭದ್ರಣ್ಣವರ, ಮುದ್ದೇಬಿಹಾಳ

ನಾನು ಹುಟ್ಟಿದ್ದು ಲಿಂಗಾಯಿತ ಕುಟುಂಬದಲ್ಲಿಯಾದರೂ, ಯಾವುದೇ ಜಾತಿಯ ಜನರನ್ನು ಕೀಳಾಗಿ ಅಥವಾ ಮೇಲೆಂದು ಕಾಣುವ ಪ್ರವೃತ್ತಿ ಬಾಲ್ಯದಿಂದ ನನಗೆ ಬರಲಿಲ್ಲ. ಮುಸಲ್ಮಾನ, ಹರಿಜನ, ಚಮ್ಮಾರ .... ವಿವಿಧ ಜನಾಂಗದವರು, ಮದುವೆಗಳಿಗೆ ನನ್ನನ್ನು ಕರೆಯುತ್ತಾರೆ. ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತೇನೆ. ಜನರು ಸುಶಿಕ್ಷಿತರಾಗುತ್ತಿದ್ದಾರೆ. ಧರ್ಮ, ಜಾತಿ ಆಚರಣೆಗಳ ಸೂಕ್ಷ್ಮತೆಗಳ ಬಗ್ಗೆ ಹೆಚ್ಚು ಜಾಗರೂಕರಾಗುತ್ತಿದ್ದಾರೆ. ಒಂದು ಕಡೆಗೆ ಮಾಂಸಾಹಾರ, ಬೇರೆ ಕಡೆಗೆ ಸಸ್ಯಾಹಾರ ಊಟದ ವ್ಯವಸ್ಥೆ ಮಾಡುತ್ತಾರೆ.
ಜನರು ಅವರವರ ಇಷ್ಟದ ಭೋಜನ ಮಾಡುತ್ತಾರೆ. ನನ್ನ ಮನೆಯ ಹತ್ತಿರ ವಾಸಿಸುವ ಮುಸಲ್ಮಾನ ಕುಟುಂಬದವರೆಲ್ಲ ಸುಶಿಕ್ಷಿತರು. ತಮ್ಮ ಮನೆಯಲ್ಲಿ ಜರಗುವ ಮದುವೆ ಸಮಾರಂಭಗಳಲ್ಲಿ, ಕೇವಲ, ಉತ್ತಮ ದರ್ಜೆಯ ಸಸ್ಯಾಹಾರಿ ಭೋಜನವನ್ನು ಮಾಡಿಸುತ್ತಾರೆ.
`ನಿಮ್ಮ ಜನಾಂಗದವರು ಇಷ್ಟ ಪಡುವ ಮಾಂಸದ ಅಡಿಗೆಯನ್ನೇಕೆ ಮಾಡಿಸಲಿಲ್ಲ?, ಇದರಿಂದ, ನಿಮ್ಮ ಧಾರ್ಮಿಕ ಜನರ ಅಪೇಕ್ಷೆಗಳಿಗೆ ವ್ಯತ್ಯಯವಾಗುವದೆಂದು ನಿಮಗೆ,ಅನಿಸುವುದಿಲ್ಲವೇ?' ಎಂದು ಅವರನ್ನು ಕೇಳಿದಾಗ, `ಮುಸಲ್ಮಾನರು ವರ್ಷದ ಎಲ್ಲಾ ದಿನಗಳಲ್ಲಿ, ಹೆಚ್ಚಾಗಿ ಸೇವಿಸುವುದು ಸಸ್ಯಾಹಾರವನ್ನೇ!, ಹಬ್ಬ, ಮುಂಜಿ .... ಮುಂತಾದ ಕೆಲವೇ ದಿನಗಳಲ್ಲಿ ಮಾತ್ರ ಮಾಂಸದ ಭೋಜನವನ್ನು ಮಾಡುತ್ತಾರೆ. ಒಂದೇ ತರದ ಭೋಜನವನ್ನು ತಯಾರಿಸುವುದರಿಂದ, ಏಕತೆಯ ಸಾಮರಸ್ಯ, ಸೌಹಾರ್ದತೆ ಕಾಯ್ದುಕೊಂಡಂತಾಗುತ್ತದೆ'. ಎಂದು ಉತ್ತರಿಸಿದರು. ಇಂಥಹವರೂ ನಮ್ಮಂದಿಗಿದ್ದಾರೆ.
ಇನ್ನು, ಅವರ ಆಚರಣೆಗಳ ಬಗ್ಗೆ ಹೇಳುವುದಾದರೆ, ವಧುವನ್ನು ವೇದಿಕೆಯ ಮೇಲೆ ವರನ ಜೊತೆ ಕೂಡ್ರಿಸುವುದಿಲ್ಲ. ಇದು ಸರಿ ಅಥವಾ ತಪ್ಪು ಎಂಬ ವಿಮರ್ಶೆಯ ಗೊಡವೆಗೆ ನಾನು ಹೋಗುವುದಿಲ್ಲ. ಯಾಕೆಂದರೆ, `ಮನುಷ್ಯ ಎಲ್ಲ ಧರ್ಮಗಳನ್ನು ಗೌರವಿಸಬೇಕು, ತನ್ನ ಧರ್ಮದಲ್ಲಿ ಬದುಕಬೇಕು' ಎಂಬ ಸಿದ್ಧಾಂತವನ್ನು ನಾನು ಸಂಪೂರ್ಣವಾಗಿ ನಂಬಿ, ನಡೆಯುತ್ತಿರುವವನು. ಕೊನೆಯಲ್ಲಿ ಸ್ವಾಮಿ ವಿವೇಕಾನಂದರ ಒಂದು ಮಾತನ್ನು ನೆನಪಿಸುತ್ತೇನೆ, `ಧರ್ಮವೆಂಬುದು ಮಾನವ ಜೀವನದ  ವಿಕಾಸಕ್ಕೆ ಸಹಕಾರಿಯಾಗಬಲ್ಲ, ರೀತಿ, ನೀತಿ, ನಿಯಮಗಳ ಸಂವಿಧಾನ, ಇದನ್ನು ಅರಿತು ಆಚರಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರೀಕನ ಮೇಲಿದೆ. ಯಾವ ಮನುಷ್ಯನೂ ಯಾವುದೇ ಧರ್ಮಕ್ಕೆ ಹುಟ್ಟಿಲ್ಲ; ಪ್ರತಿಯೊಬ್ಬರೂ ತಮ್ಮ ಹೃದಯದಲ್ಲಿ ಧರ್ಮವನ್ನು ಒಳಗೊಂಡಿದ್ದಾರೆ; ಆದ್ದರಿಂದ ಜಗತ್ತಿನಲ್ಲಿ ಎಷ್ಟು ಜನರಿದ್ದಾರೋ, ಅಷ್ಟು ಧರ್ಮಗಳಿರಲಿ'.

comments powered by Disqus
Top